60 ವರ್ಷ ಸೇವೆ ಸಲ್ಲಿಸಿದ ಅಡುಗೆ ಸಿಬ್ಬಂದಿಗಳಿಗೆ ಅಭಿನಂದನಾ ಪತ್ರ ವಿತರಿಸಿದ ಸಚಿವ ಸತೀಶ ಜಾರಕಿಹೊಳಿ

ಬೆಳಗಾವಿ, “ಪ್ರಧಾನ ಮಂತ್ರಿ ಪೋಷನ್ ಶಕ್ತಿ ನಿರ್ಮಾಣ ಅಭಿಯಾನ” (ಮಧ್ಯಾಹ್ನ ಉಪಹಾರ ಯೋಜನೆ) ಅಡಿಯಲ್ಲಿ ಸುಮಾರು 20 ವರ್ಷಗಳವರೆಗೆ “ಅಡುಗೆದಾರರಾಗಿ” ಸೇವೆ ಸಲ್ಲಿಸಿ, 60 ವರ್ಷ ಪೂರ್ಣಗೊಂಡ ಆಯ್ದ ಸಿಬ್ಬಂದಿಗಳಿಗೆ ಬುಧವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ
ಅಭಿನಂದನಾ ಪ್ರಮಾಣ ಪತ್ರವನ್ನು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ವಿತರಿಸಿ ಮಾತನಾಡಿದ ಅವರು ರಾಜ್ಯ ಸರ್ಕಾರದ ಆದೇಶದ ಅನ್ವಯ 60ವರ್ಷ ಮಿರಿದ ಅಡುಗೆ ಸಿಬ್ಬಂದಿಯವರಿಗೆ ಈ ಹಿಂದೆ ಯಾವುದೇ ಆರ್ಥಿಕ ಸೌಲಭ್ಯವನ್ನು ನೀಡುತ್ತಿರಲಿಲ್ಲ. ಪ್ರಪ್ರಥಮವಾಗಿ ಕರ್ನಾಟಕದಲ್ಲಿ ಕರ್ನಾಟಕ ಸರಕಾರ 60ವರ್ಷ ಪೂರ್ಣಗೊಳಿಸಿ ನಿವೃತ್ತಿಯಾಗುವ ಸಿಬ್ಬಂದಿಯವರಿಗೆ ಇಡಗಂಟು ನೀಡಲಾಗುತ್ತಿದ್ದು, ಸರಕಾರದ ಅತ್ಯಂತ ಮಹತ್ವದ ನಿರ್ಣಯವಾಗಿದೆ.
5 ರಿಂದ 15 ವರ್ಷ ಸೇವೆ ಸಲ್ಲಿಸಿ ನಿವೃತ್ತಿಯಾದ ಅಡುಗೆಯವರಿಗೆ ರೂ.30 ಸಾವಿರ ಹಾಗೂ 15 ವರ್ಷ ಮೇಲ್ಪಟ್ಟು ಸೇವೆ ಸಲ್ಲಿಸಿ ನಿವೃತ್ತರಾದ ಸಿಬ್ಬಂದಿಗೆ ರೂ.40 ಸಾವಿರ ಇಡಗಂಟು ಮಂಜೂರ ಮಾಡಲಾಗಿದೆ. ಸಹಾಯ ಧನವನ್ನು ಭವಿಷ್ಯಕ್ಕೆ ಸದ್ಬಳಕೆ ಮಾಡಿಕೊಳ್ಳಬೇಕು.
ಸರ್ಕಾರದ ಸೇವಾ ಭದ್ರತೆ ಕೂಡ ಈ ಆದೇಶದಲ್ಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ ನಿರಂತರ ಇಂತಹ ಜನಪರ ಕೊಡುಗೆಗಳನ್ನು ನೀಡುತ್ತಾ ಬಂದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ಹೇಳಿದರು.
ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮ ಪಂಚಾಯತ್ ಸಿಬ್ಬಂದಿಗಳಿಗೆ ಅನುಮೋದನೆ ಆದೇಶ ಪತ್ರ, ಅನುಕಂಪ ಆಧಾರ ಮೇಲೆ ನೇಮಕಾತಿ ಹೊಂದಿರುವ ದಿವಂಗತ ನೌಕರರ ಕುಟುಂಬದ ಸದಸ್ಯರಿಗೆ ಆದೇಶ ಪತ್ರ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿ ರಾಹುಲ್ ಶಿಂಧೆ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಬಸವರಾಜ ಹೆಗ್ಗನಾಯಕ, ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಾಧಿಕಾರಿ ಪರುಶುರಾಮ ದುಡಗುಂಟಿ ಉಪಸ್ಥಿತರಿದ್ದರು.
