ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ನೂತನ ಕಟ್ಟಡವನ್ನು ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಉದ್ಘಾಟಿಸಿದರು.

WhatsApp Group Join Now

ಬೆಳಗಾವಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದ ಬಳಿಯ ಬೆಳಗಾವಿ ವಿಭಾಗ ಜಂಟಿ ಸಾರಿಗೆ ಆಯುಕ್ತರು ಕಚೇರಿ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ನೂತನ ಕಟ್ಟಡವನ್ನು ಶುಕ್ರವಾರ ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರಕ್ಕೆ ಆದಾಯ ತರುವ ಪ್ರಮುಖ ಇಲಾಖೆಗಳಲ್ಲಿ ಸಾರಿಗೆ ಇಲಾಖೆ ಕೂಡ ಒಂದಾಗಿದೆ. ಸಾರಿಗೆ ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆ ಇದ್ದು, ಈಗಾಗಲೇ ನೇಮಕಾತಿ ಪ್ರಕ್ರಿಯೆ ನಡೆದಿದ್ದು, ಸಿಬ್ಬಂದಿಗಳು ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಸಿಬ್ಬಂದಿಗಳ ಕೊರತೆ ಕಡಿಮೆಯಾಗಲಿದೆ ಎಂದರು.

ಬೈಲಹೊಂಗಲದಲ್ಲಿ 5 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾದ “ಸ್ವಯಂ ಚಾಲಿತ ಚಾಲನಾ ಪಥ” ಉದ್ಘಾಟನೆ ಮಾಡಲಾಗಿದೆ. ರಾಜ್ಯದಲ್ಲಿ ಎಲ್ಲ ಜಿಲ್ಲೆಗಳಲ್ಲಿ ಎಲೆಕ್ಟ್ರಿಕ್ ಬಸ್ ಗಳನ್ನು ಒದಗಿಸಲಾಗುವುದು. ಕರ್ಕಶ ಹಾರ್ನ್, ಹೆಚ್ಚು ಪ್ರಕಾಶದ ಲೈಟ್ ಗಳು ಇರುವ ವಾಹನಗಳನ್ನು ಗುರುತಿಸಿ ದಂಡಗಳನ್ನು ವಿಧಿಸಬೇಕು. ಸಾರಿಗೆ ಇಲಾಖೆಯ ಕಚೇರಿಯಲ್ಲಿ ಮಧ್ಯವರ್ತಿಗಳ ಪ್ರವೇಶಕ್ಕೆ ನಿರ್ಬಂಧ ಹೇರಬೇಕು ಎಂದು ಹೇಳಿದರು.

ಬೆಳಗಾವಿ ಜಿಲ್ಲೆಗೆ ಒಟ್ಟು 300 ಬಸ್ ಗಳನ್ನು ನೀಡಲಾಗುವುದು. ಅದರಲ್ಲಿ ನಗರ ಸುತ್ತಮುತ್ತ ಸಂಚಾರಕ್ಕೆ 100 ಎಲೆಕ್ಟ್ರಿಕ್ ಬಸ್ ಗಳನ್ನು ಸಹ ಒದಗಿಸಲಾಗುವುದು. ಅದೇ ರೀತಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ 50:50 ಅನುಪಾತದಲ್ಲಿ ಸ್ಮಾರ್ಟ್ ಸಿಟಿಯೋಜನೆಯಡಿ ಸಿಟಿ ಬಸ್ ನಿಲ್ದಾಣ ನಿರ್ಮಾಣ ಮಾಡಲಾಗಿದ್ದು, ಶೀಘ್ರದಲ್ಲೇ ಲೋಕಾರ್ಪಣೆಗೊಳಿಸಲಾಗುವುದು ಎಂದು
ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ಈ ವೇಳೆ ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮಾತನಾಡಿ ಮುಂಚೆ ಸಾರಿಗೆ ಇಲಾಖೆ ಕಚೇರಿ ಬಹಳ ಹಳೆಯದಾಗಿತ್ತು. ಬಹು ದಿನಗಳಿಂದ ನೂತನ ಕಟ್ಟಡದ ಬೇಡಿಕೆ ಇತ್ತು ಅದರಂತೆ ಸಿ.ಎಂ ಸಿದ್ದರಾಮಯ್ಯ ಅನುಮೋದನೆಯೊಂದಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಶ್ರಮದಿಂದ ನಗರದಲ್ಲಿ ಸಾರಿಗೆ ಇಲಾಖೆ ನೂತನ ಕಟ್ಟಡ ಲೋಕಾರ್ಪಣೆಗೊಂಡಿದೆ ಎಂದು
ಅವರು ಹೇಳಿದರು.

ಜಿಲ್ಲೆಯ ಅಗತ್ಯ ಸ್ಥಳಗಳಿಗೆ ಬಸ್ ಸೌಲಭ್ಯ ಕಲ್ಪಿಸಲು ಸಚಿವರು, ಶಾಸಕರೊಂದಿಗೆ ಚರ್ಚಿಸಿ ಅಗತ್ಯ ಪಟ್ಟಿ ತಯಾರಿಸಲಾಗಿದೆ. ಜನರ ಬೇಡಿಕೆಯಂತೆ ಹೆಚ್ಚುವರಿಯಾಗಿ ಬಸ್ ಗಳನ್ನು ಜಿಲ್ಲೆಗೆ ನೀಡಬೇಕು. ಅಂದಾಜು 500 ಬಸ್ ಗಳನ್ನು ಜಿಲ್ಲೆಗೆ ನೀಡಿದಲ್ಲಿ, ವಿದ್ಯಾರ್ಥಿಗಳ ಸಾರಿಗೆ ಸೌಲಭ್ಯಕ್ಕೆ ಅನುಕವಾಗಲಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಬೇಡಿಕೆ ಇಟ್ಟರು.

ಜಿಲ್ಲೆಯಲ್ಲಿ ಇನ್ನಷ್ಟು ಬಸ್ ನಿಲ್ದಾಣಗಳ ನಿರ್ಮಾಣದ ಅವಶ್ಯಕತೆ ಇದೆ. ಸರ್ಕಾರದ ಹಂತದಲ್ಲಿ ಲೋಕೋಪಯೋಗಿ ಇಲಾಖೆಯಿಂದ ಸ್ಥಳಗಳನ್ನು ಮಂಜೂರು ಮಾಡಲಾಗುವುದು ಈ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, ಸ್ಥಳಗಳನ್ನು ಬಳಸಿಕೊಂಡು ಅಗತ್ಯವಿರುವ ಸ್ಥಳಗಳಲ್ಲಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಸಾರಿಗೆ ಇಲಾಖೆ ಯೋಜನೆಗಳನ್ನು ರೂಪಿಸಬಹುದು ಎಂದು ಸಚಿವ ಸತೀಶ ಜಾರಕಿಹೊಳಿ ಸಲಹೆ ನೀಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿ, ರಾಜ್ಯದ ಎರಡನೇ ರಾಜ್ಯಧಾನಿ ಎಂದು ಬೆಳಗಾವಿ ಜಿಲ್ಲೆ ಗುರುತಿಸಿಕೊಂಡಿದೆ. ಬಹಳ ದೊಡ್ಡದಾಗಿ ಜಿಲ್ಲೆಯ ವಿಸ್ತೀರ್ಣ ಇರುವುದರಿಂದ ಇನ್ನಷ್ಟು ಬಸ್ ಗಳ ಸೌಲಭ್ಯದ ಅವಶ್ಯಕತೆ ಇದೆ. ನೂತನವಾಗಿ ನಿರ್ಮಾಣಗೊಂಡ ಸಾರಿಗೆ ಇಲಾಖೆ ಕಟ್ಟಡ ಸುಮಾರು 10 ಕೋಟಿ ರೂಪಾಯಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಮಾಡಲಾಗಿದೆ ಎಂದರು.

ಸಾರಿಗೆ ಇಲಾಖೆಯ ಬಗ್ಗೆ ಸಾರ್ವಜನಿಕರಿಂದ ಮಧ್ಯವರ್ತಿಗಳ ಹಾವಳಿ ಇದೆ ಎಂದು ಆರೋಪವಿದೆ ಹಾಗಾಗಿ ಮಧ್ಯವರ್ತಿಗಳ ಪ್ರವೇಶ ನಿರ್ಬಂಧಿಸಿ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ತ್ವರಿತಗತಿಯಿಂದ ಇಲಾಖೆಯ ಸಿಬ್ಬಂದಿಗಳು ಸೇವೆಗಳು ಒದಗಿಸಬೇಕು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಬೆಳಗಾವಿ ಉತ್ತರ ವಿಧಾನಸಭಾ ಮತ ಕ್ಷೇತ್ರದ ಶಾಸಕ ಆಸೀಫ್ (ರಾಜು) ಸೇಠ್, ಜಿಲ್ಲೆಯ ಸಾರಿಗೆ ಇಲಾಖೆಯ ಕಚೇರಿಯಲ್ಲಿ ಪ್ರಥಮ ದರ್ಜೆ, ದ್ವಿತೀಯ ದರ್ಜೆ ಸಹಾಯಕ ಸೇರಿದಂತೆ ಇನ್ನಿತರ ಸಿಬ್ಬಂದಿಗಳ ಕೊರತೆ ಬಹಳಷ್ಟಿದೆ. ಸದ್ಯ ಇರುವ ಸಿಬ್ಬಂದಿಗಳ ಮೇಲಿರುವ ಹೊರೆ ಕಡಿಮೆ ಮಾಡಲು ಅದಷ್ಟು ಬೇಗ ಇನ್ನಷ್ಟು ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಬೇಕು ಇದರಿಂದ ಮತ್ತಷ್ಟು ಸಕ್ರಿಯವಾಗಿ ಕಾರ್ಯ ನಿರ್ವಹಿಸಲು ಇಲಾಖೆಯ ಅಧಿಕಾರಿಗಳಿಗೆ ಸಹಾಯವಾಗಲಿದೆ ಎಂದರು.

ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು ವಾಹನ ಸವಾರರು ಹಾಗೂ ಕಚೇರಿಗೆ ಬರುವ ಸಾರ್ವಜನಿಕರೊಂದಿಗೆ ಸಹನೆಯಿಂದ ವರ್ತಿಸಿ, ತ್ವರಿತವಾಗಿ ಸೇವೆಗಳನ್ನು ಒದಗಿಸಬೇಕು ಎಂದು ಶಾಸಕ ಆಸೀಫ್ (ರಾಜು) ಸೇಠ್ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ಅಧ್ಯಕ್ಷ ಹಾಗೂ ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ, ಬುಡಾ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿನಯ ನಾವಲಗಟ್ಟಿ, ಸಾರಿಗೆ ಮತ್ತು ರಸ್ತೆ ಸುರಕ್ಷತಾ ಆಯುಕ್ತರಾದ ಯೋಗೀಶ್ ಎ. ಎಂ, ನಗರ ಪೊಲೀಸ್ ಆಯುಕ್ತ ಭೂಷಣ್ ಗುಲಾಬರಾವ ಬೊರಸೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿ ರಾಹುಲ್ ಶಿಂಧೆ, ಧಾರವಾಡ ಉತ್ತರದ (ಪ್ರವರ್ತನ) ಅಪರ ಸಾರಿಗೆ ಆಯುಕ್ತರಾದ ಕೆ. ಟಿ ಹಾಲಸ್ವಾಮಿ, ಬೆಳಗಾವಿ ವಿಭಾಗದ ಜಂಟಿ ಸಾರಿಗೆ ಆಯುಕ್ತರಾದ ಎಂ. ಪಿ.ಓಂಕಾರೇಶ್ವರಿ, ಬೆಳಗಾವಿ ಪ್ರಾದೇಶಿಕ ಸಾರಿಗೆ ಅಧಿಕಾರಿ ನಾಗೇಶ್ ಮುಂಡಾಸ, ನಿವೃತ್ತ ಪ್ರಾದೇಶಿಕ ಸಾರಿಗೆ ಆಯುಕ್ತರಾದ ಶಿವಾನಂದ ಮಗದುಮ್ಮ, ಗುತ್ತಿಗೆದಾರ ಉದಯ ಕುಮಾರ ಆರ್. ಶೆಟ್ಟಿ ಸೇರಿದಂತೆ ಸಾರಿಗೆ ಇಲಾಖೆ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

About The Author