ಬೆಳಗಾವಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಶನಿವಾರ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ನಡೆದ “ಚಿಗುರು 2025-26” ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ರಾಮನಗೌಡ ಕನ್ನೋಳ್ಳಿ ಅವರು ಜ್ಯೋತಿ ಬೆಳಗಿಸೋದರ ಮೂಲಕ ಚಾಲನೆ ನೀಡಿ ಮಾತನಾಡಿದರು.
ಮಕ್ಕಳ ಕಲಾ ಪ್ರತಿಭೆ ಸಹಜವಾಗಿರುತ್ತದೆ, ಶಿಕ್ಷಣದ ಮೂಲಕ ಅದನ್ನು ಬೆಳೆಸಬೇಕು.ಕಲಾ ಅಭಿವ್ಯಕ್ತಿಯ ಮೂಲಕ ಮಗು ತನ್ನ ಭಾವನೆಗಳನ್ನು ಹೊರಹಾಕುತ್ತೆ. ಕಲೆಯು ಮಕ್ಕಳ ಒಳಗಿನ ಆತ್ಮಸೌಂದರ್ಯವನ್ನು ಬೆಳಗಿಸುತ್ತದೆ ಎಂದರು.
8 ರಿಂದ 14 ವರ್ಷದ ಒಳಗಿನ ಮಕ್ಕಳಲ್ಲಿರುವ ಕಲಾ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಚಿಣ್ಣರ ಹಬ್ಬ “ಚಿಗುರು” ಕಾರ್ಯಕ್ರಮ ಸರ್ಕಾರವು ಯೋಜಿಸುತ್ತಿದೆ.
ಸರ್ಕಾರ ಇಂತಹ ಮಹತ್ವದ ಕಾರ್ಯಕ್ರಮ ಆಯೋಜನೆ ಮಾಡುತ್ತಿರುವುದು ಸಂತಸದ ವಿಷಯ ಎಂದು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ರಾಮನಗೌಡ ಕನ್ನೋಳ್ಳಿ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಮಾತನಾಡಿ, ಬತ್ತ ಕುಟ್ಟಿ ಅಕ್ಕಿ ತೆಗೆಯುವಂತೆ ಮಕ್ಕಳಲ್ಲಿನ ಕಲೆಗಳನ್ನು ಪ್ರದರ್ಶಿಸಲು ವೇದಿಕೆ ಕಲ್ಪಿಸಿ, ಮಕ್ಕಳಲ್ಲಿರುವ ಪ್ರತಿಭೆಗಳನ್ನು ಗುರುತಿಸುವುದು ಕಾರ್ಯಕ್ರಮದ ಮೂಲಕ ಉದ್ದೇಶವಾಗಿದೆ ಎಂದು ಹೇಳಿದರು.
ಸಿತಾರ ವಾದನ, ವಚನ ಗಾಯನ, ವಚನ ಸಂಗೀತ, ವೀರಗಾಸೆ, ರೂಪಕ, ಸಮೂಹ ನೃತ್ಯ, ನೃತ್ಯ ರೂಪಕ, ವಂಚನ ಸಂಗೀತ, ಏಕಪಾತ್ರಾಭಿನಯ ಹಾಗೂ ಕೈವಲ್ಯ ಪದಗಳು ಸೇರಿದಂತೆ ವಿವಿಧ ಕಲೆಗಳನ್ನು ಮಕ್ಕಳು ಪ್ರದರ್ಶಿಸಿದರು.
ಹಿರಿಯ ಕಲಾವಿದರಾದ ಸತ್ಯನಾರಾಯಣ ಭಟ್, ರೋಹಿಣಿ ಗಂಗಾಧರಯ್ಯ, ಯಲ್ಲಪ್ಪ ನಾಯ್ಕರ, ಗೂಳಪ್ಪ ವಿಜಯನಗರ ಸೇರಿದಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.



