ಪ್ರಸಕ್ತ ಸಾಲಿಗೆ ಶೀಘ್ರದಲ್ಲಿ ಅತಿಥಿ ಉಪನ್ಯಾಸಕರ ನೇಮಕಾತಿಯಾಗಬೇಕು – ಡಾ ರಾಜು ಕಂಬಾರ

WhatsApp Group Join Now

ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 2025 -26 ನೇ ಸಾಲಿನಲ್ಲಿ ಅತಿಥಿ ಉಪನ್ಯಾಸಕರಿಲ್ಲದೆ ಪಾಠ ಪ್ರವಚನಗಳು ತೊಂದರೆಯಾಗುತ್ತಿವೆ. ವಿದ್ಯಾರ್ಥಿಗಳ ಓದಿಗೆ ಸಮಸ್ಯೆ ಉಂಟಾಗುತ್ತಿದ್ದು, ಪ್ರಸಕ್ತ ಸಾಲಿನಲ್ಲಿ ಅತಿ ಶೀಘ್ರದಲ್ಲೇ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಬೇಕೆಂದು ಅತಿಥಿ ಉಪನ್ಯಾಸಕರ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ರಾಜು ಕಂಬಾರ ಒತ್ತಾಯಿಸಿದರು.

ರಾಮದುರ್ಗ ಪಟ್ಟಣದಲ್ಲಿ ಶನಿವಾರದಂದು ಈರಮ್ಮ ಯಾದವಾಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರ ಪರವಾಗಿ ಸ್ಥಳೀಯ ಶಾಸಕರು ಮತ್ತು ವಿಧಾನಸಭೆಯ ಮುಖ್ಯ ಸಚೇತಕರಾದ ಮಾನ್ಯ ಅಶೋಕ ಮ. ಪಟ್ಟಣ ಅವರಿಗೆ ಮತ್ತು ರಾಮದುರ್ಗ ತಹಸೀಲ್ದಾರ ಪ್ರಕಾಶ ಹೊಳೆಪ್ಪಗೋಳ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು.

ಕಳೆದ 10 -15 ವರ್ಷಗಳಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದೇವೆ. ಆದರೆ ಇತ್ತೀಚಿಗೆ ಯುಜಿಸಿ ಅರ್ಹ ಮತ್ತು ಅನರ್ಹ ಎಂಬ ಗೊಂದಲದಲ್ಲಿ ಸರ್ಕಾರ ಸಿಲುಕಿದ್ದು, ಇದರಿಂದ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬಂದಿರುವ ನಮ್ಮನ್ನು ಸರ್ಕಾರದ ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರು ಆಗಸ್ಟ್ 2 ರಂದು ಸೇವೆಯಿಂದ ಬಿಡುಗಡೆಗೊಳಿಸಿದ್ದಾರೆ. ಪ್ರಸಕ್ತ 2025 -26ನೇ ಶೈಕ್ಷಣಿಕ ವರ್ಷ ಆರಂಭವಾಗಿ ಒಂದು ತಿಂಗಳು ಕಳೆದಿದೆ. ಅತಿಥಿ ಉಪನ್ಯಾಸಕರ ಸೇವೆ ಇಲ್ಲದೆ ರಾಜ್ಯದ ಎಲ್ಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಸರಿಯಾಗಿ ಪಾಠಗಳ ಬೋಧನೆ ಆಗದೆ ಶಿಕ್ಷಣ ಕುಂಟಿತಗೊಳ್ಳುತ್ತಿದೆ. ಇದರಿಂದ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆಯಿದೆ ಎಂದು ಕಳವಳ ವ್ಯಕ್ತಪಡಿಸಿದರು.

       ಪ್ರಸಕ್ತ 2025- 26 ನೇ ಸಾಲಿನಲ್ಲಿ ಯುಜಿಸಿ ಮತ್ತು ನಾನ್ ಯುಜಿಸಿ ಎನ್ನದೆ ಈ ಹಿಂದೆ ಸೇವೆ ಸಲ್ಲಿಸಿದ ಎಲ್ಲಾ ಅತಿಥಿ ಉಪನ್ಯಾಸಕರನ್ನು ನೇಮಕಾತಿ ಮಾಡಿಕೊಳ್ಳಬೇಕು.ಸಾಮಾನ್ಯ ಕೌನ್ಸಲಿಂಗ್ ಅಥವಾ ಮುಂದುವರಿಕೆಯ ಮುಖಾಂತರ ಪ್ರಸಕ್ತ ವರ್ಷದಲ್ಲಿ ವಿದ್ಯಾರ್ಥಿಗಳ ಜೀವನ ಹಾಳಾಗದಂತೆ ತಪ್ಪಿಸಲು ಶೀಘ್ರದಲ್ಲಿಯೇ ಅತಿಥಿ ಉಪನ್ಯಾಸಕರನ್ನು ನೇಮಿಸಬೇಕು.ಸಾಮಾನ್ಯ ಕೌನ್ಸಲಿಂಗ ನಡೆದರೆ ಯುಜಿಸಿ ಮತ್ತು ನಾನ್ ಯುಜಿಸಿ ಈ ಹಿಂದೆ ಸೇವೆ ಸಲ್ಲಿಸಿದ ಅತಿಥಿ ಉಪನ್ಯಾಸಕರಿಗೆ ಮೊದಲ ಆದ್ಯತೆ ದೊರೆಯಬೇಕು.

ಒಂದು ವೇಳೆ ಮುಂದುವರಿಕೆ ನಡೆದರೆ ಈ ಹಿಂದೆ ಸೇವೆ ಸಲ್ಲಿಸಿದ ಎಲ್ಲಾ ಅತಿಥಿ ಉಪನ್ಯಾಸಕರನ್ನು ಮುಂದುವರಿಸಬೇಕು. ಪ್ರಸಕ್ತ ವರ್ಷ ಕಾರ್ಯಭಾರದ ಕೊರತೆ ಉಂಟಾದರೆ, ಹಿಂದಿನ ವರ್ಷ ಸೇವೆ ಸಲ್ಲಿಸಿದ ಅತಿಥಿ ಉಪನ್ಯಾಸಕರನ್ನು ಯಾವುದೇ ಕಾರಣಕ್ಕೂ ಸೇವೆಯಿಂದ ಬಿಡುಗಡೆಗೊಳಿಸಬಾರದು.

    ಬದಲಾಗಿ ಪೂರ್ಣಕಾಲಿಕ ಉಪನ್ಯಾಸಕರು ವರ್ಗಾವಣೆಗೊಂಡು ಅಥವಾ ನಿಯೋಜನೆಗೊಂಡು  ಬಂದಿರುವ ಸ್ಥಳಕ್ಕೆ ಅತಿಥಿ ಉಪನ್ಯಾಸಕರನ್ನು  ನೇಮಿಸಬೇಕು. ಇಲ್ಲವಾದರೆ, ಅದೇ ಕಾಲೇಜಿನಲ್ಲಿ ಕಾರ್ಯಾಲಯದ ಕೆಲಸ, ಗ್ರಂಥಾಲಯ, ದೈಹಿಕ ಶಿಕ್ಷಣ ಇತರೆ ಕಾರ್ಯಗಳನ್ನು ನಿರ್ವಹಿಸಲು ಅವಕಾಶಕೊಟ್ಟು, 2023- 24ನೆಯ ಸಾಲಿನಲ್ಲಿ ಕೌನ್ಸಿಲಿಂಗ್ ಮೂಲಕ ಎಷ್ಟು ಕಾರ್ಯಭಾರಕ್ಕೆ ಆ ಅತಿಥಿ ಉಪನ್ಯಾಸಕ/ಕಿ ನೇಮಕವಾಗಿರುತ್ತಾರೆಯೋ ಆ ಕಾರ್ಯಭಾರದ ಗೌರವಧನವನ್ನು ನೀಡುವಂತಾಗಬೇಕೆಂದು  ಸರ್ಕಾರವನ್ನು ಒತ್ತಾಯಿಸಿದರು.
      ಈ ಸಂದರ್ಭದಲ್ಲಿ ಅತಿಥಿ ಉಪನ್ಯಾಸಕ ಮುಖಂಡರಾದ ವಿ ಎಸ್ ಲಕ್ಕನಗೌಡರ, ವೈ.ಕೆ. ಕುರಿ, ಎಂ.ಎ.ನಕಾರ್ಚಿ, ಶಂಕರ ಚುಳಕಿ, ಡಾ. ವಾಯ್. ಎಸ್. ಹೊಸಮನಿ, ಸಂಜಯ ಶೆಟ್ಟರ, ಮಾರುತಿ ಸೂಳಿಕೇರಿ, ಕೆ.ಎಸ್. ಕಂಬಾರ ಮೈಲಾರಪ್ಪ ಜೋಗೋಜಿ ಮುಂತಾದವರಿದ್ದರು.

About The Author