ಬೆಳಗಾವಿ: ಮಹಾಂತೇಶ ನಗರ ರಹವಾಸಿಗಳ ಸಂಘ, ಭಾರತ ಸರ್ಕಾರದ ಅಂಚೆ ಇಲಾಖೆ ಹಾಗೂ ಬೆಳಗಾವಿ ಅಂಚೆಚೀಟಿ ಮತ್ತು ನಾಣ್ಯ ಸಂಗ್ರಹಣಾ ಸಂಘದ ಸಂಯುಕ್ತಾಶ್ರಯದಲ್ಲಿ “ಸಂಚಯ” ಹೆಸರಿನ ಅಂಚೆಚೀಟಿ ಹಾಗೂ ನಾಣ್ಯ ಸಂಗ್ರಹಣೆಯ ಪ್ರದರ್ಶನ ಕಾರ್ಯಕ್ರಮವು ಸೋಮವಾರ ಮಹಾಂತೇಶ ನಗರದ ಮಹಾಂತ ಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ
ಭಾರತ ಸರ್ಕಾರ ಅಂಚೆ ಇಲಾಖೆ ಬೆಳಗಾವಿ ಅಧೀಕ್ಷಕರಾದ ಬಿ.ಪಿ. ಮಾಳಗಿ ಮಾತನಾಡಿ,
“ಅಂಚೆಚೀಟಿ ಹಾಗೂ ನಾಣ್ಯ ಸಂಗ್ರಹಣೆಯು ಜ್ಞಾನ ವೃದ್ಧಿಗೆ ಸಹಕಾರಿಯಾಗಿದೆ.
ವಿವಿಧ ಕಾಲಘಟ್ಟಗಳಲ್ಲಿ ನಡೆದ ಮಹತ್ವದ ಘಟನೆಗಳಿಗೆ ಇವು ಕೈಗನ್ನಡಿಯಂತಿದ್ದು, ಉತ್ತಮ ಹವ್ಯಾಸಗಳು ವ್ಯಕ್ತಿಯ ಜೀವನಶೈಲಿಯನ್ನು ಉತ್ತಮಗೊಳಿಸುತ್ತವೆ. ಈ ಸಂಗ್ರಹಣಾ ಕೌಶಲ್ಯವು ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾಗಿದೆ” ಎಂದು ಹೇಳಿದರು.
ಅಂಚೆಚೀಟಿ ಹಾಗೂ ನಾಣ್ಯ ಸಂಗ್ರಹಣಾ ಸಂಘದ ಅಧ್ಯಕ್ಷ ಪ್ರಸಾದ ಹಿರೇಮಠ ಅವರು ಮಾತನಾಡಿ, “ಈ ಹವ್ಯಾಸವು ಮೊಬೈಲ್ ಬಳಕೆಯಿಂದ ದೂರವಿರಿಸಿ, ಸೃಜನಾತ್ಮಕ ಶಕ್ತಿಯನ್ನು ವೃದ್ಧಿಸುತ್ತದೆ. ಸಂಘವು ಕಳೆದ 15 ವರ್ಷಗಳಿಂದ ಸಂಗ್ರಹಣಾ ಕ್ಷೇತ್ರದಲ್ಲಿ ಅನೇಕ ಸಾಧನೆಗಳನ್ನು ಮಾಡಿದೆ” ಎಂದು ತಿಳಿಸಿದರು.
ಮಹಾಂತೇಶ ನಗರ ರಹವಾಸಿಗಳ ಸಂಘದ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ. ನಿರ್ಮಲಾ ಬಟ್ಟಲ ಅವರು ಮಾತನಾಡಿ, “ಅಂಚೆಚೀಟಿ ಮತ್ತು ನಾಣ್ಯ ಸಂಗ್ರಹಣೆಯು ಇತಿಹಾಸವನ್ನು ಮರುಸೃಷ್ಟಿಸುವ ಸಾಧನಗಳಾಗಿದ್ದು, ದೇಶ-ವಿದೇಶಗಳ ಇತಿಹಾಸವನ್ನು ಅರಿಯಲು ಸಹಕಾರಿಯಾಗುತ್ತದೆ. ಭಾವಿ ಶಿಕ್ಷಕರು ಈ ಕೌಶಲ್ಯವನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಬೇಕು” ಎಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಮಹಾಂತೇಶ ನಗರ ರಹವಾಸಿಗಳ ಸಂಘದ ಅಧ್ಯಕ್ಷ ಲಕ್ಷ್ಮಿಕಾಂತ ಗುರುವ ಅವರು, “ಇಂದು ಮರೆಮಾಚಿರುವ ಅನೇಕ ಐತಿಹಾಸಿಕ ಸತ್ಯಾಂಶಗಳನ್ನು ಇಂತಹ ಪ್ರದರ್ಶನಗಳ ಮೂಲಕ ತಿಳಿದುಕೊಳ್ಳಬಹುದು. ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಈ ಅವಕಾಶ ಸದುಪಯೋಗ ಪಡೆದುಕೊಳ್ಳಬೇಕು” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅಂಚೆ ಇಲಾಖೆಯ ಅಧಿಕಾರಿಗಳು, ಮಹಾಂತೇಶ ನಗರ ರಹವಾಸಿಗಳ ಸಂಘ ಹಾಗೂ ಅಂಚೆಚೀಟಿ-ನಾಣ್ಯ ಸಂಗ್ರಹಣಾ ಸಂಘದ ಪದಾಧಿಕಾರಿಗಳು, ವಿವಿಧ ಶಿಕ್ಷಣ ಸಂಸ್ಥೆಗಳ ಪ್ರಾಚಾರ್ಯರು, ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು. ಸುಮಾರು 1,500 ವಿದ್ಯಾರ್ಥಿಗಳು ಪ್ರದರ್ಶನವನ್ನು ವೀಕ್ಷಿಸಿದರು.
ಪ್ರಶಿಕ್ಷಣಾರ್ಥಿ ಪ್ರಿಯಾಂಕಾ ಚೌಗಲಾ ಕಾರ್ಯಕ್ರಮ ನಿರೂಪಿಸಿದರು. ಡಾ. ಎಸ್.ವಿ. ವಾಲಿಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮದ ನಿರೂಪಣೆ ನಡೆಸಿದರು. ಶ್ರೀಕಾಂತ ಪಾಟೀಲ ವಂದಿಸಿದರು.



