ಕುಡಿಯುವ‌ ನೀರಿಗಾಗಿ ಗ್ರಾಮೀಣ ಪ್ರದೆಶದ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 1 ಕೋಟಿ ರೂಪಾಯಿ ಅನುದಾನ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಘೋಷಣೆ

WhatsApp Group Join Now

ಬೆಳಗಾವಿ, ಮುಂಗಾರು ಮಳೆಯ ಕೊರತೆಯಿಂದಾಗಿ ಕುಡಿಯುವ ನೀರಿನ‌ ಸಮಸ್ಯೆ ಎದುರಾಗಿದ್ದು, ಗ್ರಾಮೀಣ ಪ್ರದೆಶದ ಎಲ್ಲ ಶಾಸಕರಿಗೆ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 1 ಕೋಟಿ ರೂಪಾಯಿ ಅನುದಾನ ಒದಗಿಸಲಾಗುವುದು. ಸರಕಾರದ ಮಾರ್ಗಸೂಚಿ ಪ್ರಕಾರ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಅನುದಾನವನ್ನು ಬಳಕೆ ಮಾಡಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಗುರುವಾರ (ಜು.09) ಜರುಗಿದ ಬೆಳಗಾವಿ ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಳೆ ಕಡಿಮೆಯಾಗಿರುವ ಜಿಲ್ಲೆಗಳಲ್ಲಿ‌ ಕುಡಿಯುವ ನೀರಿಗೆ ಯಾವುದೇ ಕಾರಣಕ್ಕೂ ತೊಂದರೆ ಆಗಬಾರದು. ಅಧಿಕಾರಿಗಳು ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಸಮನ್ವಯ ಸಾಧಿಸಿ ನೀರಿನ ಸಮಸ್ಯೆ ಇರುವಂತಹ ಪ್ರದೇಶಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳಲು‌ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಕೃಷ್ಣಾ, ಕಾವೇರಿ ಹಾಗೂ ಗೋದಾವರಿ ನದಿ ಜೋಡಣೆಗೆ ಮೂರು ರಾಜ್ಯಗಳಿಂದ ಒಮ್ಮತದಿಂದ ಒಪ್ಪಿಗೆ ಸೂಚಿಸಲಾಗಿದ್ದು ಇದೊಂದು ಐತಿಹಾಸಿಕ ನಿರ್ಧಾರವಾಗಿದೆ ಎಂದರು.

ಅರಣ್ಯ ಇಲಾಖೆ‌ ವತಿಯಿಂದ ಕುಡಿಯುವ ನೀರು ಪೂರೈಕೆ‌ ಯೋಜನೆಯ ಪೈಪ್ ಲೈನ್ ಅಳವಡಿಕೆಗೆ ತೊಂದರೆ ಕೊಡಬಾರದು. ಬಗರ್ ಹುಕಂ ಸಾಗುವಳಿಗೆ ಸಂಬಂಧಿಸಿದಂತೆ ಅರ್ಜಿ ತಿರಸ್ಕಾರ ಅಥವಾ ಒಕ್ಕಲೆಬ್ಬಿಸಬಾರದು ಎಂದು ಸೂಚನೆ ನೀಡಿದರು‌‌

ರಾಜ್ಯದ ಎಲ್ಲ ಮುಜರಾಯಿ ದೇವಸ್ಥಾನದ ಹುಂಡಿಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸಿ ನಿರಂತರ ನಿಗಾ ವಹಿಸಬೇಕು. ಅಯೋಧ್ಯೆಯ ರಾಮಮಂದಿರದ ಹುಂಡಿ ಹಣ ದುರ್ಬಳಕೆ ಘಟನೆಯಿಂದ ಎಚ್ಚೆತ್ತುಕೊಂಡು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ಸಮನ್ವಯದೊಂದಿಗೆ ಕಾರ್ಯನಿರ್ವಹಿಸಬೇಕು.

ಶಾಸಕರುಗಳ‌ ಮನವಿ ಮೇರೆಗೆ ಮೋಡ ಬಿತ್ತನೆಗೆ ಅಧಿಕಾರಿಗಳ‌ ಜತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು.

ಯಾವುದೇ ಇಲಾಖೆ ವತಿಯಿಂದ ರಸ್ತೆ ಕಾಮಗಾರಿಗಳ ಆರಂಭಿಸುವ ಪೂರ್ವ ಹಾಗೂ‌ ನಂತರದ ಫೋಟೋ ದಾಖಲೆಗಳ ಸಮೇತ ಬಿಲ್‌ ಮಾಡಬೇಕು‌. ಯಾವುದೇ ಯೋಜನೆಯ ಫಲಾನುಭವಿಗಳಿಗೆ ಸೌಲಭ್ಯ ವಿತರಿಸಿರುವುದರ ಫೋಟೋ ದಾಖಲೆ ಇಟ್ಟಿರಬೇಕು‌. ನಕಲಿ‌ ದಾಖಲೆ‌ ಸೃಷ್ಟಿಸಿ ಬಿಲ್ ಪಡೆದಿರುವುದು ಕಂಡು ಬಂದಲ್ಲಿ‌ಅಂತಹವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಬೀದಿಬದಿ ವ್ಯಾಪಾರಸ್ಥರಿಗೆ ಗಾಡಿ ನೀಡಲಾಗುವುದು.ಕುಡಿಯುವ ನೀರಿನ ಯೋಜನೆ ಸ್ಥಿತಿಗತಿ ಕುರಿತು ಒಂದು ತಿಂಗಳಲ್ಲಿ ಸರಕಾರಕ್ಕೆ ವರದಿ ನೀಡಬೇಕು. ಅರಣ್ಯ ಇಲಾಖೆಯವರು
ಕುಡಿಯುವ ನೀರಿನ ಯೋಜನೆಗಳ ಅನುಷ್ಠಾನಕ್ಕಾಗಿ ತಕ್ಷಣವೇ ಅನುಮತಿ(ಕ್ಲಿಯರನ್ಸ್) ನೀಡಬೇಕು.

ಎಸ್.ಐ.ಆರ್.‌ಬಳಿಕ ವಿಧಾನಮಂಡಳ ಅಧಿವೇಶನ ನಡೆಸಲಾಗುವುದು.
ಅರ್ಹ ಮತದಾರನ ಹಕ್ಕು ರಕ್ಷಿಸಲು ಎಲ್ಲ ಪಿಡಿಓ ಹಾಗೂ ಬಿ.ಎಲ್.ಓ. ಗಳು ಜಾಗೃತಿ ಮೂಡಿಸಬೇಕು. ಗ್ಯಾರಂಟಿ ಯೋಜನೆ ದುರ್ಬಳಕೆಯ ಲೋಪದೋಷಗಳನ್ನು ಸರಿಪಡಿಸಲಾಗುವುದು. ಈ‌ ಕುರಿತು ಸಮೀಕ್ಷೆ‌ ಜರುಗುತ್ತಿದ್ದು ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ನಿಖರವಾದ ಮಾಹಿತಿಯನ್ನು‌ ಒದಗಿಸಬೇಕು.

ಜನರನ್ನು ವಂಚಿಸುವ ಸ್ಕೀಂ ಗಳನ್ನು ತಡೆಗಟ್ಟಲು ಕಠಿಣ ಕ್ರಮ ಕೈಗೊಳ್ಳಬೇಕು.
ಗೋವಾ-ಮಹಾರಾಷ್ಟ್ರ ಅಕ್ರಮ ಮದ್ಯ ಹಾಗೂ ಮಾದಕ ವಸ್ತುಗಳ ಸಾಗಾಣಿಕೆ ಮೇಲೆ ನಿಗಾ ವಹಿಸಬೇಕು.

ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಪ್ರಮಾಣದಲ್ಲಿ ಗೊಬ್ಬರ ದಾಸ್ತಾನು ಇಟ್ಟುಕೊಳ್ಳಬೇಕು.ಕಾಳಸಂತೆಯಲ್ಲಿ ಗೊಬ್ಬರ ಮಾರಾಟ ತಡೆಗಟ್ಟಲು‌‌ ಅಧಿಕಾರಿಗಳು‌ ಮುಂದಾಗಬೇಕು ಎಂದು ಮುಖ್ಯಮಂತ್ರಿಗಳಾದ‌ ಡಿ.ಕೆ.ಶಿವಕುಮಾರ ಅವರು ಸೂಚನೆ ನೀಡಿದರು.

ಲೊಕೋಯೋಗಿ ಇಲಾಖೆ ಸಚಿವರಾದ ಸತೀಶ್ ಜಾರಕಿಹೊಳಿ ಅವರು ಮಾತನಾಡಿ, ಮೋಡ ಬಿತ್ತನೆ ಕಾರ್ಯಕ್ರಮವನ್ನು ಸರಕಾರದ ಕಾರ್ಯಕ್ರಮವಾಗಬೇಕು. ರಾಜ್ಯದ ಎಲ್ಲ ಆಣೆಕಟ್ಟುಗಳಲ್ಲಿನ ಹೂಳೆತ್ತುವ ಕಾರ್ಯವಾಗಬೇಕಾಗಿದೆ ಎಂದು ತಿಳಿಸಿದರು.

ಬೃಹತ್ ಮತ್ತು ಮಧ್ಯಮ ಕೈಗಾರಿಕೆ,ಮೂಲ ಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ ಅವರು, ಜಿಲ್ಲೆಗಳಲ್ಲಿ ಜಾರಿಯಲ್ಲಿರುವ ಜಲಜೀವನ‌ ಮಿಷನ್ ಸೇರಿದಂತೆ‌ ವಿವಿಧ ನೀರಾವರಿ ಯೋಜನೆಗಳ‌ ಕುರಿತು ಆಡಿಟ್ ಮಾಡಿಸುವುದರ ಮೂಲಕ ಯೋಜನೆ ಪ್ರಗತಿ‌ ವಿಳಂಬವಾಗುತ್ತಿರುವುದಕ್ಕೆ‌ ಕಾರಣ ತಿಳಿದು ಸರಿಪಡಿಸಬಹುದಾಗಿದೆ ಎಂದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ ಸಚಿವರಾದ ಈಶ್ವರ ಖಂಡ್ರೆ ಅವರು, ಏಕ‌ ಗ್ರಾಮ‌ ಕುಡಿಯುವ‌ ನೀರಿನ ಯೋಜನೆ ಕೈಗೊಳ್ಳುವ ಮೂಲಕ 83% ಪ್ರಗತಿ ಸಾಧಿಸಲಾಗಿದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಹರ ಘರ ಜಲ ಯೋಜನೆಯಡಿ ಬಾಕಿ ಇರುವ ಕಾಮಗಾರಿಗಳನ್ನು ಮಾರ್ಚ-2027 ರೊಳಗಾಗಿ ಪೂರ್ಣಗೊಳಿಸಲು‌ ಅಧಿಕಾರಿಗಳಿಗೆ ಸೂಚಿಸಿದರು. ಟಾಸ್ಕ‌ಫೊರ್ಸ್ ಸಮಿತಿಯ ಮಾರ್ಗಸೂಚಿಗಳನ್ನು ತಿದ್ದುಪಡಿ ಮಾಡಲಾಗುವುದು.

ಶಾಸಕರಾದ ಶಶಿಕಲಾ ಜೊಲ್ಲೆ ಅವರು ಮಾತನಾಡಿ, ನಿಪ್ಪಾಣಿ ಕ್ಷೇತ್ರದ ಏಳರಲ್ಲಿ ನಾಲ್ಕು ಸೇತುವೆ ಮುಳುಗಡೆಯಾಗಿವೆ. ಸೇತುವೆಗಳನ್ನು ಎತ್ತರಿಸಲು ಕ್ರಮ ವಹಿಸಬೇಕು. ಬೆಳೆಹಾನಿ ಸಮೀಕ್ಷೆ ಮಾಡಿ ಪರಿಹಾರ ನೀಡುವ ಕೆಲಸವಾಗಬೇಕು.
ಕಾರದಗಾ ಸೇತುವೆ ಸರಿಪಡಿಸಬೇಕು ಎಂಬುದು ಗ್ರಾಮಸ್ಥರ ಬೇಡಿಕೆಯಾಗಿದೆ.‌ ಇದನ್ನು ಲೋಕೋಪಯೋಗಿ‌ ಇಲಾಖೆ ಗಮನಕ್ಕೆ ತರಲಾಗಿದೆ. ಈ ನಿಟ್ಟಿನಲ್ಲಿ ಕ್ರಮವಹಿಸುವಂತೆ ಮನವಿ ಮಾಡಿದರು.

ಶಾಸಕ ಮಹಾಂತೇಶ ಕೌಜಲಗಿ ಅವರು, ಬಹುಗ್ರಾಮ ಕುಡಿಯುವ ನೀರು ಯೋಜನೆ ಸಮರ್ಪಕವಾಗಿ ಜಾರಿಗೊಳಿಸಲು ಅನುಕೂಲವಾಗುವಂತೆ ಒಂದು ಹೆಚ್ವುವರಿ ಮೋಟಾರು ಒದಗಿಸಬೇಕು ಎಂದರು.

ಅಥಣಿ ಶಾಸಕರಾದ ಲಕ್ಷ್ಮಣ ಸವದಿ ಅವರು ಹಿಪ್ಪರಗಿ ಬ್ಯಾರೇಜ್ ಬಳಿ ಒಂದು ರೈಸಿಂಗ್ ಮೇನ್ ಕಲ್ಪಿಸುವ ಮೂಲಕ 700 ಗ್ರಾಮಗಳ ನೀರಿನ ಸಮಸ್ಯೆ ನಿವಾರಿಸಬಹುದು ಎಂದು ತಿಳಿಸಿದರು.

ಶಾಸಕ ಎಚ್.ಕೆ.ಪಾಟೀಲ ಅವರು ಮಾತನಾಡಿ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಗಾಳಿಯ ವೇಗ(ವೆಲಾಸಿಟಿ) ಜಾಸ್ತಿ ಇರುತ್ತದೆ. ಇದರಿಂದ ಮೋಡಗಳು ಚದುರಿ ಹೋಗುತ್ತವೆ. ಆದ್ದರಿಂದ ಮೋಡ ಬಿತ್ತನೆ ಅನಿವಾರ್ಯ ಎನ್ನುವಂತಾಗಿದೆ. ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದ ವೇಳೆ ನಡೆದ ಮೋಡ ಬಿತ್ತನೆ ಪ್ರಯೋಗ ಯಶಸ್ವಿಯಾಗಿದೆ ಎಂದು ಅಮೆರಿಕದ ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದರು.
40 ಕೋಟಿ ವೆಚ್ಚದಲ್ಲಿ ಕನಿಷ್ಠ 50 ದಿನಗಳ ಕಾಲ ಮೋಡ ಬಿತ್ತನೆ ಮಾಡಬೇಕು ಎಂದು ಮನವಿ ಮಾಡಿಕೊಂಡರು.
ಕೇಂದ್ರ -ರಾಜ್ಯ ಸರಕಾರಗಳ ಜಂಟಿ ಸಹಭಾಗಿತ್ವದಲ್ಲಿ ರಕ್ಷಣಾ ಪಡೆಯ ವಿಮಾನಗಳನ್ನು ಬಳಸಿಕೊಂಡು ಮೋಡ ಬಿತ್ತನೆ ಮಾಡಬಹುದು ಎಂದರು.

ಶಾಸಕ ರಾಜು ಕಾಗೆ ಅವರು, ಬೆಳಗಾವಿ ಜಿಲ್ಲೆಯ ಕಾಗವಾಡ ಮತಕ್ಷೇತ್ರದ ಮೂವತ್ತು ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗಿದ್ದು, ಜಾನುವಾರುಗಳಿಗೆ ಮೇವಿನ‌ ಕೊರತೆ ಕಂಡುಬಂದಿದೆ.
ಈಗಾಗಲೇ ಕಾಮಗಾರಿ ಆರಂಭಿಸಲಾಗಿರುವ ಕೆರೆ ತುಂಬುವ ಯೋಜನೆಯನ್ನು ತ್ವರಿತಗೊಳಿಸಲು ಮನವಿ ಮಾಡಿದರು.

ವಿಜಯಪುರ ಜಿಲ್ಲೆಯ ಚಡಚಣ ವಿಧಾನಸಭಾ ಕ್ಷೇತ್ರದಲ್ಲಿ ಕುಡಿಯುವ ನೀರು, ರಸ್ತೆ‌ ದುರಸ್ತಿ ಕುರಿತು ಶಾಸಕರು ಗಮನ ಸೆಳೆದರು.

ಶಾಸಕರಾದ ಅಪ್ಪಾಜಿ ನೇಮಗೌಡ ಅವರು, ಮುದ್ದೇಬಿಹಾಳ‌ ಕ್ಷೇತ್ರಕ್ಕೆ ಆಲಮಟ್ಟಿ ಹಿನ್ನೀರನ್ನು ಕೆರೆಗಳಿಗೆ ಬಿಡುವ ಮೂಲಕ‌ ಕುಡಿಯುವ‌ ನೀರಿನ‌ ಸಮಸ್ಯೆ ನಿವಾರಿಸಲು ಮನವಿ‌ ಮಾಡಿದರು.

ಅರವಿಂದ ಬೆಲ್ಲದ‌ ಅವರು, ಉತ್ತರ ಕರ್ನಾಟಕದ‌ ಜ್ವಲಂತ ಸಮಸ್ಯೆಗಳಿಗೆ ಶಾಶ್ವತ‌ ಪರಿಹಾರ ಒದಗಿಸಲು ಕೋರಿದರು. ಹುಬ್ಬಳ್ಳಿ-ಧಾರಾವಾಡದಲ್ಲಿ ಎಲ್.ಆಂಡ್ ಟಿ ಸಂಸ್ಥೆಯವರ‌ಕಾರ್ಯ ವೈಖರಿ ತೃಪ್ತಿಕರವಾಗಿರುವುದಿಲ್ಲ ಎಂದು ಅಸಮಾಧಾನ ವ್ಯಕ್ತ ಪಡಿಸಿದರು.

ವಿಧಾನ ಪರಿಷತ್ ಸದಸ್ಯ ಹನುಂಮತ‌ ನೀರಾಣಿ ಅವರು, ಈ ಭಾಗದಲ್ಲಿ ಕಾಳಿ ನದಿಯನ್ನು ಮಲಪ್ರಭಾ ನದಿಗೆ ಜೋಡಣೆ ಮಾಡುವ ಮೂಲಕ‌ ಈ ಭಾಗದ ನೀರಾವರಿ ಸಮಸ್ಯೆಯನ್ನು ನಿವಾರಿಸಬಹುದಾಗಿದೆ ಎಂದು ಗಮನ ಸೆಳೆದರು.

ಹುನಗುಂದ ಶಾಸಕ ವಿಜಯಾನಂದ‌‌ ಕಾಶಪ್ಪನವರ ಅವರು ಮಾತನಾಡಿ, ಹುನಗುಂದ ಮತಕ್ಷೇತ್ರದಲ್ಳಿ ಮೂರು ನದಿಗಳು ಹರಿದರು ಸಹ ನೀರಿನ ಸಮಸ್ಯೆ ಇದ್ದು ಅತೀ ಮಳೆಯಿಂದಾಗಿ ಪ್ರವಾಹ ಉಂಟಾಗಿ ಸಾಕಷ್ಟು ಜನ ಭೂಮಿ ಜನ ಕಳೆದುಕೊಂಡಿದ್ದು ಅವರಿಗೆ ಪರಿಹಾರ ಒದಗಿಸಲು‌ ಮನವಿ ಮಾಡಿದರು.

ಶಾಸಕ ಆರ.ಬಿ.ತಿಮ್ಮಾಪುರ ಅವರು, ಬೆಳೆ‌ವಿಮೆ ಏಜೆಂಟರ್ ಪಾಲಾಗುತ್ತಿದೆ. ಬೆಳೆ‌ವಿಮೆ ದುರುಪಯೋಗ ಪಡೆಸಿಕೊಳ್ಳುವವರ ವಿರುದ್ಧ ಕ್ರಮ‌ ಜರುಗಿಸಲು ತಿಳಿಸಿದರು.

ರಾಯಬಾಗ ಶಾಸಕ ದುರ್ಯೊಧನ ಐಹೊಳಿ ಅವರು, ರಾಯಬಾಗ ವಿಧಾನ ಸಭಾ ಕ್ಷೇತ್ರದ ಬಹುಪಾಲು ಮಳೆಯಾಶ್ರಿತ ಕೃಷಿ ಪ್ರದೇಶವಾಗಿದೆ. ರಾಯಬಾಗ‌ ಪಟ್ಟಣದಲ್ಲಿ ಕುಡಿಯುವ ನೀರಿನ‌ ತೊಂದರೆಯಿದ್ದು ಕ್ಷೇತ್ರದಲ್ಲಿ ನೀರಾವರಿ ಯೋಜನೆಗಳಿಗೆ ಅನುದಾನ ಒದಗಿಸಲು ಮನವಿ ಮಾಡಿದರು.

ಖಾನಾಪುರ ಶಾಸಕರಾದ ವಿಠ್ಠಲ ಹಲಗೇಕರ ಮಾತನಾಡಿ ಖಾನಾಪುರ ವಿಧಾನ ಸಭಾ ಕ್ಷೇತ್ರದ ಅರಣ್ಯ ಭಾಗದ ಕೆಲ‌ ಗ್ರಾಮಗಳಲ್ಲಿ ಮಳೆ‌ ಹಾಗೂ ಗಾಳಿಯಿಂದಾಗಿ ವಿದ್ಯುತ ತೊಂದರೆ ಎದುರಾಗುತ್ತಿರುವ ಹಾಗೂ ಸಿ.ಸಿ. ರಸ್ತೆ ನಿರ್ಮಾಣ ಮಾಡುವ‌ ಕುರಿತು ಗಮನ ಸೆಳೆದರು.

ಶಾಸಕರಾದ ಯಶವಂತರಾಯ ಪಾಟೀಲ ಅವರು, ಕುಡಿಯುವ ನೀರಿನ‌ ಸಮಸ್ಯೆಯನ್ನು ಶಾಶ್ವತಾವಗಿ ಪರಿಹರಿಸಬೇಕು. ಕಲ್ಯಾಣ‌ ಕರ್ನಾಟಕ ಅಭಿವೃದ್ಧಿ ಮಂಡಳಿಯಂತೆ ಕಿತ್ತೂರ ಕರ್ನಾಟಕ‌ ಅಭಿವೃದ್ಧಿ ಮಂಡಳಿ ಸ್ಥಾಪಿಸಲು ಮನವಿ ಮಾಡಿದರು.

ನವಲಗುಂದ ಶಾಸಕ ಎನ್.ಎಚ್.ಕೋನರಡ್ಡಿ ಅವರು, ಮಹಾದಾಯಿ ಯೋಜನೆ ಬೇಗ ಪ್ರಾರಂಭಿಸಬೇಕು. ಉತ್ತರ ಕರ್ನಾಟಕ‌ ಭಾಗದಲ್ಲಿ ಮೋಡ ಬಿತ್ತನೆ ಮಾಡಬೇಕು ಎಂದು ಮನವಿ ಮಾಡಿಕೊಂಡರು.

ಶಾಸಕರಾದ ಮಂಕಾಳ‌ ವೈದ್ಯ, ಕಾರವಾರ ವಿಧಾನಸಭಾ ಕ್ಷೇತ್ರದಲ್ಲಿ ಜೆ.ಜೆ.ಎಮ್ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಮನವಿ ಮಾಡಿದರು.

ಸಭೆಯಲ್ಲಿ ವಿಧಾನ ಸಭೆ ಹಂಗಾಮಿ ಸಭಾಧ್ಯಕ್ಷರಾದ ರುದ್ರಪ್ಪ ಲಮಾಣಿ, ಆರೋಗ್ಯ ಸಚಿವ ಯು.ಟಿ.ಖಾದರ್ ಫರೀದ್, ಶಾಸಕರುಗಳು, ಸಂಸದರು, ಸರಕಾರದ ಮುಖ್ಯ ಕಾರ್ಯದರ್ಶಿಗಳಾದ ಶಾಲನಿ ರಜನೀಶ್ ,ಮುಖ್ಯಮಂತ್ರಿಗಳ ಅಪರ‌ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ,
ಅಪರ ಮುಖ್ಯ ಕಾರ್ಯದರ್ಶಿಗಳು ಗೌರವ್ ಗುಪ್ತ, ಪ್ರಜಾ ಸೇವಾ ಇಲಾಖೆ ಕಾರ್ಯದರ್ಶಿ ಹರ್ಷ ಗುಪ್ತ್, ಮುಖ್ಯ ಮಂತ್ರಿಗಳ ಆರ್ಥಿಕ ಸಲಹೆಗಾರರ ಎಲ್.ಕೆ.ಅತೀಕ್, ಬೆಳಗಾವಿ ವಿಭಾಗದ ಎಲ್ಲ ಜಿಲ್ಲಾಧಿಕಾರಿಗಳು, ಜಿಲ್ಲಾ‌ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಪೋಲಿಸ್ ಆಯುಕ್ತರುಗಳು, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

About The Author