ಸಮಾಜಮುಖಿ ಕಾರ್ಯ ಮಾಡುವ ಮೂಲಕ ನಾಲವಾರ ಪೂಜ್ಯರ ಜನ್ಮದಿನದ ಅಂಗವಾಗಿ 155ಕ್ಕೂ ಹೆಚ್ಚು ಬುದ್ದಿ ಮಾಧ್ಯರಿಗೆ ಉಚಿತ ಕ್ಷೌರ ಸೇವೆ

WhatsApp Group Join Now

ಕಲಬುರಗಿ: ಚಿತ್ತಾಪುರ ತಾಲೂಕಿನ ನಾಲವಾರ ಗ್ರಾಮದ ಸದ್ಗುರು ಶ್ರೀ ಕೋರಿಸಿದ್ದೇಶ್ವರ ಮಠದ ಪೀಠಾಧಿಪತಿಗಳಾದ ಪರಮ ಪೂಜ್ಯ ಶ್ರೀ ಷ.ಬ್ರ.ಡಾ. ಸಿದ್ಧ ತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳ 62ನೇ ವರ್ಷದ ಜನ್ಮದಿನದ ಅಂಗವಾಗಿ, ಕಲಬುರಗಿ ನಗರದ ಬಿದ್ದಾಪೂರ ಕಾಲೋನಿಯ ಅನಾಥ ನಿರ್ಗತಿಕರ ಕೇಂದ್ರದಲ್ಲಿ 155ಕ್ಕೂ ಹೆಚ್ಚು ಅನಾಥ ಹಾಗೂ ಮಾನಸಿಕ ಬುದ್ಧಿ ಮಾಧ್ಯರಿಗೆ ಉಚಿತವಾಗಿ ಕ್ಷೌರ ಸೇವೆ ಸಲ್ಲಿಸಲಾಯಿತು.

ಕಲಬುರಗಿ ಜಿಲ್ಲೆಯ ಹಡಪದ ಅಪ್ಪಣ್ಣ ಸಮಾಜದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹಾಗೂ ಸಮಾಜ ಸೇವಕರಾದ ಮಲ್ಲಿಕಾರ್ಜುನ ಬಿ. ಹಡಪದ ಸುಗೂರ ಎನ್. ಅವರು ಕಳೆದ 18 ವರ್ಷಗಳಿಂದ ಪೂಜ್ಯರ ಜನ್ಮದಿನದ ಅಂಗವಾಗಿ ವಿಭಿನ್ನ ರೀತಿಯ ಸಮಾಜಮುಖಿ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದ್ದು, ಈ ಬಾರಿಯೂ ನಿಸ್ವಾರ್ಥವಾಗಿ ಉಚಿತ ಕ್ಷೌರ ಸೇವೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪರಮ ಪೂಜ್ಯ ಶ್ರೀ ರಾಜಶಿವಯೋಗಿ ಮಹಾಸ್ವಾಮಿಗಳು, “ಪೂಜ್ಯರ ಜನ್ಮದಿನದಂದು ಅನಾಥ ಹಾಗೂ ಮಾನಸಿಕ ಬುದ್ಧಿ ಮಾಧ್ಯರಿಗೆ ಉಚಿತವಾಗಿ ಕ್ಷೌರ ಸೇವೆ ಸಲ್ಲಿಸುವ ಮೂಲಕ ಮಲ್ಲಿಕಾರ್ಜುನ ಬಿ. ಹಡಪದ ಸುಗೂರ ಎನ್. ಅವರು ನಿಸ್ವಾರ್ಥ ಸಮಾಜ ಸೇವೆ ಮಾಡುತ್ತಿದ್ದಾರೆ. ಇಂತಹ ಸೇವಾ ಕಾರ್ಯಗಳು ಸಮಾಜಕ್ಕೆ ಮಾದರಿಯಾಗಿವೆ” ಎಂದು ಹೇಳಿದರು.

ನಾಗಲಿಂಗಯ್ಯ ಹಿರೇಮಠ ಮಹಾಸ್ವಾಮಿಗಳು ಹಾಗೂ ವೀರಶೈವ ಸಮಾಜದ ಮುಖಂಡರು ಮಾತನಾಡಿ, “ಬಡ ಕುಟುಂಬದಲ್ಲಿ ಹುಟ್ಟಿ, ಬಡವರು ಹಾಗೂ ಅನಾಥರಿಗಾಗಿ ಸೇವೆ ಸಲ್ಲಿಸುತ್ತಿರುವ ಮಲ್ಲಿಕಾರ್ಜುನ ಬಿ. ಹಡಪದ ಸುಗೂರ ಎನ್. ಅವರ ಕಾರ್ಯ ಶ್ಲಾಘನೀಯ. ಅವರೊಂದಿಗೆ ಸೇವೆ ಸಲ್ಲಿಸುತ್ತಿರುವ ಎಲ್ಲ ಕಾಯಕ ಬಂಧುಗಳ ಮೇಲೂ ಮಹಾಗುರುವಿನ ಆಶೀರ್ವಾದ ಸದಾ ಇರಲಿ” ಎಂದು ಹಾರೈಸಿದರು.

ಈರಣ್ಣ ಸಿ. ಹಡಪದ ಸಣ್ಣೂರ, ಕಲಬುರಗಿ ಜಿಲ್ಲಾ ಹಡಪದ ಅಪ್ಪಣ್ಣ ಸಮಾಜದ ಜಿಲ್ಲಾಧ್ಯಕ್ಷರು ಮಾತನಾಡಿ, “ನಮ್ಮ ಸಮಾಜದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹಾಗೂ ಸಮಾಜ ಸೇವಕರಾದ ಮಲ್ಲಿಕಾರ್ಜುನ ಬಿ. ಹಡಪದ ಸುಗೂರ ಎನ್. ಅವರು ಪರಮ ಪೂಜ್ಯ ಶ್ರೀ ಷ.ಬ್ರ. ಡಾ. ಸಿದ್ಧ ತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳ ಜನ್ಮದಿನದ ಅಂಗವಾಗಿ ವಿವಿಧೆಡೆ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಮೆಚ್ಚುವಂತಹ ಕಾರ್ಯವಾಗಿದೆ. ಮುಂದೆಯೂ ಹತ್ತು ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಿ ಸಮಾಜದ ಹೆಸರನ್ನು ಮತ್ತಷ್ಟು ಬೆಳಗಿಸಲಿ. ಗುರುವಿನ ಆಶೀರ್ವಾದ ಅವರ ಕುಟುಂಬದವರ ಹಾಗೂ ಅವರೊಂದಿಗೆ ಸೇವೆ ಸಲ್ಲಿಸುತ್ತಿರುವ ಕಾಯಕ ಸಮಾಜದ ಬಂಧುಗಳ ಮೇಲೆ ಸದಾ ಇರಲಿ” ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ನಿರ್ಗತಿಕರ ಕೇಂದ್ರದ ವೀರೇಶ ಸರ್, ಕಲಬುರಗಿ ಜಿಲ್ಲೆಯ ಗೌರವಾಧ್ಯಕ್ಷ ಬಸವರಾಜ ಹಡಪದ ಸುಗೂರ ಎನ್., ಜಿಲ್ಲಾ ಕಾರ್ಯಾಧ್ಯಕ್ಷ ಭಗವಂತ ಶಿಕ್ಷಕರು ಕಿರಣಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ ನೀಲೂರ, ರಾಜ್ಯ ಮಾಜಿ ಸಂಘಟನಾ ಕಾರ್ಯದರ್ಶಿ ಬಸವರಾಜ ಹಡಪದ ಶಹಾಬಾದ, ಜಿಲ್ಲಾ ಸಹಕಾರ್ಯದರ್ಶಿ ಮಹಾದೇವ ರಾವೂರ, ಕಲಬುರಗಿ ತಾಲೂಕಾಧ್ಯಕ್ಷ ಚಂದ್ರಶೇಖರ ತೋನಸನಹಳ್ಳಿ, ಪ್ರಧಾನ ಕಾರ್ಯದರ್ಶಿ ವಿನೋದ ಅಂಬಲಗಾ, ನಾಲವಾರ ಕಸಾಪ ಅಧ್ಯಕ್ಷ ಅಂಜುನಾಥ ಎಸ್. ನಾಯ್ಕಲ್, ಶಂಭುಲಿಂಗ ಹಡಪದ ಯಲಗೋಡ, ವಿಶ್ವನಾಥ ಹಡಪದ ಸುಗೂರ ಎನ್., ಮಲ್ಲಿಕಾರ್ಜುನ ಬೆಳಗುಪ್ಪಿ, ಶಂಕರ ಹಡಪದ ಹರವಾಳ ಸೇರಿದಂತೆ ನಿರ್ಗತಿಕರ ಕೇಂದ್ರದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಸಮಾಜ ಸೇವಕರಾದ ಮಲ್ಲಿಕಾರ್ಜುನ ಬಿ. ಹಡಪದ ಸುಗೂರ ಎನ್. ಅವರು ಇದುವರೆಗೆ 2350ಕ್ಕೂ ಹೆಚ್ಚು ಅನಾಥ, ನಿರ್ಗತಿಕರು ಹಾಗೂ ವಿವಿಧ ವರ್ಗದ ಜನರಿಗೆ ಉಚಿತವಾಗಿ ಕ್ಷೌರ ಸೇವೆ ಸಲ್ಲಿಸಿರುವುದಾಗಿ ತಿಳಿಸಿದರು.

ಅನಾಥರು, ನಿರ್ಗತಿಕರು, ಅಂಧರು, ವಿಶೇಷ ಚೇತನರು, ಪೌರ ಕಾರ್ಮಿಕರು, ಹಿರಿಯ ನಾಗರಿಕರು, ಬುದ್ಧಿ ಮಾಧ್ಯರು, ಸಾಧು-ಸಂತರು, ಅನಾಥ ಶಾಲಾ ಮಕ್ಕಳು, ಕಿವುಡರು, ಮೂಕರು, ಕಟ್ಟಡ ಕಾರ್ಮಿಕರು, ಬಡ ನಿರ್ಗತಿಕರು, ರೈಲ್ವೆ ನಿಲ್ದಾಣದಲ್ಲಿರುವ ಹಿರಿಯರು, ಆಶ್ರಮಗಳಲ್ಲಿರುವ ಮಾನಸಿಕ ಬುದ್ಧಿ ಮಾಧ್ಯರು ಹಾಗೂ ಅನಾಥಾಶ್ರಮಗಳಲ್ಲಿರುವ ನಿರ್ಗತಿಕರಿಗೆ ಉಚಿತವಾಗಿ ಕ್ಷೌರ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ.

ತಮ್ಮೊಂದಿಗೆ ಕಾಯಕ ಬಂಧುಗಳನ್ನು ಸೇರಿಸಿಕೊಂಡು ವಿವಿಧೆಡೆ ಇಂತಹ ಸೇವಾ ಕಾರ್ಯಗಳನ್ನು ನಿರಂತರವಾಗಿ ನಡೆಸುತ್ತಿರುವ ಅವರು, ಕ್ಷೌರ ಸೇವೆಯ ಮೂಲಕ ಸ್ವಚ್ಛತೆ ಹಾಗೂ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವನ್ನೂ ಮಾಡುತ್ತಿದ್ದಾರೆ.

About The Author