ಕಿತ್ತೂರು ಚನ್ನಮ್ಮ ಕನ್ನಡ ನಾಡಿನ ಅಸ್ಮಿತೆ- ಸ್ವಾಭಿಮಾನ, ಆತ್ಮ ಗೌರವದ ಸಂಕೇತ: ಚುಕ್ಕಿ ನಂಜುಂಡಸ್ವಾಮಿ

WhatsApp Group Join Now

ಬೆಳಗಾವಿ ಕಿತ್ತೂರು ಕೋಟೆ ಆವರಣದ ರಾಣಿ ಚನ್ನಮ್ಮ ವೇದಿಕೆಯಲ್ಲಿ ಶುಕ್ರವಾರ ಜರುಗಿದ ಚನ್ನಮ್ಮನ ಕಿತ್ತೂರ ಉಸ್ತವವನ್ನು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರೈತ ಮುಖಂಡರಾದ ಶ್ರೀಮತಿ ಚುಕ್ಕಿ ನಂಜುಂಡಸ್ವಾಮಿ ಉದ್ಘಾಟಿಸಿ ಅವರು ಮಾತನಾಡಿದರು.

ಕಿತ್ತೂರು ಚನ್ನಮ್ಮ ಧೈರ್ಯ, ಸಾಹಸದ ಪ್ರತೀಕವಾಗಿದ್ದು ಬ್ರಿಟಿಷರಿಗೆ ಕಪ್ಪ ಕೊಡುವುದನ್ನು ವಿರೋಧಿಸಿದ ದಿಟ್ಟ ಮಹಿಳೆಯಾಗಿದ್ದ ಅಂತಹ ಮಹಾನ್ ಮಹಿಳೆ ಜನಿಸಿದ ನಮ್ಮ ನಾಡಿನಲ್ಲಿ ಇಂದಿಗೂ ಸಹ ಮಹಿಳೆಯರನ್ನು ನೋಡುವಂತಹ ಮನಸ್ಥಿತಿ ಬದಲಾಗದೆ ಇರುವುದು ಕಳವಳಕಾರಿ ಸಂಗತಿಯಾಗಿದೆ. ಭ್ರೂಣ ಹತ್ಯೆ ನಿಯಂತ್ರಣಕ್ಕೆ ಅನೇಕ ಕಾನೂನುಗಳಿದ್ದರೂ ಸಹ ಭ್ರೂಣದಲ್ಲಿಯೇ ಹೆಣ್ಣು ಮಗುವನ್ನು ಹಿಸುಕುವಂತಹ ಹೇಯ ಕೃತ್ಯ ಜಾರಿಯಲ್ಲಿದೆ. ಹೆಣ್ಣು ಜನ್ಮ ಪಡೆಯುವುದು ಕಷ್ಟ ಸಾಧ್ಯವಾಗಿದೆ.

ದೇಶದಲ್ಲಿ ಲಿಂಗ ತಾರತಮ್ಯದ ಕುರಿತು ಅರ್ಥ ಮಾಡಿಕೊಳ್ಳುವುದು ಇನ್ನೂ ಸಾಕಷ್ಟಿದೆ. ಮಹಿಳೆಯರಿಗೆ ಸಮಾನ ಅವಕಾಶ ನೀಡಬೇಕಾಗಿದೆ. ರಾಜ್ಯದ ಎಲ್ಲ ಹೆಣ್ಣುಮಕ್ಕಳಿಗೆ ಕನಿಷ್ಠ ಪಿಯುಸಿವರೆಗೆ ಸ್ಥಳೀಯವಾಗಿ ಶಿಕ್ಷಣ ಸಿಗುವ ವ್ಯವಸ್ಥೆಯನ್ನು ಸರಕಾರ ಕಲ್ಪಿಸಬೇಕು. ಈ ನಿಟ್ಟಿನಲ್ಲಿ ಸಚಿವ ಸತೀಶ್ ಜಾರಕಿಹೊಳಿ ಅವರು ತಮ್ಮ ಸರಕಾರದ‌ ಮೂಲಕ ಪ್ರಯತ್ನಿಸಬೇಕು ಎಂದು ಒತ್ತಾಯಿಸಿದರು.

ರೈತರ ಆತ್ಮಹತ್ಯೆಯಲ್ಲಿ ದೇಶದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಕರ್ನಾಟಕ ರಾಜ್ಯದಲ್ಲಿ ಬೆಳಗಾವಿ ಜಿಲ್ಲೆ ಎರಡನೇ ಸ್ಥಾನದಲ್ಲಿದೆ. ಕೃಷಿ ಕ್ಷೇತ್ರದ ಮೇಲಾಗುವ ದುಷ್ಪರಿಣಾಮ ನೇರವಾಗಿ ಮಹಿಳೆಯರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಈ ಬಗ್ಗೆ ಸರಕಾರ ಗಮನಹರಿಸಬೇಕು.

ವಾಣಿಜ್ಯ ಬೆಳೆ ಕಬ್ಬು ಬೆಳೆಯುವವರ ಆರ್ಥಿಕ‌ ಪರಿಸ್ಥಿತಿಯೇ ಚೆನ್ನಾಗಿಲ್ಲದಿರುವಾಗ ಸಜ್ಜೆ, ಗೋದಿ, ರಾಗಿ ಬೆಳೆಯುವ ರೈತರ ಪರಿಸ್ಥಿತಿ ಯಾವ ಮಟ್ಟದ್ದಿದೆ ಎಂಬುದನ್ನು ಊಹಿಸಬಹುದಾಗಿದೆ. ರೈತರ‌ ಸಮಸ್ಯೆಗಳ ಬಗ್ಗೆ ಸರಕಾರ ಗಮನಿಸಬೇಕು. ರಾಜ್ಯ ಈ ಬಾರಿ ಭೀಕರ ಬರಗಾಲ ಎದುರಿಸುತ್ತಿದೆ. ಕೃಷಿಯನ್ನು ಮಹಿಳಾಕರಣ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಬರಗಾಲದ ಈ ಹಿನ್ನಲೆಯಲ್ಲಿ ಸಣ್ಣ ಭೂಮಿ ಹೊಂದಿರುವ ಮಹಿಳಾ ರೈತರ ಆತ್ಮಹತ್ಯೆಯನ್ನು ತಡೆಗಟ್ಟಲು ಕ್ರಮ ಕೈಗೊಳ್ಳಬೇಕು.

ನಮ್ಮ‌ ನಾಡಿನ ಎಲ್ಲ ರೈತರ ಚಿತ್ರಣ ಬದಲಾಯಿಸಿದಲ್ಲಿ ಇಂತಹ ಉತ್ಸವಕ್ಕೆ ಅರ್ಥ ಬಂದತಾಗುತ್ತದೆ. ಹೊಸ ಹೊಸ ವಸಾಹುತ ಶಾಹಿ ಕಾನೂನುಗಳಿಂದ ಇನ್ನೂ ಸ್ವಾತಂತ್ರ್ಯ ದೊರಕಿಲ್ಲ. ಇಂತಹ ಕಾನೂನುಗಳಿಂದ ಮುಂದೆ ಬಡ‌ ಹಾಗೂ ಶ್ರಮಿಕ ವರ್ಗದವರಿಗೆ ಗಂಡಾಂತರವಿದ್ದು ಇದರ ವಿರುದ್ಧ ಹೋರಾಡಲು ಪ್ರತಿ ಮನೆಯಲ್ಲಿಯೂ ರಾಣಿ ಚನ್ನಮ್ಮ, ಭಗತಸಿಂಗ್ ಹುಟ್ಟಬೇಕು ಎಂದು ರೈತ ಮುಖಂಡರಾದ ಶ್ರೀಮತಿ ಚುಕ್ಕಿ ನಂಜುಂಡಸ್ವಾಮಿ ಅವರು ಕರೇ ನೀಡಿದರು.

ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ಮಾತನಾಡಿ ಕಳೆದ ಇಪ್ಪತ್ತು ವರ್ಷಗಳಿಂದ ಕಿತ್ತೂರು ಉತ್ಸವದ ಮೂಲಕ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ವಿಭಿನ್ನ ಕಿತ್ತೂರು ನಿರ್ಮಾಣಕ್ಕೆ ಪ್ರಯತ್ನಿಸಲಾಗುತ್ತಿದೆ. ಚನ್ನಮ್ಮ ಥೀಮ್ ಪಾರ್ಕ ಸ್ಥಾಪನೆಗೆ ಶೀಘ್ರವ ಚಾಲನೆ ನೀಡಲಾಗುವುದು ಎಂದರು.

ಕಿತ್ತೂರು ಉತ್ಸವ ಕೇವಲ ಜಿಲ್ಲೆಗೆ ಸೀಮಿತವಾಗದೆ ರಾಜ್ಯ ಮಟ್ಟದ ಉತ್ಸವನ್ನಾಗಿಸಲು ಪ್ರಯತ್ನಿಸಲಾಗುತ್ತಿದೆ. ಸರಕಾರಗಳಿಂದ ಸರಕಾರಿ ಶಾಲೆಯ ಮೂಲಭೂತ ಸೌಕರ್ಯ ಒದಗಿಸಲು ಸಾಧ್ಯವಾಗುತ್ತಿಲ್ಲ. ರಾಜ್ಯ ಸರಕಾರವು ಮಹಿಳೆಯರ ಶ್ರೇಯೋಭಿವೃದ್ಧಿಗಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.

ಕಳೆದ ಮೂರು ವರ್ಷಗಳಿಂದ ಕಿತ್ತೂರು ಅಭಿವೃದ್ಧಿಗೆ ಸಾಕಷ್ಟು ಅನುದಾನವನ್ನು ನೀಡಲಾಗಿದೆ. ಈ ಉತ್ಸವದ ಮೂಲಕ ಸ್ಥಳೀಯ ಕಲಾವಿದರು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಮಿಂಚುವಂತಾಗಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಅವರು ಹೇಳಿದರು.

ಸರ್ಕಾರಿ ಮುಖ್ಯ ಸಚೇತಕರಾದ ಅಶೋಕ ಪಟ್ಟಣ ಅವರು ಮಾತನಾಡಿ ಕಿತ್ತೂರು ಚನ್ನಮ್ಮ ನಾಡಿನ ಹಿರಿಮೆಯನ್ನು ವಿಶ್ವಾದ್ಯಂತ ಪಸರಿಸಿದ ವೀರ ಮಹಿಳೆ ಎಂದರು.

ಲಿಂಗಾಯತ ಪಂಚಮಸಾಲಿ ಜಗದ್ಗುರುಗಳಾದ ಬಸವ ಮೃತ್ಯುಂಜಯ ಮಹಾಸ್ವಾಮಿಗಳು ಆಶೀರ್ವಚನ ನೀಡಿ ಇಪ್ಪತ್ತು ವರ್ಷಗಳ ಚನ್ನಮ್ಮ ಉತ್ಸವದಲ್ಲಿ ಈ ಉತ್ಸವ ಐತಿಹಾಸಿಕವಾಗಿದ್ದು ಈ ಬಾರಿ ಚನ್ನಮ್ಮನ ಉತ್ಸವವನ್ನು ರೈತ ಹೋರಾಟಗಾರ್ತಿಯಿಂದ ಉದ್ಘಾಟಿಸಿರುವುದು ಐತಿಹಾಸಿಕವಾಗಿದೆ.

ಈ ನಾಡು ಸಮೃದ್ಧವಾದ ಹಿನ್ನಲೆಯಲ್ಲಿ ಕಿತ್ತೂರು ಸಂಸ್ಥಾನವನ್ನು ವಶಪಡಿಸಿಕೊಳ್ಳಲು ಸಂಚು ರೂಪಿಸಿದರು. ರೈತ ಉಳಿದರೆ ಮಾತ್ರ ದೇಶ ಉದ್ಧಾರವಾಗುತ್ತದೆ. ಪ್ರತಿಯೊಬ್ಬರ ಕೈಯಲ್ಲಿ ಪೆನ್ನು ಹಾಗೂ ನೇಗಿಲು ಹಿಡಿಯಬೇಕಾಗಿದೆ. ಕರ್ನಾಟಕ ಏಕೀಕರಣ ಸಂದರ್ಭದಲ್ಲಿ ವಿವಿಧ ಕನ್ನಡಪರ ಸಂಘಟನೆಗಳು ಏಕೀಕರಣವಾದಂತೆ ಎಲ್ಲ ರೈತ ಸಂಘಟನೆಗಳು ಒಂದಾಗಬೇಕು ಎಂದರು.

ನಿಚ್ಚಣಕಿಯ ಶ್ರೀಗುರು ಮಡಿವಾಳೇಶ್ವರ ಮಠದ ಶ್ರೀ ಮ.ನಿ.ಪ್ರ.ಸ್ವ. ಪಂಚಾಕ್ಷರಿ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.

ಚನ್ನಮ್ಮನ ಕಿತ್ತೂರಿನ ರಾಜಗುರು ಸಂಸ್ಥಾನ ಕಲ್ಮಠದ ಶ್ರೀ ಮ.ನಿ.ಪ್ರ. ಸ್ವಾಮೀಜಿ ಮಡಿವಾಳ ರಾಜಯೋಗೇಂದ್ರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿದ್ದ
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ಅಧ್ಯಕ್ಷರಾದ ಮಹಾಂತೇಶ ಕೌಜಲಗಿ, ಕಿತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಬಾಬಾಸಾಹೇಬ ಪಾಟೀಲ, ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮ ನಿ. ಅಧ್ಯಕ್ಷ ಭರಮಣ್ಣ ಉಪ್ಪಾರ, ರಾಜ್ಯ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷರಾದ ಅಡಿವೇಶ ಇಟಗಿ, ಕಿತ್ತೂರ ಪಟ್ಟಣ ಪಂಚಾಯತ ಅಧ್ಯಕ್ಷರಾದ ಜೈ ಸಿದ್ರಾಮ್ ಮಾರಿಹಾಳ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷರಾದ ವಿನಯ ನಾವಲಗಟ್ಟಿ, ಕಾಡಾ ಅಧ್ಯಕ್ಷರಾದ ಯುವರಾಜ ಕದಮ್ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿಲ್ಲಾ‌ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ರಾಮರಾಜನ್.ಕೆ, ಉಪ ವಿಭಾಗಾಧಿಕಾರಿ ಪ್ರವೀಣ ಜೈನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೆಶಕ ಕೆ.ಎಮ್.ಚನ್ನೂರ ಸೇರಿದಂತೆ ಗಣ್ಯರು, ಸಾರ್ವಜನಿಕರು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೆಶಕಿ ವಿದ್ಯಾವತಿ ಭಜಂತ್ರಿ ಸ್ವಾಗತಿಸಿದರು. ಬಸವರಾಜ್ ಕುಪ್ಪಸಗೌಡರ ನಿರೂಪಿಸಿದರು.

About The Author