ಚೆನ್ನಮ್ಮನ ಶೌರ್ಯ, ಸ್ವಾಭಿಮಾನ ಸ್ಮರಣೆ; ಮಕ್ಕಳನ್ನು ಚೆನ್ನಮ್ಮನಂತೆ ಬೆಳೆಸಲು ಸಚಿವ ಸತೀಶ್ ಜಾರಕಿಹೊಳಿ ಕರೆ

WhatsApp Group Join Now

ಬೆಳಗಾವಿ ರಾಣಿ ಕಿತ್ತೂರು ಚೆನ್ನಮ್ಮನ ಶೌರ್ಯ, ಧೈರ್ಯ ಮತ್ತು ಸ್ವಾಭಿಮಾನದ ಪರಂಪರೆಯನ್ನು ಸ್ಮರಿಸುವ 202ನೇ ಕಿತ್ತೂರು ಉತ್ಸವವನ್ನು ಕಾಕತಿಯಲ್ಲಿ ಸಂಭ್ರಮದಿಂದ ಆಚರಿಸುವುದು ಹೆಮ್ಮೆಯ ಸಂಗತಿ. ದೇಶಕ್ಕೆ ಮಾದರಿಯಾಗುವಂತೆ ತಂದೆ-ತಾಯಿಗಳು ತಮ್ಮ ಮಕ್ಕಳನ್ನು ಕಿತ್ತೂರು ರಾಣಿ ಚೆನ್ನಮ್ಮನ ಆದರ್ಶಗಳಂತೆ ಬೆಳೆಸಬೇಕು ಎಂದು ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಪಂಚಾಯತ, ತಾಲೂಕು ಪಂಚಾಯತ, ಕಾಕತಿ ಗ್ರಾಮ ಪಂಚಾಯತ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ಉತ್ಸವ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಕಾಕತಿಯಲ್ಲಿ ಶುಕ್ರವಾರ ಜರುಗಿದ 202ನೇ ಕಿತ್ತೂರು ಉತ್ಸವದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಾಕತಿಯಲ್ಲಿ ಕೆಲವು ತಾಂತ್ರಿಕ ಸಮಸ್ಯೆಗಳಿಂದ ಅಭಿವೃದ್ಧಿ ಕಾಮಗಾರಿಗಳು ಸ್ಥಗಿತಗೊಂಡಿದ್ದು, ಎಂಟು ಕೊಠಡಿಗಳ ಸರ್ಕಾರಿ ಶಾಲಾ ಕಟ್ಟಡ ನಿರ್ಮಿಸಲಾಗುವುದು. ಶಾಲಾ ಕಟ್ಟಡಗಳ ನಿರ್ಮಾಣದಲ್ಲಿ ಬೆಳಗಾವಿ ಜಿಲ್ಲೆ ದೇಶದಲ್ಲೇ ಮುಂಚೂಣಿಯಲ್ಲಿದೆ. ಕಿತ್ತೂರು ಉತ್ಸವದ ಮೂಲಕ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಮತ್ತಷ್ಟು ಉತ್ತೇಜನ ದೊರೆತಿದೆ ಎಂದರು.

ಮಹಿಳೆಯರು ಇಂದು ಎಲ್ಲ ಕ್ಷೇತ್ರಗಳಲ್ಲಿಯೂ ಸಾಧನೆ ಮಾಡುತ್ತಿದ್ದಾರೆ. ತಮ್ಮ ಸಾಮರ್ಥ್ಯ ಮತ್ತು ಇತಿಮಿತಿಗಳನ್ನು ಅರಿತು ಮುನ್ನಡೆಯುತ್ತಿರುವ ಮಹಿಳೆಯರು ಸಮಾಜದಲ್ಲಿ ಉನ್ನತ ಸ್ಥಾನಕ್ಕೇರುತ್ತಿದ್ದಾರೆ. ರಾಣಿ ಚೆನ್ನಮ್ಮನ ಧೈರ್ಯ, ನಾಯಕತ್ವ ಮತ್ತು ಹೋರಾಟದ ಮನೋಭಾವವನ್ನು ಇಂದಿನ ಪೀಳಿಗೆಗೆ ಪರಿಚಯಿಸುವುದು ಅಗತ್ಯವಾಗಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಮುಕ್ತಿಮಠದ ಧರ್ಮಶ್ರೀ ತಪೋರತ್ನ ಶಿವಸಿದ್ಧ ಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಇಡೀ ದೇಶವೇ ಕೊಂಡಾಡುವ ರಾಣಿ ಚೆನ್ನಮ್ಮನ ಧೈರ್ಯ ಮತ್ತು ಸಾಹಸಗಳು ಪ್ರತಿಯೊಬ್ಬರಿಗೂ ಪ್ರೇರಣೆಯಾಗಿವೆ ಎಂದರು. ಸಾಂಗ್ಲಿ, ಕಾಕತಿ ಮತ್ತು ಶಹಾಪುರ ಸಂಸ್ಥಾನಗಳಿಗೆ ಸಂಬಂಧಿಸಿದ ಐತಿಹಾಸಿಕ ಪ್ರದೇಶಗಳನ್ನು ಅರಣ್ಯ ಇಲಾಖೆ ವಶಪಡಿಸಿಕೊಂಡಿರುವ ಹಿನ್ನೆಲೆಯಲ್ಲಿ, ಅವುಗಳನ್ನು ಕಿತ್ತೂರಿನ ಮಾದರಿಯಲ್ಲಿ ಅಭಿವೃದ್ಧಿಪಡಿಸಬೇಕು ಎಂದು ತಿಳಿಸಿದರು.

ಇತಿಹಾಸದಲ್ಲಿ ಮಹತ್ವ ಪಡೆದಿರುವ ಈ ನೆಲದ ಪರಂಪರೆಯನ್ನು ಮರುಸ್ಥಾಪಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯಬೇಕು. ರಾಣಿ ಚೆನ್ನಮ್ಮನ ಇತಿಹಾಸದ ಪುಟಗಳಿಗೆ ಮತ್ತಷ್ಟು ಮೆರಗು ನೀಡುವ ಕಾರ್ಯವಾಗಬೇಕು ಎಂದು ಹೇಳಿದರು.

ಕಾಕತಿ ಶಿವಪೂಜಿಮಠದ ರಾಚಯ್ಯ ಸ್ವಾಮೀಜಿ ಮಾತನಾಡಿ, ಕಾಕತಿಯ ಗುರು ಸಿದ್ಧೇಶ್ವರರ ಮಾರ್ಗದರ್ಶನ ರಾಣಿ ಚೆನ್ನಮ್ಮನಿಗೆ ದೊರೆತಿತ್ತು. ಬ್ರಿಟಿಷರ ವಿರುದ್ಧ ಹೋರಾಡಿದ ಮೊದಲ ವೀರ ಮಹಿಳೆಯರಲ್ಲಿ ರಾಣಿ ಚೆನ್ನಮ್ಮ ಪ್ರಮುಖರಾಗಿದ್ದು, ಅವರ ಹೋರಾಟ ಮತ್ತು ತ್ಯಾಗವನ್ನು ದೇಶದ ಜನರಿಗೆ ತಿಳಿಸುವ ಕಾರ್ಯವಾಗಬೇಕು ಎಂದರು.

ಸಾಹಿತಿ ರಜನಿ ಜಿರಗ್ಯಾಳ ಮಾತನಾಡಿ, ಕಾಕತಿಯ ಮಣ್ಣಿನಲ್ಲಿ ಸ್ವಾಭಿಮಾನ ಮತ್ತು ವೀರತ್ವದ ಪರಂಪರೆ ಅಡಗಿದೆ. ಉತ್ತರ ಕರ್ನಾಟಕದ ಈ ನೆಲದಲ್ಲಿ ಜನಿಸಿದ ರಾಣಿ ಚೆನ್ನಮ್ಮನ ಶೌರ್ಯವನ್ನು ಸ್ಮರಿಸುವುದು ಹೆಮ್ಮೆಯ ಸಂಗತಿ. ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೂ ಮುನ್ನವೇ ಬ್ರಿಟಿಷರ ವಿರುದ್ಧ ಹೋರಾಡಿದ ಚೆನ್ನಮ್ಮನ ಸಾಹಸಗಾಥೆ ಇತಿಹಾಸದಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ ಎಂದರು.

ಮಹಿಳೆಯರಿಗೆ ಸೂಕ್ತ ಅವಕಾಶ ದೊರೆತರೆ ಅವರು ಯಾವುದೇ ಕ್ಷೇತ್ರದಲ್ಲಾದರೂ ಸಾಧನೆ ಮಾಡಬಲ್ಲರು ಎಂಬುದಕ್ಕೆ ರಾಣಿ ಚೆನ್ನಮ್ಮನ ಜೀವನವೇ ಪ್ರೇರಣಾದಾಯಕ ಉದಾಹರಣೆಯಾಗಿದೆ ಎಂದು ವಿಶೇಷ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ವಿವಿಧ ಕ್ರೀಡಾ ವಿಭಾಗಗಳಲ್ಲಿ ಸಾಧನೆ ಮಾಡಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಬೈಲಹೊಂಗಲಕ್ಕೆ ತೆರಳಿ ಜ್ಯೋತಿಯನ್ನು ತಂದ ಚೆನ್ನಪ್ಪ ಅವರ ತಂಡದ ಸದಸ್ಯರನ್ನೂ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಆಸಿಫ್ ರಾಜು ಸೇಠ್, ಜಿಲ್ಲಾ ಪೊಲೀಸ್ ಆಯುಕ್ತ ಪ್ರಕಾಶ್ ನಿಕಮ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ, ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಜಿಲ್ಲಾಧ್ಯಕ್ಷ ವಿನಯ್ ನಾವಲಗಟ್ಟಿ, ಉಪವಿಭಾಗಾಧಿಕಾರಿ ಶ್ರವಣ್ ನಾಯಕ, ಬೆಳಗಾವಿ ತಾಲೂಕು ತಹಶೀಲ್ದಾರ್ ಹಣಮಂತ ಶಿರಹಟ್ಟಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಿದ್ದು ಸುಣಗಾರ, ಯಲ್ಲಪ್ಪ ಕೋಳೇಕಾರ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಅದ್ಧೂರಿ ಮೆರವಣಿಗೆಯೊಂದಿಗೆ ಉತ್ಸವಕ್ಕೆ ಚಾಲನೆ:

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಕಾಕತಿಯ ಮುಖ್ಯ ಬಸ್ ನಿಲ್ದಾಣದ ಮುಂದೆ ಸಚಿವ ಸತೀಶ್ ಜಾರಕಿಹೊಳಿ ಅವರು ಬೈಲಹೊಂಗಲದಿಂದ ಬಂದ ವೀರಜ್ಯೋತಿ ಬರಮಾಡಿಕೊಂಡು ಉತ್ಸವಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ, ಶಾಸಕ ಆಸೀಫ್ ರಾಜು ಸೇಠ್, ಉಪವಿಭಾಗಾಧಿಕಾರಿ ಶ್ರವಣ್ ನಾಯಕ, ಜಿಲ್ಲಾ ಪೊಲೀಸ್ ಆಯುಕ್ತ ಪ್ರಕಾಶ್ ನಿಕಮ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಕಾಕತಿ ಬಸ್ ನಿಲ್ದಾಣದಿಂದ ರಾಣಿ ಚೆನ್ನಮ್ಮ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಭಾವಚಿತ್ರಗಳ ಮೆರವಣಿಗೆಯು ವಿವಿಧ ಕಲಾ ತಂಡಗಳು, ಕುಂಭಮೇಳ ಮತ್ತು ವಾದ್ಯಮೇಳಗಳೊಂದಿಗೆ ಸಾಗಿ ರಾಣಿ ಚೆನ್ನಮ್ಮನ ಪುತ್ಥಳಿಯವರೆಗೆ ತಲುಪಿತು. ಮೆರವಣಿಗೆಯಲ್ಲಿ ಭಾಗವಹಿಸಿದ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಪಥ ಸಂಚಲನ ಮಾಡುತ್ತ ವೀರರಾಣಿ ಚೆನ್ನಮ್ಮನ ಶೌರ್ಯ ಮತ್ತು ಸ್ವಾಭಿಮಾನದ ಪರಂಪರೆಯನ್ನು ಸ್ಮರಿಸಿ ಉತ್ಸವದ ಸಂಭ್ರಮವನ್ನು ಹೆಚ್ಚಿಸಿದರು.

About The Author