ಈ ಸಲ ಕಪ್ ನಮ್ದು….! ಇತಿಹಾಸ ಸೃಷ್ಟಿಸಿದ ಆರ್​ಸಿಬಿ ಮಹಿಳಾ ತಂಡ

WhatsApp Group Join Now

ಈ ಕ್ಷಣ… ಇದೊಂದು ಕ್ಷಣಕ್ಕಾಗಿ ಆರ್​ಸಿಬಿ (RCB) ಅಭಿಮಾನಿಗಳು ಕಾಯ್ದಿದ್ದು ಬರೋಬ್ಬರಿ 17 ವರ್ಷಗಳು. ಐಪಿಎಲ್ (IPL) ಶುರುವಾಗಿ ಇಲ್ಲಿಯವರೆಗೆ 16 ಆವೃತ್ತಿಗಳು ಕಳೆದಿವೆ. ಪ್ರತಿ ಆವೃತ್ತಿಯಲ್ಲೂ ಬೆಟ್ಟದಷ್ಟು ನಿರೀಕ್ಷೆ ಇಟ್ಟು ಕಾಯುತ್ತಿದ್ದ ಆರ್​ಸಿಬಿ ಅಭಿಮಾನಿಗಳಿಗೆ ಕೊನೆಗೆ ಎದುರಾಗುತ್ತಿದ್ದಿದ್ದು, ಸೋಲಿನ ನಿರಾಸೆ. ಕಳೆದ 16 ಆವೃತ್ತಿಗಳಲ್ಲಿ ಆರ್​ಸಿಬಿ 4 ಬಾರಿ ಫೈನಲ್​ಗೇರಿತ್ತಾದರೂ ಒಮ್ಮೆಯೂ ಟ್ರೋಫಿ ಗೆಲ್ಲಲು ಸಾಧ್ಯವಾಗಲಿಲ್ಲ. ಪ್ರತಿ ಫೈನಲ್‌ ಪಂದ್ಯದಲ್ಲೂ ಆರ್​ಸಿಬಿ ಗೆಲುವಿಗಾಗಿ ಮುಕ್ಕೋಟಿ ದೇವರ ಬಳಿ ಮೊರೆ ಇಡುತ್ತಿದ್ದ ಆರ್​ಸಿಬಿ ಅಭಿಮಾನಿಗಳಿಗೆ ಕೊನೆಗೆ ಎದುರಾಗುತ್ತಿದ್ದಿದ್ದು ಅದೇ ಸೋಲು, ಅದೇ ನಿರಾಸೆ, ಅದೇ ಕಣ್ಣೀರು. ಈಗಲೂ ಆರ್​ಸಿಬಿ ಅಭಿಮಾನಿಗಳ ಕಣ್ಣಲ್ಲಿ ನೀರಿದೆ. ಆದರೆ ಅದು ದುಃಖದ ಕಣ್ಣೀರಲ್ಲ, ಬದಲಿಗೆ 17 ವರ್ಷಗಳ ಕಾಯುವಿಕೆ ಕೊನೆಗೂ ಅಂತ್ಯವಾಯಿತಲ್ಲ ಎಂಬ ಆನಂದದ ಕಣ್ಣೀರು. 16 ಆವೃತ್ತಿಗಳ ಐಪಿಎಲ್​ನಲ್ಲಿ ಆರ್​ಸಿಬಿ ಪುರುಷ ತಂಡ ಮಾಡಲಾಗದ ಕೆಲಸವನ್ನು ಆರ್​ಸಿಬಿ ಮಹಿಳಾ ಹುಲಿಗಳ ಪಡೆ ಕೇವಲ ಎರಡನೇ ಆವೃತ್ತಿಯಲ್ಲೇ ಮಾಡಿ ಮುಗಿಸಿದೆ.

ಆರ್​ಸಿಬಿಗೆ 8 ವಿಕೆಟ್ ಜಯ

ದೆಹಲಿಯ ಆರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಆರ್​ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಫೈನಲ್ ಪಂದ್ಯದಲ್ಲಿ ಬಲಿಷ್ಠ ಡೆಲ್ಲಿ ತಂಡವನ್ನು 8 ವಿಕೆಟ್​ಗಳಿಂದ ಮಣಿಸಿದ ಸ್ಮೃತಿ ಮಂಧಾನ ನೇತೃತ್ವದ ಆರ್​ಸಿಬಿ ಪಡೆ ಇದೇ ಮೊದಲ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ತಂಡ ಪೂರ್ಣ 20 ಓವರ್​ಗಳನ್ನು ಆಡಲಾಗದೆ 18.3 ಓವರ್​ಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 113 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ಈ ಗುರಿ ಬೆನ್ನಟ್ಟಿದ ಆರ್​ಸಿಬಿ ಕೇವಲ 2 ವಿಕೆಟ್ ಕಳೆದುಕೊಂಡು ಇನ್ನು 3 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ದಡ ಸೇರಿತು.

About The Author