
ಬೆಳಗಾವಿ : ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಸ್ಥಳೀಯ ಮುಖಂಡರು ಮತ್ತು ಬೆಂಬಲಿಗರು ಆತ್ಮೀಯವಾಗಿ ಸ್ವಾಗತಿಸಿದಕ್ಕೆ ಕೃತಜ್ಞತೆ ಸಲ್ಲಿಸಿ, ಮಾತನಾಡಿ, ಕ್ಷೇತ್ರದ ಅಭಿವೃದ್ಧಿಗೆ ತಮ್ಮ ಬದ್ಧತೆಯನ್ನು ಇರುತ್ತದೆ ಎಂದು ದೃಢಪಡಿಸಿದರು.
ಬೆಳಗಾವಿಗೆ ಚಿರಪರಿಚಿತರಾಗಿರುವ ನಾನು ಜಿಲ್ಲೆಯ ಎಲ್ಲಾ ಪ್ರಮುಖ ಬಿಜೆಪಿಯ ನಾಯಕರುಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಕೋವಿಡ್ -19, ಪ್ರವಾಹದಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಸಮರ್ಪಕವಾದ ಸೇವೆ ಸಲ್ಲಿಸುವ ಅವಕಾಶ ಭಾಗ್ಯ ನನ್ನದಾಗಿತ್ತು ಎಂದರು.
ಬೆಳಗಾವಿಗೆ ತಮ್ಮ ನಿಷ್ಠೆಯನ್ನು ಪ್ರತಿಪಾದಿಸಿದ ಜಗದೀಶ ಶೆಟ್ಟರ ನಗರದಲ್ಲಿ ಮನೆ ನಿರ್ಮಿಸಲು ವಾಗ್ದಾನ ಮಾಡಿದರಲ್ಲದೆ ವದಂತಿಗಳನ್ನು ಬದಿಗಿಟ್ಟು ಅಭಿವೃದ್ಧಿಯತ್ತ ತಮ್ಮ ಗಮನ ಹರಿಸುವುದಾಗಿ ಪುನರುಚ್ಚರಿಸಿದರು. ರಾಷ್ಟ್ರೀಯ ರಾಜಕೀಯಕ್ಕೆ ಸಮಾನಾಂತರವಾಗಿ ಮತ್ತು ಮೋದಿಯವರ ನಾಯಕತ್ವದಲ್ಲಿ ಪ್ರಮಾಣಿಕವಾಗಿ ಕೆಲಸ ಮಾಡುವುದಾಗಿ ತಿಳಿಸಿದರು.
ಮೋದಿಯವರ ಅಪ್ರತಿಮ ನಾಯಕತ್ವದಲ್ಲಿ ದೇಶ ಮುಂದೆ ಸಾಗುತ್ತಿದ್ದು ನಾವೆಲ್ಲ ಮೋದಿಯವರ ಕೈ ಬಲಪಡಿಸಬೇಕಿದೆ ಆದ್ದರಿಂದ ಮುಂಬರುವ ಚುನಾವಣೆಯಲ್ಲಿ ಬಿಜೆಪಿಗೆ ಅಭೂತಪೂರ್ವ ಗೆಲುವು ಸಾಧಿಸಲು ಪಣ ತೊಡಬೇಕೆಂದು ಕರೆ ನೀಡಿದರು. ಬಿಜೆಪಿಯ ಹಿರಿಯ ನಾಯಕ ದಿ. ಸುರೇಶ ಅಂಗಡಿಯವರು ಕಂಡ ಕನಸುಗಳನ್ನು ನನಸಾಗಿಸಲು ಹಗಲಿರುಳು ಶ್ರಮಿಸುತ್ತೇನೆ ಎಂದರು.
ಕಾಂಗ್ರೆಸ್ ಪಕ್ಷದ ಆಡಳಿತದ ವಿರುದ್ದ ತೀವ್ರ ವಾಗ್ದಾಳಿ ನಡೆಸಿ, ರಾಜ್ಯ ಸರ್ಕಾರದ ವಿಫಲವಾದ ಗ್ಯಾರಂಟಿ ಯೋಜನೆಗಳನ್ನು ಎತ್ತಿ ತೋರಿಸಿ, ಮುಂಬರುವ ದಿನಗಳಲ್ಲಿ ಸರ್ಕಾರ ಪತನ ಹೊಂದುತ್ತದೆ ಎಂದು ಭವಿಷ್ಯ ನುಡಿದರು. ಬೆಳಗಾವಿಯ ವಿಮಾನ ನಿಲ್ದಾಣವನ್ನು ಅಂತರರಾಷ್ಟ್ರೀಯ ವಿಮಾನ್ ನಿಲ್ದಾಣ ಪರಿವರ್ತಿಸುವದಾಗಿ ಭರವಸೆ ನೀಡಿದರು.
ಬಿಜೆಪಿಯ ಪ್ರಮುಖರಾದ ಮಂಗಳಾ ಅಂಗಡಿ, ಅನಿಲ ಬೆನಕೆ, ಈರಣ್ಣ ಕಡಾಡಿ, ಅಭಯ ಪಾಟೀಲ, ಸಂಜಯ ಪಾಟೀಲ, ಮತ್ತು ಮಾರುತಿ ಝಿರಲಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.