
ಬೆಳಗಾವಿ ಕಿಲ್ಲಾ ಕೋಟೆಯ ದುರ್ಗಾದೇವಿ ಮಂದಿರದ ಆವರಣದಲ್ಲಿ ಮಂಗಳವಾರ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಕಾಲ್ನಡಿಗೆ ಜಾಥಾ ಕಾರ್ಯಕ್ರಮಕ್ಕೆ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರೂ ಆಗಿರುವ ಜಿಪಂ ಸಿಇಒ ರಾಹುಲ್ ಶಿಂಧೆ ಅವರು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ಗುಲಾಬಿ ಹೂವು ನೀಡುವ ಮೂಲಕ ಕಡ್ಡಾಯವಾಗಿ ಮತದಾನ ಮಾಡುವಂತೆ ಮನವಿ ಮಾಡಿಕೊಂಡರು.
ನಂತರ ಮಾತನಾಡಿದ ಜಿಲ್ಲಾ ಪಂಚಾಯತಿ ಸಿಇಒ ರಾಹುಲ್ ಶಿಂಧೆ ಅವರು, ಲೋಕಸಭೆಯ ಸಾರ್ವತ್ರಿಕ ಚುನಾವಣೆಯಲ್ಲಿ ಎಲ್ಲ ಮತದಾರರು ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಶೇ.100 ರಷ್ಟು ಮತದಾನ ಪ್ರಮಾಣದ ಏರಿಕೆಗೆ ಸಹಕರಿಸಬೇಕು ಎಂದರು.
ಸ್ವೀಪ್ ಸಮಿತಿಯ ಮೂಲಕ ಮತದಾರರಲ್ಲಿ ಮತದಾನದ ಜಾಗೃತಿ ಮಾಡಲಾಗುತ್ತಿದೆ. ಸಂಗೊಳ್ಳಿ ರಾಯಣ್ಣ ಬಿ.ಇ.ಡಿ. ಕಾಲೇಜು ಪ್ರಶಿಕ್ಷಣಾರ್ಥಿಗಳ ಮೂಲಕ ಮತದಾರರಿಗೆ ಪುಷ್ಟವನ್ನು ನೀಡಿ ಜಾಗೃತಿ ಮೂಡಿಸಲು ಈ ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳಲಾಗಿದೆ. ಎಲ್ಲ ಮತದಾರರು ಲೋಕಸಭೆ ಚುನಾವಣೆಯಲ್ಲಿ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಮನವಿ ಮಾಡಿದರು.
ಜಾಥಾ ಕಾರ್ಯಕ್ರಮವು ನಗರದ ದುರ್ಗಾ ದೇವಿ ಮಂದಿರದಿಂದ ಪ್ರಾರಂಭವಾಗಿ ಕೇಂದ್ರ ಬಸ್ ನಿಲ್ದಾಣ, ಖಡೇಬಜಾರ್, ಶನಿವಾರ ಖೂಟ, ಕಾಕತಿವೇಸ್ ರಸ್ತೆ ಮೂಲಕ ಚನ್ನಮ್ಮ ವೃತ್ತದವರೆಗೆ ಜರುಗಿತು.
ಚನ್ನಮ್ಮ ವೃತ್ತದಲ್ಲಿ ಕಡ್ಡಾಯ ಮತದಾನ ಜಾಗೃತಿ ಕುರಿತು ಪ್ರಶಿಕ್ಷಣಾರ್ಥಿಗಳಿಂದ ಮಾನವ ಸರಪಳಿ ಮಾಡಲಾಯಿತು. ಸಂಗೊಳ್ಳಿ ರಾಯಣ್ಣ ಬಿ.ಇ.ಡಿ ಕಾಲೇಜಿನ ಸುಮಾರು 200 ಪ್ರಶಿಕ್ಷಣಾರ್ಥಿಗಳು, ಜಿಪಂ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ದಾರಿ ಉದ್ದಕ್ಕೂ ಸಾರ್ವಜನಿಕರಿಗೆ ಗುಲಾಬಿ ಹೂ ನೀಡುವುದು ನಾಮಫಲಕ ಪ್ರದರ್ಶನ, ಕರಪತ್ರಗಳ ಹಂಚಿಕೆ ಹಾಗೂ ಧ್ವನಿ ವರ್ಧಕಗಳ ಪ್ರಚಾರ ಮೂಲಕ ಕಡ್ಡಾಯ ಮತದಾನ ಜಾಗೃತಿ ಕುರಿತು ವ್ಯಾಪಕ ಜಾಗೃತಿ ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಸಹಾಯಕ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಜಿಲ್ಲಾ ಪಂ ಯೋಜನಾ ನಿರ್ದೇಶಕ ಹಾಗೂ ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿ ಡಾ: ಎಮ್ ಕೃಷ್ಣರಾಜು, ಮುಖ್ಯ ಯೋಜನಾಧಿಕಾರಿ ಗಂಗಾಧರ ದಿವಟರ, ಜಿಲ್ಲಾ ಚುನಾವಣೆ ವೆಚ್ಚದ ನೋಡಲ್ ಅಧಿಕಾರಿ ಶಂಕರಾನಂದ ಬನಶಂಕರಿ ಲೆಕ್ಕಾಧಿಕಾರಿ ಗಂಗಾ ಹಿರೇಮಠ, ಜಿಲ್ಲಾ ಐ.ಇ.ಸಿ ಸಂಯೋಜಕ ಪ್ರಮೋದ ಗೋಡೆಕರ, ಸಂಗೊಳ್ಳಿ ರಾಯಣ್ಣ ಬಿ.ಇ.ಡಿ ಕಾಲೇಜು ಪ್ರಾಂಶುಪಾಲ ಬಿ.ಜಿ.ಧಾರವಾಡ, ಸಹಾಯಕ ಉಪನ್ಯಾಸಕ ಎನ್.ಎಸ್. ಜಾಧವ, ಜಿ.ಆರ್. ಕೊಟೆನ್ನವರ ಮತ್ತಿತರು ಉಪಸ್ಥಿತರಿದ್ದರು.


