ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಖಾನಪೇಠ ಹಾಗೂ ಕಿತ್ತೂರ ಗ್ರಾಮದಲ್ಲಿ ಉನ್ನತೀಕರಿಸಿದ ಪ್ರೌಢ ಶಾಲೆಗಳಿಗೆ ಕೇಂದ್ರ ಯೋಜನಾ ಅನುಮೋದನಾ ಮಂಡಳಿ ರಾಜ್ಯ ಸರಕಾರದ ಸಂಯುಕ್ತ ಆಶ್ರಯದಲ್ಲಿ ತಲಾ ಸುಮಾರು, 1 ಕೋಟಿ 35 ಲಕ್ಷ ವೆಚ್ಚದಲ್ಲಿ ಕೊಠಡಿಗಳ ನಿರ್ಮಾಣಕ್ಕೆ ವಿಧಾನಸಭೆ ಮುಖ್ಯ ಸಚೇತಕ ಅಶೋಕ ಪಟ್ಟಣ ಭೂಮಿ ಪೂಜೆ ನೆರವೇರಿಸಿ, ನಂತರ ಉಡಚಮ್ಮನಗರದಲ್ಲಿ 15ಲಕ್ಷ ವೆಚ್ಚದಲ್ಲಿ ಅಂಗನವಾಡಿ ಕಟ್ಟಡಕ್ಕೆ, ಕಲಹಾಳ ಗ್ರಾಮದಲ್ಲಿ 15 ಲಕ್ಷ ವೆಚ್ಚದಲ್ಲಿ ಸಿ.ಸಿ. ರಸ್ತೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಕಿತ್ತೂರ ಪ್ರೌಢಶಾಲೆಗೆ ಭೂಮಿ ಕೊಡುಗೆ ನೀಡಿದ ದಾನಿಗಳ ಕಾರ್ಯ ಶ್ಲಾಘನೀಯ. ತಾಲೂಕಿನ ಎಲ್ಲಾ ಕಡೆಗಳಲ್ಲಿ ರಾಜಕೀಯ ಮುಖಂಡರು, ಉದ್ಯಮಿಗಳು, ಗ್ರಾಮಸ್ಥರು ತಮ್ಮ ಗ್ರಾಮದ ಮಕ್ಕಳ ಶೈಕ್ಷಣಿಕ ವ್ಯವಸ್ಥೆಗೆ ಕೈಲಾದಷ್ಟು ಸಹಾಯ ಸಹಕಾರ ಮಾಡಬೇಕು. ಗುರುನಾಥಗೌಡ ಶಿವನಗೌಡ ಮಾದಾಪೂರ ಅವರು ಪ್ರೌಢ ಶಾಲೆ ಕಟ್ಟಡ ನಿರ್ಮಾಣಕ್ಕೆ ತಮ್ಮ ಒಂದುವರೆ ಏಕರೆ ಭೂಮಿಯನ್ನು ನೀಡಿದ್ದು ಹರ್ಷ ತಂದಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಟಿ. ಬಳಿಗಾರ ಮಾತನಾಡಿ, ಕುನ್ನಾಳ, ಸಾಲಾಪೂರ, ರಾಮದುರ್ಗ ವಿದ್ಯಾಚೇತನ ಶಾಲೆಗಳು ಪಿಎಂಶ್ರೀ ಯೋಜನೆಯಡಿಯಲ್ಲಿ ಆಯ್ಕೆಯಾಗಿವೆ. ಶಾಸಕರ ಆಶಕ್ತಿಯಿಂದ, ಸ್ಮಾರ್ಟಕ್ಲಾಸ್, ಸ್ಮಾರ್ಟ ಬೋರ್ಡ, ಲೈಬ್ರರಿ ವ್ಯವಸ್ಥೆ ಸೇರಿದಂತೆ ಶಾಲೆಗಳ ಸುಧಾರಣೆಗೆ ಅನುದಾನ ಒದಗಿಸಿಕೊಡಬೇಕು. ಶಾಸಕರು ತಾಲೂಕಿನ ಮಕ್ಕಳಿಗೆ ಉಚಿತ, ನೋಟ್ ಬುಕ್, ಸ್ಕೂಲ್ ಬ್ಯಾಗ್ ಒದಗಿಸಿ, ಅಪಾರ ಸೇವೆ ಗೈದಿದ್ದಾರೆ. ತಾಲೂಕಿನ ಶೈಕ್ಷಣಿಕ ಪ್ರಗತಿಗೆ ಅವರ ಕೊಡುಗೆ ಅಪಾರವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಖಾನಪೇಠ ಕಾರ್ಯಕ್ರಮದಲ್ಲಿ ಹರ್ಲಾಪೂರ ಢವಳೇಶ್ವರ ಮಠದ ರೇಣುಕ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ, ಕಿತ್ತೂರ ಕಾರ್ಯಕ್ರಮದ ಸಾನಿಧ್ಯ ವಹಿಸಿ, ರೋಣ ಬೂದೀಶ್ವರ ಮಠದ ಡಾ.ವಿಶ್ವನಾಥ ಬೂದಿ ಸ್ವಾಮೀಜಿ ಆಶೀರ್ವಚನ ನೀಡಿದರು.
ಕಿತ್ತೂರ ಪ್ರೌಢಶಾಲೆ ನಿರ್ಮಾಣಕ್ಕೆ ಭೂದಾನ ಮಾಡಿದ ಗುರುನಾಥಗೌಡ ಶಿವನಗೌಡ ಮಾದಾಪೂರ ಸೇರಿದಂತೆ ಹಲವರನ್ನು ಸತ್ಕರಿಸಲಾಯಿತು.
ಈ ಸಂದರ್ಭದಲ್ಲಿ ಖಾನಪೇಠ ಗ್ರಾ.ಪಂ.ಅಧ್ಯಕ್ಷೆ ಸಿದ್ದವ್ವ ಒಂಟಿ, ಸದಸ್ಯೆ ರುಕ್ಮವ್ವ ನಾವಿ, ಮಾಜಿ ಜಿ.ಪಂ ಸದಸ್ಯ ಜಹೂರ ಹಾಜಿ, ಪಂಚು ಹಲ್ಯಾಳ, ಹೊನ್ನಪ್ಪ ಕಟ್ಟಿಮನಿ, ಮಾರುತಿ ಬಸಿಡೋಣಿ, ಕಿತ್ತೂರ ಕಾರ್ಯಕ್ರಮದಲ್ಲಿ ಗ್ರಾ.ಪಂ.ಅಧ್ಯಕ್ಷೆ ಪದ್ಮವ್ವ ಬಡಕಲಿ, ಪ್ರಾಥಮಿಕ ಶಾಲಾ ಎಸ್‌ಡಿಎಂಸಿ ಅಧ್ಯಕ್ಷೆ ಶಿವಲೀಲಾ ಯರಗಟ್ಟಿ, ರೈತ ಮುಖಂಡ ಹೇಮಣ್ಣ ಚವರಡ್ಡಿ, ಮಾಜಿ ಜಿ.ಪಂ. ಉಪಾಧ್ಯಕ್ಷ ಪರಪ್ಪ ಜಂಗವಾಡ, ಪಿಕೆಪಿಎಸ್ ಉಪಾಧ್ಯಕ್ಷ ಗಿರಿಯಪ್ಪ ಹಣಸಿ, ಮಲ್ಲಪ್ಪ ಸೋಮಗೊಂಡ, ಗೋವಿಂದರಡ್ಡಿ ಪೆಟ್ಲೂರ, ಬಸಲಿಂಗಪ್ಪ ಹರಗುಟಗಿ, ಲೋಕೋಪಯೋಗಿ ಇಲಾಖೆಯ ಎಇಇ ರವಿಕುಮಾರ, ಸಿಡಿಪಿಓ ಶಂಕರ ಕುಂಬಾರ ಸೇರಿದಂತೆ ಗ್ರಾಮದ ಮುಖಂಡರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು
ಕಿತ್ತೂರ ಗ್ರಾಮದ ಪ್ರೌಢಶಾಲೆಯ ಕಟ್ಟಡ ನಿರ್ಮಾಣಕ್ಕೆ ವಿಧಾನಸಭೆ ಮುಖ್ಯ ಸಚೇತಕ ಅಶೋಕ ಪಟ್ಟಣ ಭೂಮಿ ಪೂಜೆ ನೆರವೇರಿಸಿದರು.

WhatsApp Group
Join Now