ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಶಿರಸಂಗಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಇನಾಂಗೋವನಕೊಪ್ಪ ಗ್ರಾಮದಲ್ಲಿ ಶ್ರೀ ದ್ಯಾಮ್ಮವ್ವ ದೇವಿ ಜಾತ್ರೆಯ ನಿಮಿತ್ಯ ಸವದತ್ತಿ ತಾಲೂಕಾ ಕಾನುನು ಸೇವೆಗಳ ಸಮೀತಿ ಸವದತ್ತಿ & ವಕೀಲರ ಸಂಘ ಸವದತ್ತಿ & ಶ್ರೀ ದ್ಯಾಮ್ಮವ್ವ ದೇವಿ ಜೀರ್ಣೋದ್ದಾರ ಟ್ರಸ್ಟ್ ಕಮೀಟಿ ಇನಾಂಗೋವನಕೊಪ್ಪ ಇವರ ಸಂಯುಕ್ತ ಆಶ್ರಯದಲ್ಲಿ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಗೌರವಾನ್ವಿತ ಪ್ರಧಾನ ಹಿರಿಯ ಸಿವ್ಹಿಲ್ ನ್ಯಾಯಾಧೀಶರು ಹಾಗೂ ಅಧ್ಯಕ್ಷರು ಟಿಎಲ್ಎಸ್ ಸಿ ಸವದತ್ತಿ ಶ್ರೀ ಸಿದ್ಧರಾಮ ಅವರು ಜ್ಯೋತಿ ಬೆಳಗಿಸೋದರ ಮೂಲಕ ಚಾಲನೆ ನೀಡಿ ಮಾತನಾಡಿದರು.
ಭಾರತೀಯ ಉತ್ತರಾಧಿಕಾರ ಕಾಯ್ದೆಯಡಿ ಪುತ್ರಿಯರಿಗೂ ಸಮಾನ ಆಸ್ತಿ ಹಕ್ಕು ಇದೆ. ಆಸ್ತಿ ಹಂಚಿಕೆ ಮಾಡುವಾಗ ಎಲ್ಲ ಸದಸ್ಯರ ಸಮ್ಮತಿ ಮತ್ತು ಪಾರದರ್ಶಕತೆ ಇರಲಿ. ಇದು ಭವಿಷ್ಯದ ಕಾನೂನು ಹೋರಾಟ ಮತ್ತು ಮನಸ್ತಾಪಗಳನ್ನು ತಪ್ಪಿಸುತ್ತದೆ.
2005ರ ಹಿಂದೂ ಉತ್ತರಾಧಿಕಾರ (ತಿದ್ದುಪಡಿ) ಕಾಯ್ದೆಯ ಪ್ರಕಾರ, ಹೆಣ್ಣುಮಕ್ಕಳು ಹುಟ್ಟಿನಿಂದಲೇ ಕುಟುಂಬದ “ಸಹವರ್ತಿಗಳು” (Coparceners) ಆಗಿರುತ್ತಾರೆ. ಅಂದರೆ ಮಗನಿಗೆ ಇರುವಂತೆಯೇ ಆಸ್ತಿಯಲ್ಲಿ ಸಮಾನ ಪಾಲು ಪಡೆಯುವ ಹಕ್ಕು ಮಗಳಿಗೂ ಇರುತ್ತದೆ. ಮಗಳ ವೈವಾಹಿಕ ಸ್ಥಿತಿಯು ಆಕೆಯ ಆಸ್ತಿ ಹಕ್ಕಿನ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ. ವಿವಾಹಿತ ಅಥವಾ ಅವಿವಾಹಿತ ಎರಡೂ ಸಂದರ್ಭಗಳಲ್ಲಿ ತಂದೆಯ ಆಸ್ತಿಯಲ್ಲಿ ಆಕೆಗೆ ಸಮಾನ ಪಾಲು ಸಿಗುತ್ತದೆ.
ಆಸ್ತಿ ವಿಷಯದಲ್ಲಿ ಜಗಳ ಮಾಡಿಕೊಳ್ಳುವ ಬದಲು ಹಿರಿಯರ ಸಮ್ಮುಖದಲ್ಲಿ ಬಗೆಹರಿಸಿಕೊಳ್ಳುವುದು ಕುಟುಂಬದ ಬಾಂಧವ್ಯವನ್ನು ಉಳಿಸುತ್ತದೆ ಮತ್ತು ಸಮಯ, ಹಣವನ್ನು ಉಳಿಸುತ್ತದೆ. ಕುಟುಂಬದ ಹಿರಿಯರು, ಸಂಬಂಧಿಕರು ಅಥವಾ ಊರಿನ ಗೌರವಾನ್ವಿತ ವ್ಯಕ್ತಿಗಳನ್ನು ಕರೆಸಿ ಮಾತನಾಡಿ. ಲಿಖಿತ ದಾಖಲೆ: ಹಿರಿಯರ ಸಮ್ಮುಖದಲ್ಲಿ ತೀರ್ಮಾನವಾದ ವಿಷಯವನ್ನು ಬರೆದಿಟ್ಟು ನೋಂದಾಯಿತ ಪತ್ರದ ಮೂಲಕ ಎಲ್ಲರೂ ಸಹಿ ಮಾಡುವುದು ಸೂಕ್ತ. ಕೇವಲ ಮೌಖಿಕ ಮಾತುಕತೆಗೆ ಸೀಮಿತವಾಗದೆ, ಭಾಗಬಾಧ್ಯತೆ ಪತ್ರ ಅಥವಾ ಸೆಟಲ್ಮೆಂಟ್ ಪತ್ರವನ್ನು ಸಿದ್ಧಪಡಿಸಿ. ನೋಂದಣಿ ಪತ್ರವನ್ನು ತಪ್ಪದೇ ಸಬ್-ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿ (Register) ಮಾಡಿಸಿ. ಹೀಗೆ ಮಾಡುವುದರಿಂದ ಭವಿಷ್ಯದಲ್ಲಿ ಉಂಟಾಗಬಹುದಾದ ಕಾನೂನು ಸಂಘರ್ಷಗಳು, ಕೋರ್ಟ್ ಅಲೆದಾಟಗಳನ್ನು ತಪ್ಪಿಸಬಹುದು ಮತ್ತು ಕುಟುಂಬದ ಬಾಂಧವ್ಯ ಉಳಿಯುತ್ತದೆ.
ನೋಂದಣಿಯಾಗದ ದಾಖಲೆಗಳಿಗೆ ಕಾನೂನಿನ ಮಾನ್ಯತೆ ಇರುವುದಿಲ್ಲ.
ತವರು ಮನೆಯಿಂದ ತಂದೆ-ತಾಯಿ ಅಥವಾ ಪೋಷಕರಿಂದ ಸೊಸೆಗೆ ಉತ್ತರಾಧಿಕಾರವಾಗಿ ಅಥವಾ ಉಡುಗೊರೆಯಾಗಿ ಬಂದ ಆಸ್ತಿಯ ಮೇಲೆ ಪತ್ನಿ ಗೆ ಮಾತ್ರ ಸಂಪೂರ್ಣ ಹಕ್ಕು ಇರುತ್ತದೆ.
ತವರು ಮನೆಯಿಂದ ಪತ್ನಿಗೆ ಬಂದ ಆಸ್ತಿಯಲ್ಲಿ ಪತಿ, ಅತ್ತೆ ಅಥವಾ ಮಾವನಿಗೆ ಯಾವುದೇ ಕಾನೂನುಬದ್ಧ ಹಕ್ಕು ಇರುವುದಿಲ್ಲ.
ಪೋಷಕರಿಂದ ಉತ್ತರಾಧಿಕಾರವಾಗಿ ಬಂದ ಆಸ್ತಿಯು ಆ ಮಹಿಳೆಯ ಸ್ವಯಾರ್ಜಿತ ಆಸ್ತಿಯಾಗಿ ಪರಿಗಣಿಸಲ್ಪಡುತ್ತದೆ.
ಈ ಆಸ್ತಿಯನ್ನು ಮಾರಿ, ಅಥವಾ ಬೇರೆಯವರಿಗೆ ನೀಡಿ ಆಕೆ ಸ್ವಂತ ನಿರ್ಧಾರ ತೆಗೆದುಕೊಳ್ಳಬಹುದು.
ತಾಯಿ ಮೃತಪಟ್ಟರೆ, ಆಕೆಯ ತವರು ಮನೆಯಿಂದ ಬಂದ ಆಸ್ತಿಯು ಆಕೆಯ ಮಕ್ಕಳಿಗೆ (ಗಂಡು/ಹೆಣ್ಣು) ಉತ್ತರಾಧಿಕಾರವಾಗಿ ಬರುತ್ತದೆ.
ತಾಯಿ (ಸೊಸೆ) ಮಕ್ಕಳಿಲ್ಲದೆ ಮಹಿಳೆ ಮೃತಪಟ್ಟರೆ, ಆಕೆಯ ತವರು ಮನೆಯಿಂದ ಬಂದ ಆಸ್ತಿಯು ಆಕೆಯ ತಂದೆ-ತಾಯಿಯ ಕುಟುಂಬಕ್ಕೆ (ವಂಶಸ್ಥರಿಗೆ) ಸೇರುತ್ತದೆ, ಪತಿಯ ಕುಟುಂಬಕ್ಕಲ್ಲ
ಕಾನೂನು ಬದ್ಧತೆ ಪಿತ್ರಾರ್ಜಿತ ಆಸ್ತಿಯಲ್ಲಿ ಎಲ್ಲರಿಗೂ ಸಮಪಾಲು ಇರುತ್ತದೆ. 2005ರ ಹಿಂದೂ ಉತ್ತರಾಧಿಕಾರ ತಿದ್ದುಪಡಿ ಕಾಯ್ದೆಯಂತೆ ಹೆಣ್ಣುಮಕ್ಕಳಿಗೂ ಸಮಾನ ಹಕ್ಕು ಇರುತ್ತದೆ. ಪೋಷಕರು ಸ್ವಯಾರ್ಜಿತ ಆಸ್ತಿಯನ್ನು ಯಾರಿಗಾದರೂ ನೀಡಬಹುದು. ಆದರೆ, ಪೋಷಕರನ್ನು ನೋಡಿಕೊಳ್ಳದಿದ್ದರೆ ಮಕ್ಕಳಿಗೆ ಆಸ್ತಿ ವರ್ಗಾವಣೆ ರದ್ದುಪಡಿಸಲು ಹಿರಿಯ ನಾಗರಿಕರ ನಿರ್ವಹಣಾ ಕಾಯ್ದೆಯಡಿ ಅವಕಾಶವಿದೆ ಎಂದು ಹೇಳಿದರು.
ಮದುವೆಯಾಗಿ ಮೂರು ತಿಂಗಳ ಹಿಡಿದು ಎರಡು ವರ್ಷ ಕಳೆಯುವ ಮುನ್ನ ಅಥವಾ ಒಂದು ವರ್ಷದ ಅವಧಿಯಲ್ಲಿ ದಂಪತಿಗಳ ನಡುವೆ ಭಿನ್ನಾಭಿಪ್ರಾಯಗಳು ಉಂಟಾಗಿ ವಿಚ್ಛೇದನ (Divorce) ಕೇಳುವ ಪ್ರಕರಣಗಳು ಇತ್ತೀಚೆಗೆ ಕಂಡುಬರುತ್ತಿವೆ.
ಸಂಬಂಧದಲ್ಲಿನ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿದ್ದರೆ ಮೊದಲು ಹಿರಿಯರೊಂದಿಗ ಮಾತನಾಡುವುದು ಉತ್ತಮ ಎಂದು ತಿಳಿಸಿದರು.
ಬಿ ಎಸ್ ಕಬ್ಬೂರ ವಕೀಲರು ಮಾತನಾಡಿ ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ ಕಾನೂನಿಗೆ ಎಲ್ಲರೂ ತಲೆಬಾಗಲೇಬೇಕು ಆದರೆ ಯಾವ ಕಾನೂನಿನ ಅಡಿಯಲ್ಲಿ ಹೋದರೆ ನಮ್ಮ ಜೀವನ ಸುಖಮಯವಾಗುತ್ತದೆ. ಸಮಾಜದಲ್ಲಿ ನಾವು ಬದುಕಬೇಕಾದರೆ ನಮಗೆ ಕಾನೂನಿನ ಜ್ಞಾನ ಬೇಕು ಎಂದು ಕಾನೂನಿನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದರು.
ಬಿ.ಕೆ. ಕಡಕೋಳ, ವಕೀಲರು ಮಾತನಾಡಿ ಭಾರತೀಯ ಕಾನೂನಿನ ಪ್ರಕಾರ 18 ವರ್ಷದೊಳಗಿನ ಅಪ್ರಾಪ್ತ ವಯಸ್ಕರು ಸಾರ್ವಜನಿಕ ಸ್ಥಳಗಳಲ್ಲಿ ಮೋಟಾರು ವಾಹನಗಳನ್ನು ಚಾಲನೆ ಮಾಡುವುದು ಕಾನೂನುಬಾಹಿರ ಮತ್ತು ಅಪಾಯಕಾರಿ ಆಗಿದೆ. ಅಪ್ರಾಪ್ತ ವಯಸ್ಕರು ವಾಹನ ಚಲಾಯಿಸಿ ಸಿಕ್ಕಿಬಿದ್ದರೆ, ವಾಹನದ ಮಾಲೀಕರಿಗೆ ಅಥವಾ ಪೋಷಕರಿಗೆ ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 199A ಅಡಿಯಲ್ಲಿ ಶಿಕ್ಷೆಯಾಗುತ್ತದೆ. ₹25,000 ವರೆಗೆ ದಂಡ ವಿಧಿಸಬಹುದು. ಪೋಷಕರಿಗೆ 3 ವರ್ಷಗಳವರೆಗೆ ಜೈಲು ಶಿಕ್ಷೆಯಾಗುವ ಸಾಧ್ಯತೆಯೂ ಇರುತ್ತದೆ.
ಚಾಲನಾ ಪರವಾನಗಿ (Driving License) ಇಲ್ಲದೆ ವಾಹನ ಚಲಾಯಿಸುವುದು ಭಾರತೀಯ ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧ. ಸಂಚಾರ ನಿಯಮಗಳ ಪ್ರಕಾರ, ರಸ್ತೆಯಲ್ಲಿ ವಾಹನ ಚಲಾಯಿಸುವ ಪ್ರತಿಯೊಬ್ಬ ವ್ಯಕ್ತಿಯೂ ಆಯಾ ವಾಹನಕ್ಕೆ ಸಂಬಂಧಿಸಿದ ಮಾನ್ಯವಾದ ಲೈಸೆನ್ಸ್ ಹೊಂದಿರಲೇಬೇಕು ಲೈಸೆನ್ಸ್ ಇಲ್ಲದೆ ವಾಹನ ಚಲಾಯಿಸಿದರೆ ₹5,000 ವರೆಗೆ ದಂಡ ವಿಧಿಸಬಹುದು.
ಲೈಸೆನ್ಸ್ ಇಲ್ಲದೆ ವಾಹನ ಚಲಾಯಿಸುವಾಗ ಅಪಘಾತ ಸಂಭವಿಸಿದರೆ, ಯಾವುದೇ ವಿಮಾ ಕಂಪನಿಯು (Insurance) ಪರಿಹಾರ ನೀಡುವುದಿಲ್ಲ. ಅಪಘಾತದಿಂದ ಉಂಟಾದ ಎಲ್ಲಾ ನಷ್ಟಗಳನ್ನು ಚಾಲಕನೇ ಭರಿಸಬೇಕಾಗುತ್ತದೆ.
ರಸ್ತೆ ಸುರಕ್ಷತೆ ಮತ್ತು ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಾನೂನು ನಿಯಮಗಳನ್ನು ಪಾಲಿಸಿ ವಾಹನಗಳನ್ನು ಚಲಾಯಿಸಬೇಕೆಂದು ಹೇಳಿದರು.
ಕಾರ್ಯಕ್ರಮದ ನಿರೂಪಣೆ ಮತ್ತು ವಂದನಾರ್ಪಣೆಯನ್ನು ಹೆಚ್ ಆರ್ ಕುಂಬಾರ್ ವಕೀಲರು ನೆರವೇರಿಸಿದರು.
ಈ ಸಂದರ್ಭದಲ್ಲಿ ಎಮ್.ಎಸ್. ಹುಬ್ಬಳ್ಳಿ, ವಕೀಲರು ಉಪಾಧ್ಯಕ್ಷರು, ವಕೀಲರ ಸಂಘ ಸವದತ್ತಿ, ಸುರೇಶ ಕಾಳಪ್ಪನ್ನವರ, ವಕೀಲರು ಕಾರ್ಯದರ್ಶಿ ವಕೀಲರ ಸಂಘ ಸವದತ್ತಿ, ಬಿ ಕೆ ಕಡಕೋಳ ವಕೀಲರು, ಆರ್.ವಿ. ಹುಂಬಿ. ವಕೀಲರು ಖಜಾಂಚಿ ವಕೀಲರ ಸಂಘ, ಸವದತ್ತಿ, ಎ.ಎಮ್. ಒಂಟಿ ವಕೀಲರು, ಸಲಹಾ ಮಂಡಳಿ ಸದಸ್ಯರು ವಕೀಲರ ಸಂಘ ಸದದತ್ತಿ , ಜಯಶ್ರೀ ಪೂಜಾರ್, ಮಹಿಳಾ ಪ್ರತಿನಿಧಿ ವಕೀಲರು ಸಂಘ ಸದದತ್ತಿ, ಆರ್.ಬಿ. ಜಾಲಿಕಟ್ಟಿ, ವಕೀಲರು, ಎಮ್.ಆರ್. ರಾಮದುರ್ಗ ವಕೀಲರು, ಎಸ್.ಆಯ್. ಈರನಗೌಡ್ರ, ಬಿ.ಎ. ಕೋಲಿನ ವಕೀಲರು. ಎಸ್.ಎಸ್. ಪಠಾಣ, ವಕೀಲರು. ಸಿ.ಎಸ್. ಜಾಲಿಕಟ್ಟಿ, ವಕೀಲರು. ಎಸ್.ಆಯ್. ಸಾಣಿಕೊಪ್ಪ, ವಕೀಲರು, ಪ್ರವೀಣ ಮಾನಗಾವ್, ಬಿ ಎಸ್ ಕಬ್ಬೂರ, ಜೆ ಎಂ ತಾಂಬೋಳಿ, ವಿಕಾಸ್ ಕಲಾಲ ವಕೀಲರು ಸವದತ್ತಿ, ಹೆಚ್ ಆರ್ ಕುಂಬಾರ್ ವಕೀಲರು ಹಾಗೂ ಶ್ರೀ ದ್ಯಾಮವ್ವ ದೇವಿ ಜೀರ್ಣೋದ್ಧಾರ ಟ್ರಸ್ಟ್ ಕಮಿಟಿ ಇನಾಂಗೋವನಕೊಪ್ಪ ಅಧ್ಯಕ್ಷರು. ಇತರರು ಉಪಸ್ಥಿತರಿದ್ದರು.



