ಬಾಗಲಕೋಟೆ ಜಿಲ್ಲೆಯ 36 ಅಕ್ರಮ ಮರಳು ಅಡ್ಡೆಗಳ ಮೇಲೆ ಲೋಕಾಯುಕ್ತ ಪೊಲೀಸರು ಏಕಕಾಲಕ್ಕೆ ದಾಳಿ ಮಾಡಿದ್ದಾರೆ.
24 ಸ್ಥಳಗಳಲ್ಲಿ ನಡೆದ ದಾಳಿಯಲ್ಲಿ 65 ಟಿಪ್ಪರ್, 18 ಹಿಟಾಚಿ ಸೇರಿ ಭಾರೀ ಪ್ರಮಾಣದ ಸಲಕರಣೆಗಳನ್ನು ಜಪ್ತಿ ಮಾಡಲಾಗಿದೆ. ಅಕ್ರಮ ತಡೆಯದ ಹಿನ್ನೆಲೆ ಅಧಿಕಾರಿಗಳ ವಿರುದ್ಧ ದೂರು ಕೂಡ ದಾಖಲಾಗಿದೆ.

ಬಾಗಲಕೋಟೆ ಜಿಲ್ಲಾದ್ಯಂತ ದೀರ್ಘಕಾಲದಿಂದ ಅವ್ಯಾಹತವಾಗಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆಗೆ ಬ್ರೇಕ್ ಹಾಕಲು ಲೋಕಾಯುಕ್ತ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ.
ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಮಾರ್ಗದರ್ಶನದಲ್ಲಿ ಹಾಗೂ ಬಾಗಲಕೋಟೆ ಲೋಕಾಯುಕ್ತ ಎಸ್ಪಿ ಮಹಾನಿಂಗ ನಂದಗಾವಿ ನೇತೃತ್ವದಲ್ಲಿ ಬೃಹತ್ ಕಾರ್ಯಾಚರಣೆ ಮಾಡಲಾಗಿದೆ. ಆ ಮೂಲಕ ಜಿಲ್ಲೆಯ ಇತಿಹಾಸದಲ್ಲೇ ಅತ್ಯಂತ ಬೃಹತ್ ಕಾರ್ಯಾಚರಣೆ ಇದಾಗಿದೆ.
ಅಕ್ರಮ ತಡೆಗಟ್ಟಲು ವಿಫಲರಾದ ಅಧಿಕಾರಿಗಳ ವಿರುದ್ಧ ಸ್ವಯಂಪ್ರೇರಿತ ದೂರು ತಪ್ಪಿತಸ್ಥ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಕ್ರಮ
ಅಕ್ರಮ ಮರಳುಗಾರಿಕೆಯನ್ನು ತಡೆಯುವಲ್ಲಿ ಸಂಪೂರ್ಣ ವಿಫಲರಾದ ಹಿನ್ನೆಲೆ ಬಾಗಲಕೋಟೆ ಜಿಲ್ಲಾಧಿಕಾರಿ ಸೇರಿದಂತೆ ಬೆಂಗಳೂರಿನ ಗಣಿಗಾರಿಕೆ ಮತ್ತು ಭೂವಿಜ್ಞಾನ ಇಲಾಖೆಯ ನಿರ್ದೇಶಕರು, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪನಿರ್ದೇಶಕರು, ಬಾದಾಮಿ, ಮುಧೋಳ, ಜಮಖಂಡಿ, ಹುನಗುಂದ ಹಾಗೂ ಇಳಕಲ್ ತಾಲೂಕುಗಳ ತಹಶೀಲ್ದಾರ್ಗಳ ವಿರುದ್ಧವೇ ಲೋಕಾಯುಕ್ತ ಅಧಿಕಾರಿಗಳು ಸ್ವಯಂಪ್ರೇರಿತ (ಸುಮೋಟೋ) ದೂರು ದಾಖಲಿಸಿದ್ದಾರೆ.
ಹಿಟಾಚಿ, ದೋಣಿ, ಟಿಪ್ಪರ್ಗಳು ಜಪ್ತಿ
ಅಕ್ರಮವಾಗಿ ಮರಳು ಎತ್ತಲು ಮತ್ತು ಸಾಗಿಸಲು ಬಳಸುತ್ತಿದ್ದ ಕೋಟ್ಯಂತರ ರೂ ಮೌಲ್ಯದ ಯಂತ್ರೋಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಲೋಕಾಯುಕ್ತ ದಾಳಿ ವೇಳೆ 65 ಟಿಪ್ಪರ್ಗಳು, 18 ಹಿಟಾಚಿ ಯಂತ್ರಗಳು, ನದಿಗಳಿಂದ ಮರಳು ತೆಗೆಯಲು ಬಳಸುತ್ತಿದ್ದ 14 ಯಾಂತ್ರೀಕೃತ ದೋಣಿಗಳು, 6 ಟ್ರ್ಯಾಕ್ಟರ್ಗಳು ಹಾಗೂ 1 ಜೆಸಿಬಿಯನ್ನು ಜಪ್ತಿ ಮಾಡಲಾಗಿದೆ.
100ಕ್ಕೂ ಹೆಚ್ಚು ಸಿಬ್ಬಂದಿ, 8 ಜಿಲ್ಲೆಗಳ ಅಧಿಕಾರಿಗಳಿಂದ ಜಂಟಿ ಆಪರೇಷನ್
ಬಾಗಲಕೋಟೆ ಜಿಲ್ಲೆಯ ಮುಧೋಳ, ಬಾದಾಮಿ, ಹುನಗುಂದ, ಇಳಕಲ್, ಜಮಖಂಡಿ ಹಾಗೂ ಬಾಗಲಕೋಟೆ ತಾಲೂಕುಗಳ ವ್ಯಾಪ್ತಿಯಲ್ಲಿ ಈ ದಾಳಿ ನಡೆದಿದೆ. ಜಿಲ್ಲೆಯ ಒಟ್ಟು 24 ಪ್ರಮುಖ ಸ್ಥಳಗಳಲ್ಲಿದ್ದ 36 ಅಕ್ರಮ ಮರಳು ಸಂಗ್ರಹಣಾ ಅಡ್ಡೆಗಳ ಮೇಲೆ ಏಕಕಾಲಕ್ಕೆ ಲೋಕಾಯುಕ್ತ ಪಡೆ ದಾಳಿ ಮಾಡಿದೆ.
ಈ ಬೃಹತ್ ಕಾರ್ಯಾಚರಣೆಗಾಗಿ ಕೇವಲ ಬಾಗಲಕೋಟೆ ಅಷ್ಟೇ ಅಲ್ಲದೆ ಬೆಳಗಾವಿ, ಧಾರವಾಡ, ಕೊಪ್ಪಳ, ಗದಗ, ರಾಯಚೂರು, ಯಾದಗಿರಿ ಹಾಗೂ ಕಲಬುರಗಿ ಸೇರಿದಂತೆ ಒಟ್ಟು 8 ಜಿಲ್ಲೆಗಳ ಲೋಕಾಯುಕ್ತ ಅಧಿಕಾರಿಗಳನ್ನು ಬಳಸಿಕೊಳ್ಳಲಾಗಿದೆ. ಸುಮಾರು 30 ಲೋಕಾಯುಕ್ತ ಅಧಿಕಾರಿಗಳು ಹಾಗೂ 100ಕ್ಕೂ ಹೆಚ್ಚು ಸಿಬ್ಬಂದಿ ವರ್ಗದವರು ಈ ಜಂಟಿ ಆಪರೇಷನ್ನಲ್ಲಿ ಪಾಲ್ಗೊಂಡಿದ್ದರು.



