ಹಬ್ಬಗಳನ್ನು ಖಷಿಯಾಗಿರಲು ಆಚರಣೆ ಮಾಡಬೇಕು ವಿನಃ ಸ್ವಾರ್ಥದಿಂದ ಸಮಾಜದ ಸ್ವಾಸ್ಥ ಕೆಡಿಸುವಂತೆ ಇರಬಾರದು. ಅಂಥವರಿಂದ ಎಚ್ಚರಿಕೆಯಿಂದ ಇರಬೇಕು. ಸಮಾಜದಲ್ಲಿ ಶಾಂತಿ ಕದಡುವವರನ್ನು ಇಲಾಖೆ ಬಿಡುವುದಿಲ್ಲ ಎಂದು ಸಿಪಿಐ ವಿನಾಯಕ ಬಡಿಗೇರ ಹೇಳಿದರು.

ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಶನಿವಾರ ಬಕ್ರೀದ್ ಹಬ್ಬದ ಪ್ರಯುಕ್ತ ಶಾಂತಿ ಸಭೆಯನ್ನು ನಡೆಸಲಾಯಿತು.
ಈ ವೇಳೆ ಸಿಪಿಐ ವಿನಾಯಕ ಬಡಿಗೇರ ಮಾತನಾಡಿ, ತ್ಯಾಗ ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ಶಾಂತಿಯುತವಾಗಿ ಆಚರಿಸುವ ಮುಖಾಂತರ ಮತ್ತೊಬ್ಬರಿಗೆ ಮಾದರಿಯಾಗಿರಬೇಕು ಎಂದು ತಿಳಿಸಿದರು.
ಸಾಮಾಜಿಕ ಮಾಧ್ಯಮಗಳು ಕ್ರಿಯಾಶೀಲವಾಗಿದೆ. ಎಚ್ಚರಿಕೆಯಿಂದ ಬಳಕೆ ಮಾಡಬೇಕು. ಕೆಲವರು ವಿಡಿಯೋಗಳನ್ನು ಹಬ್ಬದ ಸಂದರ್ಭದಲ್ಲಿ ಬಳಸುವ ಮೂಲಕ ಸಮಾಜದಲ್ಲಿ ಶಾಂತಿ ಕದಡಲು ಪ್ರಯತ್ನಿಸುತ್ತಾರೆ. ಇಂತಹ ವಿಷಯ ಗಮನಕ್ಕೆ ಬಂದರೆ ಅದಕ್ಕೆ ಪ್ರತಿಕ್ರಿಯೆ ಮಾಡದೆ ಪೊಲೀಸ್ ಇಲಾಖೆಯ ಗಮನಕ್ಕೆ ತರಬೇಕು ಎಂದು ಹೇಳಿದರು.
ಪಿಎಸ್ಐ ಸವಿತಾ ಮುನ್ಯಾಳ ಮಾತನಾಡಿ, ಬಕ್ರೀದ್ ಹಬ್ಬವನ್ನು ಶಾಂತಿಯುತವಾಗಿ ನೆಡೆಸುವಂತೆ ಮನವಿ ಮಾಡಿದರು. ಒಂದು ವೇಳೆ ಕಾನೂನು ಮೀರಿ ನಡೆದುಕೊಂಡರೆ ಅಂತವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಮತ್ತು ಹಬ್ಬದ ಸಂದರ್ಭದಲ್ಲಿ ಪ್ರಾಣಿ ಬಲಿ ಆಗದಂತೆ ಹಿಂಸೆ ಆಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಇಲಾಖೆಯ ನಿಯಮಗಳನ್ನು ಪಾಲಿಸಿ ಪೊಲೀಸರೊಂದಿಗೆ ಸಹಕರಿಸಬೇಕು ಎಂದು ವಿನಂತಿಸಿದರು.
ಈ ಒಂದು ಸಭೆಯಲ್ಲಿ ಹಿಂದೂ–ಮುಸ್ಲಿಂ ಸಮಾಜದ ಮುಖಂಡರು ಇದ್ದರು.



