ಧಾರವಾಡ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವಿನ ಕೊರತೆ ಆಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಬೆಳೆ ಹಾನಿ ಆದ ಬಗ್ಗೆ ಸರಿಯಾದ ಮಾಹಿತಿ ಪಡೆದು, ವರದಿ ಸಲ್ಲಿಸಬೇಕು ಎಂದು ಲೋಕೋಪಯೋಗಿ ಹಾಗೂ ಧಾರವಾಡ ಜಿಲ್ಲಾ ಪ್ರಕೃತಿ ವಿಕೋಪ ನಿರ್ವಹಣಾ ಮೇಲುಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಧಾರವಾಡ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಧಾರವಾಡ ಜಿಲ್ಲಾ ಪ್ರಕೃತಿ ವಿಕೋಪ ನಿರ್ವಹಣಾ ಪ್ರಗತಿ ಪರಿಶೀಲನಾ ಸಭೆ ಜರುಗಿಸಿ, ಮಾತನಾಡಿದರು.
ಧಾರವಾಡ ಜಿಲ್ಲೆಯಲ್ಲಿ ರೈತರು ಬೆಳೆದ ಬೆಳೆಗಳಿಗೆ ಮಳೆಯ ಕೊರತೆಯಿಂದ ತೊಂದರೆಯಾಗುವ ಸಾಧ್ಯತೆ ಇದ್ದು, ಅಧಿಕಾರಿಗಳು ಬೆಳೆ ಸಮೀಕ್ಷೆ ನಡೆಸಿ, ವರದಿ ಸಲ್ಲಿಸಿದ ಮೇಲೆ ಸರ್ಕಾರದಿಂದ ಸೂಕ್ತ ಪರಿಹಾರ ಕಲ್ಪಿಸಲಾಗುವುದು ಎಂದು ಹೇಳಿದರು.
ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಮಳೆಯ ಕೊರತೆ ಮುಂದುವರೆದ್ದಲ್ಲಿ ಮುಖ್ಯಮಂತ್ರಿ ಅವರ ಗಮನಕ್ಕೆ ತಂದು ಮೋಡ ಬಿತ್ತನೆಗೆ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ನೀರಿನ ಸಮಸ್ಯೆ ಪರಿಹಾರಕ್ಕೆ ಕೆರೆ ತುಂಬಿಸುವುದು ಬಹಳ ಸೂಕ್ತವಾಗಿದ್ದು, ಈಗ ಮಲಪ್ರಭಾ ನದಿಯಲ್ಲಿ ನೀರು ಬರುತ್ತಿದೆ. ಇಂದಿನಿಂದಲೇ ಕೆರೆ ತುಂಬಿಸುವ ಕಾರ್ಯ ಪ್ರಾರಂಭಿಸಬೇಕು. ಕೆರೆಗಳಿಗೆ ನೀರು ತುಂಬಿಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಹುಬ್ಬಳ್ಳಿ–ಧಾರವಾಡದಲ್ಲಿ ಲೋಕೋಪಯೋಗಿ ಇಲಾಖೆಯ ಕಾಮಗಾರಿಗಳನ್ನು ಶೀಘ್ರ ಕಾರ್ಯರೂಪಕ್ಕೆ ತರಬೇಕು ಹಾಗೂ ಎಲ್ ಆ್ಯಂಡ್ ಟಿ ಕಂಪನಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಶೀಘ್ರವೇ ಬಗೆಹರಿಸಿ, ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಕೇಂದ್ರ ಗ್ರಾಹಕರ ವ್ಯವಹಾರಗಳ, ಆಹಾರ ಮತ್ತು ಸಾರ್ವಜನಿಕ ವಿತರಣೆ ಮತ್ತು ಹೊಸ ಹಾಗೂ ನವೀಕರಿಸಬಹುದಾದ ಇಂಧನ ಸಚಿವರಾದ ಪ್ರಲ್ಹಾದ ಜೋಶಿ ಅವರು ಮಾತನಾಡಿ, ಜಿಲ್ಲೆಯಲ್ಲಿ ರೈತರಿಗೆ ಬೆಳೆ ವಿಮೆ ಮಾಡಿಸುವುದಾಗಿ ಏಜೆಂಟರ್ ಹಾವಳಿ ಬಹಳಷ್ಟು ಹೆಚ್ಚಾಗಿದ್ದು, ರೈತರಿಗೆ ಪೂರ್ಣ ಪ್ರಮಾಣದಲ್ಲಿ ಬೆಳೆ ವಿಮೆಯ ಹಣ ತಲುಪಬೇಕು. ಏಜೆಂಟರಿಗೆ ಆಸ್ಪದ ನೀಡಬಾರದು. ಅಂತಹ ಏಜೆಂಟರ ಮೇಲೆ ಶಿಸ್ತು ಕ್ರಮ ಜರುಗಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ದವಸ ಧಾನ್ಯ, ಮೇವು ಹಾಗೂ ಕುಡಿಯುವ ನೀರಿನ ಸಂಗ್ರಹಕ್ಕೆ ವಿಶೇಷ ಗಮನ ಹರಿಸಬೇಕು. ಪ್ರತಿ ಗ್ರಾಮಕ್ಕೆ ಕುಡಿಯಲು ಮಲಪ್ರಭಾ ನೀರನ್ನು ಪೂರೈಸಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಅವರು ತಿಳಿಸಿದರು.
ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಅಬ್ಬಯ್ಯ ಪ್ರಸಾದ ಅವರು ಮಾತನಾಡಿ, 2026 ನೇ ಸಾಲಿನ ಮುಂಗಾರು ಹಂಗಾಮಿನ ರೈತರ ಬೆಳೆ ಸಮೀಕ್ಷೆ ಮಾಡಿ, ಮಾಹಿತಿ ಪಡೆದು, ರೈತರ ಬೆಳೆ ನಷ್ಟವಾದಲ್ಲಿ ಸಕಾಲದಲ್ಲಿ ಬೆಳೆ ವಿಮೆ ಪಾವತಿಸಬೇಕು. ರೈತರಿಗೆ ಗೊಬ್ಬರ, ಮೇವಿನ ಸಮಸ್ಯೆ ಆಗದಂತೆ ಕ್ರಮವಹಿಸಿ ಎಂದು ಅಧಿಕಾರಿಗಳಿಗೆ ಹೇಳಿದರು.
ಶಾಸಕರಾದ ಎನ್. ಎಚ್. ಕೋನರಡ್ಡಿ ಅವರು ಮಾತನಾಡಿ, ಬೆಳೆ ವಿಮೆ ಪರಿಹಾರ ಪ್ರಕರಣಗಳಲ್ಲಿ ಬೆಳೆ ಮಿಸ್ ಮ್ಯಾಚ್‍ನಿಂದ ರೈತರಿಗೆ ಪರಿಹಾರ ವಿಳಂಬವಾಗುತ್ತಿದೆ. ಏಜೆಂಟರು ಬೆಳೆ ವಿಮೆ ನೋಂದಣಿಗೆ ಹೆಚ್ಚಿನ ಪರಿಹಾರ ಕೊಡಿಸುತ್ತೇವೆ ಎಂದು ರೈತರನ್ನು ಮೋಸಗೊಳಿಸುವ ಪ್ರಕರಣಗಳು ಕೇಳಿ ಬರುತ್ತವೆ. ಇನ್ನೂ ಮುಂದೆ ಇಂತಹ ಪ್ರಕರಣಗಳು ಉಂಟಾಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸಕಾಲದಲ್ಲಿ ಮಳೆ ಆಗದಿದ್ದಲ್ಲಿ, ಮೋಡ ಬಿತ್ತನೆ ಮೂಲಕ ರೈತರು ಬೆಳೆ ಬೆಳೆಯಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ಮಾತನಾಡಿ, ಜಿಲ್ಲೆಯಲ್ಲಿ ಪೂರ್ವ ಮುಂಗಾರು ಜೂ.1 ರಿಂದ ಜೂ.30 ರವರೆಗೆ 124.08 ವಾಡಿಕೆ ಮಳೆಗೆ 95.5 ಮೀ.ಮೀ ಮಳೆಯಾಗಿದ್ದು, 23 ಮಿ.ಮೀ. ಕಡಿಮೆ ಮಳೆಯಾಗಿದೆ. ಮುಂಗಾರು ಹಂಗಾಮಿನ ಜೂನ್ 1 ರಿಂದ ಜುಲೈ 4 ವರೆಗೆ ವಾಡಿಕೆ ಮಳೆ 142.5 ಮಿ.ಮಿ ಗೆ 103.9 ಮಿ.ಮಿ ವಾಸ್ತವ ಮಳೆಯಾಗಿದ್ದು, 27 ಮಿ.ಮಿ ಕಡಿಮೆ ಮಳೆಯಾಗಿದೆ.
2026 ರ ನೈರುತ್ಯ ಮುಂಗಾರು ಜೂನ್ 1 ರಿಂದ ಜುಲೈ 4 ರ ಅವಧಿಯಲ್ಲಿ, ಧಾರವಾಡ ಜಿಲ್ಲೆಯ 8 ತಾಲೂಕುಗಳ ಪೈಕಿ, ಕುಂದಗೋಳ ತಾಲೂಕಿನಲ್ಲಿ ಅಧಿಕ ಮಳೆ ಆಗಿದೆ. ಉಳಿದ 7 ತಾಲೂಕಿನಲ್ಲಿ ಸಾಧಾರಣ ಮಳೆ ಕೊರತೆ ಕಂಡು ಬಂದಿದೆ.
ಮುಂಗಾರು ಹಂಗಾಮಿನಲ್ಲಿ 2,82,677 ಹೆಕ್ಟರ್ ಪ್ರದೇಶ ಬಿತ್ತನೆ ಗುರಿ ಹೊಂದಿದ್ದು, ಈವರೆಗೆ 2,55,191 ಹೆಕ್ಟರ್ ಪ್ರದೇಶದಲ್ಲಿ ಬಿತ್ತೆನೆಯಾಗಿದ್ದು, ಶೇ.90.28 ರಷ್ಟು ಗುರಿ ಸಾಧನೆಯಾಗಿದೆ. ಪ್ರಮುಖವಾಗಿ ಮುಸುಕಿನಜೋಳ, ಭತ್ತ, ಉದ್ದು, ಹೆಸರು, ಶೇಂಗಾ, ಸೋಯಾಅವರೆ ಹಾಗೂ ಹತ್ತಿ, ಕಬ್ಬು ಬೆಳೆಯಲಾಗಿದೆ ಎಂದು ಹೇಳಿದರು.
ಪ್ರಸಕ್ತ 2026-27 ನೇ ಸಾಲಿನ ಮುಂಗಾರು ಬೆಳೆಗಳಿಗೆ ವಿವಿಧ ವಿಧದ ಒಟ್ಟು 54,648 ಮೆಟ್ರಿಕ್ ಟನ್ ರಸಗೊಬ್ಬರ ಬೇಡಿಕೆ ಇದ್ದು, ಇಲ್ಲಿಯವರೆಗೆ 28,586 ಮೆಟ್ರಿಕ ಟನ್ ರಸಗೊಬ್ಬರ ಮಾರಾಟವಾಗಿದೆ. ಒಟ್ಟು 27,832 ಮೆಟ್ರಿಕ ಟನ್ ರಸಗೊಬ್ಬರ ದಾಸ್ತಾನಿದೆ. ಕೇಂದ್ರ ಮತ್ತು ರಾಜ್ಯ ಸರಕಾರದ ಹಂಚಿಕೆ ಅನುಸಾರ ಉಳಿದ ರಸಗೊಬ್ಬರ ಸಕಾಲಕ್ಕೆ ಲಭ್ಯವಾಗಲಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಮುಂಗಾರು ಹಂಗಾಮು ಬಿತ್ತನೆ ಬೀಜಗಳಾದ ಸೊಯಾಅವರೆ, ಮುಸುಕಿನಜೋಳ, ಶೇಂಗಾ, ಹೆಸರು, ಉದ್ದು, ಭತ್ತ, ತೊಗರಿ ಸೇರಿ ಒಟ್ಟು 17,703 ಕ್ವಿಂಟಾಲ್ ಬಿತ್ತನೆ ಬೀಜ ಪೂರೈಕೆಯಾಗಿದ್ದು, 15,838 ಕ್ವಿಂಟಾಲ್ ಬಿತ್ತನೆ ಬೀಜ ವಿತರಣೆ ಮಾಡಲಾಗಿದೆ. 1,631 ಕ್ವಿಂಟಾಲ್ ಬಿತ್ತನೆ ಬೀಜ ಬಾಕಿ ಇದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಇಲ್ಲಿಯವರೆಗೆ ಧಾರವಾಡ, ಹುಬ್ಬಳ್ಳಿ ಮತ್ತು ಕಲಘಟಗಿ ತಾಲೂಕಿನ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು, ಖಾಸಗಿ ಕೊಳವೆ ಬಾವಿಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಧಾರವಾಡ ತಾಲೂಕಿನ ಹೊಸಟ್ಟಿ, ಮಂಡಿಹಾಳ, ಬೇಲೂರ, ಮುಗದ, ಮನಗುಂಡಿ, ಲೋಕೂರು, ನಿಗದಿ, ಬೊಗೂರು, ವೆಂಕಟಾಪೂರ, ಹೊಸ್ವಾಳ ಮತ್ತು ಹುಬ್ಬಳ್ಳಿ ತಾಲೂಕಿನ ನೂಲ್ವಿ, ಅದರಗುಂಚಿ, ಕುರ್ಡಿಕೆರೆ, ಛಬ್ಬಿ ಹಾಗೂ ಕಲಘಟಗಿ ತಾಲೂಕಿನ ನೆಲ್ಲಹರವಿ ತಾಂಡ, ಬಿ.ಹುಲಿಕಟ್ಟಿ, ಸಂಗಮೇಶ್ವರ, ಜುಂಜನಬೈಲ್, ಶಿಂಗನಹಳ್ಳಿ, ಬಮ್ಮಿಗಟ್ಟಿ, ಕಂದಲಿ ಗ್ರಾಮಗಳು ಸೇರಿದಂತೆ ಒಟ್ಟು 20 ಗ್ರಾಮಗಳಿಗೆ ಪ್ರಸ್ತುತ ಖಾಸಗಿ ಕೊಳವೆ ಬಾವಿ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.
ನಗರ ಸ್ಥಳೀಯ ಸಂಸ್ಥೆಗಳು: ಧಾರವಾಡ ಜಿಲ್ಲೆಯ 05 ಸ್ಥಳೀಯ ನಗರ ಸಂಸ್ಥೆಗಳಲ್ಲಿ 100 ವಾರ್ಡ್‍ಗಳಿದ್ದು, ಯಾವುದೇ ವಾರ್ಡ್‍ಗಳಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿಲ್ಲ. 80 ವಾರ್ಡ್‍ಗಳಲ್ಲಿ ಪ್ರತಿ ದಿನ ನೀರು ಪೂರೈಕೆ ಮಾಡಲಾಗುತ್ತಿದ್ದು, ಉಳಿದ 20 ವಾರ್ಡ್‍ಗಳಲ್ಲಿ 2 ರಿಂದ 3 ದಿನಗಳವರೆಗೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. 5 ಸ್ಥಳೀಯ ನಗರ ಸಂಸ್ಥೆಗಳಲ್ಲಿನ ಕೆರೆಗಳಲ್ಲಿ ಕುಡಿಯುವ ನೀರಿನ ಶೇಖರಣೆ ಸಾಕಷ್ಟು ಇರುವುದರಿಂದ ಪ್ರಸ್ತುತ ಯಾವುದೇ ಸಮಸ್ಯೆ ಇರುವುದಿಲ್ಲ ಎಂದರು.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ: ಹುಬ್ಬಳ್ಳಿ-ಧಾರವಾಡ ಮಹಾನಗರದ ವ್ಯಾಪ್ತಿಯಲ್ಲಿ 82 ವಾರ್ಡ್‍ಗಳಿದ್ದು, ಅದರಲ್ಲಿ 13 ವಾರ್ಡ್‍ಗಳಲ್ಲಿ 24ಘಿ7 ನೀರು ಪೆÇರೈಕೆ ಮಾಡಲಾಗುತ್ತಿದೆ. ಉಳಿದ ವಾರ್ಡ್‍ಗಳಲ್ಲಿ 2 ರಿಂದ 7 ದಿನಗಳವರೆಗೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ.
ಮೇವಿನ ಲಭ್ಯತೆ: ಧಾರವಾಡ ಜಿಲ್ಲೆಯಲ್ಲಿ 1,84,037 ದನ ಮತ್ತು ಎಮ್ಮೆಗಳಿದ್ದು, 1,83,524 ಕುರಿ ಮತ್ತು ಮೇಕೆಗಳಿವೆ. ಧಾರವಾಡ ಜಿಲ್ಲೆಯಲ್ಲಿ ಪ್ರಸ್ತುತ ವಾರ 4,44,310.146 ಟನ್ ಮೇವು ಲಭ್ಯವಿದ್ದು, ಅದು ಮುಂದಿನ 52 ವಾರಗಳಿಗೆ ಆಗುವಷ್ಟು ಮೇವು ದಾಸ್ತಾನು ಲಭ್ಯವಿದೆ. ಮುನ್ನಚ್ಚರಿಕಾ ಕ್ರಮವಾಗಿ ಜಿಲ್ಲೆಯಲ್ಲಿ 7 ಮೇವು ಬ್ಯಾಂಕ್‍ಗಳನ್ನು ಗುರುತಿಸಲಾಗಿದೆ ಎಂದು ಅವರು ತಿಳಿಸಿದರು.
ಜಿಲ್ಲೆಯಲ್ಲಿ ಪೂರ್ವ ಮುಂಗಾರು ಹಂಗಾಮಿನಲ್ಲಿ 1 ಮನೆ ಹಾನಿಯಾಗಿದ್ದು, 1.20 ಲಕ್ಷ ಪರಿಹಾರ ವಿತರಿಸಲಾಗಿದೆ. 5 ಭಾಗಶಃ ಮನೆ ಹಾನಿಯಾಗಿದೆ. ಒಟ್ಟಾರೆಯಾಗಿ 6 ಮನೆ ಹಾನಿಯಾಗಿದ್ದು, 1.52 ಲಕ್ಷ ಪರಿಹಾರ ವಿತರಿಸಲಾಗಿದೆ. ಸಿಡಿಲು ಬಡಿದು ಧಾರವಾಡ ತಾಲೂಕಿನ ಕವಲಗೇರಿಯಲ್ಲಿ ಒಂದು ಜೀವ ಹಾನಿಯಾಗಿದ್ದು, ರೂ. 5 ಲಕ್ಷ ಪರಿಹಾರ ವಿತರಿಸಲಾಗಿದೆ. ಜೂನ್ 1 ರಿಂದ ಜುಲೈ 4 ವರೆಗೆ ಮಳೆ ಕಡಿಮೆಯಾಗಿದ್ದರಿಂದ ಮುಂಗಾರು ಹಂಗಾಮಿನಲ್ಲಿ ಯಾವುದೇ ಹಾನಿಯಾಗಿರುವುದಿಲ್ಲ ಎಂದು ಹೇಳಿದರು.
ಬೆಳೆ ಹಾನಿಯ ಕುರಿತು ಮಾರ್ಚ ಮಾಹೆಯಲ್ಲಿ 1,979.45 ಹೆಕ್ಟರ್ ಪ್ರದೇಶಕ್ಕೆ 2529 ರೈತರು ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದ್ದು, 1,038.45 ಹೆಕ್ಟರ್ ಪ್ರದೇಶಕ್ಕೆ 1,539 ರೈತರು ಪರಿಹಾರ ತಂತ್ರಾಂಶದಲ್ಲಿ ದಾಖಲಿಸಿರುತ್ತಾರೆ. ಅದರಲ್ಲಿ 567 ರೈತರು ಫ್ರೂಟ್ಸ್ ಐಡಿ ಹೊಂದಿರುವುದಿಲ್ಲ ಹಾಗೂ 423 ರೈತರು ಬೆಳೆ ಹೊಂದಾಣಿಕೆ ಇಲ್ಲದೆ ಇರುವುದರಿಂದ ಒಟ್ಟು 990 ರೈತರ ಅರ್ಜಿಗಳು ಬಾಕಿ ಇರುತ್ತವೆ.
ಸಭೆಯಲ್ಲಿ ಶಾಸಕರಾದ ಎಂ.ಆರ್.ಪಾಟೀಲ, ಎಫ್.ಹೆಚ್.ಜಕಪ್ಪನವರ, ಅರವಿಂದ ಚಂದ್ರಕಾಂತ ಬೆಲ್ಲದ ಅವರು ಸೇರಿದಂತೆ ಹಿರಿಯ ಅಧಿಕಾರಿಗಳು ಮಾತನಾಡಿದರು.
ವೇದಿಕೆಯಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷೆ ಶಿವಲೀಲಾ ವಿನಯ ಕುಲಕರ್ಣಿ, ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಾಕಿರ್ ಸನದಿ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಇದ್ದರು.
ಸಭೆಯಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪೆÇಲೀಸ್ ಆಯುಕ್ತ ಎನ್.ಶಶಿಕುಮಾರ, ಜಿಲ್ಲಾ ಪೆÇಲೀಸ್ ವರಿμÁ್ಠಧಿಕಾರಿ ಗುಂಜನ್ ಆರ್ಯ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಡಾ. ರುದ್ರೇಶ ಎಸ್.ಘಾಳಿ, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಪೆÇ್ರೀಬೆಷನರಿ ಐಎಎಸ್ ಅಧಿಕಾರಿ ಅನುಪ್ರೀಯಾ ಸಾಕ್ಯಾ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅಜೀಜ್ ದೇಸಾಯಿ, ಉಪವಿಭಾಗಾಧಿಕಾರಿ ಪ್ರಭಾವತಿ ಫಕೀರಪುರ, ಕೃಷಿ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ, ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಕೆ.ಸಿ.ಭದ್ರಣ್ಣವರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಪರಶುರಾಮ ಎಫ್.ಕೆ. ಸೇರಿದಂತೆ ಎಲ್ಲ ತಾಲೂಕಿನ ತಹಶೀಲ್ದಾರರು, ಎಲ್ಲ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.



