ಶ್ರೀ ಕೃಷ್ಣ ಹಾಗೂ ಕರ್ಣನ ನಡುವೆ ನಡೆದ ಈ ಸಂಭಾಷಣೆ ಕೇಳಿದರೆ ನಮ್ಮ ಜೀವನದಲ್ಲಿ ಬರುವ ಕಷ್ಟಗಳನ್ನು ಸುಲಭವಾಗಿ ಎದುರಿಸಬಹುದು.

WhatsApp Group Join Now

ಕಷ್ಟ ಯಾರ ಜೀವನದಲ್ಲಿ ಇಲ್ಲ ಹೇಳಿ.. ಆದರೆ ಕಷ್ಟಗಳನ್ನು ಕಷ್ಟ ಎಂದುಕೊಳ್ಳುವುದೇ ದೊಡ್ಡ ತಪ್ಪು.. ಕರ್ಣ ತನ್ನ ಕಷ್ಟಗಳನ್ನು ಕೃಷ್ಣನಿಗೆ ಹೇಳಿಕೊಂಡಾಗ.. ಕೃಷ್ಣ ಕರ್ಣನಿಗೆ ಹೇಳಿದ ಒಂದಿಷ್ಟು ‌ಸಂದೇಶಾತ್ಮಕ ಮಾತುಗಳು:-
ಅಂದು ಕರ್ಣ ಕೃಷ್ಣನಿಗೆ ಹೇಳಿದ, “ನನ್ನ ಬದುಕೇ ಒಂದು ಅಗ್ನಿಕುಂಡ. ಸಾಮಾಜಿಕ ವಲಯದಲ್ಲಿ ಒಂದು ಮುಳ್ಳಿನ ಬೇಲಿ. , ನನ್ನ ಹುಟ್ಟು ?ಎಂಥ ಹುಟ್ಟು! ಹುಟ್ಟಿಸಿದ ಕುಂತಿ ನವಜಾತ ಶಿಶುವಾಗಿದ್ದ ನನ್ನನ್ನು ನದಿಯಲ್ಲಿ ತೇಲಿಬಿಟ್ಟಳು.
ತಾಯಿಯ ತನ್ನ ಕೂತುಹಲದ ಪರೀಕ್ಷೆಗಾಗಿ,ಅಕ್ರಮ ಸಂತಾನವಾಗಿ, ಹುಟ್ಟಿದ್ದು ನನ್ನ ತಪ್ಪೆ?”

“ಸೂತಕುಲ, ಬಡಬಗ್ಗರ ಹಟ್ಟಿಯಲ್ಲಿ ಬೆಳೆದೆ. ಬಿಲ್ವಿದ್ಯೆ ಕಲಿಯಬೇಕೆಂದು ದ್ರೋಣಾಚಾರ್ಯರ ಬಳಿ ಬಂದಾಗ
‘ನೀನು ಕ್ಷತ್ರಿಯನಲ್ಲ ! ಕೀಳುಜಾತಿಯಲ್ಲಿ ಹುಟ್ಟಿದವ, ಸೂತಪುತ್ರ! ದೂರವಿರು!’ ಎಂಬ ಮನ ನೋಯಿಸುವ ಮಾತುಗಳು! ಹಾಗೇ, ಪರಶುರಾಮರು ಅಸ್ತ್ರಶಸ್ತ್ರಗಳ ವಿದ್ಯೆಯನ್ನೇನೋ ಕಲಿಸಿದರು. ಆದರೆ ನಾನು ಕ್ಷತ್ರಿಯ ಎಂಬುದು ಗೊತ್ತಾಗುತ್ತಲೇ,
ಅಗತ್ಯ ಬಿದ್ದಾಗ ನಿನಗೆ ಅಸ್ತ್ರಗಳು ಕೈ ಕೊಡಲಿ! ಅಬ್ಟಾ ಅದೆಂಥ ಉಗ್ರ ಶಾಪ! ಅಗತ್ಯ ಸಂದರ್ಭದಲ್ಲಿ ಮಾತ್ರ ವಿದ್ಯೆ ಕೈ ಕೊಡುವುದಾದರೆ, ಅಂಥ ವಿದ್ಯೆಯನ್ನಾದರೂ ನಾನು ಯಾಕೆ ಸಂಪಾದಿಸಬೇಕಿತ್ತು? ಹಣದ ಅವಶ್ಯಕತೆ ಬಿದ್ದಾಗ ಒಂದೇ ಒಂದು ದಮ್ಮಡಿಯೂ ಉಳಿಯದ ಶ್ರೀಮಂತಿಕೆ!!!

“ನನ್ನ ಬದುಕಿನ ದುರಂತಗಳ ಸರಮಾಲೆ.ನಿನಗೆ ಅರಿಯದ್ದೆ? ದ್ರೌಪದಿಯ ಸ್ವಯಂವರ ದಲ್ಲಿ, ಅದೆಂಥ ಕಡು ಅವಮಾನವನ್ನು ಅನುಭವಿಸಿದೆ!! . ಕೌರವ ಪಾಂಡವರ ನಡುವೆ ಯುದ್ಧವೇರ್ಪಟ್ಟಾಗ ಕುಂತಿ, ನನ್ನ ತಾಯಿ, ಬಂದಳು. ತೊಟ್ಟ ಅಸ್ತ್ರವನ್ನು ಮತ್ತೆ ತೊಡೆನೆಂಬ ಮಾತು ಪಡೆದು ಹೋದಳು. ಮಾತಿನುದ್ದಕ್ಕೂ ಪಾಂಡವರನ್ನು ರಕ್ಷಿಸುವ ಹೊಣೆಯನ್ನು ನನ್ನ ಮೇಲೆ ಹೊರಿಸಿದಳೇ ಹೊರತು ಒಮ್ಮೆಯಾದರೂ, ಬಾಯ ಮಾತಿಗಾದರೂ ‘ಯುದ್ಧದಲ್ಲಿ ಗೆದ್ದು ಬಾ’ ಎಂದು ಸ್ವಂತ ತಾಯಿ ಹರಸಲಿಲ್ಲ !
ಮಗನೆಂದು ಸಾಂತ್ವನಿಸಲಿಲ್ಲ.
ಇತ್ತ ,ಇಂದ್ರ, ನನ್ನ ಕರ್ಣಕುಂಡಲಗಳನ್ನು ಕದಿಯುವುದಕ್ಕೆಂದೆ,ದಾನದ ನೆಪದಲ್ಲಿ ಬಂದ. ಇಷ್ಟೆಲ್ಲ ದೌರ್ಭಾಗ್ಯಗಳ ಮಧ್ಯೆ, ನನ್ನನ್ನು ಕೊನೆಯವರೆಗೆ, ಕೈಹಿಡಿದದ್ದು ದುರ್ಯೋಧನ ಮಾತ್ರ. ಹಾಗಿರುವಾಗ ಆತನನ್ನು ನಾನು ಹೇಗೆ ಮರೇಯಲಿ ಕೃಷ್ಣ? ಅವನ ಪರವಾಗಿ ನಿಲ್ಲುವುದು ಅಧರ್ಮ ಹೇಗಾದೀತು?” ನೀನೆ ಹೇಳು.

ಆಗ ಕರ್ಣನಿಗೆ ಕೃಷ್ಣ ನಗುತ್ತಾ ಹೇಳಿದ, “ಕರ್ಣಾ, ನೀನು ನದಿ ತೀರದಲ್ಲಿ ಹುಟ್ಟಿದೆ, ನದಿಯ ಪಾಲಾದೆ, ಅಲ್ಲವೆ? ನಾನು ಹುಟ್ಟಿದ್ದು ಎಲ್ಲಿ ಎಂದು ಕೇಳು! ಸೆರೆಮನೆಯಲ್ಲಿ! ಇಂಥ ಜನ್ಮವನ್ನು ಯಾರಾದರೂ ಬಯಸಲು ಸಾಧ್ಯವೇ? ಹುಟ್ಟಿದ ಮರುಕ್ಷಣವೇ, ನಾನು ನನ್ನ ತಾಯಿಯಿಂದ ಬೇರೆಯಾದೆ. ನನ್ನ ತಂದೆಯೇ ನನ್ನನ್ನು ದೂರದೊಂದು ಹಳ್ಳಿಗೆ, ಬಿಟ್ಟು ಬಂದರು. ಹೋಗುವ ದಾರಿಯುದ್ದಕ್ಕೂ ಮಳೆ, ಗಾಳಿ, ಸಿಡಿಲು. ಅಂದು ಸಾವು ನನ್ನ ಕಣ್ಮುಂದೆ ಇತ್ತು.

ನೀನಾದರೋ ಚಿಕ್ಕವನಿದ್ದಾಗಿನಿಂದ ಕತ್ತಿ, ರಥ, ಕುದುರೆ, ಬಿಲ್ಲುಬಾಣಗಳು ಇತ್ಯಾದಿ ನೋಡಿ,ಆಟ ಆಡಿ ,ಕಲಿತು ಬೆಳೆದು ನಿಂತೆ ಕರ್ಣ,ಆದರೆ, ನನ್ನ ಬಾಲ್ಯದಲ್ಲಿ ಏನಿತ್ತು? ಹಸು, ಕೊಟ್ಟಿಗೆ, ಸೆಗಣಿ, ಗಂಜಲ!ಸೆಗಣಿ ಬಾಚುತ್ತ, ಹಸು ಮೇಯಿಸುತ್ತ,
ಗೊಲ್ಲನಾಗಿ,ಗೊಲ್ಲ ಕುಲದವನಾಗಿ, ಇದೇ ಜೀವನವೆಂದು ಬಗೆದು ಜನರೊಂದಿಗೆ ಬಾಳುತ್ತಿದ್ದವನು.ಊರಿಗೆ ಏನೇ ಸಂಕಷ್ಟ ಬಂದರೂ ನಾನೇ ಹೊಣೆ,ಸಾಲದು ಎಂಬಂತೆ. ಅಷ್ಟರಮೇಲೂ, ಈ ಅನಿಷ್ಟಕ್ಕೆಲ್ಲ ನಾನೇ ಕಾರಣ ಎಂದು ಜನ ನನ್ನನ್ನೇ ಬೆರಳು ಮಾಡುತ್ತಿದ್ದರು. ನನ್ನನ್ನು ಕೊಲ್ಲಲು ಅದೆಷ್ಟು ಪ್ರಯತ್ನಗಳಾದವು ಹೇಳು, ದುಷ್ಟರು, ರಾಕ್ಷಸರು ಅದೆಷ್ಟೆಲ್ಲ ಬಗೆಯಲ್ಲಿ ನನ್ನ ಮೇಲೆ ಆಕ್ರಮಣ ಮಾಡಿದರು.
ಸ್ವಂತ ಸೋದರ ಮಾವ ಕಿತ್ತು ಹಿಸುಕಲು ಬಂದವ, ಅದೆಷ್ಟು ಜನರನ್ನು ಕಳಿಸಿದ ನನ್ನನ್ನು ಮುಗಿಸಲು!!!!.
“ನಾನೂ ಓದಬೇಕು, ವಿದ್ಯೆ ಸಂಪಾದಿಸಬೇಕು ಎಂದು ನಿರ್ಧರಿಸಿ ಗುರುಕುಲ ಸೇರುವ ಹೊತ್ತಿಗೆ, ನನಗೆ ಹದಿನಾರು ವರ್ಷಗಳಾಗಿಬಿಟ್ಟಿದ್ದವು. ಬಾಕಿ ಹುಡುಗರು ಅದಾಗಲೇ ತಮ್ಮ ಜ್ಞಾನಾರ್ಜನೆ ಮುಗಿಸಿ,
ಆಶ್ರಮದಿಂದ ಹೊರಬರುವ ಹೊತ್ತಿನಲ್ಲಿ, ನಾನು ವಿದ್ಯಾರ್ಥಿಯಾಗಿ ಸೇರಿದ್ದೆ. ಇನ್ನು ಗೃಹಸ್ಥ ಜೀವನ ಹೇಗಿತ್ತೆಂದು ಕೇಳುತ್ತೀಯಾ? ಅದಿನ್ನೊಂದು ಕಥೆ
ಮದುವೆಯಾದವರನ್ನು ನಾನು ಮನಃಪೂರ್ವಕ ಪ್ರೀತಿಸಿರಲಿಲ್ಲ. ಯಾರನ್ನು ನಿಜವಾಗಿ ಪ್ರೀತಿಸಿದ್ದೆನೋ! ಅವರನ್ನು ಮದುವೆಯಾಗಲಿಲ್ಲ. ದೈತ್ಯನೊಬ್ಬ ಕೂಡಿಹಾಕಿದ್ದ ಹೆಂಗಸರನ್ನು ಬಿಡಿಸಿದ್ದರಿಂದ ಅವರೆಲ್ಲರಿಗೂ ನಾನು ಪತಿಯಾದೆ. ಪತಿಯ ಅರ್ಥ ತಿಳಿಯದವರು ಗಂಡ ಎಂತಲೇ ಕೆರದರು,ಜಾರ, ಕಳ್ಳ ,ಕಪಟಿ,
ಹೆಂಗಸರ ಸೀರೆ ಕದ್ದವ… ನಾನಾ ರೀತಿಯ ಅಪವಾದ,ಶಮಂತಕ ಮಣಿ ಕದ್ದವ ಎನಿಸಿದೆ ಮಣಿ ಸಿಕ್ಕರೂ ಹಣೇಪಟ್ಟಿ ಅಳಿಸಲಾಗಲಿಲ್ಲ.
ಬಯಸದೆ ಬಂದ ಜವಾಬ್ದಾರಿಯದು.ಯಾರೂ ನಿಜ ಅರ್ಥಾನುಸಂಧಾನ ಮಾಡಲೇ ಇಲ್ಲ.ನಾನು ಮಾಡಿಸಲು ಹೋದರೆ ನಿನ್ನನ್ನು
ನೀನು ಸಮರ್ಥನೆ ಮಾಡಿಕೋ ಬೇಡ… ಎನ್ನುವರು.
ನೀನಾದರೋ ರಾಜ ವೈಭವದ
ಭೋಜನ ಮಾಡಿದವ, ನಾನು??
ಜರಾಸಂಧನಿಂದ ಜನರ ಜೀವ ಉಳಿಸಲಿಕ್ಕಾಗಿ, ನಾನು ಊರಿನೆಲ್ಲರನ್ನೂ ಹೊರಡಿಸಿಕೊಂಡು ಮಥುರೆಯಿಂದ ದ್ವಾರಕೆಗೆ ಹೋಗಬೇಕಾಯಿತು. ಹೊಸ ಪರಿಸರ, ಹೊಸ ಜನ. ಅಂತಹ ಪರಿಸ್ಥಿತಿಯಲ್ಲಿ ಏನು ಮಾಡಬಹುದಿತ್ತು ಎಂದರೆ ನಾವು ಅಲ್ಲೆ ಇರಬೇಕಾಗಿ ಬಂತು. ಅಲ್ಲಿ ನಾವು ಬಿಡಾರ ಹೂಡಿ, ಹೊಸ ನಗರವನ್ನು ಕಟ್ಟಿಕೊಳ್ಳಬೇಕಾಗಿತ್ತು. ಮಥುರೆಯಿಂದ ಹೊರಟಾಗ ನಾನು ಕೇಳಿದ ಮಾತುಗಳಾದರೂ ಎಂಥಾದ್ದು! ಹೇಡಿ ಎಂದರು. ರಟ್ಟೆಯಲ್ಲಿ ಬಲವಿಲ್ಲದೆ, ಓಡಿಹೋಗುತ್ತಿದ್ದಾನೆ, ಎಂದರು. ಎಲ್ಲ ಗೇಲಿ, ಅಪಮಾನಗಳನ್ನೂ ಸ್ಥಿತಪ್ರಜ್ಞನಾಗಿ ನಾನು ಸಹಿಸಿಕೊಳ್ಳಬೇಕಾಯಿತು” ನನ್ನ ತಲ್ಲಣ ಯಾರಿಗೆ ಹೇಳಬೇಕು.!!!
”ಕರ್ಣ! ಕುರುಕ್ಷೇತ್ರದಲ್ಲಿ, ನೀನು ಗೆದ್ದದ್ದೇ ಆದರೆ ಧುರ್ಯೋದನನ ಪ್ರೀತಿಗೆ ನೀನು ಸಂಪೂರ್ಣವಾಗಿ, ಪಾತ್ರನಾಗುತ್ತಿದ್ದೆ ! ಪ್ರೀತಿಯಿಂದ ಅರ್ಧರಾಜ್ಯವನ್ನು, ನಿನಗೆ ಬಿಟ್ಟುಕೊಟ್ಟಾನೇನೋ. ಅಥವಾ ಸಿಂಹಾಸನದ ಪಕ್ಕದಲ್ಲೇ ಮತ್ತೂಂದನ್ನಿಟ್ಟು ನಿನ್ನನ್ನು ಕುಳ್ಳಿರಿಸಿಯಾನೋ ಏನೋ.! ಜಯದಿಂದ ಲಭಿಸುವ ಎಲ್ಲ ಭೋಗ ಭಾಗ್ಯಗಳಿಗೂ ನೀನು ವಾರಸುದಾರನಾಗಿರುತ್ತಿದ್ದೆ. ಆದರೆ ನನಗೆ? ಈ ಯುದ್ಧ ಗೆಲ್ಲಿಸಿಕೊಟ್ಟರೆ, ನನಗೇನು ಸಿಗುತ್ತದೆ ಎಂದು ಭಾವಿಸಿದ್ದಿ? ಅಣ್ಣತಮ್ಮಂದಿರು ಹೇಳುತ್ತಾರೆ – ನಮಗೆ ಬೇಡಿತ್ತು, ಆದರೂ ಆ ಕುಟಿಲ ಈ ಯುದ್ಧ ಮಾಡಿಸಿದ! ಲಕ್ಷಾಂತರ ಜನರ ಸಾವಿಗೆ ಕಾರಣನಾದ. ದಾಯಾದಿಗಳೇ ಪರಸ್ಪರ ಕೊಂದುಕೊಳ್ಳುವ ಹಾಗೆ ಮಾಡಿದ. ಅಣ್ಣತಮ್ಮಂದಿರು ಗುರುಹಿರಿಯರ ಎದುರೆದುರು ನಿಂತು ಸೆಣಸುವಂತೆ ಮಾಡಿದ”…. ಎಂದು.
ನಿನಗಾದರೆ ಮಿತ್ರ ಅಂತ ದುರ್ಯೋಧನ ಇದ್ದ!
ನನಗೆ???
ನಾನು ಸದಾ ಒಂಟಿ .
ಕರ್ಣ ! ಪ್ರತಿಯೊಬ್ಬನಿಗೂ ಜೀವನದಲ್ಲಿ ಒಂದಿಲ್ಲೊಂದು ಸವಾಲು ಇದ್ದೆ ಇರುತ್ತದೆ. ನಿನಗೆ ನಿನ್ನ ಜೀವನ ಅಗ್ನಿಕುಂಡ ಅನ್ನಿಸಿದರೆ ನನ್ನದನ್ನು ನೋಡು. ಈ ಜೀವನ ಯಾರಿಗೂ ಹೂವಿನ ಹಾಸಿಗೆಯಲ್ಲ. ಯಾರಿಗೂ ಸುಲಭ ಗ್ರಾಹ್ಯವೂ ಅಲ್ಲ. ಜೀವನದಲ್ಲಿ ಏನೇ ಏರುಪೇರುಗಳು ಬಂದರೂ, ಆ ಎಲ್ಲ ಸಂದರ್ಭಗಳಲ್ಲಿ ನೀನು ಏನನ್ನೇ ಮಾಡಿದರೂ ಯಾವುದು ಸರಿ ಎಂಬುದು ನಿನ್ನ ಒಳ ಮನಸ್ಸಿಗೆ ಗೊತ್ತಿರುತ್ತದೆ. ಅದನ್ನೇ ಧರ್ಮ ಎನ್ನುವುದು. ಆತ್ಮಸಾಕ್ಷಿ ಯಾವುದನ್ನು ನುಡಿಯುತ್ತದೋ! ಅದೇ ಧರ್ಮ. ಆತ್ಮಸಾಕ್ಷಿ ಸತ್ತ ದಿನ ನಾವು ಧರ್ಮದಿಂದ ವಿಮುಖರಾದೆವು, ಅಧರ್ಮಿಗಳಾದೆವು ಎಂದೇ ಅರ್ಥ. ನಾವೂ ಸಜೀವ ಹೆಣ.
ಧರ್ಮ ಎಂದರೆ ಇನ್ನೇನೋ ಅಲ್ಲ. ಅದೊಂದು ಸಹಜ ಮಾನವೀಯ ಪ್ರಕ್ರಿಯೆ.

ನಾವು ಎಷ್ಟೇ ಅನ್ಯಾಯಕ್ಕೊಳಗಾದರೂ ಎಷ್ಟೊಂದು ಅಪಮಾನಗಳನ್ನು ನುಂಗಬೇಕಾಗಿ, ಬಂದರೂ ಎಷ್ಟೊಂದು ಸಲ ಕೆಳಗೆ ಬಿದ್ದರೂ ಮೀಸೆ ಮಣ್ಣಾದರೂ ಮುಖ್ಯವಾಗುವುದು ಯಾವುದು ಗೊತ್ತಾ? ನಾವು ಆ ಪರಿಸ್ಥಿತಿಗಳಿಗೆ ಹೇಗೆ ಪ್ರತಿಕ್ರಿಯಿಸಿದೆವು ಎನ್ನುವುದು. ಜೀವನದಲ್ಲಿ ಮೇಲಿಂದ ಮೇಲೆ ಸಮಸ್ಯೆಗಳು, ದುಃಖಗಳು, ಅವಮಾನಗಳು ಬಂದವೆನ್ನುವುದು ನಾವು ತಪ್ಪು ಮಾಡಲು ನಮಗೆ ಸಿಗುವ ಪರವಾನಗಿಯಲ್ಲ. ಜೀವನದಲ್ಲಿ, ನಮ್ಮ ಬದುಕು ನಿರ್ಧಾರವಾಗುವುದು ನಾವು ಯಾವ , ಎಷ್ಟು ಬೆಲೆ ಬಾಳುವ ಚಪ್ಪಲಿಯನ್ನು ತೊಡುತ್ತೇವೆ ಎಂಬುದರಿಂದ ಅಲ್ಲ, ಯಾವ ದಾರಿಯಲ್ಲಿ ನಮ್ಮ ಹೆಜ್ಜೆಗಳನ್ನು ಇಡುತ್ತೇವೆ ಎಂಬುದರಿಂದ ಅದನ್ನು ಮೊದಲು ನಾವು ಅರ್ಥ ಮಾಡಿಕೊಳ್ಳಬೇಕು.
ಕಷ್ಟದ, ಕೆಂಡದ ದಾರಿಯನ್ನೇ ಹೂವಿನ ಹಾಸಿಗೆನ್ನಾಗಿ ಪರಿವರ್ತಿಸಿ ಕೊಳ್ಳಬೇಕು.
ನನ್ನ ದುಃಖವೇ ಅತೀ ಹೆಚ್ಚು ಯಾತನಾಮಯ ಅನ್ನುವವರು
ನಮಗಿಂತಲೂ ಸಾವಿರ ಪಾಲು ಇರುವ ಇತರರ ದುಃಖ,
ಯಾತನೆ, ಅನಾಥ ಪ್ರಜ್ಞೆ ಇವುಗಳನ್ನು ಮಾನದಂಡ ವಾಗಿರಿಸಿಕೊಳ್ಳಬೇಕು.
ಕರ್ಣನಿಗೆ ಇನ್ನೂ ಅನೇಕ ಉದಾಹರಣೆ ನೀಡಿ ಅವನಲ್ಲಿ
ಹುದುಗಿದ ಕೀಳರಿಮೆಯನ್ನು
ಕಿತ್ತೊಗೆದ.
ಇಲ್ಲಿ ಶ್ರೀ ಕೃಷ್ಣ ಬೋಧೆ
ನಮಗೆಲ್ಲ ಮಾರ್ಗದರ್ಶಿ …
ಈ ವಿಶಾಲ ವಾದ ಜಗದಲ್ಲಿ
ವೈವಿಧ್ಯತೆಗಳ ಮಧ್ಯವೇ ನಮ್ಮ ಸಮಸ್ಯೆ ಗಳಿಗೆ ಪರಿಹಾರ ವಿದೆ.
ಇಂತಹ ದಿವ್ಯ ಸಂದೇಶ ನೀಡಿದ ಶ್ರೀಕೃಷ್ಣ ಸದಾ ನಮ್ಮನ್ನು ಸನ್ಮಾರ್ಗದತ್ತ ಕರೆದೊಯ್ಯಲಿ.
ಕೃಷ್ಣಂ ವಂದೇ ಜಗದ್ಗುರು.

About The Author