ಡಬ್ಬಿ ಅಂಗಡಿ, ಎಗ್‌ರೈಸ್ ಸೆಂಟರ್, ಡಾಬಾಗಳಿಗೆ ಸಗಟು ಬಾಕ್ಸ್‌ಗಳ ಮದ್ಯ ಸಾಗಾಟದ ಗಂಭೀರ ಆರೋಪ ಅಬಕಾರಿ ಮತ್ತು ಪೊಲೀಸ್ ಇಲಾಖೆಯ ತ್ವರಿತ ಕಾನೂನು ಕ್ರಮಕ್ಕೆ ಸಾರ್ವಜನಿಕರ ಆಗ್ರಹ.

ರೋಣ ತಾಲೂಕಿನ ಪ್ರಮುಖ ವ್ಯಾಪಾರ ಹಾಗೂ ಐತಿಹಾಸಿಕ ಕೇಂದ್ರವಾದ ಬೆಳವಣಿಕಿ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಹಾಗೂ ಜೂಜಾಟದ ಚಟುವಟಿಕೆಗಳು ದಿನದಿಂದ ದಿನಕ್ಕೆ ಮಿತಿಮೀರುತ್ತಿದ್ದು ಸಾರ್ವಜನಿಕ ನೆಮ್ಮದಿಗೆ ಭಂಗ ತರುತ್ತಿವೆ. ಗ್ರಾಮದ ರೋಣ ರಸ್ತೆಯಲ್ಲಿರುವ ‘ಎಲ್.ವಿ ವೈನ್ಸ್’ ಮಳಿಗೆ ಸೇರಿದಂತೆ ಚಿಲ್ಲರೆ ಮದ್ಯ ಮಾರಾಟದ ಸನ್ನದು (CL-2) ಹೊಂದಿರುವ ಕಡೆ ಕೇವಲ ಸೀಲ್ಡ್ ಬಾಟಲ್ ಮಾರಾಟಕ್ಕೆ ಮಾತ್ರ ಸೀಮಿತವಾಗಿರದೆ ಕಾನೂನುಬಾಹಿರವಾಗಿ ಗ್ರಾಹಕರಿಗೆ ಸ್ಥಳದಲ್ಲೇ ಕುಳಿತು ಸೇವಿಸಲು ಐಷಾರಾಮಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂಬ ಗಂಭೀರ ಸಾರ್ವಜನಿಕ ದೂರುಗಳು ವ್ಯಕ್ತವಾಗಿವೆ.

ಕರ್ನಾಟಕ ಅಬಕಾರಿ ಕಾಯ್ದೆ 1965 ರ ನಿಯಮಗಳ ಪ್ರಕಾರ ಯಾವುದೇ CL-2 ಮಳಿಗೆಯು ನಿಗದಿತ ಮಿತಿಗಿಂತ ಹೆಚ್ಚಿನ ಪ್ರಮಾಣದ ಮದ್ಯವನ್ನು ಪರವಾನಗಿ ಇಲ್ಲದ ವ್ಯಕ್ತಿಗಳಿಗೆ ಅಥವಾ ವಾಣಿಜ್ಯ ಸ್ಥಳಗಳಿಗೆ ಸಗಟಾಗಿ ನೀಡುವಂತಿಲ್ಲ. ಆದರೆ ಬೆಳವಣಿಕಿ ಗ್ರಾಮದ ವ್ಯಾಪ್ತಿಯಲ್ಲಿ ರೋಣ ರಸ್ತೆಯ ಈ ಭಾಗದಿಂದಲೇ ಅಕ್ಕಪಕ್ಕದ ಸಣ್ಣಪುಟ್ಟ ಡಬ್ಬಿ ಅಂಗಡಿಗಳು, ಎಗ್‌ರೈಸ್ ಸೆಂಟರ್‌ಗಳು ಮತ್ತು ರಸ್ತೆಬದಿಯ ಡಾಬಾಗಳಿಗೆ ಪ್ರತಿನಿತ್ಯ ಬಾಕ್ಸ್‌ಗಟ್ಟಲೆ ಮದ್ಯವನ್ನು ಅಕ್ರಮವಾಗಿ ಸರಬರಾಜು ಮಾಡಲಾಗುತ್ತಿದೆ ಎಂಬ ಬಲವಾದ ಆರೋಪಗಳು ಕೇಳಿಬರುತ್ತಿವೆ.

ಇದರಿಂದಾಗಿ ಗ್ರಾಮದ ಹಳ್ಳಿ ಗಲ್ಲಿಗಳಲ್ಲಿಯೂ ಹಗಲು-ರಾತ್ರಿ ಎನ್ನದೆ ಅಕ್ರಮ ಮದ್ಯ ಸುಲಭವಾಗಿ ಲಭ್ಯವಾಗುತ್ತಿದ್ದು, ಕೂಲಿಕಾರ್ಮಿಕರು ಹಾಗೂ ಯುವ ಪೀಳಿಗೆ ದುಶ್ಚಟಗಳಿಗೆ ದಾಸರಾಗುತ್ತಿದ್ದಾರೆ.
ಮಟ್ಕಾ ದಂಧೆಯ ಜಾಲ
ಮದ್ಯದ ಅಕ್ರಮ ಚಟುವಟಿಕೆಗಳ ಜತೆಗೆ ಗ್ರಾಮದ ಕೆಲವೆಡೆ ಗುಪ್ತವಾಗಿ ಮಟ್ಕಾ (ಓಸಿ) ಜೂಜು ಕೂಡ ಸಕ್ರಿಯವಾಗಿದೆ ಎಂದು ಸ್ಥಳೀಯರು ಕಳವಳ ವ್ಯಕ್ತಪಡಿಸಿದ್ದಾರೆ. ದಿನವಿಡೀ ದುಡಿದ ಹಣವನ್ನು ಯುವಕರು ಮತ್ತು ಬಡ ಕಾರ್ಮಿಕರು ಈ ಜೂಜಾಟದಲ್ಲಿ ಕಳೆದುಕೊಳ್ಳುತ್ತಿದ್ದು, ಅನೇಕ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿವೆ.
ಇಲ್ಲಿಯವರೆಗೆ ಈ ಅಕ್ರಮಗಳು ಸ್ಥಳೀಯ ಮಟ್ಟದಲ್ಲಿ ಪರಿಶೀಲನೆಗೆ ಒಳಪಡದಿರುವುದು ಸಾರ್ವಜನಿಕರಲ್ಲಿ ಅಸಮಾಧಾನ ಮೂಡಿಸಿದೆ. ಆದರೆ ಕರ್ತವ್ಯನಿಷ್ಠ ಅಧಿಕಾರಿಗಳ ಮೇಲೆ ಜನತೆಗೆ ಇನ್ನೂ ಭರವಸೆ ಉಳಿದಿದೆ. ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಜಿಲ್ಲಾ ಅಬಕಾರಿ ಉಪ ಆಯುಕ್ತರು ಹಾಗೂ ರೋಣ ತಾಲೂಕು ಆಡಳಿತ ತಕ್ಷಣವೇ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಜಂಟಿ ವಿಶೇಷ ತನಿಖಾ ತಂಡವನ್ನು ರಚಿಸಿ ಆಕಸ್ಮಿಕ ದಾಳಿಗಳನ್ನು ನಡೆಸಬೇಕಿದೆ. ನಿಯಮಬಾಹಿರವಾಗಿ ನಡೆಯುತ್ತಿರುವ ಬಾರ್ ವ್ಯವಸ್ಥೆ, ಡಾಬಾಗಳಿಗೆ ಅಕ್ರಮ ಪೂರೈಕೆ ಜಾಲ ಹಾಗೂ ಮಟ್ಕಾ ದಂಧೆಗೆ ಕಾನೂನಿನ ಚೌಕಟ್ಟಿನಲ್ಲಿ ಶಾಶ್ವತ ಕಡಿವಾಣ ಹಾಕಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಬಾಕ್ಸ್…
ಬೆಳವಣಿಕಿ ಗ್ರಾಮ ಹಾಗೂ ಸುತ್ತಮುತ್ತ ನಡೆಯುತ್ತಿರುವ ಈ ಅಕ್ರಮ ಜಾಲ ಇಲ್ಲಿಗೆ ನಿಂತಿಲ್ಲ. ಈ ದಂಧೆಯ ಆಳ-ಅಗಲ, ಮದ್ಯ ಪೂರೈಕೆಯ ಮಾರ್ಗಗಳು ಮತ್ತು ಇದರ ಹಿಂದಿರುವ ವ್ಯವಸ್ಥಿತ ಜಾಲದ ಕುರಿತು ಇನ್ನಷ್ಟು ಸ್ಪೋಟಕ ಹಾಗೂ ದಾಖಲೆ ಸಮೇತ ಮಾಹಿತಿಗಳು ನಮ್ಮ ಮಾಧ್ಯಮಕ್ಕೆ ಲಭ್ಯವಾಗುತ್ತಿದ್ದು, ಹಂತ-ಹಂತವಾಗಿ ಸಂಪೂರ್ಣ ಸತ್ಯಾಸತ್ಯತೆಯನ್ನು ಸಾರ್ವಜನಿಕರು ಹಾಗೂ ಸಂಬಂಧಪಟ್ಟ ಉನ್ನತ ಅಧಿಕಾರಿಗಳ ಮುಂದಿಡಲಾಗುವುದು.



