20 ವರ್ಷಗಳ ಹೋರಾಟಕ್ಕೆ ಸ್ಪಂದನೆ ಯಾವಾಗ? ಬೇಡಿಕೆ ಈಡೇರದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ
ರಾಮದುರ್ಗ: ಲೋಕಾಪುರ–ರಾಮದುರ್ಗ–ಸವದತ್ತಿ–ಧಾರವಾಡ ಮಾರ್ಗವಾಗಿ ಹೊಸ ರೈಲು ಸಂಪರ್ಕ ಕಲ್ಪಿಸುವಂತೆ ಆಗ್ರಹಿಸಿ, ರೈಲು ಮಾರ್ಗ ಹಾಗೂ ಮಹಾದಾಯಿ ನದಿ ಅಭಿವೃದ್ಧಿ ಸೇವಾ ಸಂಘದ ವತಿಯಿಂದ ತಹಶೀಲ್ದಾರ್ರ ಮೂಲಕ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಬಸೀರಅಹ್ಮದ ಭೈರಕದಾರ, ಕಳೆದ 20 ವರ್ಷಗಳಿಂದ ಈ ಭಾಗದ ಅಭಿವೃದ್ಧಿಗಾಗಿ ವಿವಿಧ ಸಂಘಟನೆಗಳ ಸಹಯೋಗದಲ್ಲಿ ನಿರಂತರ ಹೋರಾಟ ನಡೆಸಲಾಗುತ್ತಿದೆ. ರಾಮದುರ್ಗ ಪ್ರದೇಶದ ಸಮಗ್ರ ಅಭಿವೃದ್ಧಿಗೆ ಹೊಸ ರೈಲು ಮಾರ್ಗ ಅತ್ಯಂತ ಅಗತ್ಯವಾಗಿದ್ದು, ಸರ್ಕಾರ ಈ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.
ಕೃಷಿ, ಕೈಗಾರಿಕೆ ಮತ್ತು ವ್ಯಾಪಾರಕ್ಕೆ ರೈಲು ಸಂಪರ್ಕದ ಬಲ
ರಾಮದುರ್ಗ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಕ್ಕರೆ ಕಾರ್ಖಾನೆಗಳು, ಕೈಗಾರಿಕೆಗಳು ಮತ್ತು ನೇಕಾರಿಕೆ ಉದ್ಯಮಗಳು ಪ್ರಮುಖ ಪಾತ್ರ ವಹಿಸುತ್ತಿವೆ. ಈ ಭಾಗಕ್ಕೆ ರೈಲ್ವೆ ಸಂಪರ್ಕ ಕಲ್ಪಿಸಿದರೆ ಕೃಷಿ ಉತ್ಪನ್ನಗಳ ಸಾಗಣೆ ಸುಲಭವಾಗುವುದರ ಜೊತೆಗೆ ಕೈಗಾರಿಕಾ ಬೆಳವಣಿಗೆ, ವ್ಯಾಪಾರ ವಹಿವಾಟು ಹಾಗೂ ಉದ್ಯೋಗಾವಕಾಶಗಳಿಗೆ ಹೆಚ್ಚಿನ ಉತ್ತೇಜನ ದೊರೆಯಲಿದೆ. ರೈಲು ಮಾರ್ಗದಿಂದ ರೈತರು, ಉದ್ಯಮಿಗಳು, ವ್ಯಾಪಾರಸ್ಥರು ಹಾಗೂ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದು ಸಂಘದ ಪದಾಧಿಕಾರಿಗಳು ಅಭಿಪ್ರಾಯಪಟ್ಟರು.
ಧಾರ್ಮಿಕ ಪ್ರವಾಸೋದ್ಯಮಕ್ಕೂ ಹೊಸ ಚೈತನ್ಯ
ರಾಮದುರ್ಗ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಲವು ಪ್ರಸಿದ್ಧ ಧಾರ್ಮಿಕ ಹಾಗೂ ಪ್ರವಾಸಿ ತಾಣಗಳಿವೆ. ರಾಮದುರ್ಗದ ಶಬರಿಕೊಲ್ಲ, ಮೇಗುಂಡಪ್ಪ ಕೊಳ್ಳ, ಹೂವಿನಕೊಳ್ಳ, ಮುಳ್ಳೂರು ಘಾಟ್ನ ಶಿವನಮೂರ್ತಿ, ಗೊಡಚಿ ಶ್ರೀ ವೀರಭದ್ರೇಶ್ವರ ದೇವಸ್ಥಾನ ಹಾಗೂ ಸವದತ್ತಿಯ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನಗಳಿಗೆ ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಮತ್ತು ಪ್ರವಾಸಿಗರು ಆಗಮಿಸುತ್ತಾರೆ.
ಈ ಪ್ರದೇಶಗಳಿಗೆ ರೈಲ್ವೆ ಸಂಪರ್ಕ ಕಲ್ಪಿಸಿದರೆ ಭಕ್ತರು ಹಾಗೂ ಪ್ರವಾಸಿಗರ ಪ್ರಯಾಣ ಸುಲಭವಾಗುವುದರ ಜೊತೆಗೆ ಧಾರ್ಮಿಕ ಪ್ರವಾಸೋದ್ಯಮದ ಬೆಳವಣಿಗೆಗೂ ಸಹಕಾರಿಯಾಗಲಿದೆ. ಸ್ಥಳೀಯ ವ್ಯಾಪಾರ ಮತ್ತು ಆರ್ಥಿಕ ಚಟುವಟಿಕೆಗಳಿಗೂ ಉತ್ತೇಜನ ದೊರೆಯಲಿದೆ ಎಂದು ಮನವಿಯಲ್ಲಿ ತಿಳಿಸಲಾಯಿತು.
95 ಕಿ.ಮೀ. ರೈಲು ಮಾರ್ಗದ ಪೂರ್ವಭಾವಿ ಸಮೀಕ್ಷೆ
ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಅವರ ಪ್ರಯತ್ನದಿಂದ ರಾಮದುರ್ಗ ರೈಲ್ವೆ ಸಂಪರ್ಕದ ಬೇಡಿಕೆಗೆ ಮೊದಲ ಹಂತದ ಪ್ರಗತಿ ದೊರೆತಿದೆ. ಲೋಕಾಪುರದಿಂದ ಧಾರವಾಡದವರೆಗೆ ರಾಮದುರ್ಗ, ಶಿರಸಂಗಿ ಹಾಗೂ ಸವದತ್ತಿ ಮಾರ್ಗವಾಗಿ ಹಾದುಹೋಗುವ ಸುಮಾರು 95 ಕಿಲೋಮೀಟರ್ ಉದ್ದದ ಹೊಸ ರೈಲು ಮಾರ್ಗದ ಪೂರ್ವಭಾವಿ ಸಮೀಕ್ಷೆಗೆ ಚಾಲನೆ ದೊರೆತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಎಂದು ಸಂಘದ ಅಧ್ಯಕ್ಷರು ಹೇಳಿದರು.
ಇದೇ ಸಂದರ್ಭದಲ್ಲಿ ಮಹಾದಾಯಿ ನದಿ ಯೋಜನೆಯನ್ನು ತ್ವರಿತಗೊಳಿಸುವುದು ಹಾಗೂ ವಸತಿರಹಿತ ಬಡವರಿಗೆ ಆಶ್ರಯ ಮನೆಗಳನ್ನು ಒದಗಿಸುವಂತೆಯೂ ಸರ್ಕಾರವನ್ನು ಒತ್ತಾಯಿಸಲಾಯಿತು.
ಈ ಭಾಗದ ಜನರ ಬಹುದಿನಗಳ ಬೇಡಿಕೆಗಳನ್ನು ಸರ್ಕಾರ ಶೀಘ್ರವಾಗಿ ಈಡೇರಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಸಂಘದ ಪದಾಧಿಕಾರಿಗಳು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾದ ಶಶಿಕಾಂತ್ ನೆಲ್ಲೂರ್, ಡಿ.ಎಫ್. ಹಾಜಿ, ವಿ.ಜಿ. ನಾಡಗೌಡ್ರ, ಗಾಯತ್ರಿ ದೇವಾಂಗಮಠ, ಕಾಶಿಮ ಪಡದಾರ, ದಾದಾಪೀರ ಕೆರೂರ, ಎನ್.ಎ. ಅಕ್ಕೋಜಿ ಹಾಗೂ ಶ್ರೀಕಾಂತ್ ಪೂಜಾರ, ಪರವೇಜ ಫಣಿಬಂದ್, ಶಿವಾನಂದ ಮಿಲಾನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.



