12 August 2026
Advertisement
ರಾಜ್ಯ

ಮಾಹಿತಿ ಹಕ್ಕು ಅರ್ಜಿದಾರರಿಗೆ ಕಪ್ಪು ಪಟ್ಟಿಗೆ ಸೇರಿಸುವ ಮತ್ತು ದಂಡ ವಿಧಿಸುವ ಯಾವುದೇ ಅಧಿಕಾರ ಇಲ್ಲವೆಂದು ಸ್ಪಷ್ಟ ಪಡಿಸಿದ ಕರ್ನಾಟಕ ಮಾಹಿತಿ ಆಯೋಗ..!!

WhatsApp Group Join Now

ಮಾಹಿತಿ ಹಕ್ಕು ಅಧಿನಿಯಮ, 2005 ರಡಿ ಮಾಹಿತಿ ಕೋರಿ ಸಲ್ಲಿಕೆಯಾಗಿರುವ ಅರ್ಜಿ ಬಗ್ಗೆ.
ಕರ್ನಾಟಕ ಮಾಹಿತಿ ಆಯೋಗಕ್ಕೆ ಆರ್ಜಿದಾರರು/ಸಾರ್ವಜನಿಕರು ಮಾಹಿತಿ ಹಕ್ಕು ಅಧಿನಿಯಮ 2005ರ ಅಡಿಯಲ್ಲಿ ಕಲಂ 19(3)ರಲ್ಲಿ ದ್ವಿತೀಯ ಮೇಲ್ಮನವಿ ಸಲ್ಲಿಸಿದ ನಂತರ ಅರ್ಜಿದಾರರನ್ನು ಕಪ್ಪು ಪಟ್ಟಿಗೆ ಸೇರಿಸುವುದು ಹಾಗೂ ಒಂದು ಅರ್ಜಿಗೆ ಒಂದು ಸಾವಿರ ದಂಡ ವಿಧಿಸುವ ಯಾವುದೇ ಅಧಿಕಾರ ಇಲ್ಲವೆಂದು ಸ್ಪಷ್ಟ ಪಡಿಸಿದ ಕರ್ನಾಟಕ ಮಾಹಿತಿ ಆಯೋಗ

ಮಾಹಿತಿ ಹಕ್ಕು ಕಾಯಿದೆಯಡಿ ಮಾಹಿತಿ ಕೇಳುವ ನಾಗರಿಕರನ್ನು ‘ಕಪ್ಪು ಪಟ್ಟಿ’ಗೆ ಸೇರಿಸುತ್ತಿರುವ ಕರ್ನಾಟಕ ಮಾಹಿತಿ ಆಯೋಗದ ವಿಲಕ್ಷಣ ಮತ್ತು ಕಾನೂನು ಬಾಹಿರವಾಗಿದ್ದು, ಇಂತಹ ನಡವಳಿಕೆಯ ವಿರುದ್ಧ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮಾಹಿತಿ ನೀಡಬೇಕಾದ ಆಯೋಗವೇ ನಾಗರಿಕರ ಹಕ್ಕನ್ನು ಹತ್ತಿಕ್ಕಲು ಮುಂದಾಗಿದೆ ಎಂಬ ಆರೋಪಗಳು ವ್ಯಕ್ತವಾಗಿವೆ.

ಇತ್ತೀಚೆಗೆ ಕರ್ನಾಟಕ ಮಾಹಿತಿ ಆಯೋಗವು ನೀಡಿರುವ ಹಿಂಬರಹವೊಂದು(ಸಂಖ್ಯೆ: ಕ.ಮಾ.ಆ/605/ ಪಿ. ಐ. ಓ /2025) ಸ್ವತಃ ಆಯೋಗದ ಮಿತಿಗಳನ್ನು ಬಯಲು ಮಾಡಿದೆ. ದ್ವಿತೀಯ ಮೇಲ್ಮನವಿ ಸಲ್ಲಿಸಿದ ನಂತರ ಅರ್ಜಿದಾರರನ್ನು ಕಪ್ಪು ಪಟ್ಟಿಗೆ ಸೇರಿಸಲು ಅಥವಾ ಒಂದು ಅರ್ಜಿಗೆ ₹1,000 ದಂಡ ವಿಧಿಸಲು ಮಾಹಿತಿ ಹಕ್ಕು ಕಾಯಿದೆ 2005ರ ಯಾವುದೇ ಕಲಂ ಅಥವಾ ಸೆಕ್ಷನ್ನಲ್ಲಿ ಅವಕಾಶವಿಲ್ಲ ಎಂದು ಆಯೋಗವೇ ಒಪ್ಪಿಕೊಂಡಿದೆ.

ಹೀಗಿದ್ದರೂ ಕೂಡಾ, ರಾಜ್ಯದ ಹಲವು ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಅರ್ಜಿದಾರರನ್ನು ಕಪ್ಪು ಪಟ್ಟಿಗೆ ಸೇರಿಸಿರುವುದು ಆಯೋಗದ ವೈಫಲ್ಯವನ್ನು ಎತ್ತಿ ತೋರಿಸುತ್ತದೆ. ಮಾಹಿತಿ ಕೇಳುವವರ ಮೇಲೆ ನಿರ್ಬಂಧ ಹೇರಲು ಹೊರಟಿದ್ದ ಅಧಿಕಾರಿಗಳಿಗೆ ಒರಿಸ್ಸಾ ಉಚ್ಛ ನ್ಯಾಯಾಲಯವು (WP (C) 29216/2025) ತಕ್ಕ ಪಾಠ ಕಲಿಸಿದೆ. ವರ್ಷಕ್ಕೆ ಕೇವಲ 12 ಅರ್ಜಿ ಸಲ್ಲಿಸಬೇಕು ಎಂಬ ಆಯೋಗದ ಆದೇಶವನ್ನು ನ್ಯಾಯಾಲಯವು ವಜಾಗೊಳಿಸಿದೆ.

ನಾಗರಿಕರಿಗೆ ಮಾಹಿತಿ ಕೇಳುವ ಹವ್ಯಾಸವಿದ್ದರೂ ಕೂಡ, ಅವರ ಹಕ್ಕನ್ನು ಕಸಿದುಕೊಳ್ಳುವುದು ಕಾನೂನು ಬಾಹಿರವೆಂದು ನ್ಯಾಯಾಲಯ ಗುಡುಗಿದೆ.

ಕರ್ನಾಟಕ ಕಾರ್ಮಿಕ ಕಲ್ಯಾಣ ಪ್ರತಿಷ್ಠಾನದ ಮಧ್ಯ ಕರ್ನಾಟಕ ಪ್ರಾಂತ್ಯದ ಅಧ್ಯಕ್ಷ ಸಿ ಪಿ ತಿಪ್ಪೇಸ್ವಾಮಿ ಈ ಕುರಿತು ರಾಜ್ಯ ಮುಖ್ಯ ಮಾಹಿತಿ ಆಯುಕ್ತರಿಗೆ ಪತ್ರ ಬರೆದು ತೀವ್ರವಾಗಿ ಖಂಡಿಸಿದ್ದು, “ಒರಿಸ್ಸಾ ಉಚ್ಛ ನ್ಯಾಯಾಲಯದ ತೀರ್ಪು ನಾಗರಿಕರ ಹಕ್ಕನ್ನು ಎತ್ತಿ ಹಿಡಿದಿದೆ. ಕರ್ನಾಟಕದಲ್ಲಿ ಮಾಹಿತಿ ಅಧಿಕಾರಿಗಳು ಮನಬಂದಂತೆ ಅರ್ಜಿದಾರರನ್ನು ಕಪ್ಪು ಪಟ್ಟಿಗೆ ಸೇರಿಸಿರುವುದು ಕಾನೂನಿನ ಉಲ್ಲಂಘನೆ. ಕೂಡಲೇ ಇಂತಹ ಎಲ್ಲ ಕಾನೂನು ಬಾಹಿರ ‘ಕಪ್ಪು ಪಟ್ಟಿ’ಗಳನ್ನು ಹಿಂಪಡೆಯಬೇಕು” ಎಂದು ಒತ್ತಾಯಿಸಿದ್ದಾರೆ.

ಮಾಹಿತಿ ಕೇಳುವುದು ನಾಗರಿಕರ ಸಾಂವಿಧಾನಿಕ ಹಕ್ಕು. ಅದನ್ನು ಹತ್ತಿಕ್ಕಲು ಕಪ್ಪು ಪಟ್ಟಿಯಂತಹ ಬೆದರಿಕೆ ತಂತ್ರಗಳನ್ನು ಬಳಸುತ್ತಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲೇಬೇಕಿದೆ.

About The Author