ಚಿಕ್ಕೋಡಿ ಉಪ ಲೋಕಾಯುಕ್ತ ನ್ಯಾಯಮೂರ್ತಿಗಳಾದ ನ್ಯಾ. ವೀರಪ್ಪ ಅವರು ಗುರುವಾರ
ಚಿಕ್ಕೋಡಿಯ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ಅನೀರಿಕ್ಷಿತ ಭೇಟಿ ನೀಡಿ ಪರಿಶೀಲಿಸಿದರು.

ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿನ ವೈದ್ಯರು, ಸಿಬ್ಬಂದಿಗಳ ಹಾಜರಾತಿ ವಹಿ ಪರಿಶೀಲಿಸಿದ ಅವರು ಆಸ್ಪತ್ರೆಗೆ ವೈದ್ಯರು ಹಾಗೂ ಸಿಬ್ಬಂದಿಗಳು ನಿಗದಿತ ಸಮಯಕ್ಕೆ ಬಾರದೆ ಇರುವುದು ಹಾಗೂ ಮುಂಚೆಯೆ ಸಹಿ ಮಾಡಿ ಆಸ್ಪತ್ರೆಗೆ ಬಾರದೆ ಇರುವುದನ್ನು ಗಮನಿಸಿ ಆಕ್ರೋಶ ವ್ಯಕ್ತ ಪಡಿಸಿದರು
ಆಸ್ಪತ್ರೆಯ ಔಷಧ ಉಗ್ರಾಣ ಹಾಗೂ ರೋಗಿಗಳಿಗೆ ವಿತರಿಸುವ ಔಷಧಿಗಳನ್ನು ಪರಿಶೀಲಿಸಿ ಉಗ್ರಾಣದ ಸ್ವಚ್ಛತೆ ಹಾಗೂ ಅಚ್ಚುಕಟ್ಟಾದ ನಿರ್ವಹಣೆ ಕುರಿತು ಪಾಠ ಮಾಡಿದರು.
ಆಸ್ಪತ್ರೆಯ ಹೆರಿಗೆ ವಿಭಾಗದಲ್ಲಿ ದಾಖಾಲದ ಬಾಣಂತಿಯವರೊಂದಿಗೆ ಸಮಾಲೋಚನೆ ನಡೆಸಿ ಆಸ್ಪತ್ರೆಯಲ್ಲಿ ನೀಡಲಾಗುತ್ತಿರುವ ಚಿಕಿತ್ಸೆ ಹಾಗೂ ಒದಗಿಸುವ ಸೌಲಭ್ಯಗಳ ಮಾಹಿತಿ ಪಡೆದು ಶಸ್ತ್ರ ಚಿಕಿತ್ಸ ವಿಭಾಗಕ್ಕೆ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆಗಳನ್ನು ಕಂಡು ಸರಕಾರಿ ಆಸ್ಪತ್ರೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಹೆರಿಗೆ ವಿಭಾಗದ ವಿವಿಧ ಕಡತಗಳನ್ನು ಪರಿಶೀಲಿಸಿ ಹೆರಿಗೆಗೆ ದಾಖಲಾಗುವ ಗರ್ಭಿಣಿಯರ ದಾಖಲೆಗಳನ್ನು ಸಮರ್ಪಕವಾಗಿ ನಿರ್ವಹಿಸದೆ ಇರುವದನ್ನು ಗಮನಿಸಿದ ಅವರು ಗರ್ಭಿಣಿಯರ ತಪಾಸಣೆ ವೇಳೆ ಅವರ ತಾಯಿ ಕಾರ್ಡ, ಆಧಾರ ಕಾರ್ಡ, ರೇಶನ್ ಕಾರ್ಡ ಮುಂತಾದ
ದಾಖಲೆಗಳನ್ನು ಪಡೆದು ರೆಜಿಸ್ಟರಗಳಲ್ಲಿ ನಮೂದಿಸಲು ತಿಳಿಸಿದರು. ಗರ್ಭಿಣಿಯರ ವಿವಿಧ ತಪಾಸಣೆಗಾಗಿ ಖಾಸಗಿ ಆಸ್ಪತ್ರೆ ಹಾಗೂ ಸ್ಕ್ಯಾನ್ ಸೆಂಟರಗಳಿಗೆ ಕಳುಹಿಸುತ್ತಿರುವುದರ ಕುರಿತು ಕಳವಳ ವ್ಯಕ್ತಪಡಿಸಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಹಾಗೂ ತಾಲೂಕು ವೈಧ್ಯಾಧಿಕಾರಿಗಳು ನಿಯಮಿತವಾಗಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸದೆ ಇರುವುದನ್ನು ಗಮನಿಸಿ ತರಾಟೆಗೆ ತೆಗೆದುಕೊಂಡರು.
ಗರ್ಭಿಣಿಯರಿಗೆ ಆಸ್ಪತ್ರೆಗೆ ಆಗಮಿಸಲು ಅನುಕೂಲವಾಗುವಂತೆ ಸೂಕ್ತ ಬಸ ವ್ಯವಸ್ಥೆ ಕಲ್ಪಿಸಬೇಕು. ಅಗತ್ಯ ಬಿದ್ದಲ್ಲಿ ಮುಖ್ಯ ರಸ್ತೆಯಿಂದ ಆಸ್ಪತ್ರೆ ವರೆಗೆ ಅಂಬ್ಯುಲೆನ್ಸಗಳನ್ನು ಬಳಸಿಕೊಳ್ಳಲು ತಿಳಿಸಿದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿಗಳಾದ ಅರವಿಂದ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎನ್.ಶಶಿಕುಮಾರ, ಲೋಕಾಯುಕ್ತ ಎಸ್.ಪಿ. ಪ್ರಸನ್ ದೇಸಾಯಿ, ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಉಪ ವಿಭಾಗಾಧಿಕಾರಿ ಎಸ್.ಎಸ್.ಸಂಪಗಾವಿ, ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕರವು ಬಮನಗಾರಪ್ಪನವರ, ತಹಶೀಲ್ದಾರ ಆರ್.ಆರ್.ಬುರ್ಲಿ, ಜಿಲ್ಲಾ ಆರೊಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಈಶ್ವರ ಗಡಾದ ಇದ್ದರು



