ಧಾರವಾಡ ಸ್ಪರ್ಧಾತ್ಮಕತೆಯನ್ನು ಹೊಂದಿದ ಕ್ಷೇತ್ರ ಪತ್ರಿಕೋದ್ಯಮವಾಗಿದೆ. ದಿನಪತ್ರಿಕೆಗಳು ದಿನನಿತ್ಯ ಸುದ್ಧಿ, ಜಾಹೀರಾತು, ಪ್ರಕಟಣೆಯಲ್ಲಿ ಪಾರದರ್ಶಕತೆ ಹಾಗೂ ಸಮಾಜದ ಅನೇಕ ಸವಾಲುಗಳನ್ನು ಎದುರಿಸುತ್ತವೆ. ಪತ್ರಕರ್ತರು ಪಾರದರ್ಶಕವಾಗಿ ಸುದ್ದಿಗಳನ್ನು ಪ್ರಕಟಿಸುವದರಿಂದ ಅನೇಕ ಸಾಮಾಜಿಕ ತೊಡಕುಗಳು ನಿವಾರಣೆಯಾಗಲು ಸಾಧ್ಯವಾಗುತ್ತದೆ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಕುಲಸಚಿವ ಡಾ.ಶಂಕರೆಪ್ಪ ವಣಿಕ್ಯಾಳ ಅವರು ಹೇಳಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಕರ್ನಾಟಕ ವಿಶ್ವವಿದ್ಯಾಲಯ ಪತ್ರಿಕೋದ್ಯಮದ ವಿಭಾಗದ ಸಹಯೋಗದಲ್ಲಿ ಕವಿವಿ ಕನಕ ಅಧ್ಯಯನ ಪೀಠದ ಸಭಾಂಗಣದಲ್ಲಿ ಆಯೋಜಿಸಿದ್ದ ಮೀಡಿಯಾ ಫೆಸ್ಟ್ 2026 ರ ಸಮಾರೋಪ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಪತ್ರಕರ್ತರು ತಮ್ಮ ಪಕ್ಷಾತೀತ ಮತ್ತು ನಿರ್ಭಿಡೆಯ ಕೆಲಸದಿಂದ ಸಮಾಜಕ್ಕೆ ಮಾರ್ಗದರ್ಶಕರಾಗಿದ್ದಾರೆ. ವ್ಯವಸ್ಥೆಯ ಅಂಕುಡೊಂಕು ತಿದ್ದಲು ಪ್ರತಿನಿತ್ಯ ಅವರು ಪ್ರಕಟಿಸುವ ವಿವಿಧ ರೀತಿಯ ಸುದ್ದಿಗಳು ಸಹಕಾರಿಯಾಗಿವೆ. ಪತ್ರಕರ್ತನಿಗೆ ಅನ್ಯಾಯ, ಅವ್ಯವಸ್ಥೆ ಎದುರಿಸುವ ತಾಕತ್ತು ಇರಬೇಕು. ಯಾವುದೇ ಮುಲಾಜುಗಳಿಗೆ ಒಳಗಾಗದೇ ಸದಾಕಾಲ ಸತ್ಯದ ಪರವಾಗಿ ನಿಲ್ಲಬೇಕು. ಇದು ಪತ್ರಿಕೋದ್ಯಮದ ವೃತ್ತಿಪರತೆಯನ್ನು ಮತ್ತು ಪತ್ರಕರ್ತನ ವ್ಯಕ್ತಿಗೌರವವನ್ನು ಸಮಾಜದಲ್ಲಿ ಎತ್ತಿಹಿಡಿಯುತ್ತದೆ ಎಂದು ಅವರು ಅಭಿಪ್ರಾಯ ಪಟ್ಟರು.
ಪತ್ರಕರ್ತ ಹೆಚ್ಚು ಶ್ರಮಜೀವಿ ಮತ್ತು ವಿವಿಧ ಕ್ಷೇತ್ರಗಳ ಅಪಾರ ಅನುಭವ ಮತ್ತು ಮುಂದಾಲೋಚನೆಗಳನ್ನು ಹೋಂದಿರುವ ಪ್ರಭಾವಿ ವ್ಯಕ್ತಿ. ಇಂದು ಶೋಕಿಗಾಗಿ ಪತ್ರಿಕೆ ಆರಂಭಿಸುವ, ಪತ್ರಕರ್ತರಾಗುವ ಸಂಖ್ಯೆ ಹೆಚ್ಚುತ್ತಿದೆ. ಇಂತಹ ವ್ಯಕ್ತಿ, ವ್ಯವಸ್ಥೆಯಿಂದ ಮಾಧ್ಯಮದ ನೈತಿಕತೆ ಹಾಗೂ ವಿಶ್ವಾರ್ಹತೆ ಕಡಿಮೆಯಾಗುತ್ತದೆ. ಇಂತಹದಕ್ಕೆ ಹಿರಿಯ ಪತ್ರಕರ್ತರು ಹಾಗೂ ಸಮಾಜದ ಏಳಿಗೆ ಮತ್ತು ಹಿತಾಸಕ್ತಿ ಕಾಪಾಡುವ ಮಾಧ್ಯಮಗಳ ಮುಖ್ಯಸ್ಥರು ಕಡಿವಾಣ ಹಾಕಬೇಕೆಂದು ಅವರು ಹೇಳಿದರು.
ಪತ್ರಕರ್ತರು ನಾವೀನ್ಯತೆಯನ್ನು ರೂಢಿಸಿಕೊಳ್ಳಬೇಕು. ಪತ್ರಿಕಾ ವೃತ್ತಿಯಲ್ಲಿ ಲೋಪದೋಷಗಳು ಆಗುವುದು ಸಹಜ. ಅವುಗಳನ್ನು ಸರಿಪಡಿಸಿಕೊಂಡು ಮುನ್ನಡೆಯಬೇಕು. ಪತ್ರಿಕಾ ರಂಗದಲ್ಲಿ ಸಾಕಷ್ಟು ತಾಂತ್ರಿಕ ಮತ್ತು ವೈಜ್ಞಾನಿಕ ಕ್ರಾಂತಿಯಾಗಿದೆ. ಇಂದಿನ ಸವಾಲುಗಳನ್ನು ಎದುರಿಸಲು ಯಾವ ರೀತಿಯಲ್ಲಿ ತಯಾರಾಗಬೇಕು ಎಂಬುದನ್ನು ಪತ್ರಿಕೋದ್ಯಮ ವಿದ್ಯಾರ್ಥಿಗಳು ಕಲಿಯಬೇಕು. ಹಿರಿಯ ಪತ್ರಕರ್ತರಿಂದ ಕಿರಿಯ ಪತ್ರಕರ್ತರು ವಿವಿಧ ವಿಷಯಗಳನ್ನು, ಅನುಭವಗಳನ್ನು ತಿಳಿದುಕೊಳ್ಳಬೇಕಿದೆ ಎಂದು ಅವರು ತಿಳಿಸಿದರು.
ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಧಾರವಾಡ ಜಿಲ್ಲಾ ಅಧ್ಯಕ್ಷರಾಗಿರುವ ವಿಜಯ ಕರ್ನಾಟಕ ದಿನಪತ್ರಿಕೆಯ ಹುಬ್ಬಳ್ಳಿ ಸ್ಥಾನಿಕ ಸಂಪಾದಕರಾದ ಬಂಡು ಕುಲಕರ್ಣಿ ಅವರು ಮಾತನಾಡಿ, ಪತ್ರಿಕೆಯನ್ನು ಓದುವವರಿಗಿಂತ ನೋಡುವವರ ಸಂಖ್ಯೆ ಹೆಚ್ಚಾಗಿದೆ. ಪತ್ರಿಕೆಯಿಂದ ಓದಿ ತಿಳಿದುಕೊಳ್ಳುವ ವಿಷಯವನ್ನು ಜನರು ಮೊದಲೇ ತಿಳಿದುಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಿಂದ ಪ್ರತಿಯೊಬ್ಬ ನಾಗರೀಕರು ಪತ್ರಕರ್ತರಾಗಿ ಪರಿವರ್ತನೆ ಆಗುತ್ತಿದ್ದಾರೆ. ವರದಿಗಾರಿಕೆಗೆ ಯಾವುದೇ ಚೌಕಟ್ಟು ಇಲ್ಲ. ಇಂದಿನ ಪತ್ರಿಕಾ ಮಾಧ್ಯಮದಲ್ಲಿ ಭಾμÁ ಶುದ್ಧತೆ ಕಡಿಮೆಯಾಗಿದೆ. ಬರವಣೆಗೆಯಲ್ಲಿ ಬಳಸುವ ಭಾμÉ ಜನಸಾಮಾನ್ಯರಿಗೆ ತಿಳಿಯುವಂತೆ ಬರೆಯುವುದು ಅವಶ್ಯಕವಾಗಿದೆ. ಹಿಂದಿನ ಕಾಲದಲ್ಲಿ ಪತ್ರಕರ್ತರು ಯಾವುದೇ ಪತ್ರಿಕೋದ್ಯಮ ಪದವಿಯನ್ನು ಹೊಂದಿರಲಿಲ್ಲ. ಅವರಿಗೆ ಸಮಾಜದ ಬಗ್ಗೆ ತುಡಿತ ಹಾಗೂ ಸಮಾಜಮುಖಿಯಾಗಿ ಕಾರ್ಯನಿರ್ವಹಿಸುವ ಹಂಬಲವಿತ್ತು ಎಂದರು.
ಕನ್ನಡ ಪ್ರಭ ದಿನಪತ್ರಿಕೆಯ ಹುಬ್ಬಳ್ಳಿ ಸ್ಥಾನಿಕ ಸಂಪಾದಕರಾದ ಮಲ್ಲಿಕಾರ್ಜುನ ಸಿದ್ದಣ್ಣವರ ಅವರು ಮಾತನಾಡಿ, ಪತ್ರಿಕೋದ್ಯಮದಲ್ಲಿ ತನಿಖಾ, ಅಭಿವೃದ್ಧಿ, ಮಹಿಳಾ ಪತ್ರಿಕೋದ್ಯಮವಿತ್ತು. ಮಾಧ್ಯಮವನ್ನು ಸಮಾಜದ ಕಾವಲು ನಾಯಿ ಎಂದು ಹೇಳಲಾಗುತ್ತಿತ್ತು. ಮಾಧ್ಯಮದವರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಇಂದು ಮೂಲ ಕರ್ತವ್ಯವನ್ನು ಪತ್ರಕರ್ತರು ಮರೆತಿದ್ದಾರೆ. ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಕಾರ್ಯವನ್ನು ಪತ್ರಕರ್ತರು ಮಾಡಬೇಕಿದೆ. ಪತ್ರಕರ್ತರ ಮೂಲ ಧ್ಯೇಯ, ಸತ್ಯ, ನ್ಯಾಯ, ಧ್ವನಿ ಇಲ್ಲದವರ ಪರವಾಗಿ ನಿಲ್ಲುವುದಾಗಿದೆ. ಹಿರಿಯ ಪತ್ರಕರ್ತರಾದ ದಿ|| ಮದನ ಮೋಹನ ಅವರು 40 ವರ್ಷಕ್ಕೂ ಅಧಿಕ ಕಾಲ ಮಾಧ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದರು. ಅವರ ಸೇವೆಯನ್ನು ಇಲ್ಲಿ ಸ್ಮರಿಸಬಹುದು. ವಿದ್ಯಾರ್ಥಿಗಳು ಪತ್ರಿಕೋದ್ಯಮವನ್ನು ಆಳವಾಗಿ ಅಧ್ಯಯನ ಮಾಡಬೇಕು ಎಂದು ಅವರು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ಕವಿವಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಡಾ. ಸಂಜೀವಕುಮಾರ ಮಾಲಗತ್ತಿ ವಹಿಸಿದ್ದರು. ಕವಿವಿ ಪತ್ರಿಕೋದ್ಯಮ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಡಾ.ಎ.ಎಸ್.ಬಾಲಸುಬ್ರಮಣ್ಯ ಅವರು ವೇದಿಕೆಯಲ್ಲಿದ್ದರು.
ವಾರ್ತಾ ಇಲಾಖೆಯ ಉಪನಿರ್ದೇಶಕ ಗುರುನಾಥ ಕಡಬೂರ ಅವರು ಸ್ವಾಗತಿಸಿದರು. ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ (ಪ್ರ) ಡಾ. ಸುರೇಶ ಹಿರೇಮಠ ನಿರೂಪಿಸಿ, ಕಾರ್ಯಕ್ರಮವನ್ನು ನಿರ್ವಹಿಸಿದರು. ಗೀತಾ ಚವ್ಹಾಣ ಬಹುಮಾನ ವಿತರಣೆ ಪಟ್ಟಿ ಪ್ರಸ್ತುತಪಡಿಸಿದರು. ಕವಿವಿ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕ ಪೆÇ್ರ. ಜೆ.ಎಮ್. ಚಂದುನವರ ವಂದಿಸಿದರು.
ಕಾರ್ಯಕ್ರಮದಲ್ಲಿ ವಾರ್ತಾ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಬಸವರಾಜ ಕಂಬಿ, ಹಿರಿಯ ಪತ್ರಕರ್ತ ಸುಭಾಷ್ ಹೂಗಾರ, ಪ್ರಸನ್ನಕುಮಾರ ಹಿರೇಮಠ, ಪತ್ರಿಕೋದ್ಯಮದ ಸಹಾಯಕ ಪ್ರಾಧ್ಯಾಪಕರಾದ ಡಾ. ವೆಂಕನಗೌಡ ಪಾಟೀಲ, ಡಾ.ಪ್ರಭಾಕರ ಕಾಂಬಳೆ, ಡಾ.ವಿಶ್ವನಾಥ ಚಿಂತಾಮಣಿ, ಡಾ.ಚಿದಾನಂದ ಕಮ್ಮಾರ, ಡಾ.ರವೀಂದ್ರ ಜಲರಡ್ಡಿ, ಡಾ.ಮಂಜುನಾಥ ಅಡಿಗಲ್, ವಿಜಯಲಕ್ಷ್ಮಿ ಅಕ್ಕಿಹಾಳ, ಬಿರೇಶ ತಿರಕಪ್ಪನವರ ಹಾಗೂ ಹಿರಿಯ ಪತ್ರಕರ್ತರಾದ ರಾಜು ವಿಜಾಪುರ, ಬಸವರಾಜ ಇದ್ಲಿ, ವಿಜಯ ಹೂಗಾರ, ಬಸವರಾಜ ಹೊಂಗಲ್, ನಿಜಗುಣಿ ದಿಂಡಲಕೊಪ್ಪ, ಮಂಜುನಾಥ ಅಂಗಡಿ, ಬಸವರಾಜ ಹಿರೇಮಠ, ಜಗದೀಶ ಹೊಂಬಳ, ಸಂಜಯ್ಯ ಚಿಕ್ಕಮಠ, ನಾಗೇಂದ್ರ ಖಾರ್ವಿ, ಶಿವಸಂಗಯ್ಯ ಹಿರೇಮಠ, ನಾಗರಾಜ ಸುಣಗಾರ ಸೇರಿದಂತೆ ವಿವಿಧ ಮಾಧ್ಯಮ ಪ್ರತಿನಿಧಿಗಳು, ವಿವಿಧ ಪತ್ರಿಕೋದ್ಯಮ ಕಾಲೇಜುಗಳ ಪ್ರಾಧ್ಯಾಪಕರು, ವಿದ್ಯಾರ್ಥಿಗಳು, ವಾರ್ತಾ ಇಲಾಖೆಯ ಸಿಬ್ಬಂದಿ ಹಾಗೂ ಇತರರು ಉಪಸ್ಥಿತರಿದ್ದರು.



