ಪ್ರೌಢಶಾಲಾ ಹಂತದಲ್ಲಿ ವಿದ್ಯಾರ್ಥಿನಿಯರು ಎದುರಿಸುತ್ತಿರುವ ಲೈಂಗಿಕ ಕಿರುಕುಳ ಮತ್ತು ಹಲವು ರೀತಿಯ ಸಮಸ್ಯೆಗಳನ್ನು ಹೋಗಲಾಡಿಸಲು ಪಾಲಕರು ಮತ್ತು ಮಕ್ಕಳಲ್ಲಿ ಕಾನೂನು ಅರಿವಿನ ಅಗತ್ಯತೆ ಇದೆ ಎಂದು ನ್ಯಾಯವಾದಿ ಎಸ್ ಆರ್ ಪಾಟೀಲ್ ಅಭಿಪ್ರಾಯಪಟ್ಟರು.

ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಕಗದಾಳ ಗ್ರಾಮದ ಸರ್ಕಾರಿ ಪ್ರೌಢ ಶಾಲೆ ಕಗದಾಳದಲ್ಲಿ ,ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಬೆಳಗಾವಿ ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಪೋಕ್ಸೋ ಕಾಯ್ದೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ,ಬಾಲ ಕಾರ್ಮಿಕ ನಿಷೇಧ ಕಾಯ್ದೆ, ಮಕ್ಕಳ ಸಹಾಯವಾಣಿ, ಸುರಕ್ಷಿತ ಸ್ಪರ್ಶ ಮತ್ತು ಅಸುರಕ್ಷಿತ ಸ್ಪರ್ಶ”ಕುರಿತು ಹಮ್ಮಿಕೊಂಡ ಕಾನೂನು ಅರಿವು” ಕಾರ್ಯಕ್ರಮವನ್ನು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮೇಲಿನಂತೆ ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲೆಯ ಮುಖ್ಯೋಪಾಧ್ಯಾಯರಾದಆರ್ ಸಿ ರಾಠೋಡ ಮಾತನಾಡಿ ಇತ್ತೀಚೆಗೆ ಲೈಂಗಿಕ ಕಿರುಕುಳ ,ಬಾಲ್ಯ ವಿವಾಹ ,ಬಾಲಕಾರ್ಮಿಕ ಪದ್ಧತಿ ಗಳಿಂದಾಗಿ ಸಮಾಜದ ಸ್ವಾಸ್ಥ್ಯ ಕೆಡುತ್ತಿದ್ದು ಶಾಲಾ ಮಕ್ಕಳು ಮತ್ತು ಪಾಲಕರು ಈ ಬಗ್ಗೆ ಸರಿಯಾದ ತಿಳುವಳಿಕೆಯನ್ನು ಪಡೆಯಲು ಮತ್ತು ಕಿರುಕುಳ ನೀಡುವವರ ಮೇಲೆ ಕ್ರಮ ಕೈಗೊಳ್ಳಲು ಸರ್ಕಾರ ಜಾರಿಗೆ ತಂದ ಮಕ್ಕಳ ಸಹಾಯವಾಣಿಯನ್ನು ಸಮರ್ಪಕವಾಗಿ ಬಳಕೆ ಮಾಡಿ ,ದೂರು ಸಲ್ಲಿಸಲು ಕರೆ ನೀಡಿದರು. ಪಾಲಕರೂ ಸಹ ಸಣ್ಣ ವಯಸ್ಸಿನಲ್ಲಿ ಬಾಲ್ಯ ವಿವಾಹದಂತ ಕೆಲಸಕ್ಕೆ ಕೈಹಾಕದಿರಲು ಮತ್ತು ಇಂತಹ ಸಮಸ್ಯೆಗಳ ನಿವಾರಣೆಗೆ ಸ್ಥಳೀಯ ಜನಪ್ರತಿನಿಧಿಗಳ ಮತ್ತು ಸಾರ್ವಜನಿಕರ ಸಹಕಾರದ ಅಗತ್ಯತೆ ಇದೆ ಎಂದು ತಿಳಿಸಿದರು. ಶಿಕ್ಷಕರಾದ ಜೆ ಕೆ ಪಾಟೀಲ್ ರವರು ಬಾಲ್ಯ ವಿವಾಹ ನಿಷೇಧ ಕಾಯ್ದೆ ಬಗ್ಗೆ, ಬಿ ಜಿ ಪಾಟೀಲ್ ರವರು ಬಾಲ ಕಾರ್ಮಿಕ ನಿಷೇಧ ಕಾಯ್ದೆ ಬಗ್ಗೆ, ಎಚ್ ಎನ್ ಯಡ್ರಾವಿ ಪೋಕ್ಸೋ ಕಾಯ್ದೆ ಬಗ್ಗೆ, ಬಿ ಎಚ್ ನದಾಫ ಮಕ್ಕಳ ಸಹಾಯವಾಣಿ ಬಗ್ಗೆ,ಡಿ ಬಿ ಕೊಡ್ಲಿ ಸುರಕ್ಷಿತ ಮತ್ತು ಅಸುರಕ್ಷಿತ ಸ್ಪರ್ಶದ ಬಗ್ಗೆ , ವಿವರವಾದ ಮಾಹಿತಿಯನ್ನು ನೀಡಿದರು. ನಂತರ ಮಕ್ಕಳೊಂದಿಗೆ ಸಂವಾದ ಕಾರ್ಯಕ್ರಮವನ್ನು ಜರುಗಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಎಸ್ ಡಿ ಎಂ ಸಿ ಉಪಾಧ್ಯಕ್ಷರಾದ ಮಾಯಪ್ಪ ರಾ ಜೋತೆನ್ನವರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿಯರಾದ ಆರ್ ಸಿ ರಾಮದುರ್ಗ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಪಾಲಕರು ಉಪಸ್ಥಿತರಿದ್ದರು. ಶಿಕ್ಷಕರಾದ ಎಸ್ ವ್ಹಿ ಶೆಟ್ಟರ್ ಸ್ವಾಗತಿಸಿದರು. ಡಿ ಬಿ ಕೊಡ್ಲಿ ಕಾರ್ಯಕ್ರಮ ನಿರೂಪಿಸಿದರು. ಬಸವರಾಜ್ ಜೊತೆನ್ನವರ ವಂದಿಸಿದರು.



