ಎಇಇ ಅಜಯಸಿಂಗ್ ರಜಪೂತ ನಿವಾಸದ ಮೇಲೆ ಲೋಕಾಯುಕ್ತ ದಾಳಿ : 14 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆ

WhatsApp Group Join Now

ಬೆಳಗಾವಿ : ಭ್ರಷ್ಟಾಚಾರ ತಡೆ ಕಾಯ್ದೆಯಡಿ ದಾಖಲಾಗಿದ್ದ ಪ್ರಕರಣದ ಹಿನ್ನೆಲೆ, ಲೋಕಾಯುಕ್ತ ಪೊಲೀಸರು ಬೆಳಗಾವಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ (ಎಇಇ) ಅಜಯಸಿಂಗ್ ಬಾಪುಸಿಂಗ್ ರಜಪೂತ ಅವರ ನಿವಾಸದ ಮೇಲೆ ಶುಕ್ರವಾರ ದಾಳಿ ನಡೆಸಿ, ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಯನ್ನು ಪತ್ತೆಹಚ್ಚಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ರಜಪೂತ ಅವರ ಮನೆ, ಕಚೇರಿ ಹಾಗೂ ಬ್ಯಾಂಕ್ ಲಾಕರ್ ಸೇರಿದಂತೆ ಒಟ್ಟು ಏಳು ಸ್ಥಳಗಳಲ್ಲಿ ಏಕಕಾಲದಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ. ದಾಳಿಯ ವೇಳೆ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಲಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.

ಶೋಧ ಕಾರ್ಯಾಚರಣೆ ವೇಳೆ ಬೆಳಗಾವಿ ನಗರದಲ್ಲಿ ಮೂರು ಮನೆಗಳು, ಸವದತ್ತಿ, ಹುಕ್ಕೇರಿ ಹಾಗೂ ಹುಬ್ಬಳ್ಳಿ ನಗರಗಳಲ್ಲಿ ಐದು ನಿವೇಶನಗಳು ಪತ್ತೆಯಾಗಿವೆ. ಇದರೊಂದಿಗೆ 5 ಕೆಜಿ 960 ಗ್ರಾಂ ಚಿನ್ನ ಮತ್ತು ವಜ್ರಾಭರಣಗಳು, 5 ಕೆಜಿ ಬೆಳ್ಳಿ ವಸ್ತುಗಳು, ಸುಮಾರು 3.12 ಕೋಟಿ ರೂ. ಮೌಲ್ಯದ ಬ್ಯಾಂಕ್ ಸ್ಥಿರ ಠೇವಣಿಗಳು (ಎಫ್‌ಡಿಗಳು), ಒಂದು ಕಾರು ಹಾಗೂ ಒಂದು ಬೈಕ್‌ನ್ನು ವಶಕ್ಕೆ
ಪಡೆಯಲಾಗಿದೆ. ಒಟ್ಟಾರೆ 14 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದ್ದು, ತನಿಖೆ ಮುಂದುವರಿದಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.

About The Author