ಬೆಳಗಾವಿ, ಲಿಂಗಾಯತ ಸಂಘಟನೆ ವತಿಯಿಂದ ಇಂದು ಬೆಳಗಾವಿಯ ಮಹಾಂತೇಶ ನಗರದಲ್ಲಿರುವ ವಚನ ಪಿತಾಮಹ ಡಾ. ಪ.ಗು. ಹಳಕಟ್ಟಿ ಭವನದಲ್ಲಿ “ವೈರಾಗ್ಯ ನಿಧಿ ಅಕ್ಕ ಮಹಾದೇವಿ ಜಯಂತಿ” ಆಚರಣೆ ಅಂಗವಾಗಿ ಅನುಭಾವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಿದ ಡಾ. ಸಿದ್ಧಣ್ಣ ವಾಲಿಶೆಟ್ಟಿ ಸಹಾಯಕ ಪ್ರಾಧ್ಯಾಪಕರು ಮಹಾಂತೇಶ ನಗರ ರಹವಾಸಿಗಳ ಸಂಘದ ಶಿಕ್ಷಣ ಮಹಾವಿದ್ಯಾಲಯ ಅವರು ಮಾತನಾಡಿ, 12ನೇ ಶತಮಾನದಲ್ಲಿ ಕರ್ನಾಟಕದಲ್ಲಿ ಹುಟ್ಟಿದ ಮಹಾನ್ ಸ್ತ್ರೀ ಸಂತೆಯಾದ ಅಕ್ಕ ಮಹಾದೇವಿ ಅವರು ಭಕ್ತಿ, ವೈರಾಗ್ಯ ಮತ್ತು ಆತ್ಮಜ್ಞಾನಕ್ಕೆ ಪ್ರತೀಕವಾಗಿದ್ದಾರೆ ಎಂದು ಹೇಳಿದರು.
ಭೌತಿಕ ಸಂಪತ್ತು ಹಾಗೂ ಆಸೆ-ಆಕಾಂಕ್ಷೆಗಳಿಂದ ದೂರವಿದ್ದು ಆತ್ಮಶಾಂತಿಯನ್ನು ಸಾಧಿಸುವುದೇ ಅಕ್ಕನ ಸಂದೇಶವಾಗಿದ್ದು, ಅವರ ಜೀವನವೇ ಶುದ್ಧ ಭಕ್ತಿಗೆ ಉತ್ತಮ ಉದಾಹರಣೆಯಾಗಿದೆ ಎಂದು ವಿವರಿಸಿದರು.
ದೇವರೊಂದಿಗೆ ನೇರ ಸಂಬಂಧ ಬೆಳೆಸಿಕೊಳ್ಳುವುದು ಮತ್ತು ತನ್ನೊಳಗಿನ ಆತ್ಮವನ್ನು ಅರಿಯುವುದೇ ಜೀವನದ ಗುರಿ ಎಂದು ಅವರು ತಿಳಿಸಿದರು. ಸಮಾಜದಲ್ಲಿ ಲಿಂಗಭೇದ ಹಾಗೂ ವರ್ಣಭೇದಗಳನ್ನು ವಿರೋಧಿಸಿದ ಅಕ್ಕ ಮಹಾದೇವಿಯವರು ಸಮಾನತೆಯ ಸಂದೇಶವನ್ನು ಸಾರಿದ ಮಹಾನ್ ಚಿಂತಕಿ ಎಂದು ಹೇಳಿದರು.
ಇಂದಿನ ಜೀವನದಲ್ಲಿಯೂ ಅವರ ತತ್ವಗಳನ್ನು ಅಳವಡಿಸಿಕೊಂಡರೆ ಶಾಂತಿಯುತ ಮತ್ತು ಅರ್ಥಪೂರ್ಣ ಬದುಕನ್ನು ನಡೆಸಲು ಸಾಧ್ಯವೆಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಲಿಂಗಾಯತ ಸಂಘಟನೆಯ ಅಧ್ಯಕ್ಷರಾದ ಶರಣ ಈರಣ್ಣ ದೇಯನ್ನವರ ಅವರು ಮಾತನಾಡಿ, ಅಕ್ಕ ಮಹಾದೇವಿಯವರ ಭಕ್ತಿ ಕರ್ತವ್ಯವಲ್ಲ, ಅದು ಪ್ರೀತಿ ಮತ್ತು ಬದುಕಾಗಿದೆ ಎಂದು ಹೇಳಿದರು.
ವೈರಾಗ್ಯ ಎಂದರೆ ಓಡಿಹೋಗುವುದು ಅಲ್ಲ, ಅದು ಒಳಗಿನ ಶಕ್ತಿಯ ಅಭಿವ್ಯಕ್ತಿ ಎಂದು ವಿಶ್ಲೇಷಿಸಿದರು.
ಶರಣ ಸುರೇಶ ನರಗುಂದ ಅವರು ಸಾಮೂಹಿಕ ಪ್ರಾರ್ಥನೆಯನ್ನು ನಡೆಸಿಕೊಟ್ಟರು. ಶ್ರೀ ವಿ. ಕೆ ., ಪಾಟೀಲ ರವರು ವಚನಗಳನ್ನು ವಿಶ್ಲೇಷಣೆ ಮಾಡಿದರು, ಶ್ರೀಎಂ. ವೈ. ಮೆಣಸಿನಕಾಯಿ ಅವರು ಅತಿಥಿಗಳನ್ನು ಪರಿಚಯಿಸಿ, ಸ್ವಾಗತಿಸಿದರು ಶರಣೆ ಕಲ್ಪನಾ ಗುತ್ತಿಗೋಳಿ ದಾಸೋಹ ಸಲ್ಲಿಸಿದರು ಆನoದ ಕರಕಿ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಗುರುಸಿದ್ಧಪ್ಟ ರೇವಣ್ಣವರ, ಸದಾಶಿವ ದೇವರಮನಿ, ಶಶಿಭೂಷಣ ಪಾಟೀಲ,ಬಸವರಾಜ ಕರಡಿಮಠ,ಶಂಕರ ಗುಡಸ,ಬಸವರಾಜ ಬಿಜ್ಜರಗಿ, ಜಯಶ್ರೀ ಚವಲಗಿ, ನoದಾ ಬಗಲಿ, ರುದ್ರಮ್ಮ ಅಕ್ಕನವರ, ಶಿವಲೀಲಾ ಗೌಡರ,ಪ್ರಸಾದ ಹಿರೇಮಠ ಸೇರಿದಂತೆ ಅನೇಕ ಭಕ್ತರು ಮತ್ತು ಸಂಘಟನೆಯ ಸದಸ್ಯರು ಉಪಸ್ಥಿತರಿದ್ದರು.



