ಅತಿಥಿ ಉಪನ್ಯಾಸಕರ ಸೇವೆ ಅನನ್ಯ- ಡಾ ರಾಜು ಕಂಬಾರ

WhatsApp Group Join Now

ರಾಮದುರ್ಗ: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಪಾಠ ಪ್ರವಚನಗಳನ್ನು ಮಾಡುತ್ತಿರುವ ಅತಿಥಿ ಉಪನ್ಯಾಸಕರ ಸೇವೆ ಅನನ್ಯವಾದದ್ದಾಗಿದೆ ಎಂದು ರಾಜ್ಯ ಅತಿಥಿ ಉಪನ್ಯಾಸಕರ ಸಂಘಟನೆಯ ಮುಖಂಡ ಡಾ. ರಾಜು ಕಂಬಾರ ಹೇಳಿದರು.
ಪಟ್ಟಣದ ಎಸ್ಐಎಸ್ ಯಾದವಾಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿ ವಯೋ ನಿವೃತ್ತಿ ಹೊಂದಿದ ಅತಿಥಿ ಉಪನ್ಯಾಸಕ ಶಂಕರ ಚುಳುಕಿ ಅವರನ್ನು ಸತ್ಕರಿಸಿ,ಅಭಿನಂದನೆ ಸಲ್ಲಿಸಿ ಮಾತನಾಡಿದ ಕಂಬಾರರು, ರಾಜ್ಯದಲ್ಲಿ ಸುಮಾರು 10000 ಮೇಲ್ಪಟ್ಟು ಅತಿಥಿ ಉಪನ್ಯಾಸಕರು ಕಳೆದ ಎರಡು ದಶಕಗಳಿಂದ ಸೇವೆ ಸಲ್ಲಿಸುತ್ತಾ, ಉನ್ನತ ಶಿಕ್ಷಣಕ್ಕೆ ಅಪಾರವಾದ ಕೊಡುಗೆಯನ್ನು ಸಲ್ಲಿಸಿದ್ದಾರೆ. ರಾಜ್ಯದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಅತಿಥಿ ಉಪನ್ಯಾಸಕರು ತಮ್ಮ ಜೀವವನ್ನು ಸವೇಶಿ, ಮೇಣದಬತ್ತಿಯಂತೆ ತಮ್ಮನ್ನು ತಾವು ಕರಗಿಸಿಕೊಂಡು, ಮಕ್ಕಳಿಗೆ ವಿದ್ಯಾದಾನ ಮಾಡಿರುವುದು ಅತಿಥಿ ಉಪನ್ಯಾಸಕರ ನಿಷ್ಕಾಮ್ಯ ಸೇವೆಯ ಸಂಕೇತವಾಗಿದೆ.
ತಮ್ಮ ಬದುಕನ್ನೇ ಮಕ್ಕಳ ಶೈಕ್ಷಣಿಕ ಭವಿಷ್ಯ ರೂಪಿಸುವಲ್ಲಿ ಮುಡುಪಾಗಿಟ್ಟ ಅತಿಥಿ ಉಪನ್ಯಾಸಕರ ಬದುಕು ಇಂದು ಅತ್ಯಂತ ಚಿಂತಾಜನಕ ಸ್ಥಿತಿಯಲ್ಲಿದೆ. ರಾಮದುರ್ಗ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹತ್ತಾರು ವರ್ಷಗಳಿಂದ ಸೇವೆ ಸಲ್ಲಿಸಿದ ಶಂಕರ ಚುಳುಕಿ ಅಂಥ ಅನೇಕ ರಾಜ್ಯದ ಅತಿಥಿ ಉಪನ್ಯಾಸಕರು ಹತ್ತಾರು ವರ್ಷಗಳಿಂದ ಸೇವೆ ಸಲ್ಲಿಸಿ, ಸೇವಾ ಭದ್ರತೆಯು ದೊರೆಯದೆ, ಖಾಯಮಾತಿಯೂ ಆಗದೆ ವಯೋ ಸಹಜತೆಯಿಂದಾಗಿ ಸೇವಾ ನಿವೃತ್ತಿಯನ್ನು ಹೊಂದುವಂತಾಗಿದೆ ಎಂದ ಕಂಬಾರರು ಮುಂದುವರೆದು,
ಸರ್ಕಾರ ನಿಜವಾಗಲೂ ಅತಿಥಿ ಉಪನ್ಯಾಸಕರ ಬಗ್ಗೆ ಕಾಳಜಿ ಇದ್ದರೆ ತಕ್ಷಣವೇ ಅತಿಥಿ ಉಪನ್ಯಾಸಕರ ಧೂಳು ಹಿಡಿದ ಕಡತವನ್ನು ಮಾನ್ಯ ಮುಖ್ಯಮಂತ್ರಿಗಳು ಮತ್ತು ಉನ್ನತ ಶಿಕ್ಷಣ ಸಚಿವರು ತಮ್ಮ ಬಳಿ ತರಿಸಿಕೊಂಡು ಅತಿಥಿ ಉಪನ್ಯಾಸಕರ ಸೇವೆಯನ್ನು ಖಾಯಂಗೊಳಿಸುವ ಮಹತ್ವದ ಕಾರ್ಯಕ್ಕೆ ಸರ್ಕಾರ ಕೈ ಹಾಕಿದರೆ ಇನ್ನು ಅದೆಷ್ಟು ನಿವೃತ್ತಿಯ ಅಂಚಿನಲ್ಲಿರುವ ಅತಿಥಿ ಉಪನ್ಯಾಸಕರ ಭವಿಷ್ಯ ಸುಸ್ಥಿರಗೊಂಡಂಗಾಗುತ್ತದೆ. ನಮ್ಮೆಲ್ಲರ ಹೋರಾಟದ ಫಲವಾಗಿ ಸರ್ಕಾರ ಅತಿಥಿ ಉಪನ್ಯಾಸಕರು ಸೇವಾ ನಿವೃತ್ತಿಯನ್ನು ಹೊಂದುವಾಗ, ಕೇವಲ ಐದು ಲಕ್ಷ ರೂಪಾಯಿಗಳನ್ನು ಇಡಗಂಟು ನೀಡುತ್ತಿದೆ. ಅದರ ಹೊರತಾಗಿ ಯಾವ ಸೌಲಭ್ಯಗಳು ಇರುವುದಿಲ್ಲ. ತತ್ತಕ್ಷಣದಿಂದಲೇ ಸರ್ಕಾರ ನಮ್ಮ ಅತಿಥಿ ಉಪನ್ಯಾಸಕರ ಸೇವೆಯ ಅನನ್ಯತೆಯನ್ನು ಗಮನಿಸಿಕೊಂಡು, ನಿವೃತ್ತಿಯ ಸಂದರ್ಭದಲ್ಲಿ ಅತಿಥಿ ಉಪನ್ಯಾಸಕರಿಗೆ ಇ ಡಗಂಟನ್ನು 5 ಲಕ್ಷದಿಂದ 25 ಲಕ್ಷ ರೂಪಾಯಿಗೆ ಹೆಚ್ಚಿಸಬೇಕು. ಅಂದಾಗ ಮಾತ್ರ ನಿವೃತ್ತಿಯ ಸಂದರ್ಭದಲ್ಲಿ ಸ್ವಲ್ಪಾದರೂ ಅತಿಥಿ ಉಪನ್ಯಾಸಕ ತನ್ನ ಜೀವನವನ್ನು ಖುಷಿಯಾಗಿಟ್ಟುಕೊಳ್ಳಲು ಸಾಧ್ಯವಾಗುತ್ತದೆ. ಇಲ್ಲವಾದರೆ ಇಡೀ ಬದುಕನ್ನೇ ಮಕ್ಕಳ ಭವಿಷ್ಯಕ್ಕಾಗಿ ಮೀಸಲಿಟ್ಟ ಅತಿ ಉಪನ್ಯಾಸಕನ ಬದುಕು ನಿರರ್ಥಕವಾಗುತ್ತದೆ.
ಸರ್ಕಾರ ಅತಿಥಿ ಉಪನ್ಯಾಸಕರ ಸೇವೆಯನ್ನು ಗಮನದಲ್ಲಿ ಇರಿಸಿಕೊಂಡು, ಸೇವಾ ಭದ್ರತೆ ಅಥವಾ ಕಾಯ ಮಾತಿಯನ್ನು ಮಾಡಬೇಕೆಂದರು.
ಈ ಸಂದರ್ಭದಲ್ಲಿ ಅತಿಥಿ ಉಪನ್ಯಾಸಕರಾದ ವಿ ಎಸ್ ಲಕ್ಕನಗೌಡರ, ಯಲ್ಲಪ್ಪ ಕುರಿ, ಪರಶುರಾಮ ಮುಕಾರಿ, ಡಾ. ವೈ ಎಸ್ ಹೊಸಮನಿ, ಪುಷ್ಪ ಮುಳ್ಳೂರ, ಮಾಲಾ ಹಾಲೋಳ್ಳಿ, ಐ. ಆರ್. ಜಕಾತಿ, ಪ್ರವೀಣ ಅಂಗಡಿ, ಮುಂತಾದವರಿದ್ದರು.

ಫೋಟೋ ಕ್ಯಾಪ್ಸನ್ :21 RMD 01: ರಾಮದುರ್ಗ ಪಟ್ಟಣದ ಎಸ್ಐಎಸ್ ಯಾದವಾಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕ ಶಂಕರ ಚುಳುಕಿ ಅವರ ಸೇವಾ ನಿವೃತ್ತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ರಾಜ್ಯ ಅತಿಥಿ ಉಪನ್ಯಾಸಕರ ಸಂಘಟನೆ ಮುಖಂಡ ಡಾ. ರಾಜು ಕಂಬಾರ ಮಾತನಾಡಿದರು.

About The Author