ಬೆಂಗಳೂರು: ಬಿಬಿಎಂಪಿಯ (ಈಗ ಗ್ರೇಟರ್ ಬೆಂಗಳೂರು ಪ್ರಾಧಿಕಾರ) 2023-24ನೇ ಸಾಲಿನ ಸಾಲಿನ ಹಣಕಾಸು ನಿರ್ವಹಣೆಯಲ್ಲಿ ಭಾರಿ ಅಕ್ರಮ ನಡೆದಿದ್ದು, 1950.82 ಕೋಟಿ ರೂ. ದುರ್ಬಳಕೆಯಾಗಿರುವುದು ಲೆಕ್ಕ ಪರಿಶೋಧನಾ ವರದಿಯಿಂದ ಬೆಳಕಿಗೆ ಬಂದಿದೆ.
ಪಾಲಿಕೆಯ 2022-23ನೇ ಸಾಲಿನ ಆರ್ಥಿಕ ವರ್ಷಕ್ಕೆ ಸಂಬಂಧಿಸಿದಂತೆ 376 ಪುಟಗಳ ಲೆಕ್ಕ ಪರಿಶೋಧನಾ ವರದಿ ಸಿದ್ಧಪಡಿಸಿದ್ದು, ಇದರಲ್ಲಿ ಸಾಮಾನ್ಯ ಆಡಳಿತ, ಕಾಮಗಾರಿ, ಕಂದಾಯ, ನಗರ ಯೋಜನೆ, ತೋಟಗಾರಿಕೆ, ಹಣಕಾಸು, ಅರಣ್ಯ, ಆರೋಗ್ಯ ಮತ್ತು ಶಿಕ್ಷಣ ವಿಭಾಗಗಳಲ್ಲಿ ನಡೆದಿರುವ ಅವ್ಯವಹಾರಗಳನ್ನು ಬಯಲು ಮಾಡಲಾಗಿದೆ. ಒಟ್ಟು 1950.82 ಕೋಟಿ ರೂ. ಅಕ್ರಮ ನಡೆದಿದ್ದು, ಈ ಪೈಕಿ 1704.69 ಕೋಟಿ ರೂ. ಮೊತ್ತಕ್ಕೆ ಆಕ್ಷೇಪಣೆ ಸಲ್ಲಿಸಲಾಗಿದೆ. 246.12 ಕೋಟಿ ರೂ.ಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಂದ ವಸೂಲು ಮಾಡುವಂತೆ ಶಿಫಾರಸು ಮಾಡಲಾಗಿದೆ.
ಈ ವಿಭಾಗಗಳಲ್ಲಿ ನಡೆದಿರುವ ಕಾನೂನುಬಾಹಿರ ಪಾವತಿ, ಅಧಿಕಾರಿ, ಸಿಬ್ಬಂದಿಯ ಬೇಜವಾಬ್ದಾರಿತನ ಹಾಗೂ ಕರ್ತವ್ಯ ನಿರ್ಲಕ್ಷ್ಯದಿಂದ ಉಂಟಾಗಿರುವ ಆರ್ಥಿಕ ನಷ್ಟ, ಇನ್ನಿತರೆ ನ್ಯೂನತೆಗಳ ಕುರಿತು ಅಂಕಿ-ಅಂಶಗಳ ಸಹಿತ ವಿವರಣಾತ್ಮಕ ಅಂಶಗಳನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಪಾಲಿಕೆಯಲ್ಲಿ ಚುನಾಯಿತ ಕೌನ್ಸಿಲರ್‌ಗಳ ಅಧಿಕಾರಾರವಧಿ 2020ರ ಸೆ.10ಕ್ಕೆ ಅಂತ್ಯಗೊಂಡಿತು. ಆಗಿನಿಂದಲೂ ನಗರದಲ್ಲಿಅಧಿಕಾರಿಗಳೇ ಆಡಳಿತ ನಿರ್ವಹಿಸುತ್ತಿದ್ದಾರೆ. ಆದರೆ, ಭ್ರಷ್ಟಾಚಾರಕ್ಕೆ ಕಡಿವಾಣ ಬಿದ್ದಿಲ್ಲ.
ಕಾಮಗಾರಿಗಳ ಅನುಷ್ಠಾನ ಮತ್ತು ಸಾಮಗ್ರಿಗಳ ಖರೀದಿಯಲ್ಲಿ ಕೆಟಿಪಿಪಿ ಕಾಯಿದೆಯ ಉಲ್ಲಂಘನೆ, ಗುತ್ತಿಗೆದಾರರಿಗೆ ನಿಗದಿಗಿಂತ ಹೆಚ್ಚು ಮೊತ್ತ ಪಾವತಿ, ಕಡಿಮೆ ಒಎಫ್‌ಸಿ ಶುಲ್ಕ ಸಂಗ್ರಹ, ಕಾಮಗಾರಿ ಪೂರ್ಣಗೊಳಿಸದ ಗುತ್ತಿಗೆದಾರರ ಠೇವಣಿ ಮುಟ್ಟುಗೋಲು ಹಾಕಿಕೊಳ್ಳದಿರುವುದು, ಒಂದೇ ಕೆಲಸಕ್ಕೆ ಎರಡೆರಡು ಬಾರಿ ಬಿಲ್ ಪಾವತಿಯಿಂದ ಪಾಲಿಕೆಗೆ ಕೋಟ್ಯಂತರ ರೂ. ನಷ್ಟವಾಗಿರುವುದನ್ನು ಆಡಿಟ್ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ವಸೂಲಾಗದ 4245.05 ಕೋಟಿ ರೂ.:
1964-65 ರಿಂದ 2023-24ನೇ ಸಾಲಿನವರೆಗಿನ ವಾರ್ಷಿಕ ಲೆಕ್ಕ ಪರಿಶೋಧನಾ ವರದಿಗಳಲ್ಲಿಬಾಕಿ ಉಳಿದಿರುವ ಆಕ್ಷೇಪಣೆ ಮತ್ತು ವಸೂಲಾತಿ ಕಂಡಿಕೆಗಳಿಗೆ 2024-25ನೇ ಸಾಲಿನಲ್ಲಿ ತೀರುವಳಿಗೆ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ. ಹೀಗಾಗಿ, ಈವರೆಗೆ ಒಟ್ಟು 14,653.62 ಕೋಟಿ ರೂ. ಆಕ್ಷೇಪಣೆ ಮೊತ್ತ ಮತ್ತು 4245.02 ಕೋಟಿ ರೂ. ವಸೂಲಾತಿಯು ತೀರುವಳಿಯಾಗದೆ ಬಾಕಿ ಉಳಿದಿದೆ ಎಂದು ಲೆಕ್ಕ ಪರಿಶೋಧನಾ ವರದಿಯಲ್ಲಿ ಆಕ್ಷೇಪಿಸಲಾಗಿದೆ.
ಲೆಕ್ಕ ಪರಿಶೋಧನಾ ವರದಿಗಳಲ್ಲಿ ಪ್ರಸ್ತಾಪಿಸಿರುವ ಬಾಕಿ ಕಂಡಿಕೆಗಳಲ್ಲಿನ ನ್ಯೂನತೆ, ವಸೂಲಾತಿಗಳ ಬಗ್ಗೆ ಸಕಾಲದಲ್ಲಿ ಕ್ರಮ ಜರುಗಿಸದ ಕಾರಣ, ಕರ್ತವ್ಯಲೋಪವೆಸಗಿದ ಅಧಿಕಾರಿ, ಸಿಬ್ಬಂದಿಯು ನಿವೃತ್ತಿ ಅಥವಾ ಮರಣ ಹೊಂದಿದರೆ ಬಾಕಿ ವಸೂಲಿ ಸಾಧ್ಯವಾಗುವುದಿಲ್ಲ. ಆದ ಕಾರಣ, ಬಾಕಿ ವಸೂಲಾತಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ ಎಂದು ಶಿಫಾರಸು ಮಾಡಲಾಗಿದೆ.
ಲೆಕ್ಕಪತ್ರ ನಿರ್ವಹಣೆಯಲ್ಲಿ ಲೋಪ:
ಬಿಬಿಎಂಪಿ ಕಾಯಿದೆ ಅನ್ವಯ ಲೆಕ್ಕಪತ್ರಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿಲ್ಲ. ಆದಾಯ ಮತ್ತು ವೆಚ್ಚಗಳ ಸ್ವೀಕೃತಿ, ಪಾವತಿ ಲೆಕ್ಕಗಳು, ನಗದು ಹರಿವನ್ನು ಬ್ಯಾಂಕ್ ಲೆಕ್ಕಗಳೊಂದಿಗೆ ಸಮನ್ವಯ ಮಾಡದ ಕಾರಣ, ಇವು ತಾಳೆಯಾಗಿಲ್ಲ. ಆಯವ್ಯಯ ಅಂದಾಜುಗಳು ಅವಾಸ್ತವಿಕವಾಗಿವೆ. ಪಾವತಿಗಳಲ್ಲಿ ಹಣಕಾಸಿನ ನಿಯಮಗಳನ್ನು ಪಾಲನೆ ಮಾಡಿರುವುದಿಲ್ಲ. ನಗದು ಪುಸ್ತಕವನ್ನು ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿಲ್ಲ. ಸಂಬಂಧಪಟ್ಟ ವಿಭಾಗದ ಅಧಿಕಾರಿ, ಸಿಬ್ಬಂದಿಗಳು ಹಾಜರಿರದೆ ಅಸಹಕಾರ ಮನೋಭಾವ ತೋರಿದರು. ನಿಗದಿತ ಅವಧಿಯಲ್ಲಿದಾಖಲೆಗಳನ್ನು ಒದಗಿಸದೆ ವಿಳಂಬಧೋರಣೆ ಅನುಸರಿಸಿದರು. ವಾರ್ಷಿಕ ಲೆಕ್ಕಪತ್ರಗಳನ್ನು ನಿಗದಿತ ಅವಧಿಯಲ್ಲಿಸಿದ್ಧಪಡಿಸಿ, ಲೆಕ್ಕ ಪರಿಶೋಧನೆಗೆ ಸಲ್ಲಿಸಿಲ್ಲ. ನಿಯಮಾನುಸಾರ ಲೆಕ್ಕಪತ್ರಗಳ ಲೆಕ್ಕ ಸಮನ್ವಯ ಕೈಗೊಂಡಿಲ್ಲ ಎಂದು ಬೊಟ್ಟು ಮಾಡಲಾಗಿದೆ.
3171.95 ಕೋಟಿ; ಸಲ್ಲಿಕೆಯಾಗದ ದಾಖಲೆ:
2024ರ ಮಾ.31ರ ಅಂತ್ಯಕ್ಕೆ ಪಾಲಿಕೆಯ 300ಕ್ಕೂ ಅಧಿಕ ಬ್ಯಾಂಕ್ ಖಾತೆಗಳಲ್ಲಿ 3171.95 ಕೋಟಿ ರೂ. ಬ್ಯಾಲೆನ್ಸ್ ಇರುವುದಾಗಿ ವಾರ್ಷಿಕ ಲೆಕ್ಕ ಪತ್ರಗಳಲ್ಲಿ ನಮೂದಿಸಲಾಗಿದೆ. ಆದರೆ, ಬ್ಯಾಂಕ್ ಖಾತೆಗಳು ಯಾವುವು, ಯಾವ ಯಾವ ಬ್ಯಾಂಕ್‌ಗಳಲ್ಲಿಎಷ್ಟೆಷ್ಟು ಮೊತ್ತವಿದೆ, ವರ್ಷಾಂತ್ಯಕ್ಕೆ ಈ ಮೊತ್ತವನ್ನು ದೃಢೀಕರಿಸುವ ಬಗ್ಗೆ ಸಂಬಂಧಿಸಿದ ಬ್ಯಾಂಕ್‌ನಿಂದ ಪಡೆದ ದೃಢೀಕೃತ ಪ್ರತಿಯು ಲೆಕ್ಕ ಪರಿಶೋಧನೆ ಲಭ್ಯವಾಗಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
2023-24ನೇ ಸಾಲಿನ ವಾರ್ಷಿಕ ಲೆಕ್ಕಪತ್ರಗಳ ಬ್ಯಾಲೆನ್ಸ್ ಶೀಟ್ ಪರಿಶೀಲಿಸಿದಾಗ 2024ರ ಮಾ.31ರ ಅಂತ್ಯಕ್ಕೆ 2,374.38 ಕೋಟಿ ರೂ. ಚಾಲ್ತಿ ಹೊಣೆಗಾರಿಕೆ ತೋರಿಸಲಾಗಿದೆ. ಇದರಲ್ಲಿ 747.50 ಕೋಟಿ ರೂ.ಗಳನ್ನು ಪಾವತಿಸಬೇಕಾದ ಉಪಕರ (ಸೆಸ್) ಎಂದು ಹೇಳಲಾಗಿದೆ. ಆದರೆ, ಮುಖ್ಯ ಲೆಕ್ಕ ಪರಿಶೋಧಕರು 2022-23ನೇ ಸಾಲಿಗೆ ಬಾಕಿ ಉಳಿದ ಉಪಕರದ ಮೊತ್ತ 2444.86 ಕೋಟಿ ರೂ. ಎಂದು ವರದಿ ಮಾಡಿದ್ದಾರೆ. ವಾರ್ಷಿಕ ಲೆಕ್ಕಪತ್ರಗಳ ವರದಿಯಲ್ಲಿಮತ್ತು ಲೆಕ್ಕ ಪರಿಶೋಧನಾ ವರದಿಯಲ್ಲಿನ ವ್ಯತ್ಯಾಸವನ್ನು ಪರಿಹರಿಸುವ ಸಂಬಂಧ ಸೂಕ್ತ ದಾಖಲೆಗಳನ್ನು ಸಲ್ಲಿಸಿಲ್ಲಎಂದು ವರದಿಯಲ್ಲಿ ತಿಳಿಸಲಾಗಿದೆ.
ಇಲಾಖಾವಾರು ಆಕ್ಷೇಪಣೆ, ವಸೂಲಾತಿ ಮೊತ್ತದ ವಿವರ:
ಇಲಾಖೆ ಆಕ್ಷೇಪಣೆ ಮೊತ್ತ (ಕೋಟಿ ರೂ.ಗಳಲ್ಲಿ) -ವಸೂಲಾತಿ ಮೊತ್ತ
ಕಾಮಗಾರಿ 459.55 – 32.76
ಹಣಕಾಸು 1004.28- 62.27
ಕಂದಾಯ 22.39- 84.98
ನಗರ ಯೋಜನೆ 140.20 – 10.13
ಆರೋಗ್ಯ 31.08 – 3.51
ಶಿಕ್ಷಣ 551.15 ಲಕ್ಷ – 24 ಸಾವಿರ
ಕಲ್ಯಾಣ 39.22 – 3.79 ಲಕ್ಷ
ಅರಣ್ಯ 31 ಸಾವಿರ —
ತೋಟಗಾರಿಕೆ 9.46 ಲಕ್ಷ- 13.61 ಲಕ್ಷ
ಸಾಮಾನ್ಯ 7.29- 52.27
ಒಟ್ಟು 1704.69- 246.12



