ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ‘ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜಗಾರ್ ಅಜೀವಿಕಾ ಮಿಷನ್’ ಯೋಜನೆಯಡಿ ಗ್ರಾಮೀಣ ಭಾಗದ ಶ್ರಮಿಕರಿಗೆ ಮತ್ತಷ್ಟು ಆರ್ಥಿಕ ಭದ್ರತೆ ನೀಡುವ ನಿಟ್ಟಿನಲ್ಲಿ, ವಾರ್ಷಿಕ ಉದ್ಯೋಗದ ಮಾನವ ದಿನಗಳ ಸಂಖ್ಯೆಯನ್ನು 100 ದಿನಗಳಿಂದ 125 ದಿನಗಳಿಗೆ ಹೆಚ್ಚಿಸಲಾಗಿದೆ ಎಂದು ರಾಮದುರ್ಗ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಮಹಮ್ಮದ್ ಇಜಾನ ಅವರು ತಿಳಿಸಿದ್ದಾರೆ.
ರಾಮದುರ್ಗ ತಾಲೂಕಿನಲ್ಲಿ ಒಟ್ಟು 40887 ಸಕ್ರಿಯ ಕೂಲಿ ಕಾರ್ಮಿಕರಿದ್ದು, ಒಟ್ಟಾರೆ 99.25 ಪ್ರತಿಶತ ekyc ಪ್ರಗತಿ ಸಾಧಿಸಲಾಗಿದ್ದು, ಬಾಕಿ ಉಳಿದ ಕೂಲಿಕಾರ್ಮಿಕರ ekyc ಮಾಡಿ ಕೂಲಿ ಕಾರ್ಮಿಕರಿಗೆ ಕೆಲಸ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು,
ಜುಲೈ 1 ರಿಂದ ರಾಜ್ಯಾದ್ಯಂತ ಜಾರಿಗೆ ಬಂದಿರುವ ಈ ಯೋಜನೆಯಲ್ಲಿ ದಿನದ ಕೂಲಿ ದರವನ್ನು ಈ ಹಿಂದೆ ಇದ್ದ ರೂ.370/- ನ್ನು ಹೆಚ್ಚಿಸಿ ₹382/- ಕ್ಕೆ ನಿಗದಿಪಡಿಸಲಾಗಿದೆ.
ರೈತರು ಹಾಗೂ ಕೂಲಿ ಕಾರ್ಮಿಕರ ಹಿತದೃಷ್ಟಿಯಿಂದ ಯೋಜನೆಯ ನಿಯಮಾವಳಿಗಳಲ್ಲಿ ಪ್ರಮುಖ ಬದಲಾವಣೆಗಳನ್ನು ತರಲಾಗಿದ್ದು, ತಾಲೂಕಿನ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಲು ಕೋರಲಾಗಿದೆ.
ರೈತರ ಅನುಕೂಲಕ್ಕಾಗಿ ವಿಶೇಷ ನಿಯಮ (60 ದಿನಗಳ ರಜೆ):
ಕೃಷಿ ಕೆಲಸಗಳಿಗೆ ಆದ್ಯತೆ: ರೈತರು ಹಾಗೂ ಕೂಲಿ ಕಾರ್ಮಿಕರು ಕೃಷಿ ಕಾಮಗಾರಿಗಳಲ್ಲಿ (ಬಿತ್ತನೆ, ಕೊಯ್ಲು ಇತ್ಯಾದಿ) ತೊಡಗಿಸಿಕೊಳ್ಳುವ ಪ್ರಮುಖ ಅವಧಿಯನ್ನು ಪರಿಗಣಿಸಿ, 60 ದಿನಗಳವರೆಗೆ ಈ ಯೋಜನೆಯ ಕೆಲಸಗಳನ್ನು ತಡೆಹಿಡಿಯಲು ಅವಕಾಶ ಕಲ್ಪಿಸಲಾಗಿದೆ.
ಯಥಾಪ್ರಕಾರ ಕೆಲಸದ ಲಭ್ಯತೆ: ಕೃಷಿ ಹಂಗಾಮಿನ ಕೆಲಸಗಳು ಮುಗಿದ ನಂತರ, ಗ್ರಾಮೀಣ ಶ್ರಮಿಕರಿಗೆ ಮುಂದಿನ ದಿನಗಳಲ್ಲಿ ಯಥಾಪ್ರಕಾರವಾಗಿ ಬಾಕಿ ಉಳಿದ ದಿನಗಳ ಕೆಲಸ ಮತ್ತು ಸೌಲಭ್ಯಗಳನ್ನು ಒದಗಿಸಿಕೊಡಲಾಗುವುದು. ಇದರಿಂದ ರೈತರಿಗೆ ಕೃಷಿ ಚಟುವಟಿಕೆಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ.
ಯೋಜನೆಯ ಇತರ ಮುಖ್ಯ ನಿಯಮಗಳು ಮತ್ತು ಸೌಲಭ್ಯಗಳು:
ಹೆಚ್ಚುವರಿ ದಿನಗಳ ಉದ್ಯೋಗ: ಪ್ರತಿ ಕುಟುಂಬಕ್ಕೆ ಈ ಹಿಂದೆ ಇದ್ದ 100 ದಿನಗಳ ಬದಲಾಗಿ, ಈಗ 125 ದಿನಗಳ ಉದ್ಯೋಗದ ಗ್ಯಾರಂಟಿ ಇರಲಿದೆ.
ಸಮಾನ ವೇತನ: ಯೋಜನೆಯಡಿ ಮಹಿಳಾ ಮತ್ತು ಪುರುಷ ಕಾರ್ಮಿಕರಿಗೆ ಸಮಾನ ಕೆಲಸಕ್ಕೆ ಸಮಾನ ವೇತನವನ್ನು (₹382) ಒದಗಿಸಲಾಗುವುದು.
ಡಿಜಿಟಲ್ ಹಾಜರಾತಿ: ಕಾಮಗಾರಿ ಸ್ಥಳದಲ್ಲಿ ಕಡ್ಡಾಯವಾಗಿ ಎನ್.ಎಮ್.ಎಮ್.ಎಸ್ (NMMS) ಮೊಬೈಲ್ ಆಪ್ ಮೂಲಕ ಎರಡು ಹಂತದ ಹಾಜರಾತಿಯನ್ನು ಪಡೆಯಲಾಗುವುದು ಹಾಗೂ ನಿಗದಿಪಡಿಸಿದ ಅಳತೆಯ ಆಧಾರದ ಮೇಲೆಯೇ ನಿಗದಿತ ಕೂಲಿಯನ್ನು ಪಾವತಿಸಲಾಗುವುದು.
ಕಾರ್ಮಿಕರ ಕ್ಷೇಮಾಭಿವೃದ್ಧಿ: ಪ್ರತಿ ಕಾಮಗಾರಿ ಸ್ಥಳದಲ್ಲೂ ಕೂಲಿ ಕಾರ್ಮಿಕರಿಗೆ ಕಡ್ಡಾಯವಾಗಿ ಶುದ್ಧ ಕುಡಿಯುವ ನೀರು, ನೆರಳಿನ ವ್ಯವಸ್ಥೆ ಹಾಗೂ ಪ್ರಥಮ ಚಿಕಿತ್ಸಾ (First-Aid) ಸೌಲಭ್ಯಗಳನ್ನು ಒದಗಿಸಲಾಗುವುದು.
ಮುಖ್ಯ ಮನವಿ: ಸರ್ಕಾರದ ಈ ಮಹತ್ತರ ಆರ್ಥಿಕ ಸಬಲೀಕರಣ ಯೋಜನೆಗೆ ರಾಮದುರ್ಗ ತಾಲೂಕಿನ ಎಲ್ಲಾ ಗ್ರಾಮೀಣ ಕೂಲಿ ಕಾರ್ಮಿಕರು ಮತ್ತು ರೈತ ಬಾಂಧವರು ಪೂರ್ಣ ಪ್ರಮಾಣದಲ್ಲಿ ಸಹಕರಿಸಿ, ಕೈಜೋಡಿಸಬೇಕು. ಆಸಕ್ತರು ಅಗತ್ಯ ದಾಖಲೆಗಳೊಂದಿಗೆ ತಮ್ಮ ವ್ಯಾಪ್ತಿಯ ಗ್ರಾಮ ಪಂಚಾಯತ್ ಕಾರ್ಯಾಲಯಕ್ಕೆ ಭೇಟಿ ನೀಡಿ ವಿಕಸಿತ ಭಾರತ್ ಗ್ಯಾರಂಟಿ ಕಾರ್ಡ (Job Card) ಪಡೆದುಕೊಳ್ಳಲು ಅಥವಾ ನವೀಕರಿಸಿಕೊಳ್ಳಲು ಇಒ ಶ್ರೀ ಮಹಮ್ಮದ್ ಇಜಾನ್ ರವರು ತಿಳಿಸಿದರು.



