ಸಮಯಕ್ಕೆ ಸರಿಯಾಗಿ ಶಿಶುವಿನ ಅಳುವಿನ ಶಬ್ದವನ್ನು ಗಮನಿಸಿ ರಕ್ಷಣೆ ಮಾಡಿದ ಕಿತ್ತೂರಿನ ಗ್ರಾಮಸ್ಥರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಸುರೇಬಾನ ಸಮೀಪದ ಕಿತ್ತೂರ ನರಗುಂದ ರಸ್ತೆಯ ಬಸವಣಕಟ್ಟೆ ಸೇತುವೆ ಕೆಳಭಾಗದಲ್ಲಿ ನವಜಾತ ಶಿಶು ಬಿಟ್ಟು ಹೋದ ಘಟನೆ ಸೋಮವಾರ ಬೆಳಕಿಗೆ ಬಂದಿದೆ.
ಕಿತ್ತೂರಿನ ಗ್ರಾಮಸ್ಥರು ಬೆಳಗಿನ ವೇಳೆ ಸೇತುವೆ ಸಮೀಪ ತೆರಳಿದ್ದಾಗ ಮಗುವಿನ ಅಳುವಿನ ಶಬ್ದ ಕೇಳಿಬಂದಿದೆ. ಅನುಮಾನಗೊಂಡ ಅವರು ಶಬ್ದ ಬಂದ ದಿಕ್ಕಿನಲ್ಲಿ ತೆರಳಿ ಪರಿಶೀಲಿಸಿದಾಗ, ಸೇತುವೆಯ ಕೆಳಭಾಗದಲ್ಲಿ ನವಜಾತ ಶಿಶು ಬಿದ್ದಿರುವುದು ಕಂಡು ಬಂದಿದೆ. ಕೂಡಲೇ ಸ್ಥಳೀಯರು ಧೈರ್ಯದಿಂದ ಕೆಳಗಿಳಿದು ಶಿಶುವನ್ನು ಸುರಕ್ಷಿತವಾಗಿ ಮೇಲಕ್ಕೆ ಕರೆತಂದು ಆರೈಕೆ ಮಾಡಿ ಸುರೇಬಾನ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ನಂತರ ಆ ಮಗುವನ್ನು ಸವದತ್ತಿ ತಾಲೂಕಾ ಆಸ್ಪತ್ರೆಗೆ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು 108 ಅಂಬ್ಯುಲೆನ್ಸ್ ವಾಹನದಲ್ಲಿ ಸಿಬ್ಬಂದಿಯ ಸಹಾಯದಿಂದ ಶಿಶುವನ್ನು ವೈದ್ಯಕೀಯ ಪರೀಕ್ಷೆ ಹಾಗೂ ಚಿಕಿತ್ಸೆಗೆ ಆಸ್ಪತ್ರೆಗೆ ರವಾನಿಸಲಾಗಿದೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಶಿಶುವಿಗೆ ಜನ್ಮ ನೀಡಿದ ತಾಯಿಯೇ ಯಾವುದೋ ಕಾರಣದಿಂದ ಸೇತುವೆ ಕೆಳಭಾಗದಲ್ಲಿ ಬಿಟ್ಟು ಹೋಗಿರುವ ಶಂಕೆ ವ್ಯಕ್ತವಾಗಿದೆ. ಆದರೆ, ಈ ಕುರಿತು ಇನ್ನೂ ಯಾವುದೇ ಅಧಿಕೃತ ದೃಢೀಕರಣ ಲಭ್ಯವಾಗಿಲ್ಲ. ಸುತ್ತಮುತ್ತಲಿನ ಆಸ್ಪತ್ರೆಗಳು, ಖಾಸಗಿ ಚಿಕಿತ್ಸಾಲಯಗಳು ಹಾಗೂ ಇತ್ತೀಚೆಗೆ ಹೆರಿಗೆ ನಡೆದಿರುವ ಪ್ರಕರಣಗಳ ಮಾಹಿತಿ ಸಂಗ್ರಹಿಸಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಸುರೇಬಾನ ಪೊಲೀಸ್ ಠಾಣೆಯ ಎಸ್ ಎಚ್ ಒ ಪಿ.ಕೆ.ವಾಲಿಕಾರ ಪ್ರಕರಣ ದಾಖಲಿಕೊಂಡಿದ್ದು, ಶಿಶುವನ್ನು ಬಿಟ್ಟು ಹೋಗಿರುವ ವ್ಯಕ್ತಿ ಅಥವಾ ಪೋಷಕರ ಪತ್ತೆಗೆ ತನಿಖೆ ಮುಂದುವರಿಸಿದ್ದಾರೆ.



