ಬೆಂಗಳೂರು : ಕುರುಬ ಸಮುದಾಯದ ಉದ್ಯಮಿಗಳು, ಉದ್ದಿಮೆದಾರರು ಹಾಗೂ ಉದ್ಯಮ ಸ್ಥಾಪಿಸಲು ಉತ್ಸುಕರಾಗಿರುವವರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ, ಪರಸ್ಪರ ಸಹಕಾರ ಮತ್ತು ಸಹಾಯದ ಮೂಲಕ ಸಾಮೂಹಿಕ ಬೆಳವಣಿಗೆ ಸಾಧಿಸುವ ಉದ್ದೇಶದಿಂದ ‘ಕನಕೋದ್ಯಮಿ ಹಾಲುಮತ ಎಂಟರ್‌ಪ್ರಿನರ್ಸ್ ಅಸೋಸಿಯೇಷನ್ (ರಿ.)’ ಸಂಘಟನೆ ಕಾರ್ಯನಿರ್ವಹಿಸುತ್ತಿದೆ.

ಸಮುದಾಯದ ವಿವಿಧ ಕ್ಷೇತ್ರಗಳಲ್ಲಿ ಉದ್ಯಮ ಹಾಗೂ ವ್ಯಾಪಾರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವವರು ಪರಸ್ಪರ ಸಂಪರ್ಕ ಸಾಧಿಸಿ, ತಮ್ಮ ಅನುಭವ, ಜ್ಞಾನ ಹಾಗೂ ಸಂಪನ್ಮೂಲಗಳನ್ನು ಹಂಚಿಕೊಳ್ಳುವ ಮೂಲಕ ಹೊಸ ಉದ್ಯಮಗಳಿಗೆ ಉತ್ತೇಜನ ನೀಡುವುದು ಸಂಘಟನೆಯ ಪ್ರಮುಖ ಉದ್ದೇಶವಾಗಿದೆ.

ಶ್ರೀ ಯೋಗೀಶ್ವರಾನಂದ ಸ್ವಾಮೀಜಿಗಳ ಆಶೀರ್ವಾದ ಮತ್ತು ಮಾರ್ಗದರ್ಶನದೊಂದಿಗೆ, ಸಮುದಾಯದ ಉದ್ಯಮಶೀಲರನ್ನು ಒಗ್ಗೂಡಿಸುವ ದೃಷ್ಟಿಯಿಂದ ‘ಕನಕೋದ್ಯಮಿ’ ಸಂಘವನ್ನು ಸ್ಥಾಪಿಸಲಾಗಿದೆ ಎಂದು ಸಂಘಟನೆಯ ಆಶಯದಲ್ಲಿ ತಿಳಿಸಲಾಗಿದೆ.
ಮೊದಲ ವರ್ಷದ ವಾರ್ಷಿಕ ಸರ್ವಸದಸ್ಯರ ಮಹಾಸಭೆ
ಕನಕೋದ್ಯಮಿ ಹಾಲುಮತ ಎಂಟರ್‌ಪ್ರಿನರ್ಸ್ ಅಸೋಸಿಯೇಷನ್ ವತಿಯಿಂದ 2025-26ನೇ ಸಾಲಿನ ಮೊದಲ ವರ್ಷದ ವಾರ್ಷಿಕ ಸರ್ವಸದಸ್ಯರ ಮಹಾಸಭೆ ಸೆಪ್ಟೆಂಬರ್ 27ರಂದು ಬೆಂಗಳೂರಿನಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಶ್ರೀ ಯೋಗೀಶ್ವರಾನಂದ ಸ್ವಾಮೀಜಿಗಳು ಸೇರಿದಂತೆ , ಆರ್ ಆರ್ ಎಂಜಿನಿಯರಿಂಗ್ ಕಂಪನಿಯ ಮಾಲೀಕರಾದ ಸುದರ್ಶನ್ ರವರು ಹಾಗೂ ಸಂಘದ ಪದಾಧಿಕಾರಿಗಳು, ಉದ್ಯಮಿಗಳು ಹಾಗೂ ಸದಸ್ಯರು ಭಾಗವಹಿಸಿದ್ದರು. ವೇದಿಕೆಯಲ್ಲಿ ಸಂಘಟನೆಯ ಮುಂದಿನ ಚಟುವಟಿಕೆಗಳು, ಸದಸ್ಯರ ಸಹಕಾರ, ಉದ್ಯಮಶೀಲತೆ ಹಾಗೂ ಸಮುದಾಯದ ಆರ್ಥಿಕ ಬೆಳವಣಿಗೆಗೆ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಚರ್ಚೆ ನಡೆಯಿತು.

ಕಾರ್ಯಕ್ರಮದಲ್ಲಿ
ಸಮುದಾಯದ ಯುವಕರು ಹಾಗೂ ಹೊಸದಾಗಿ ಉದ್ಯಮ ಆರಂಭಿಸಲು ಬಯಸುವವರಿಗೆ ಅನುಭವಿಗಳ ಮಾರ್ಗದರ್ಶನ, ಉದ್ಯಮಿಗಳ ನಡುವೆ ಸಂಪರ್ಕ, ಪರಸ್ಪರ ಸಹಕಾರ ಹಾಗೂ ವ್ಯಾಪಾರಿಕ ಅವಕಾಶಗಳ ಸೃಷ್ಟಿಗೆ ಸಂಘಟನೆ ವೇದಿಕೆಯಾಗಬೇಕು ಎಂಬ ಆಶಯವನ್ನು ಕಾರ್ಯಕ್ರಮದಲ್ಲಿ ವ್ಯಕ್ತಪಡಿಸಲಾಯಿತು.
‘ಒಬ್ಬರ ಬೆಳವಣಿಗೆ ಮಾತ್ರವಲ್ಲ, ಎಲ್ಲರ ಬೆಳವಣಿಗೆ’ ಎಂಬ ಆಶಯದೊಂದಿಗೆ ಸಮುದಾಯದ ಉದ್ಯಮಿಗಳನ್ನು ಒಗ್ಗೂಡಿಸುವ ಪ್ರಯತ್ನವಾಗಿ ಕನಕೋದ್ಯಮಿ ಸಂಘಟನೆ ಮುಂದುವರಿಯುತ್ತಿದೆ. ಉದ್ಯಮ ಕ್ಷೇತ್ರದಲ್ಲಿ ಈಗಾಗಲೇ ಗುರುತಿಸಿಕೊಂಡಿರುವವರು ಹೊಸ ಉದ್ಯಮಿಗಳಿಗೆ ಮಾರ್ಗದರ್ಶನ ನೀಡುವ ಮೂಲಕ ಸಮುದಾಯದೊಳಗೆ ಉದ್ಯಮಶೀಲತೆಯ ವಾತಾವರಣ ನಿರ್ಮಿಸುವುದು ಸಂಘಟನೆಯ ಉದ್ದೇಶವಾಗಿದೆ.
ಸಮುದಾಯದ ಉದ್ಯಮಿಗಳು, ವೃತ್ತಿಪರರು ಹಾಗೂ ಉದ್ಯಮ ಆರಂಭಿಸಲು ಆಸಕ್ತಿ ಹೊಂದಿರುವವರು ಸಂಘಟನೆಯೊಂದಿಗೆ ಕೈಜೋಡಿಸುವ ಮೂಲಕ ಪರಸ್ಪರ ಸಹಕಾರದಿಂದ ಆರ್ಥಿಕವಾಗಿ ಬಲಿಷ್ಠ ಸಮುದಾಯ ನಿರ್ಮಾಣಕ್ಕೆ ಕೊಡುಗೆ ನೀಡಬಹುದು ಎಂಬ ಸಂದೇಶ ಕಾರ್ಯಕ್ರಮದ ಮೂಲಕ ಹೊರಹೊಮ್ಮಿದೆ.
— ಸಂಚಾರಿ ಸತ್ಯ ವಿಶೇಷ ವರದಿ



