ಭಗತ್ ಸಿಂಗ್ ಜಯಂತಿ ಅಂಗವಾಗಿ ಬಡ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ

WhatsApp Group Join Now

ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಾ
ಭಗತ್ ಸಿಂಗ್ ಕ್ರಾಂತಿ ವೇದಿಕೆ ವತಿಯಿಂದ ಭಗತ್ ಸಿಂಗ್ ಜಯಂತಿ ಅಂಗವಾಗಿ ಬಡ ಹಾಗೂ ಅಗತ್ಯವಿರುವ ವಿದ್ಯಾರ್ಥಿಗಳಿಗೆ ಪುಸ್ತಕ ಹಾಗೂ ಸರಕಾರಿ ಆಸ್ಪತ್ರೆಯಲ್ಲಿರುವ ಬಡ ರೋಗಿಗಳಿಗೆ ಹಣ್ಣು ಹಂಪಲು ನೀರಿನ ಬಾಟಲ್ ವಿತರಿಸುವ ಕಾರ್ಯಕ್ರಮವನ್ನು ರಾಮದುರ್ಗದ ಭಾಗ್ಯನಗರ ಆಶ್ರಯದಲ್ಲಿ ಇರುವ ಸಂಗೊಳ್ಳಿ ರಾಯಣ್ಣ ಪ್ರಾಥಮಿಕ ಶಾಲೆ ಮತ್ತು ವಿವಿಧ ಶಾಲೆಯಲ್ಲಿ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಕಾರ್ಮಿಕ ಮುಖಂಡರು, ಭಗತ್ ಸಿಂಗ್ ಅವರು ಬಾಲ್ಯದಿಂದಲೇ ದೇಶಭಕ್ತಿ ಹಾಗೂ ಕ್ರಾಂತಿಕಾರಿ ಚಿಂತನೆಗಳನ್ನು ಮೈಗೂಡಿಸಿಕೊಂಡಿದ್ದರು. ಅವರ ಕುಟುಂಬದಲ್ಲಿಯೂ ದೇಶದ ಸ್ವಾತಂತ್ರ್ಯ ಹೋರಾಟದ ಚಿಂತನೆಗಳಿದ್ದವು. ಜಲಿಯನ್‌ವಾಲಾಬಾಗ್ ಹತ್ಯಾಕಾಂಡ ಹಾಗೂ ಲಾಲಾ ಲಜಪತ್ ರಾಯ್ ಅವರ ಸಾವಿನ ಘಟನೆಗಳು ಭಗತ್ ಸಿಂಗ್ ಅವರ ಮೇಲೆ ಆಳವಾದ ಪ್ರಭಾವ ಬೀರಿದ್ದವು ಎಂದು ಹೇಳಿದರು.

ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಯೌವನದಲ್ಲಿಯೇ ಹೋರಾಟದ ಹಾದಿ ಹಿಡಿದ ಭಗತ್ ಸಿಂಗ್, ಯುವಕರನ್ನು ಸಂಘಟಿಸಿ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದರು. ಇಂದಿನ ಯುವಕರು ಕೂಡ ಭಗತ್ ಸಿಂಗ್ ಅವರ ದೇಶಪ್ರೇಮ, ತ್ಯಾಗ ಹಾಗೂ ಸಾಮಾಜಿಕ ಬದ್ಧತೆಯ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಇದೇ ವೇಳೆ ಮಾತನಾಡಿದ ಭಗತ್ ಸಿಂಗ್ ಯುವಕ ಮಂಡಳದ ಮುಖಂಡ ಭುಜಂಗಪ್ಪ, ಭಗತ್ ಸಿಂಗ್ ಅವರು ತಮ್ಮ ಯೌವನದಲ್ಲಿಯೇ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಮಹಾನ್ ಕ್ರಾಂತಿಕಾರಿ. ಯುವಕರನ್ನು ಸಂಘಟಿಸುವ ಉದ್ದೇಶದಿಂದ ನೌಜವಾನ್ ಭಾರತ್ ಸಭಾಯಂತಹ ಸಂಘಟನೆಗಳ ಮೂಲಕ ಯುವ ಸಮುದಾಯದಲ್ಲಿ ದೇಶಭಕ್ತಿ ಮತ್ತು ಸ್ವಾತಂತ್ರ್ಯದ ಚಿಂತನೆ ಮೂಡಿಸಿದರು ಎಂದು ಹೇಳಿದರು.

ಜನಪರ ಟ್ರಸ್ಟ್ ಅಧ್ಯಕ್ಷ ಸುಭಾಷ್ ಗೊಡಕೆ ಮಾತನಾಡಿ, ಭಗತ್ ಸಿಂಗ್ ಅವರು ಬಾಲ್ಯದಿಂದಲೇ ಬ್ರಿಟಿಷರ ವಿರುದ್ಧ ಹೋರಾಟದ ಮನೋಭಾವ ಬೆಳೆಸಿಕೊಂಡಿದ್ದರು. ಇಂತಹ ಮಹಾನ್ ಕ್ರಾಂತಿಕಾರಿಯ ಜಯಂತಿಯನ್ನು ರಾಮದುರ್ಗದಲ್ಲಿ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ. ಪ್ರತಿವರ್ಷವೂ ಭಗತ್ ಸಿಂಗ್ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ಅಗತ್ಯವಿರುವ ಸಹಾಯ–ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಭಗತ್ ಸಿಂಗ್ ಕ್ರಾಂತಿ ವೇದಿಕೆ ಅಧ್ಯಕ್ಷ ಮೊಹಮ್ಮದ್ ಬೆಣ್ಣಿ ಅವರು ಸ್ವಾಗತಿಸಿದರು. ಗಿರೀಶ್ ದೇಶಪಾಂಡೆ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಮುದ್ದುಸರ್ ಯಾದವಾಡ ವಂದನಾರ್ಪಣೆ ಸಲ್ಲಿಸಿದರು.

ಈ ಸಂಧರ್ಭದಲ್ಲಿ ಎಂ ಕೆ ಯಾದವಾಡ,ತವೋಸೀಫ್ ಬೆಣ್ಣಿ,ಅನ್ವರ್,ತಾಂಬಿಳಿ,
ಸಮೀರ್ ಮಹಾತ್ ಸೇರಿದಂತೆ ಭಗತ್ ಸಿಂಗ್ ಕ್ರಾಂತಿ ವೇದಿಕೆಯ ಪದಾಧಿಕಾರಿಗಳು, ಕಾರ್ಯಕರ್ತರು, ವಿದ್ಯಾರ್ಥಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.

About The Author