ಬೆಳಗಾವಿ ಉಪ ಲೋಕಾಯುಕ್ತರಾದ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಗುರುವಾರ
ಬೆಳಗಾವಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಭೇಟಿ ನೀಡಿ ಪರಿಶೀಲಿಸಿದರು.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿನ ತರಕಾರಿ ವ್ಯಾಪಾರಿಗಳ ತೂಕದ ಯಂತ್ರಗಳನ್ನು ಪರಿಶೀಲಿಸಿ ತೂಕದಲ್ಲಿ ಮೋಸ ಮಾಡುತ್ತಿರುವುದು, ದಲ್ಲಾಳಿಗಳು ಹೆಚ್ಚಿನ ಕಮೀಷನ್ ಪಡೆಯುತ್ತಿರುವುದು ಕುರಿತು ಪರಿಶೀಲಿಸಿದರು.
ಮಾರುಕಟ್ಟೆಯಲ್ಲಿ ಯಾವೊಬ್ಬ ಸಗಟು ತರಕಾರಿ ವ್ಯಾಪಾರಸ್ಥರು ತರಕಾರಿ ಮಾರಾಟ ಮಾಡಿದರ ರಸೀದಿಗಳನ್ನು ನೀಡದೆ ಇರುವದನ್ನು ಕಂಡು ತೀವ್ರ ಆಕ್ಷೇಪ ವ್ಯಕ್ತ ಪಡಿಸಿದರು.
ಮಾರುಕಟ್ಟೆಯಲ್ಲಿನ ಶುದ್ಧ ಕುಡಿಯುವ ನೀರಿನ ಘಟಕ ಮುಚ್ಚಿರುವುದು ಹಾಗೂ ಮಾರುಕಟ್ಟೆಯಲ್ಲಿನ ಉಪಹಾರ ಗೃಹದಲ್ಲಿ ಸ್ವಚ್ಚತೆ ಇರದೆ ಇರುವುದು ಕಂಡು ಉಪಹಾರ ಗೃಹ ಕಸದ ತೊಟ್ಟಿಯಾಗಿದೆ ಎಂದು ಕಾರ್ಯದರ್ಶಿಗಳನ್ನು ತರಾಟೆಗೆ ತೆಗೆದುಕೊಂಡರು.
ಮಾರುಕಟ್ಟೆಯಲ್ಲಿ ಹಮಾಲಿಗಳಿಗೆ,ರೈತರಿಗೆ ವಿಶ್ರಾಂತ ಗೃಹದ ವ್ಯವಸ್ಥೆ ಹಾಗೂ ವಾಹನ ನಿಲುಗಡೆಯ ವ್ಯವಸ್ಥೆ ಇಲ್ಲದೇ ಇರುವುದನ್ನು ರೈತರು ಹಾಗೂ ಹಮಾಲಿಗಳಿಂದ ಮಾಹಿತಿ ಪಡೆದರು. ಮಾರುಕಟ್ಟೆಯಲ್ಲಿನ ಹಮಾಲಿಗಳಿಗೆ ಯಾವುದೇ ರೀತಿಯ ಸೌಲಭ್ಯಗಳಿಲ್ಲ ಎಂಬ ದೂರಿಗೆ ಕಾರ್ಮಿಕ ಇಲಾಖೆ ವತಿಯಿಂದ ಎರಡು ದಿನದೊಳಗಾಗಿ ಎಲ್ಲ ಅಂಗಡಿಗಳಲ್ಲಿನ ಕಾರ್ಮಿಕರ ಮಾಹಿತಿ ಪಡೆದು ಅವರಿಗೆ ದೊರಕಬೇಕಾದ ಸರಕಾರಿ ಸೌಲಭ್ಯಗಳನ್ನು ಒದಗಿಸಲು ಸೂಚಿಸಿದರು.
ಮಾರುಕಟ್ಟೆಯಲ್ಲಿನ ಶೌಚಾಲಯದ ವ್ಯವಸ್ಥೆ ಕಂಡು ದಂಗಾದ ಅವರು ರೈತ ಭವನಕ್ಕೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳ ಕುರಿತು ಪರಿಶೀಲಿಸಿ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಉಪನಿಬಂಧಕರಾದ ಅರವಿಂದ, ಲೋಕಾಯುಕ್ತ ಎಸ್.ಪಿ. ಪ್ರಸನ್ ದೇಸಾಯಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಎನ್.ಶಿವಕುಮಾರ, ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಉಪವಿಭಾಗಾಧಿಕಾರಿ ಶ್ರವಣ ನಾಯಕ, ಮಹಾನಗರ ಪಾಲಿಕೆ ಆಯುಕ್ತ ಕಾರ್ತಿಕ.ಎಂ, ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.



