ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ತಾಲೂಕು ಪಂಚಾಯಿತಿ, ಕೃಷಿ ಇಲಾಖೆ ಹಾಗೂ ತಾಲೂಕು ಕೃಷಿಕ ಸಮಾಜ, ರಾಮದುರ್ಗ ಇವರ ಸಂಯುಕ್ತ ಆಶ್ರಯದಲ್ಲಿ ದಿನಾಂಕ 29.04.2026 ರಂದು ಮಧ್ಯಾಹ್ನ 4:00 ಗಂಟೆಗೆ, ತಾಲೂಕು ಪಂಚಾಯಿತಿ ಸಭಾಂಗಣ, ರಾಮದುರ್ಗದಲ್ಲಿ ವಿಶ್ವ ಭೂ ದಿನ ಆಚರಣೆ ಹಾಗೂ ಭೂಮಿ ತಾಯಿ ರಕ್ಷಣೆ ಕಣ್ಗಾವಲು ಸಮಿತಿ ಸಭೆ ಆಯೋಜಿಸಲಾಯಿತು.
ಈ ಕಾರ್ಯಕ್ರಮದ ಉದ್ಘಾಟಕರಾಗಿ ಶ್ರೀ ಮಂಜುನಾಥ ಬಣಕಾರ, ಮಾನ್ಯ ದಿವಾಣಿ ನ್ಯಾಯಾಧೀಶರು, ಜೆಎಂಎಫ್‌ಸಿ ರಾಮದುರ್ಗ ಹಾಗೂ ಸದಸ್ಯ ಕಾರ್ಯದರ್ಶಿಗಳು, ತಾಲೂಕು ಕಾನೂನು ಸೇವಾ ಸಮಿತಿ ರಾಮದುರ್ಗ, ಕಾರ್ಯಕ್ರಮವನ್ನು ಉದ್ಘಾಟಿಸಿ ವಿಶ್ವ ಭೂ ದಿನದ ಮಹತ್ವವನ್ನು ವಿವರಿಸಿದರು. ಅವರು ಪರಿಸರ ಸಂರಕ್ಷಣೆಯ ಅಗತ್ಯತೆಯ ಬಗ್ಗೆ ಜಾಗೃತಿ ಮೂಡಿಸುತ್ತಾ, ಹವಾಮಾನ ಬದಲಾವಣೆ, ವಾಯು ಮತ್ತು ನೀರಿನ ಮಾಲಿನ್ಯ, ಅರಣ್ಯನಾಶ, ಅತಿಯಾದ ಪ್ಲಾಸ್ಟಿಕ್ ಬಳಕೆ ಹಾಗೂ ಮಣ್ಣು ಮಾಲಿನ್ಯ ಮುಂತಾದ ಪರಿಸರ ಸಮಸ್ಯೆಗಳ ಕುರಿತು ಮಾತನಾಡಿದರು.
ಮುಂದುವರಿದು, ಶ್ರೀ ಬಿ.ಎಸ್. ಹಿರೇರೆಡ್ಡಿ, ನ್ಯಾಯವಾದಿಗಳು, ರಾಮದುರ್ಗ ಅವರು ಉಪನ್ಯಾಸ ನೀಡಿ, ವಿಶೇಷವಾಗಿ ಭೂ ಕಾಯ್ದೆ ಮತ್ತು ವರದಕ್ಷಣೆ ಕಾಯ್ದೆಗಳ ಕುರಿತು ಕಾನೂನು ಅರಿವು ಮೂಡಿಸಿದರು.
ಶ್ರೀ ವೈ.ಹೆಚ್. ಪಾಟೀಲ, ಅಧ್ಯಕ್ಷರು, ತಾಲೂಕು ಕೃಷಿಕ ಸಮಾಜ ರಾಮದುರ್ಗ ಅವರು ಮಣ್ಣಿನ ಆರೋಗ್ಯದ ಮಹತ್ವವನ್ನು ವಿವರಿಸಿ, ಅತಿಯಾದ ರಾಸಾಯನಿಕ ಗೊಬ್ಬರ ಬಳಕೆಯಿಂದ ಮಣ್ಣು ಹೇಗೆ ಹಾಳಾಗುತ್ತಿದೆ ಎಂಬುದನ್ನು ತಿಳಿಸಿದರು. ಜೊತೆಗೆ, ಸಾವಯುವ ಮತ್ತು ನೈಸರ್ಗಿಕ ಕೃಷಿ ವಿಧಾನಗಳ ಮೂಲಕ ಹಾಳಾಗುತ್ತಿರುವ ಮಣ್ಣಿಗೆ ಮರುಜೀವ ನೀಡುವ ಮಾರ್ಗಗಳನ್ನು ವಿವರಿಸಿದರು.
ಕೊನೆಯದಾಗಿ, ಶ್ರೀ ಬಸವರಾಜ್ ಐನಾಪುರ, ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲೂಕು ಪಂಚಾಯಿತಿ ರಾಮದುರ್ಗ ಅವರು ಮಾತನಾಡಿ ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಉಳಿಸಿ ಕೊಡುವುದು ನಮ್ಮ ಜವಾಬ್ದಾರಿ ಎಂಬುದನ್ನು ಒತ್ತಿ ಹೇಳಿ, ಪರಿಸರ ಸಂರಕ್ಷಣೆಗೆ ಎಲ್ಲರೂ ಸಂಕಲ್ಪ ಮಾಡಬೇಕೆಂದು ಕರೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಶ್ರೀ ಎ.ಎ. ಮುದಕವಿ, ಅಧ್ಯಕ್ಷರು, ನ್ಯಾಯವಾದಿಗಳ ಸಂಘ ರಾಮದುರ್ಗ, ಶ್ರೀ ವಿನಾಯಕ ಬಡಿಗೇರ್, ಸಿಪಿಐ ರಾಮದುರ್ಗ, ಶ್ರೀ ಶ್ರೀನಾಥ ಚಿಮ್ಮಲಗಿ, ಸಹಾಯಕ ಕೃಷಿ ನಿರ್ದೇಶಕರು ರಾಮದುರ್ಗ, ಶ್ರೀ ಪ್ರಕಾಶ್ ಮುಗುಳಕೋಡ, ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರು ರಾಮದುರ್ಗ ಸೇರಿದಂತೆ ರೈತರು, ಕೃಷಿ ಪರಿಕರ ಮಾರಾಟಗಾರರು, ಕೃಷಿ ಮತ್ತು ಸಂಬಂಧಿತ ಇಲಾಖೆ ಅಧಿಕಾರಿಗಳು ಹಾಗೂ ಕೃಷಿ ಸಖಿಯರು ಉಪಸ್ಥಿತರಿದ್ದರು.



