ಗದಗ ಜಿಲ್ಲೆಯ ರೋಣ ತಾಲೂಕಿನ ಅರಹುಣಸಿ ಗ್ರಾಮದಲ್ಲಿ ನಡೆದ ಅಮಾನವೀಯ ಘಟನೆಯೊಂದರಲ್ಲಿ ಅತ್ಯಾಚಾರಕ್ಕೊಳಗಾಗಿ, ಸುರಕ್ಷಿತ ಗರ್ಭಪಾತದ ನಂತರ ಚೇತರಿಸಿಕೊಳ್ಳುತ್ತಿರುವ ಬುದ್ಧಿಮಾಂದ್ಯ ಸಂತ್ರಸ್ತ ಯುವತಿಯ ನಿವಾಸಕ್ಕೆ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಶ್ರೀಮತಿ ಡಾ. ನಾಗಲಕ್ಷ್ಮಿ ಚೌಧರಿ ಅವರು ಇಂದು ನೇರ ಭೇಟಿ ನೀಡಿದರು.
ಗ್ರಾಮದ ರೇಗಡ ರಸ್ತೆಯ ಬಳಿಯಿರುವ ರೇಕ್ ಪತ್ರೆಯ ಸಣ್ಣ ಗುಡಿಸಲಿನಲ್ಲಿ ವಾಸಿಸುತ್ತಿರುವ ಸಂತ್ರಸ್ತೆ ಹಾಗೂ ಆಕೆಯ ತಾಯಿಯನ್ನು ಭೇಟಿಯಾದ ಆಯೋಗದ ಅಧ್ಯಕ್ಷರು, ಸಂತ್ರಸ್ತೆಯ ಕೈ ಹಿಡಿದು ಆತ್ಮಸ್ಥೈರ್ಯ ತುಂಬುವ ಸಾಂತ್ವನದ ಮಾತುಗಳನ್ನಾಡಿದರು.
ಭೇಟಿಯ ಸಂದರ್ಭದಲ್ಲಿ, ಸಂತ್ರಸ್ತ ಯುವತಿಯ ಕೌಟುಂಬಿಕ ಸ್ಥಿತಿ ಹಾಗೂ ಆರ್ಥಿಕ ಸಂಕಷ್ಟವನ್ನು ಕಂಡು ತೀವ್ರ ಕಳವಳ ವ್ಯಕ್ತಪಡಿಸಿದ ಅಧ್ಯಕ್ಷರು, ಸ್ಥಳದಲ್ಲೇ ಉಪಸ್ಥಿತರಿದ್ದ ರೋಣ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ (EO) ಚಂದ್ರಶೇಖರ ಕಂದಕೂರು, ರೋಣ ತಹಶೀಲ್ದಾರ್ ನಾಗರಾಜ್ ಕೆ., ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ (CDPO) ಅಧಿಕಾರಿಗಳು ಹಾಗೂ ಪೋಲಿಸ್ ಅಧಿಕಾರಿಗಳೊಡನೆ ಸಮಾಲೋಚನೆ ನಡೆಸಿದರು.
ಪ್ರಸ್ತುತ ಸಂತ್ರಸ್ತೆ ವಾಸಿಸುತ್ತಿರುವ ಪತ್ರೆಯ ಶೆಡ್ ಸುರಕ್ಷಿತವಾಗಿಲ್ಲದಿರುವುದರಿಂದ, ಆಕೆಗೆ ಆಶ್ರಯ ಯೋಜನೆಯಡಿ ತಕ್ಷಣವೇ ಸೂಕ್ತ ನಿವೇಶನ (ಸೈಟ್) ಗುರುತಿಸಿ ಮನೆ ನಿರ್ಮಿಸಿಕೊಡಲು ತಾಲೂಕು ಪಂಚಾಯಿತಿ ಇಓ ಹಾಗೂ ತಹಶೀಲ್ದಾರರಿಗೆ ಖಡಕ್ ಸೂಚನೆ ನೀಡಿದರು.
ಪರಿಶಿಷ್ಟ ಜಾತಿಗೆ ಸೇರಿದ ಬುದ್ಧಿಮಾಂದ್ಯ ಸಂತ್ರಸ್ತೆಗೆ ಸರ್ಕಾರದಿಂದ ದೊರೆಯಬೇಕಾದ ಬಾಕಿ ಪರಿಹಾರ ಧನ, ಮಾಸಾಶನ/ಪಿಂಚಣಿ ಹಾಗೂ ಅಂಗನವಾಡಿಯಿಂದ ಲಭಿಸಬೇಕಾದ ಪೌಷ್ಟಿಕ ಆಹಾರ ತಕ್ಷಣವೇ ತಲುಪುವಂತೆ ಮಾಡಲು ಇಲಾಖಾಧಿಕಾರಿಗಳಿಗೆ ಜವಾಬ್ದಾರಿ ವಹಿಸಿದರು.
ನಿರಂತರ ವೈದ್ಯಕೀಯ ತಪಾಸಣೆ ಹಾಗೂ ಪೋಲಿಸ್ ಭದ್ರತೆ ಒದಗಿಸುವಂತೆ ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಿದರು.
ಕಾನೂನು ಮತ್ತು ಸಮಾಜ ಸಂತ್ರಸ್ತೆಯ ಪರವಾಗಿ ನಿಲ್ಲಬೇಕು. ಮಾಧ್ಯಮಗಳಲ್ಲಿ ಬಂದ ವರದಿಯಂತೆ ಆಕೆಗೆ ಸಿಗಬೇಕಾದ ಯಾವುದೇ ಸರ್ಕಾರಿ ನೆರವು ವಿಳಂಬವಾಗಬಾರದು. ಶೀಘ್ರದಲ್ಲೇ ಈ ಎಲ್ಲಾ ಪ್ರಕ್ರಿಯೆ ಪೂರ್ಣಗೊಳಿಸಿ ಆಯೋಗಕ್ಕೆ ವರದಿ ಸಲ್ಲಿಸಬೇಕು” ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು.
ಈ ಭೇಟಿಯ ವೇಳೆ ಮಹಿಳಾ ಆಯೋಗದ ಅಧಿಕಾರಿಗಳು, ಸ್ಥಳೀಯ ಪೋಲಿಸ್ ಸಿಬ್ಬಂದಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.



