ಯರಗಟ್ಟಿ ಹಾಗೂ ರಾಮದುರ್ಗ ತಾಲೂಕಿನ ವಿವಿಧ ಪ್ರದೇಶಗಳಿಗೆ ಸಚಿವ ಸತೀಶ್ ಜಾರಕಿಹೊಳಿ ಭೇಟಿ

WhatsApp Group Join Now

ಬೆಳಗಾವಿ ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ಉಂಟಾಗಿರುವ ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಲೋಕೋಪಯೋಗಿ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಭಾನುವಾರ (ಆ.16) ಯರಗಟ್ಟಿ ಹಾಗೂ ರಾಮದುರ್ಗ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬರ ಪರಿಸ್ಥಿತಿ ಹಾಗೂ ಬೆಳೆಹಾನಿಯನ್ನು ಪರಿಶೀಲಿಸಿದರು.

ಯರಗಟ್ಟಿ ತಾಲೂಕಿನ ಕುರಬಗಟ್ಟಿ ಗ್ರಾಮದಲ್ಲಿ ರೈತರ ಜಮೀನುಗಳಿಗೆ ಭೇಟಿ ನೀಡಿದ ಸಚಿವರು, ಮಳೆ ಕೊರತೆಯಿಂದ ಹಾನಿಗೊಳಗಾಗಿರುವ ವಿವಿಧ ಬೆಳೆಗಳ ಸ್ಥಿತಿಗತಿಗಳನ್ನು ವೀಕ್ಷಿಸಿದರು. ಸರ್ವೆ ನಂಬರ್ 494ರ ರೇವಪ್ಪ ಚಿಕ್ಕಣ್ಣವರ ಅವರ ಜಮೀನಿನಲ್ಲಿ ಹೆಸರು ಬೆಳೆ ಹಾನಿಯಾಗಿರುವುದನ್ನು ಪರಿಶೀಲಿಸಿದರು.

ಅದೇ ಗ್ರಾಮದ ಸರ್ವೆ ನಂಬರ್ 294ರ ಶಾಂತವ್ವ ಚಿಕ್ಕೋಡಿ ಇವರ ಜಮೀನಿನಲ್ಲಿ ಶೇಂಗಾ ಬೆಳೆ ಹಾನಿಯನ್ನು ಸಚಿವರು ಪರಿಶೀಲಿಸಿದರು. ಸರ್ವೆ ನಂಬರ್ 495ರ ಗಂಗಾಧರ ಉಳ್ಳಿಗಡ್ಡಿ ಅವರ ಜಮೀನಿನಲ್ಲಿ ಮೆಕ್ಕೆಜೋಳ ಬೆಳೆ ಒಣಗಿರುವ ಸ್ಥಿತಿಯನ್ನು ವೀಕ್ಷಿಸಿ ರೈತರಿಂದ ಮಾಹಿತಿ ಪಡೆದರು.

ಇದೇ ಸಂದರ್ಭದಲ್ಲಿ ಸರ್ವೆ ನಂಬರ್ 8/13ರ ಹೊನ್ನಪ್ಪ ಪೂಜೇರ ಹಾಗೂ ಸರ್ವೆ ನಂಬರ್ 495ರ ಚನ್ನಪ್ಪ ಉಳ್ಳಿಗಡ್ಡಿ ಅವರ ಜಮೀನುಗಳಿಗೆ ಭೇಟಿ ನೀಡಿ ಮೆಕ್ಕೆಜೋಳ ಬೆಳೆ ಹಾನಿಯ ಪ್ರಮಾಣವನ್ನು ಪರಿಶೀಲಿಸಿ., ಬೆಳೆಗಳ ಸ್ಥಿತಿ, ಮಳೆಯ ಪ್ರಮಾಣ ಹಾಗೂ ರೈತರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಅಧಿಕಾರಿಗಳಿಂದ ಸಚಿವರು ಮಾಹಿತಿ ಪಡೆದರು.

ನಂತರ ರಾಮದುರ್ಗ ತಾಲೂಕಿನ ಇಟ್ನಾಳ ಗ್ರಾಮಕ್ಕೆ ಭೇಟಿ ನೀಡಿದ ಸಚಿವ ಸತೀಶ ಜಾರಕಿಹೊಳಿ ಅವರು, ಸರ್ವೆ ನಂಬರ್ 324/4ರ ಶಂಕ್ರಪ್ಪ ಕೊಪ್ಪದ ಅವರ ಜಮೀನಿನಲ್ಲಿ ಹಾನಿಗೊಳಗಾದ ಉದ್ದು ಬೆಳೆಯನ್ನು ಪರಿಶೀಲಿಸಿದರು. ಮಳೆ ಕೊರತೆಯಿಂದ ಬೆಳೆಗಳ ಬೆಳವಣಿಗೆ ಕುಂಠಿತವಾಗಿರುವ ಕುರಿತು ರೈತರು ವಿವರಿಸಿದರು.

ಹುಲಕುಂದ ಗ್ರಾಮದಲ್ಲಿ ಸರ್ವೆ ನಂಬರ್ 215/1ರ ಇಂದ್ರಕುಮಾರ ಪಾಟೀಲ ಅವರ ಜಮೀನಿನಲ್ಲಿನ ಹತ್ತಿ ಬೆಳೆ ಹಾಗೂ ಸರ್ವೆ ನಂಬರ್ 214/2ರ ಲಾಲಸಾಬ್ ನದಾಫ್ ಅವರ ಜಮೀನಿನಲ್ಲಿನ ಹೆಸರು ಬೆಳೆ ಹಾನಿಯ ಕುರಿತು ಮಾಹಿತಿ ಪಡೆದು, ಬೆಳೆ ನಷ್ಟದ ರೈತರೊಂದಿಗೆ ಚರ್ಚಿಸಿದರು.

ಚಿಪ್ಪಲಕಟ್ಟಿ ಗ್ರಾಮದಲ್ಲಿ ಸರ್ವೆ ನಂಬರ್ 117/2ರ ಸುರೇಶ ಕೌಜಲಗಿ ಅವರ ಜಮೀನಿನಲ್ಲಿ ಹೆಸರು, ತೊಗರಿ ಹಾಗೂ ಈರುಳ್ಳಿ ಬೆಳೆಗಳ ಹಾನಿಯನ್ನು ಪರಿಶೀಲಿಸಲಾಯಿತು. ಇದೇ ಗ್ರಾಮದ ಸರ್ವೆ ನಂಬರ್ 84/1ರ ಪ್ರಮೋದ ಸಿಂಗಾರು ಅವರ ಜಮೀನಿನಲ್ಲಿ ಈರುಳ್ಳಿ ಬೆಳೆ ಹಾನಿಯಾಗಿರುವುದನ್ನು ಸಚಿವರು ವೀಕ್ಷಿಸಿದರು.

ಬೀಜಗುಪ್ಪಿ ಗ್ರಾಮದಲ್ಲಿ ಸರ್ವೆ ನಂಬರ್ 94/1ರ ಪುಂಡಲಿಕ ಭಜಂತ್ರಿ ಹಾಗೂ ಸರ್ವೆ ನಂಬರ್ 96ರ ದುಂಡಪ್ಪ ಪಾಟೀಲ ಅವರ ಜಮೀನಿನಲ್ಲಿನ ಹತ್ತಿ ಬೆಳೆ ಹಾನಿಯನ್ನು ಪರಿಶೀಲಿಸಿದರು. ಸರ್ವೆ ನಂಬರ್ 111ರ ಅಡಿವೆಪ್ಪ ಪಾಟೀಲ ಹಾಗೂ ಸರ್ವೆ ನಂಬರ್ 101/2ರ ವೀರುಪಾಕ್ಷಿ ಅವರ ಜಮೀನಿನಲ್ಲಿ ಈರುಳ್ಳಿ ಬೆಳೆ ಹಾನಿಯ ಮಾಹಿತಿ ಪಡೆದರು.

ಕದಾಂಪುರ ಗ್ರಾಮದಲ್ಲಿ ಸರ್ವೆ ನಂಬರ್ 37/4ರ ಬಸವರಾಜ ಹಾಲ್ಳೊಳಿ ಅವರ ಜಮೀನಿನಲ್ಲಿನ ಹೆಸರು ಬೆಳೆ ಹಾಗೂ ಸರ್ವೆ ನಂಬರ್ 52/2ರ ಗುರುಸಿದ್ದಪ್ಪ ನರಗುಂದ ಮತ್ತು ಸರ್ವೆ ನಂಬರ್ 52/1ರ ಈರಣ್ಣಗೌಡ ಪಾಟೀಲ ಅವರ ಜಮೀನಿನಲ್ಲಿನ ಈರುಳ್ಳಿ ಬೆಳೆ ಹಾನಿಯನ್ನು ಸಚಿವರು ಪರಿಶೀಲಿಸಿದರು.

ಬೆಳೆಹಾನಿ; ವಸ್ತಸ್ಥಿತಿ ದಾಖಲಿಸಲು ಸೂಚನೆ:

ಬರ ಪರಿಸ್ಥಿತಿಯಿಂದ ರೈತರು ಎದುರಿಸುತ್ತಿರುವ ಸಮಸ್ಯೆಗಳು, ಬೆಳೆಹಾನಿಯ ಪ್ರಮಾಣ ಹಾಗೂ ಸರ್ಕಾರದ ವತಿಯಿಂದ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಚಿವರು ಸ್ಥಳದಲ್ಲಿದ್ದ ರೈತರು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿದ ಸಚಿವ ಸತೀಶ್ ಜಾರಕಿಹೊಳಿ ಅವರು, ಬೆಳೆಹಾನಿಯ ವಾಸ್ತವಿಕ ಸ್ಥಿತಿಯನ್ನು ಸಮರ್ಪಕವಾಗಿ ದಾಖಲಿಸಿ, ಸರ್ಕಾರದ ಮಾರ್ಗಸೂಚಿಗಳನ್ವಯ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಸರ್ಕಾರದ ಮುಖ ಸಚೇತಕರಾದ ಅಶೋಕ ಪಟ್ಟಣ, ಸವದತ್ತಿ ಶಾಸಕ ವಿಶ್ವಾಸ ವೈದ್ಯ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಉಪಾಧ್ಯಕ್ಷರಾದ ಸುನೀಲ ಹನುಮಣ್ಣವರ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಕೆ, ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಎಚ್. ಡಿ. ಕೋಳೆಕರ, ಯರಗಟ್ಟಿ ತಹಶೀಲ್ದಾರ್ ಎಂ.ವಿ. ಗುಂಡಪ್ಪಗೋಳ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ರೈತರು ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

About The Author