ಸವದತ್ತಿ ಜಿ. ಜಿ. ಚೋಪ್ರಾ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರ – ಪಾಲಕರ ಸಭೆ

WhatsApp Group Join Now

ಸವದತ್ತಿ : ಕಾಲೇಜು ಹಂತದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳ ಮೇಲೆ ಜಾಗೃತಿ ವಹಿಸುವುದು ಪಾಲಕ ಮತ್ತು ಶಿಕ್ಷಕರ ಆದ್ಯ ಕರ್ತವ್ಯವಾಗಿದೆ ಎಂದು ಕಾಲೇಜಿನ ಹಿರಿಯ ಉಪನ್ಯಾಸಕರಾದ ಎಸ್. ಬಿ. ಕಿವುಡಿ ಹೇಳಿದರು. ಸವದತ್ತಿಯ ಶ್ರೀ ಜಿ.ಜಿ. ಚೋಪ್ರಾ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರ ಮತ್ತು ಪಾಲಕರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತ ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಪ್ರಗತಿ ಹೊಂದಿ ಸಾಧನೆ ಮಾಡಲು ಪಾಲಕರು ಉಪನ್ಯಾಸಕರೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕೆಂದು ತಿಳಿ ಹೇಳಿದರು.

ವಿಜ್ಞಾನ ವಿಭಾಗದ ಉಪನ್ಯಾಸಕರಾದ ಡಾ ಆರ್. ಸಿ.ಬಾರಾಟಕ್ಕೆ ಮಾತನಾಡಿ ಸರ್ಕಾರಿ ಕಾಲೇಜಿನಲ್ಲಿ ಲಭ್ಯ ಇರುವ ಎಲ್ಲ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿ ವಿದ್ಯಾರ್ಥಿಗಳು ಸತತ ಅಧ್ಯಯನ ಮತ್ತು ಉಪನ್ಯಾಸಕರ ಸೂಕ್ತ ಮಾರ್ಗದರ್ಶನದೊಂದಿಗೆ ಲಭ್ಯವಿದ್ದ ಸಂಪನ್ಮೂಲಗಳನ್ನು ಉಪಯೋಗಿಸಿಕೊಂಡು ಸರ್ಕಾರ ಮತ್ತು ಇಲಾಖೆಯ ಕನಸನ್ನು ಈಡೇರಿಸಬೇಕೆಂದು ಕರೆ ನೀಡಿದರು.

ವಿದ್ಯಾರ್ಥಿ ಪಾಲಕರಾದ ಜ್ಞಾನೇಶ ನವಲೆ ವಿದ್ಯಾರ್ಥಿಗಳು ಮೊದಲು ಜನ್ಮ ನೀಡಿದ ತಂದೆ ತಾಯಿಗೆ ಮತ್ತು ವಿದ್ಯೆ ನೀಡುವ ಶಿಕ್ಷಕರಿಗೆ ಗೌರವ ನೀಡುವ ಮೂಲಕ ಸಂಸ್ಕಾರವನ್ನು ಕಲಿಯಬೇಕೆಂದು ಹೇಳಿದರು.
ಪ್ರವೀಣ್ ದಂಡ್ಯಾಳ ಹಾಗೂ ಇನ್ನಿತರ ಪಾಲಕರು ಮಾತನಾಡಿದರು.

ವಿದ್ಯಾರ್ಥಿಗಳು ಕಾಲೇಜಿನ ಸಿಗುತ್ತಿರುವ ಗುಣಮಟ್ಟದ ಶಿಕ್ಷಣ ಹಾಗೂ ಲಭ್ಯವಿರುವ ಸೌಲಭ್ಯಗಳ ಬಗ್ಗೆ ತುಂಬಾ ಸಂತೋಷದಿಂದ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಪ್ರಾಚಾರ್ಯರು ಹಾಗೂ ಎಲ್ಲ ಉಪನ್ಯಾಸಕರು ಎಲ್.ಬಿ.ಎ. ಹಾಗೂ ಕಿರು ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳನ್ನು ಪಡೆದ ಕಲಾ, ವಾಣಿಜ್ಯ, ವಿಜ್ಞಾನ ವಿಭಾಗದ ಎಲ್ಲ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಪುಷ್ಪವನ್ನು ನೀಡಿ ಅಭಿನಂದಿಸಿ ಪ್ರೋತ್ಸಾಹಿಸಿದರು. ಈ ಸಂದರ್ಭದಲ್ಲಿ ಸರ್ಕಾರದಿಂದ ಉಚಿತವಾಗಿ ಪೂರೈಕೆಯಾದ ವಿಜ್ಞಾನ ವಿಭಾಗದ ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.

ವಾಣಿಜ್ಯಶಾಸ್ತ್ರ ಉಪನ್ಯಾಸಕಿಯರಾದ ಶ್ರೀದೇವಿ ಹಂಜೆ ಮಾತನಾಡಿ ಪಾಲಕರ ಮತ್ತು ಉಪನ್ಯಾಸಕರ ಸದಾ ಸಂಪರ್ಕದಿಂದ ಮಾತ್ರ ವಿದ್ಯಾರ್ಥಿ ವಿದ್ಯಾಭ್ಯಾಸದ ಕಡೆ ಗಮನ ಹರಿಸಲು ಸಾಧ್ಯ. ಮನೆಯಲ್ಲಿ ಪಾಲಕರು ತಮ್ಮ ಮಕ್ಕಳ ಅಧ್ಯಯನದತ್ತ ನಿಗಾ ವಹಿಸಬೇಕೆಂದು ಹೇಳುತ್ತ ಶಿಕ್ಷಣದ ಮಹತ್ವ ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಚಾರ್ಯರಾದ ಆರ್. ಪಿ. ಕೌಜಲಗಿ ಮಾತನಾಡಿ ಪಾಲಕರು ತಮ್ಮ ಮಕ್ಕಳ ವಿದ್ಯಾಭ್ಯಾಸದ ಪ್ರಗತಿ ಹಾಗೂ ಹಾಜರಾತಿ ಕುರಿತು ಚರ್ಚಿಸಲು ಕಾಲೇಜಿನಲ್ಲಿ ಹಮ್ಮಿಕೊಂಡ ಇಂತಹ ಸಭೆಗಳಲ್ಲಿ ಕೆಲಸದ ಒತ್ತಡದ ಮಧ್ಯೆಯು ಸಕ್ರಿಯವಾಗಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು. ಕಾಲೇಜು ಹಂತದಲ್ಲಿ ಮಕ್ಕಳ ಏಕಾಗ್ರತೆಗೆ ಅಡ್ಡಿಯಾದ ಮೊಬೈಲ್ ಬಿಡಿಸಿ, ಮನೆಯಲ್ಲಿ ಪಾಲಕರು ಮಕ್ಕಳಿಗೆ ಪುಸ್ತಕ ಹಿಡಿಸಿ ಓದಿಸುವ ಸಂದರ್ಭ ಬಂದಿದೆ ಎಂದು ತಿಳಿಸುವ ಮೂಲಕ ವಿದ್ಯಾರ್ಥಿಗಳು ಸರ್ಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಉನ್ನತ ಶಿಕ್ಷಣ ಪಡೆದು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಪಾಲಕರಾದ ಅನಿಲ ಕುಲಕರ್ಣಿ, ಮಂಜುಳಾ ಪಾಟೀಲ, ಲಕ್ಷ್ಮೀ ಚಿಕ್ಕನವರ ಪುಂಡಲೀಕ ಕಾಳಗಿ, ಸೋಮಶೇಖರ ಬೊಮ್ಮನಗಿ, ಶ್ರೀದೇವಿ ಸೂರ್ಯವಂಶಿ ಉಪನ್ಯಾಸಕರಾದ ಎಸ್. ಎಂ. ಪಾಟೀಲ, ಶಿಲ್ಪಾ ಪೂಜೇರ, ಸೌಜನ್ಯ ಕುಲಕರ್ಣಿ, ಶಿವಾನಿ ಮಠಪತಿ, ಉಮಾದೇವಿ ಎಂ. ಕೆ., ಆನಂದ ಯರಗಟ್ಟಿ, ಮಂಜುನಾಥ ಹುಲ್ಲೂರ, ಗಿರಿಜಾ ಹುಂಡನವರ ಇನ್ನಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಮಂಜುಳಾ ತೇಗೂರ ಸ್ವಾಗತಿಸಿ, ನಿರೂಪಿಸಿದರು. ಜಿ.ಜಿ. ಖೋದಾನಪುರ ವಂದಿಸಿದರು.

About The Author