ಮಾಹಿತಿ ಹಕ್ಕು ಕಾಯ್ದೆ ನಿರ್ಲಕ್ಷಿಸಿದರೆ ಕಠಿಣ ಕ್ರಮ.

WhatsApp Group Join Now

ಬೆಂಗಳೂರು:ರಾಜ್ಯದಲ್ಲಿ ಮಾಹಿತಿ ಹಕ್ಕು ಕಾಯ್ದೆಯನ್ನು ನಿರ್ಲಕ್ಷಿಸುವ ಹಾಗೂ ಆಯೋಗದ ವಿಚಾರಣೆಗಳಿಗೆ ಗೈರುಹಾಜರಾಗುವ ಸಾರ್ವಜನಿಕ ಮಾಹಿತಿ ಅಧಿಕಾರಿಗಳ ವಿರುದ್ಧ ಕರ್ನಾಟಕ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಲಿದೆ.

ಸಾರ್ವಜನಿಕರಿಗೆ ನಿಗದಿತ ಸಮಯದಲ್ಲಿ ಮಾಹಿತಿ ನೀಡದೆ ಸತಾಯಿಸುವ ಹಾಗೂ ಆಯೋಗದ ನೋಟಿಸ್‌ಗಳಿಗೆ ಬೆಲೆ ನೀಡದ ಪ್ರವೃತ್ತಿಯನ್ನು ನಿಯಂತ್ರಿಸಲು ಸರ್ಕಾರ ಹೊಸ ಅಧಿಕೃತ ಸುತ್ತೋಲೆಯನ್ನು ಹೊರಡಿಸಿದೆ.

ಮಾಹಿತಿ ಆಯೋಗದಲ್ಲಿ ಬಾಕಿ ಉಳಿದಿದ್ದ ಪ್ರಕರಣವೊಂದರ ವಿಚಾರಣೆ ವೇಳೆ, ಅಧಿಕಾರಿಗಳು ನಿಯಮಾವಳಿಗಳ ಪ್ರಕಾರ ನಿಗದಿತ ಕಾಲಮಿತಿಯಲ್ಲಿ ಮಾಹಿತಿ ಒದಗಿಸದಿರುವುದು ಮತ್ತು ಆಯೋಗದ ವಿಚಾರಣೆಗೆ ಹಾಜರಾಗದೆ ಬೇಜವಾಬ್ದಾರಿತನ ತೋರಿರುವುದನ್ನು ಆಯೋಗ
ಗಂಭೀರವಾಗಿ ಪರಿಗಣಿಸಿ ಆಕ್ಷೇಪ ವ್ಯಕ್ತಪಡಿಸಿತ್ತು.

ಈ ಹಿನ್ನೆಲೆಯಲ್ಲಿ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಲು ಸರ್ಕಾರ ತುರ್ತು ಕ್ರಮ ಕೈಗೊಂಡಿದೆ. ಸರ್ಕಾರದ ಅಧೀನ ಕಾರ್ಯದರ್ಶಿ ಹೊರಡಿಸಿರುವ ಸುತ್ತೋಲೆಯ ಪ್ರಕಾರ, ಎಲ್ಲಾ ಇಲಾಖೆಗಳ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಹಾಗೂ ಪ್ರಥಮ ಮೇಲ್ಮನವಿ ಪ್ರಾಧಿಕಾರಗಳು ಆರ್‌ಟಿಐ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ವಿಳಂಬ ಮಾಡದೆ ನಿಗದಿತ ಅವಧಿಯೊಳಗೆ
ಕಡ್ಡಾಯವಾಗಿ ಇತ್ಯರ್ಥಪಡಿಸಬೇಕು.

ನಾಗರಿಕರ ಅರ್ಜಿಗಳನ್ನು ತಳ್ಳಿಹಾಕುವುದು ಅಥವಾ ಮಾಹಿತಿ ನೀಡಲು ತಡಮಾಡುವುದು ಕಾನೂನು ಉಲ್ಲಂಘನೆಯಾಗಲಿದ್ದು, ಅಂತಹ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರಗಿಸಲಾಗುವುದು ಎಂದು ಎಚ್ಚರಿಸಲಾಗಿದೆ.

ಮಾಹಿತಿ ಆಯೋಗದಿಂದ ವಿಚಾರಣೆಗೆ ಹಾಜರಾಗಲು ಸಮನ್ಸ್ ಅಥವಾ ನೋಟಿಸ್‌ ಜಾರಿಯಾದಾಗ ಸಂಬಂಧಪಟ್ಟ ಅಧಿಕಾರಿಗಳೇ ಖುದ್ದು ಉಪಸ್ಥಿತರಿರಬೇಕು.

ಅನಿವಾರ್ಯ ಪರಿಸ್ಥಿತಿಯಿದ್ದರೆ ಮಾತ್ರ, ಕಾಯ್ದೆಯ ಸಂಪೂರ್ಣ ಅರಿವು ಹೊಂದಿರುವ ಅರ್ಹ ಅಧಿಕಾರಿಗೆ ಅಧಿಕೃತ ಪ್ರಾಧಿಕಾರ ಪತ್ರ ನೀಡಿ ವಿಚಾರಣೆಗೆ ಕಳುಹಿಸಬೇಕೆಂದು ಸರ್ಕಾರ ತಾಕೀತು ಮಾಡಿದೆ. ವಿಚಾರಣೆಗೆ ಹಾಜರಾಗದೆ ಹಾರಿಕೆಯ ಉತ್ತರ ನೀಡುವ ಪರಿಪಾಠಕ್ಕೆ ಇನ್ನುಮುಂದೆ ಕಡಿವಾಣ ಬೀಳಲಿದೆ ಎಂದು ತಿಳಿಸಲಾಗಿದೆ.

About The Author