ಕಲಬುರಗಿ: ನಗರದ ಸೂಪರ್ ಮಾರ್ಕೆಟ್‌ನಲ್ಲಿರುವ ಚೇಂಬರ್ ಆಫ್ ಕಾಮರ್ಸ್ ಕಚೇರಿಯಲ್ಲಿ ಹಿಂದುಳಿದ ವರ್ಗಗಳ (OBC) ಮೋರ್ಚಾದ ರಾಜ್ಯಾಧ್ಯಕ್ಷರು ಹಾಗೂ ಬಿಜೆಪಿ ಎಂ.ಎಲ್.ಸಿ. ರಘು ಕೌಟಿಲ್ಯ ಅವರನ್ನು ಕಲಬುರಗಿ ಜಿಲ್ಲಾ ಹಡಪದ ಅಪ್ಪಣ್ಣ ಸಮಾಜದ ವತಿಯಿಂದ ಸನ್ಮಾನಿಸಿ, ಪುಷ್ಪಗುಚ್ಛ ನೀಡಿ ಅಭಿನಂದನೆ ಸಲ್ಲಿಸಲಾಯಿತು.
ಇದೇ ಸಂದರ್ಭದಲ್ಲಿ ಸಮಾಜದ ವಿವಿಧ ಬೇಡಿಕೆಗಳು ಹಾಗೂ ಸಮಸ್ಯೆಗಳನ್ನು ಒಳಗೊಂಡ ಮನವಿ ಪತ್ರವನ್ನು ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಹಡಪದ ಅಪ್ಪಣ್ಣ ಸಮಾಜದ ಪ್ರತ್ಯೇಕ ಅಭಿವೃದ್ಧಿ ನಿಗಮದ ಕುರಿತು ಚರ್ಚಿಸಲಾಯಿತು. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ವಿವಿಧ ಕಾಯಕ ಸಮಾಜಗಳೊಂದಿಗೆ ಹಡಪದ ಅಪ್ಪಣ್ಣ ಸಮಾಜಕ್ಕೂ ಪ್ರತ್ಯೇಕ ಅಭಿವೃದ್ಧಿ ನಿಗಮ ಜಾರಿಗೆ ಬಂದಿತ್ತು. ಆದರೆ ನಿಗಮ ರಚನೆಯಾದ ನಂತರ ಅಗತ್ಯ ಪ್ರಮಾಣದಲ್ಲಿ ಅನುದಾನ ದೊರೆಯದಿರುವುದು ಸಮಾಜಕ್ಕೆ ನೋವಿನ ಸಂಗತಿಯಾಗಿದೆ ಎಂದು ಸಮಾಜದ ಮುಖಂಡರು ರಘು ಕೌಟಿಲ್ಯ ಅವರ ಗಮನಕ್ಕೆ ತಂದರು.
ಹಡಪದ ಅಪ್ಪಣ್ಣ ಸಮಾಜದ ಪ್ರತ್ಯೇಕ ಅಭಿವೃದ್ಧಿ ನಿಗಮಕ್ಕೆ ₹100 ಕೋಟಿ ಅನುದಾನ ಮೀಸಲಿಡಬೇಕು ಹಾಗೂ ನಿಗಮವನ್ನು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸಿ ಸಮಾಜದ ಜನರಿಗೆ ಸರ್ಕಾರದ ಯೋಜನೆಗಳ ಪ್ರಯೋಜನ ತಲುಪಿಸಬೇಕು ಎಂದು ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ರಘು ಕೌಟಿಲ್ಯ ಅವರು, ಸಣ್ಣ ಹಾಗೂ ಕಾಯಕ ಸಮಾಜಗಳ ಅಭಿವೃದ್ಧಿಗೆ ಸರ್ಕಾರದಿಂದ ಅಗತ್ಯ ನೆರವು ದೊರೆಯಬೇಕು. ಹಡಪದ ಅಪ್ಪಣ್ಣ ಸಮಾಜ ಸೇರಿದಂತೆ ವಿವಿಧ ಕಾಯಕ ಸಮಾಜಗಳ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಪರಿಹಾರಕ್ಕಾಗಿ ಧ್ವನಿ ಎತ್ತುವುದಾಗಿ ತಿಳಿಸಿದರು.
ವಿಶ್ವಕರ್ಮ ಯೋಜನೆಯ ಸೌಲಭ್ಯ ಕಲ್ಪಿಸಲು ಮನವಿ
ಹಡಪದ ಅಪ್ಪಣ್ಣ ಸಮಾಜದ ಕ್ಷೌರಿಕ ವೃತ್ತಿ ಮಾಡುವ ಕಾಯಕ ಬಂಧುಗಳಿಗೆ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸಬೇಕು ಎಂದು ಮನವಿ ಮಾಡಲಾಯಿತು.
ವಿಶ್ವಕರ್ಮ ಯೋಜನೆಯಡಿ ಅರ್ಜಿ ಸಲ್ಲಿಸಿರುವ ಕೆಲವರಿಗೆ ಯೋಜನೆಯ ಪ್ರಯೋಜನ ಪಡೆಯಲು ಅವಕಾಶ ದೊರೆಯುತ್ತಿಲ್ಲ. ಕೆಲವರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದರೂ ತರಬೇತಿಗೆ ಕರೆಯಲಾಗಿಲ್ಲ. ಇನ್ನೂ ಕೆಲವರು ತರಬೇತಿ ಪೂರ್ಣಗೊಳಿಸಿದರೂ ಯೋಜನೆಯಡಿ ನೀಡಬೇಕಾದ ₹15,000 ಮೌಲ್ಯದ ಟೂಲ್ ಕಿಟ್ ಇನ್ನೂ ದೊರೆತಿಲ್ಲ ಎಂಬ ಸಮಸ್ಯೆಯನ್ನು ಸಮಾಜದ ಮುಖಂಡರು ವಿವರಿಸಿದರು.
ಈ ಕುರಿತು ಕಲಬುರಗಿ ಜಿಲ್ಲಾ ಹಡಪದ ಅಪ್ಪಣ್ಣ ಸಮಾಜದ ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ ಬಿ. ಹಡಪದ ಸುಗೂರ ಎನ್. ಅವರು ರಘು ಕೌಟಿಲ್ಯ ಅವರ ಗಮನಕ್ಕೆ ತಂದು, ವಿಶ್ವಕರ್ಮ ಯೋಜನೆಯಡಿ ಅರ್ಜಿ ಸಲ್ಲಿಸಿರುವ ಹಾಗೂ ತರಬೇತಿ ಪೂರ್ಣಗೊಳಿಸಿರುವ ಹಡಪದ ಅಪ್ಪಣ್ಣ ಸಮಾಜದ ಕಾಯಕ ಬಂಧುಗಳಿಗೆ ಯೋಜನೆಯ ಸಂಪೂರ್ಣ ಸೌಲಭ್ಯ ದೊರೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಅರ್ಹ ಫಲಾನುಭವಿಗಳಿಗೆ ಯೋಜನೆಯಡಿ ದೊರೆಯಬೇಕಾದ ಸಾಲ, ತರಬೇತಿ ಹಾಗೂ ಟೂಲ್ ಕಿಟ್ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಯಾವುದೇ ತೊಂದರೆಯಿಲ್ಲದೆ ತಲುಪಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಕಾಯಕ ಸಮಾಜಗಳ ಸಮಸ್ಯೆಗಳ ಪರಿಹಾರಕ್ಕೆ ಧ್ವನಿ
ಕಾರ್ಯಕ್ರಮದಲ್ಲಿ ವಿವಿಧ ಸಣ್ಣ ಕಾಯಕ ಸಮಾಜಗಳ ಮುಖಂಡರೊಂದಿಗೆ ರಘು ಕೌಟಿಲ್ಯ ಅವರು ಸಂವಾದ ನಡೆಸಿ, ಅವರ ಸಮಸ್ಯೆಗಳನ್ನು ಆಲಿಸಿದರು. ಕಾಯಕ ಸಮಾಜದ ಬಂಧುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಹಡಪದ ಅಪ್ಪಣ್ಣ ಸಮಾಜ ಸೇರಿದಂತೆ ವಿವಿಧ ಕಾಯಕ ಸಮಾಜಗಳ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರದ ಮಟ್ಟದಲ್ಲಿ ಅಗತ್ಯ ಪ್ರಯತ್ನ ಮಾಡುವುದಾಗಿ ರಘು ಕೌಟಿಲ್ಯ ಅವರು ತಿಳಿಸಿದರು. ಸಮಾಜದ ಬೇಡಿಕೆಗಳು ಹಾಗೂ ಕಾಯಕ ಬಂಧುಗಳಿಗೆ ಆಗುತ್ತಿರುವ ತೊಂದರೆಗಳ ಕುರಿತು ವೇದಿಕೆಯಲ್ಲಿ ಧ್ವನಿ ಎತ್ತುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕಲಬುರಗಿ ಜಿಲ್ಲಾ ಹಡಪದ ಅಪ್ಪಣ್ಣ ಸಮಾಜದ ಜಿಲ್ಲಾಧ್ಯಕ್ಷ ಈರಣ್ಣ ಸಿ. ಹಡಪದ ಸಣ್ಣೂರ, ಜಿಲ್ಲಾ ಗೌರವಾಧ್ಯಕ್ಷ ಬಸವರಾಜ ಹಡಪದ ಸುಗೂರ ಎನ್., ಜಿಲ್ಲಾ ಕಾರ್ಯಾಧ್ಯಕ್ಷ ಭಗವಂತ ಸಹ ಶಿಕ್ಷಕರು ಕಿರಣಗಿ, ರಾಜ್ಯ ಮಾಜಿ ಸಂಘಟನಾ ಕಾರ್ಯದರ್ಶಿ ಬಸವರಾಜ ಹಳ್ಳಿ ಶಹಾಬಾದ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ ಬಿ. ಹಡಪದ ಸುಗೂರ ಎನ್., ಜಿಲ್ಲಾ ಸಹ ಕಾರ್ಯದರ್ಶಿ ಮಹಾದೇವ ಹಡಪದ ರಾವೂರ, ಸುನೀಲ್ ಕುಮಾರ್ ಹಡಪದ ಭಾಗಹಿಪ್ಪರರ್ಗಾ, ವಿನೋದ ಅಂಬಲಗಾ, ಜೇವರ್ಗಿ ತಾಲೂಕಾಧ್ಯಕ್ಷ ತಿಪ್ಪಣ್ಣ ಹಡಪದ ನರಿಬೋಳ, ಸೋಮಶೇಖರ ಹಡಪದ ನರಿಬೋಳ, ಯಡ್ರಾಮಿ ತಾಲೂಕಾಧ್ಯಕ್ಷ ಡಾ. ಅಶೋಕ ಯಲಗೋಡ, ಮಲ್ಲಿಕಾರ್ಜುನ ಹಡಪದ ಕುಳಗೇರಾ, ನಿಂಗಣ್ಣ ಹಡಪದ ಸುಂಬಡ, ರಾಮು ಹಡಪದ ಹಂಗರಗಿ, ಮಲ್ಲಿಕಾರ್ಜುನ ಹಡಪದ ಯಡ್ರಾಮಿ, ಶಹಾಬಾದ ತಾಲೂಕಾಧ್ಯಕ್ಷ ಸಿದ್ರಾಮ ಹಡಪದ ಯಾಗಾಪೂರ, ಭೀಮಾಶಂಕರ ಹಡಪದ ಚಿತ್ತಾಪುರ, ನಾಗರಾಜ ಹಡಪದ ಸಾತನೂರ, ತೋಟೇಂದ್ರ ಹಡಪದ ಶಹಾಬಾದ ಸೇರಿದಂತೆ ಅನೇಕ ಸಮಾಜದ ಮುಖಂಡರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಹಡಪದ ಅಪ್ಪಣ್ಣ ಸಮಾಜದ ಅಭಿವೃದ್ಧಿ ನಿಗಮಕ್ಕೆ ₹100 ಕೋಟಿ ಅನುದಾನ, ವಿಶ್ವಕರ್ಮ ಯೋಜನೆಯ ಅರ್ಹ ಫಲಾನುಭವಿಗಳಿಗೆ ಸಂಪೂರ್ಣ ಸೌಲಭ್ಯ ಹಾಗೂ ₹15,000 ಮೌಲ್ಯದ ಟೂಲ್ ಕಿಟ್ ವಿತರಣೆ ಸೇರಿದಂತೆ ಕಾಯಕ ಬಂಧುಗಳ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸಬೇಕು ಎಂಬುದು ಈ ಸಂದರ್ಭದಲ್ಲಿ ಸಮಾಜದ ಪ್ರಮುಖ ಒತ್ತಾಯವಾಗಿತ್ತು. ಎಂದು ಕಲಬುರಗಿ ಜಿಲ್ಲೆಯ ಹಡಪದ ಅಪ್ಪಣ್ಣ ಸಮಾಜದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ಅವರು ತಿಳಿಸಿದರು.



