ಬೆಳಗಾವಿ: ತನ್ಮಯ ಚಿಂತನ ಚಾವಡಿ ರಾಮತೀರ್ಥನಗರ ಶ್ರೀ ಮಹದೇವ ಕೆಂಪಿಗೌಡ್ರ ಅವರ ನಿವಾಸದಲ್ಲಿ ಹಮ್ಮಿಕೊಂಡಿದ್ದ ಹಿರಿಯ ಸಾಹಿತಿಗಳಾದ ಸ. ರಾ. ಸುಳಕೂಡೆ ಅವರು ರಚಿಸಿದ ‘ಸಮಾಧಾನ’ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ತನ್ಮಯ ಚಿಂತನ ಚಾವಡಿ ಸಂಚಾಲಕರಾದ ಅಶೋಕ ಉಳ್ಳಾಗಡ್ಡಿ ಅವರು ಪ್ರಾಥಮಿಕವಾಗಿ ಮಾತನಾಡಿ, ಕಳೆದ 5 ವರ್ಷಗಳಿಂದ ನಾವು ನಾಡು ನುಡಿ ಹಾಗೂ ಸಾಹಿತ್ಯ ಸೇವೆಯನ್ನು ಮಾಡುತ್ತಾ ಬಂದಿದ್ದೇವೆ ಎಂದು ಹೇಳಿದರು. ಹಿರಿಯ ಸಾಹಿತಿಗಳು ಹಾಗೂ ವಿದ್ವಾಂಸರಾದ ಯು.ಎನ್. ಸಂಗನಾಳಮಠ ಅವರು ಪುಸ್ತಕ ಬಿಡುಗಡೆ ಮಾಡಿ, ಸುಳಕೂಡೆ ಹಾಗೂ ನಾವು ಸಮಾನ ಮನಸ್ಕರು ಹಾಗೂ ವಯಸ್ಕರ ಆದರೆ ಅವರ ಸಾಹಿತ್ಯ ಸೇವೆ ತುಂಬಾನೇ ಅದ್ಭುತವಾಗಿದೆ, ಅವರು ನಿರಂತರವಾಗಿ ಅಧ್ಯಯನಶೀಲರಾಗಿದ್ದಾರೆ ಎಂದು ಹೇಳಿದರು. ಖ್ಯಾತ ಕಾದಂಬರಿ ಕಾರರು ಹಾಗೂ ವಾಗ್ಮಿಗಳಾದ ಪ್ರೊಫೆಸರ್ ಶ್ರೀಕಾಂತ್ ಶಾನವಾಡ ಅವರು ಕೃತಿ ಪರಿಚಯವನ್ನು ಮಾಡುತ್ತಾ ಹೇಳಿದರು, ‘ಸಮಾಧಾನ’ ಎಂಬ ಕೃತಿಯು ನಮ್ಮ ಬದುಕಿಗೆ ಸಂತೃಪ್ತವಾಗಿರುವಂತಹ ಆಲೋಚನೆಗಳನ್ನು ನೀಡುತ್ತದೆ. ಈ ಕೃತಿ ಆಧುನಿಕ ಕಾಲದಲ್ಲಿ ಪ್ರಕಟವಾಗಿರಬಹುದು ಆದರೆ ಇದರಲ್ಲಿ ಇರುವಂತಹ ಆಲೋಚನೆಗಳು ಹಿಂದಿನ ಶತಮಾನದಲ್ಲಿ ಆಗಿ ಹೋದ ಸಾಹಿತಿಗಳ ಪ್ರಭಾವ ಎದ್ದು ಕಾಣುತ್ತದೆ. ಈ ಕೃತಿಯಲ್ಲಿ 25 ಲೇಖನಗಳು ಉತ್ತಮ ಬದುಕಿಗೆ ದಾರಿಯನ್ನು ತೋರುತ್ತವೆ. ಸುಳಕೂಡೆ ಅವರ 135ಕ್ಕೂ ಹೆಚ್ಚು ಕೃತಿಗಳಲ್ಲಿ ಇದು ಅತ್ಯಂತ ವಿಶಿಷ್ಟ ಹಾಗೂ ಉನ್ನತ ವಿಚಾರಗಳನ್ನು ಒಳಗೊಂಡ ಕೃತಿಯಾಗಿದೆ.
ಇದೇ ಸಂದರ್ಭದಲ್ಲಿ ಪ್ರೊಫೆಸರ್ ಬಿ.ವೈ. ನಾಯಕ್ ಅವರು ಈ ಕೃತಿಯ ಕುರಿತು ತಮ್ಮ ಅನಿಸಿಕೆಯನ್ನು ಹೇಳಿದರು, ಸಮಾಧಾನ ಕೃತಿಯು ಇವತ್ತಿನ ಆಧುನಿಕ ತಂತ್ರಜ್ಞಾನ ಯುಗದಲ್ಲಿ ಪಶ್ಚಿಮಕ್ಕೆ ಸಂಸ್ಕೃತಿಗೆ ಮಾರಿಹೋಗುತ್ತಿರುವ ಯುವಪೀಳಿಗೆಗೆ ಮಾರ್ಗದರ್ಶನ ನೀಡಬಲ್ಲದು. ಹೇಮಾ ಸೊನೊಳ್ಳಿ, ಆರ್ ಬಿ ಬನಶಂಕರಿ, ಬಾಳಗೌಡ ದೊಡಬಂಗಿ, ಮಹಾದೇವ್ ಕೆಂಪಿಗೌಡ್ರ ಮುಂತಾದವರು ಜಾನಪದ ಗೀತೆಗಳನ್ನು ಹಾಡಿ ಕಾರ್ಯಕ್ರಮದ ಮೆರಗನ್ನು ಹೆಚ್ಚಿಸಿದರು. ಲೇಖಕರಾದ ಸ.ರಾ. ಸುಳಕೂಡೆಯವರು ನಾವು ಮಾಡುತ್ತಿರುವ ನಾಡು ನುಡಿ ಸಾಹಿತ್ಯ ಸೇವೆಗೆ ತಮ್ಮಂತ ಆತ್ಮೀಯರ ಸಹಕಾರವೇ ಮುಖ್ಯ ಕಾರಣವಾಗಿರುತ್ತದೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷರು ಹಿರಿಯ ಸಾಹಿತಿಗಳು ಜಲತಕುಮಾರ್ ಪುಣಜಗೌಡ್ರು, ಇದೊಂದು ಅತ್ಯಂತ ವಿನೂತನ ಕಾರ್ಯಕ್ರಮ, ಇಂದಿನ ಕಾಲದಲ್ಲಿ ಸಾಹಿತ್ಯಾಸಕ್ತರನ್ನು ಒಂದು ಕಡೆ ಸೇರಿಸುವುದು ಅತ್ಯಂತ ಪ್ರಮುಖವಾದ ವಿಷಯವಾಗಿದೆ. ಇಂತಹ ಸನ್ನಿವೇಶದಲ್ಲಿ ಸಮಾಧಾನಕರ ಕೃತಿ ಬಿಡುಗಡೆಯಾಗುತ್ತಿರುವುದು ಅತ್ಯಂತ ಸಂತಸದ ವಿಷಯವಾಗಿದೆ ಎಂದು ಹೇಳಿದರು.
ಬಿ.ಕೆ. ಕಮ್ಮಾರ್ ಅವರು ಪ್ರಾರ್ಥಿಸಿದರು, ಮಹಾದೇವ್ ಕೆಂಪಿಗೌಡ್ರ ಅವರು ಎಲ್ಲರನ್ನೂ ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು. ಎಂ. ವೈ. ಮೆಣಸಿನಕಾಯಿಯವರು ವಂದಿಸಿದರು. ಕಾರ್ಯಕ್ರಮದಲ್ಲಿ ಇಂದಿರಾ ಮೂಟೆಬೆನ್ನೂರು, ಸುಮನ ಪರೀಟ, ಡಾ. ಸುನೀಲ ಪರೀಟ, ಎಸ್. ಆರ್. ಹಿರೇಮಠ, ಎಸ್. ಎಸ್. ಪಾಟೀಲ, ಬಸವರಾಜ ಬಿಜ್ಜರಗಿ, ಎಸ್. ಬಿ. ಗುಡಗನಟ್ಟಿ, ಶಿವಾನಂದ ನಾಯಕ, ಸೋಮಶೇಖರ ದೇಸಾಯಿ ಮುಂತಾದ ಹಿರಿಯ ಸಾಹಿತಿಗಳು ಉಪಸ್ಥಿತರಿದ್ದರು.



