ಬೆಳಗಾವಿ ” ಕನ್ನಡ ನೆಲದ ಪುಲ್ಲೆನಗೆ ಪರಮ ಪಾವನ ತುಲಸಿ, ಕನ್ನಡದ ನೆಲದ ನೀರ್ವೊನಲೆನಗೆ ದೇವನದಿ ಎಂದು ಹಾಡಿದ ಕವಿ ಸಾಲಿ ರಾಮಚಂದ್ರರಾಯರ ಕನ್ನಡ ಪ್ರೇಮ ಅಸದೃಶವಾದುದಾಗಿತ್ತು. ಬಡತನದ ಬದುಕಿನಲ್ಲಿಯೂ ಸ್ವಾಭಿಮಾನದಿಂದ ಬದುಕಿದ ಅವರದು ಋಷಿಸದೃಶ ವ್ಯಕ್ತಿತ್ವವಾಗಿತ್ತು” ಎಂದು ಹಿರಿಯ ಲೇಖಕಿ ಡಾ. ವಿದ್ಯಾ ಕುಂದರಗಿ ಅವರಿಲ್ಲಿ ಹೇಳಿದರು.
ಕನ್ನಡ ಸಾಹಿತ್ಯ ಭವನ ವಿಶ್ವಸ್ತ ಮಂಡಳಿ ಹಾಗೂ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತುಗಳ ಆಶ್ರಯದಲ್ಲಿಂದು ನಡೆದ “ಮರೆಯಲಾಗದ ಮಹನೀಯರು” ಉಪನ್ಯಾಸ ಮಾಲಿಕೆಯ ಹತ್ತನೆಯ ತಿಂಗಳ ಕಾರ್ಯಕ್ರಮದಲ್ಲಿ ಖ್ಯಾತ ಕವಿ ಸಾಲಿ ರಾಮಚಂದ್ರರಾಯರ ಕುರಿತು ಮಾತನಾಡಿದ ಕುಂದರಗಿಯವರು ಅಪ್ಪಟ ಗಾಂಧಿಭಕ್ತರಾಗಿದ ಸಾಲಿಯವರು ೧೯೨೪ ರಲ್ಲಿ ಬೆಳಗಾವಿಯಲ್ಲಿ ನಡೆದ ಐತಿಹಾಸಿಕ ಕಾಂಗ್ರೆಸ್ ಅಧಿವೇಶನದಲ್ಲಿ ಗಾಂಧೀಜಿಯವರ ಹಿಂದಿ ಭಾಷಣವನ್ನು ಕನ್ನಡಕ್ಕೆ ಅನುವಾದಿಸಿದ್ದನ್ನು ಸ್ಮರಿಸಿದರು.
ಪ್ರಸಿದ್ಧ ಸಾಹಿತಿ ಉತ್ತಂಗಿ ಚೆನ್ನಪ್ಪನವರ ಕುರಿತು ಮಾತನಾಡಿದ ಡಾ. ಸುನೀಲ ಪರೀಟ ಅವರು “ವೀರಶೈವ ಸಾಹಿತ್ಯಕ್ಕೆ ಗಮನಾರ್ಹ ಕೊಡುಗೆ ನೀಡಿದ ಉತ್ತಂಗಿಯವರು ಅಪಾರ ಶ್ರಮದಿಂದ ಸರ್ವಜ್ಞನ ತ್ರಿಪದಿಗಳನ್ನು ಸಂಗ್ರಹಿಸಿ ಕನ್ನಡಕ್ಕೆ ಅವನ್ನು ಉಳಿಸಿಕೊಟ್ಟ ಮಹನೀಯರಾಗಿದ್ದಾರೆ, ಅವರು ತಮ್ಮ ಬದುಕನ್ನೇ ಸಾಹಿತ್ಯ ಸೇವೆಗೆ ಮೀಸಲಾಗಿಟ್ಟಿದ್ದರು” ಎಂದು ಹೇಳಿದರು. ಶ್ರೀಮತಿ ಸುನೀತಾ ನಂದೆಣ್ಣವರ ಅವರು ಕವಿ ವಿ. ಸೀತಾರಾಮಯ್ಯನವರ ಭಾವಗೀತೆಗಳನ್ನು ಹಾಡಿದರು.
ಚುಸಾಪ ಪ್ರಧಾನ ಕಾರ್ಯದರ್ಶಿ ಬಸವರಾಜ ಗಾರ್ಗಿ ಅವರು ಸ್ವಾಗತಿಸಿದರು. ಚಂದ್ರಶೇಖರ ನವಲಗುಂದ ಗ್ತಂಥಗೌರವವಿತ್ತರು. ಎಲ್. ಎಸ್. ಶಾಸ್ತ್ರಿ ನಿರೂಪಿಸಿದರು. ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಪ್ರೊ. ರಾಜನಂದಾ ಘಾರ್ಗಿ ಮತ್ತು ವಿಶ್ವಸ್ತ ಮಂಡಳಿ ಗೌ. ಕಾರ್ಯದರ್ಶಿ ಆರ್. ಬಿ. ಕಟ್ಟಿ ವೇದಿಕೆಯಲ್ಲಿದ್ದರು. ಡಾ. ಅರವಿಂದ ಕುಲಕರ್ಣಿ, ಡಾ. ಎಸ್. ಎಸ್. ಅಂಗಡಿ, ಡಾ. ಪಿ.ಜಿ. ಕೆಂಪಣ್ಣವರ, ಪದ್ಮಾ ಕುಲಕರ್ಣಿ, ಅಶೋಕ ಮಳಗಲಿ, ಆನಂದ ಪುರಾಣಿಕ, ಎಸ್. ಬಿ. ನಾಗರಾಜ, ಮಮತಾ ಶಂಕರ, ಶಾಲಿನಿ ಚಿನಿವಾರ, ಶ್ರೀಮತಿ ಪರೀಟ, ಡಾ. ಹೇಮಾ ಸೊನೊಳಿ, ಮದನ ಕಣಬೂರ , ಎಂ. ವೈ. ಮೆಣಸಿನಕಾಯಿ ಮೊದಲಾದವರು ಉಪಸ್ಥಿತರಿದ್ದರು.



