ಮಾನವೀಯತೆಯ ಆಧಾರದ ಮೇಲೆ ರೈತರ ಸಾಲ ವಸೂಲಾತಿ ಕೈಗೊಳ್ಳಿ: ಜಿಪಂ ಸಿಇಒ ರಾಹುಲ್ ಶಿಂಧೆ

WhatsApp Group Join Now

ಬೆಳಗಾವಿ ಜಿಲ್ಲೆಯಲ್ಲಿ ಕೂಡ ಬರಗಾಲದ ಸಂದರ್ಭ ಎದುರಾಗಿರುವುದರಿಂದ ಬ್ಯಾಂಕುಗಳು ಮಾನವೀಯತೆಯ ಆಧಾರದ ಮೇಲೆ ರೈತರ ಸಾಲ ವಸೂಲಾತಿ ಕೈಗೊಳ್ಳಬೇಕು ಹಾಗೂ ಸಾಲ ವಿತರಣೆಯನ್ನು ವ್ಯವಸ್ಥಿತವಾಗಿ ಮಾಡಬೇಕು ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಅವರು ಜಿಲ್ಲೆಯ ಎಲ್ಲ ಬ್ಯಾಂಕುಗಳ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಬೆಳಗಾವಿ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿಶೇಷ ಡಿಸಿಸಿ/ಡಿ.ಎಲ್.ಆರ್.ಸಿ. ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಾಲ ಮರುಪಾವತಿಗೆ 60 ತಿಂಗಳ ಕಾಲಾವಕಾಶ:
ರೈತರ ಸಾಲಗಳನ್ನು ಮರುರಚಿಸಿ, 12 ತಿಂಗಳ ಮೊರಟೋರಿಯಂ (ಮರುಪಾವತಿ ರಿಯಾಯಿತಿ) ಅವಧಿಯೊಂದಿಗೆ ಒಟ್ಟು 60 ತಿಂಗಳುಗಳಲ್ಲಿ (ಮೊರಟೋರಿಯಂ ಅವಧಿ ಒಳಗೊಂಡಂತೆ) ಮರುಪಾವತಿಸಲು ಅವಕಾಶ ಕಲ್ಪಿಸಬೇಕು. ದಿ:22-09-2026 ಮತ್ತು ದಿ:07-10-2026 ವೇಳೆಗೆ 30 ದಿನಗಳಿಗಿಂತ ಕಡಿಮೆ ಅವಧಿಯ ಬಾಕಿ ಹೊಂದಿರುವ ಎಲ್ಲಾ ‘ಸ್ಟ್ಯಾಂಡರ್ಡ್’ ಸಾಲಗಳಿಗೆ ಸ್ವಯಂ-ಪ್ರೇರಿತವಾಗಿ ಮರುರಚನೆ ಪ್ರಕ್ರಿಯೆ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ರೈತರ ಮೇಲೆ ಒತ್ತಡ ಹೇರುವಂತಿಲ್ಲ:
ಸಾಲ ಮರುಪಾವತಿಗಾಗಿ ರೈತರಿಗೆ ಯಾವುದೇ ರೀತಿಯ ಕಿರುಕುಳ ಅಥವಾ ಒತ್ತಡ ಹೇರಬಾರದು. ಬೆಳೆವಿಮೆ ಪರಿಹಾರ ಬಿಡುಗಡೆಯಾಗುವವರೆಗೆ ಕಾಯದೆ ರೈತರಿಗೆ ಹೊಸ ಸಾಲಗಳನ್ನು ವಿತರಿಸಬೇಕು. ಬರಗಾಲದ ಸಂದರ್ಭದಲ್ಲಿ ರೈತರು ತಮ್ಮ ಆರ್ಥಿಕ ಅಗತ್ಯಗಳಿಗಾಗಿ ಸೂಕ್ಷ್ಮ ಹಣಕಾಸು ಸಂಸ್ಥೆಗಳು ಅಥವಾ ಖಾಸಗಿ ಲೇವಾದೇವಿಗಾರರ ಬಲೆಗೆ ಬೀಳದಂತೆ ಬ್ಯಾಂಕ್ಗಳು ಮುನ್ನೆಚ್ಚರಿಕೆ ವಹಿಸಬೇಕು ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

ನ್ಯಾಯಾಲಯದ ಆದೇಶಗಳಿದ್ದರೂ ಮಾಹಿತಿ ಕಡ್ಡಾಯ:
ರೈತರ ವಿರುದ್ಧ ಯಾವುದೇ ನ್ಯಾಯಾಲಯದ ಆದೇಶಗಳಿದ್ದರೂ ಅವುಗಳನ್ನು ಜಾರಿಗೊಳಿಸುವ ಮುನ್ನ ಜಿಲ್ಲಾ ಸಲಹಾ ಸಮಿತಿ ಮತ್ತು ಜಿಲ್ಲಾಡಳಿತದ ಗಮನಕ್ಕೆ ತರಬೇಕು. ಯಾವುದೇ ಬ್ಯಾಂಕ್ ರೈತರ ವಿರುದ್ಧ ಬಲವಂತದ ಸಾಲ ವಸೂಲಾತಿ ಕ್ರಮಗಳನ್ನು ಕೈಗೊಂಡರೆ ಅಂತಹ ಬ್ಯಾಂಕರ್ಗಳನ್ನು ವಿಚಾರಣೆಗೆ ಒಳಪಡಿಸಲಾಗುವುದು. ನಿಯಮ ಉಲ್ಲಂಘಿಸುವವರ ವಿರುದ್ಧ ರಾಜ್ಯಮಟ್ಟದ ಬ್ಯಾಂಕರ್ಗಳ ಸಮಿತಿ ಗಮನಕ್ಕೆ ತಂದು ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಈ ಎಲ್ಲಾ ಪ್ರಕ್ರಿಯೆಗಳ ಪ್ರಗತಿಯನ್ನು ಸಾಪ್ತಾಹಿಕವಾಗಿ ಪರಿಶೀಲಿಸಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಕೆನರಾ ಬ್ಯಾಂಕ್ ಬೆಳಗಾವಿ ಪ್ರಾದೇಶಿಕ ವ್ಯವಸ್ಥಾಪಕ ಎಮ್. ಚಂದ್ರಶೇಖರ್, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಪ್ರಶಾಂತ ಘೋಡಕೆ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಎಚ್.ಡಿ. ಕೋಳೆಕರ್, ಎಲ್ಲ ಬ್ಯಾಂಕುಗಳ ಪ್ರತಿನಿಧಿಗಳು ಹಾಗೂ ಅನುಷ್ಟಾನ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಹಾಜರಿದ್ದರು.

About The Author