ಮಹಾನಗರ ಪಾಲಿಕೆಗೆ ಭೇಟಿಬೀದಿದೀಪ ನಿರ್ವಹಣೆ: ನಾಗರಿಕರಿಂದ ದೂರು ಬಂದರೆ ಕಠಿಣ ಕ್ರಮ: ಉಪ ಲೋಕಾಯುಕ್ತ ಬಿ.ವೀರಪ್ಪ

WhatsApp Group Join Now

ಬೆಳಗಾವಿ ಉಪ ಲೋಕಾಯುಕ್ತರಾಗಿರುವ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಗುರುವಾರ
ಬೆಳಗಾವಿ ಮಹಾನಗರ ಪಾಲಿಕೆಗೆ ಭೇಟಿ ನೀಡಿ ಪಾಲಿಕೆಯ ಕಾರ್ಯವೈಖರಿಯನ್ನು ಪರಿಶೀಲಿಸಿದರು.

ಮಹಾನಗರ ಪಾಲಿಕೆಗೆ ಭೇಟಿ ನೀಡಿದ ಪಾಲಿಕೆಯ ಸಿಬ್ಬಂದಿಗಳ ಹಾಜರಾತಿ, ನಗದು ವಹಿ, ಚಲನವಲನ ವಹಿಗಳನ್ನು ಮಾಹಿತಿ ಪಡೆದು ಪರಿಶೀಲಿಸಿದ ಅವರು ಹಾಜರಾತಿ ವಹಿಯನ್ನು ಸರಿಯಾಗಿ ನಿರ್ವಹಿಸದೆ ಇರುವುದರ ಕುರಿತು ಪ್ರಶ್ನಿಸಿದರು.

ಬೆಳಗ್ಗೆ ಹಾಗೂ ಸಂಜೆ ಕಡ್ಡಾಯವಾಗಿ ಹಾಜರಾತಿ ಹಾಕುವಂತೆ ಸೂಚಿಸಿದರು. ಕಳೆದ ಮೂರು ತಿಂಗಳುಗಳ ಸಿಬ್ಬಂದಿಗಳ ಹಾಜರಾತಿ ವಿವರ ಹಾಗೂ ವಿವಿಧ ಶಾಖೆಗಳ ಮುಖ್ಯಸ್ಥರ ಮೂರು ತಿಂಗಳುಗಳ ವೇತನ ವಿವರಗಳನ್ನು‌ ಪಡೆದುಕೊಂಡರು.

ಮಾಂಜಾ ದಾರದಿಂದ ಸಾವಿಗಿಡಾದ ದುರ್ದೈವಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ ಪರಿಹಾರ ಒದಗಿಸಬೇಕು. ಈ ಕಾರ್ಯದಲ್ಲಿ ನಿರ್ಲಕ್ಷ್ಯ ವಹಿಸಿದ ಅಧಿಕಾರಿ, ಸಿಬ್ಬಂದಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ‌ ಜರುಗಿಸುವ ಕುರಿತು ಎಚ್ಚರಿಕೆ ನೀಡಿದರು.

ಅಲ್ಲದೇ ಈ ವಿಷಯದ ಕುರಿತು ಲೋಕಾಯುಕ್ತ ಕಚೇರಿ ಸಿಬ್ಬಂದಿಗಳಿಗೆ ಮಾಹಿತಿ ಒದಗಿಸಲು ದೂರವಾಣಿಯಲ್ಲಿ ಸರಿಯಾಗಿ ಸ್ಪಂದಿಸದೇ ಇರುವುದರ ಕುರಿತು ಆಕ್ರೋಶ ವ್ಯಕ್ತಪಡಿಸಿದರು.

ತದನಂತರ ಪಾಲಿಕೆಯ ವಿವಿಧ ಶಾಖೆಗಳಿಗೆ ಭೇಟಿ ನೀಡಿ ಪರಿಶೀಲನೆ‌ ನಡೆಸಿದ ಅವರು ಪಾಲಿಕೆ ವತಿಯಿಂದ ಲೀಸ್ ಗೆ ನೀಡಿದ ನಿವೇಶನಗಳ ಮಾಹಿತಿ ಪಡೆದು ದೀರ್ಘಾವಧಿಗೆ ಲೀಸ್ ನೀಡಿದ ನಿವೇಶನಗಳ ಸಂಪೂರ್ಣ ವಿವರಗಳನ್ನು ಹಾಗೂ ಪಾಲಿಕೆಯ ಜಾಗೆಯನ್ನು ಒತ್ತುವರಿ ಮಾಡಿದವರ ವಿವರಗಳನ್ನು ಒದಗಿಸಲು ತಿಳಿಸಿದರು.

ಕಚೇರಿಯ ಸಿಬ್ಬಂದಿಗಳ‌ ಮೊಬೈಲ್‌ ಪರಿಶೀಲಿಸಿದ ಉಪ ಲೋಕಾಯುಕ್ತರು, ಸಿಬ್ಬಂದಿಗಳ ಬ್ಯಾಂಕ್‌ ವಿವರಗಳನ್ನು ಒದಗಿಸಲು ತಿಳಿಸಿದರು. ಪಾಲಿಕೆಯ ವಾಹನಗಳ ಮಾಹಿತಿ ಪಡೆದ ಅವರು ಅವುಗಳಲ್ಲಿ ಫಿಟನೆಸ್ ಇರುವ ವಾಹನಗಳ ವಿವರ ಪಡೆದುಕೊಂಡರು.

ಪಾಲಿಕೆ ವ್ಯಾಪ್ತಿಯಲ್ಲಿ ಒಳಚರಂಡಿ ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸಿತ್ತಿರುವ, ಕುಡಿಯುವ ನೀರು ಹಾಗೂ ಪಾಲಿಕೆ ವ್ಯಾಪ್ತಿಯಲ್ಲಿ 38 ಸಾವಿರ ಬೀದಿ ದೀಪಗಳು ಕಾರ್ಯನಿರ್ವಹಿಸುತ್ತಿವೆ ಎಂದು ಮಾಹಿತಿ ನೀಡಿದ ಸಿಬ್ಬಂದಿಗಳ ಮಾತನ್ನು ಒಪ್ಪದ‌ ಅವರು, ಒಂದು ವೇಳೆ ಬೀದಿ ದೀಪಗಳ ಕುರಿತು ನಾಗರಿಕರಿಂದ ದೂರುಗಳು ಬಂದಲ್ಲಿ ಸಿಬ್ಬಂದಿಯ ವಿರುದ್ಧ ಕ್ರಮ‌ ಜರುಗಿಸುವ ಎಚ್ಚರಿಕೆ ನೀಡಿದರು.

ಬೆಳಗಾವಿ ನಗರದಲ್ಲಿ ಸ್ವಚ್ಚತೆ ಎಂಬುದು ಮರೀಚಿಕೆಯಾಗಿದ್ದು, ನಗರ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಪಾದಚಾರಿ ಮಾರ್ಗ ಅತಿಕ್ರಮಣಕಾರರ ವಿರುದ್ಧ ದೂರು ದಾಖಲಿಸಲು ತಿಳಿಸಿದರು.

ಈ ಸಂದರ್ಭದಲ್ಲಿ ಉಪನಿಬಂಧಕರಾದ ಅರವಿಂದ, ಲೋಕಾಯುಕ್ತ ಎಸ್.ಪಿ. ಪ್ರಸನ್ ದೇಸಾಯಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಎನ್.ಶಿವಕುಮಾರ, ಪಾಲಿಕೆ ಆಯುಕ್ತ ಎಂ.ಕಾರ್ತಿಕ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

About The Author