ಬೆಳಗಾವಿ ಬಿಮ್ಸ್ ಗೆ ಭೇಟಿ ನೀಡಿದ ಉಪ ಲೋಕಾಯುಕ್ತರು

WhatsApp Group Join Now

ಬೆಳಗಾವಿ ಉಪ ಲೋಕಾಯುಕ್ತರಾದ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಗುರುವಾರ
ಬೆಳಗಾವಿಯ ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಅನೀರಿಕ್ಷಿತ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸಿದರು.

ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿನ ನೋಂದಣಿ‌ ಕೌಂಟರ, ಶುದ್ಧ ಕುಡಿಯುವ ನೀರು, ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿಗಳ ಮಾಹಿತಿ ಪಡೆದು, ಆಸ್ಪತ್ರೆಯ ವಿವಿಧ ವಿಭಾಗಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ತದನಂತರ ಒಳ ರೋಗಿಗಳ ವಿಭಾಗ, ತೀವ್ರ ನಿಗಾ ಘಟಕ, ಪ್ರಸೂತಿ ವಿಭಾಗ,ಸೇರಿದಂತೆ ವಿವಿಧ‌ ವಿಭಾಗಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಆಸ್ಪತ್ರೆಯಲ್ಲಿ ದಾಖಾಲಗಿರುವ ರೋಗಿಗಳೊಂದಿಗೆ ಮಾತನಾಡಿದ ಅವರು, ಆಸ್ಪತ್ರೆಯಲ್ಲಿ ನೀಡಲಾಗುತ್ತಿರುವ ಚಿಕಿತ್ಸೆ ಬಗ್ಗೆ ಮಾಹಿತಿ‌ ಪಡೆದುಕೊಂಡರು. ಪೌಷ್ಟಿಕ‌ ಆಹಾರ ಸೇವಿಸುವಂತೆ ಸಲಹೆ ನೀಡಿದ ಅವರು, ಬೇಗ ಗುಣಮುಖರಾಗುವಂತೆ‌ ಧೈರ್ಯ ತುಂಬಿದರು.
ಇದೇ ಸಂದರ್ಭದಲ್ಲಿ ರೋಗಿಯೊಬ್ಬರ ಗಾಯಕ್ಕೆ ತ್ವರಿತವಾಗಿ ಚಿಕಿತ್ಸೆ ನೀಡುವಂತೆ ವೈದ್ಯಾಧಿಕಾರಿಗಳಿಗೆ ಸೂಚಿಸಿದರು.

ಹೊರ ರೋಗಿಗಳ ದಾಖಲಾತಿಗೆ ಭೇಟಿ ನೀಡಿ ಪರಿಶೀಲಿಸಿದ ಉಪ ಲೋಕಾಯುಕ್ತರು ಹೊರ ರೋಗಿಗಳ ದಾಖಲಾತಿ ಕಾರ್ಯ ವಿಧಾನವನ್ನು ಪರಿಶೀಲಿಸಿ ರೋಗಿಗಳಿಂದ ಆಸ್ಪತ್ರೆಯ ಕಾರ್ಯ ವೈಖರಿ ಕುರಿತು‌ ಮಾಹಿತಿ ಪಡೆದರು. ಹೊರ ರೋಗಿಗಳ ಜೌಷಧ ವಿತರಣಾ ಕೇಂದ್ರಗಳಿಗೆ ಭೇಟಿ ನೀಡಿ ಜೌಷಧಿ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸಲು ಸೂಚನೆ ನೀಡಿದರು.

ಆಸ್ಪತ್ರೆಯಲ್ಲಿನ ವೈದ್ಯರು ರೋಗಿಗಳಿಂದ‌ ಹಣ ಪಡೆಯದಂತೆ ಹಾಗೂ ಔಷಧಿಗಳನ್ನು ಹೊರಗಿನಿಂದ ತರುವಂತೆ ಬರೆದು ಕೊಡದಂತೆ ನಿಗಾವಹಿಸಲು ಸೂಚಿಸಿದರು.

ಆಸ್ಪತ್ರೆಯ ಔಷದ ಉಗ್ರಾಣಕ್ಕೆ ಭೇಟಿ ನೀಡಿದ ಅವರು ಉಗ್ರಾಣದಲ್ಲಿ ರೇಬಿಸ್ ಸೇರಿದಂತೆ ವಿವಿಧ ಕಾಯಿಲೆಗಳ ಲಕ್ಷಾಂತರ ರೂಪಾಯಿಗಳ ಅವಧಿ ಮುಗಿದು ಹೋದಂತಹ ಲಸಿಕೆಗಳನ್ನು ಕಂಡು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ಈ ಕುರಿತು ಸಮಗ್ರ ವರದಿ ಸಲ್ಲಿಸಲು ಹಾಗೂ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸೂಚನೆ ನೀಡಿದರು.

ತದನಂತರ ಬಿಮ್ಸ್ ರಕ್ತ‌ ಭಂಡಾರಕ್ಕೆ ಭೇಟಿ ನೀಡಿ ವಿವಿಧ ರಕ್ತ ಗುಂಪುಗಳ ದಾಸ್ತಾನು ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಉಪನಿಬಂಧಕರಾದ ಅರವಿಂದ, ಲೋಕಾಯುಕ್ತ ಎಸ್.ಪಿ. ಪ್ರಸನ್ ದೇಸಾಯಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಎನ್.ಶಿವಕುಮಾರ, ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕ ರವಿ ಬಂಗಾರಪ್ಪನವರ, ಬಿಮ್ಸ್ ನಿರ್ದೆಶಕ ವಿನಯ ದಾಸ್ತಿಕೊಪ್ಪ, ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಡಾ.ಆಯ್.ಪಿ.ಗಡಾದ, ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

About The Author