ಧಾರವಾಡ ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 17ಎ ಪ್ರಕಾರ ಸಾರ್ವಜನಿಕ ಸೇವಕರ ಮೇಲೆ ಖಾಸಗಿ ದೂರು ದಾಖಲಿಸಲು ಮೊದಲು ಪೂರ್ವಾನುಮತಿ ಪಡೆದುಕೊಳ್ಳುವುದು ಕಡ್ಡಾಯವಾಗಿತ್ತು. ಆದರೆ ಈಗ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಪ್ರಕಾರ, ಯಾವುದೇ ಸಾರ್ವಜನಿಕ ಸೇವಕರ ವಿರುದ್ಧ ಪೂರ್ವಾನುಮತಿ ಇಲ್ಲದೆಯೂ ಖಾಸಗಿ ದೂರು ದಾಖಲಿಸಬಹುದು ಎಂದು ಪ್ರಧಾನ ಜಿಲ್ಲಾ ಮತ್ತು ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಎನ್. ವ್ಹಿ. ವಿಜಯ್ ಅವರು ಹೇಳಿದರು.
ಧಾರವಾಡ ಜಿಲ್ಲಾ ಪಂಚಾಯತ ಸಭಾ ಭವನದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪೊಲೀಸ್ ಇಲಾಖೆ ಹಾಗೂ ಕರ್ನಾಟಕ ಲೋಕಾಯುಕ್ತ ಇವರ ಸಂಯುಕ್ತಾಶ್ರಯದಲ್ಲಿ ಜರುಗಿದ ಜಾಗೃತಿ ಅರಿವು ಸಪ್ತಾಹ-2026 ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು.
ಕಾನೂನಿನ ಪ್ರಕಾರ ಲಂಚದ ಬೇಡಿಕೆ ಇಡುವುದೇ ಒಂದು ಕ್ರಿಮಿನಲ್ ಅಪರಾಧವಾಗಿದೆ. ಆದ್ದರಿಂದ ಇಂತಹ ಸಂದರ್ಭಗಳಲ್ಲಿ ಪೂರ್ವಾನುಮತಿಯ ಅವಶ್ಯಕತೆಯಿಲ್ಲದೆ ಖಾಸಗಿ ದೂರು ಮಂಡಿಸಬಹುದಾಗಿದೆ. ದಿನನಿತ್ಯದ ಸುದ್ದಿಗಳಲ್ಲಿ ಹೆಚ್ಚಾಗಿ
ಭ್ರಷ್ಟಾಚಾರದ ಸುದ್ದಿಗಳೇ ಕೇಳಿಬರುತ್ತಿದ್ದು, ದೇಶದ ಪ್ರಗತಿಗೆ ಪ್ರಾಮಾಣಿಕತೆ ಅತ್ಯಂತ ಅವಶ್ಯಕವಾಗಿದೆ ಎಂದು ಅವರು ತಿಳಿಸಿದರು.
ಸಾರ್ವಜನಿಕ ಸೇವಕರಾಗಿ ದೇಶವನ್ನು ಸರಿಯಾದ ರೀತಿಯಲ್ಲಿ ಮುನ್ನಡೆಸುವುದು ನಮ್ಮೆಲ್ಲರ ಕರ್ತವ್ಯ. ಕೇವಲ ಒಂದು ವಾರದ ವಿಜಿಲೆನ್ಸ್ ಅವೇರ್ನೆಸ್ ವೀಕ್ ಆಚರಿಸುವದಷ್ಟೇ ಅಲ್ಲದೆ, ವರ್ಷಪೂರ್ತಿ ಜಾಗರೂಕತೆಯಿಂದ ದೇಶದ ಬೆಳವಣಿಗೆಗೆ ಶ್ರಮಿಸಬೇಕು ಎಂದು ಹೇಳಿದರು.
ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ಮಾತನಾಡಿ, ಭ್ರಷ್ಟಾಚಾರ ಅಂದರೆ ಕೇವಲ ಹಣದ ವಹಿವಾಟು ಅಥವಾ ಲಂಚ ಸ್ವೀಕರಿಸುವುದು ಮಾತ್ರವಲ್ಲ. ಅದು ಸಮಾಜದ ವ್ಯವಸ್ಥೆಯನ್ನೇ ಬುಡಮೇಲು ಮಾಡುತ್ತದೆ. ರೈತರು ತಮ್ಮ ಸಣ್ಣಪುಟ್ಟ ದಾಖಲೆಗಳಿಗಾಗಿ, ವೃದ್ದರು ಪಿಂಚಣಿಗಾಗಿ ಪದೇ ಪದೇ ಕಚೇರಿಗೆ ಅಲೆದಾಡುವಂತೆ ಮಾಡುವುದು, ಅವರ ಸಮಯ ಮತ್ತು ಆತ್ಮಗೌರವವನ್ನು ಕಸಿದುಕೊಳ್ಳುತ್ತದೆ. ಅವರ ಭದ್ರತೆ ಮತ್ತು ನೆಮ್ಮದಿಯನ್ನು ಹಾಳುಮಾಡುತ್ತದೆ. ವಿದ್ಯಾರ್ಥಿಗಳು ಅಥವಾ ಯುವಕರು ಲಂಚ ಅಥವಾ ಶಿಫಾರಸ್ಸಿನಿಂದ ತಮ್ಮ ಅರ್ಹತೆಯ ಅವಕಾಶಗಳನ್ನು ಕಳೆದುಕೊಂಡರೆ, ಅದು ಅವರ ಭವಿಷ್ಯವನ್ನೇ ಕತ್ತಲಿಗೆ ತಳ್ಳುತ್ತದೆ. ಈ ರೀತಿಯ ಆಡಳಿತಾತ್ಮಕ ಲೋಪಗಳಿಂದ ಸಾರ್ವಜನಿಕರಿಗೆ ಸರ್ಕಾರದ ಮೇಲೆ ಮತ್ತು ವ್ಯವಸ್ಥೆಯ ಮೇಲೆ ಇರುವ ನಂಬಿಕೆ ಹೊರಟುಹೋಗುತ್ತದೆ ಆದ್ದರಿಂದ ಬ್ರಷ್ಟಾಚಾರ ನಡೆದ ಮೇಲೆ ಕ್ರಮ ಕೈಗೊಳ್ಳುವುದಕ್ಕಿಂತ, ಅದು ಸಂಭವಿಸದಂತೆ ವ್ಯವಸ್ಥೆಯನ್ನು ಬಲಪಡಿಸುವುದು ಮೊದಲ ಆದ್ಯತೆಯಾಗಬೇಕು ಎಂದು ಅವರು ಹೇಳಿದರು.
ಸರ್ಕಾರಿ ಕಚೇರಿಗಳಿಗೆ ಹೋಗಲು ಜನ ಹೆದರುವಂತಾಗುತ್ತದೆ ಮತ್ತು ಕಚೇರಿಗಳು ಎಂದರೆ ಕಿರಿಕಿರಿ ಎಂಬ ಮನೋಭಾವನೆ ಜನರಲ್ಲಿ ಮೂಡದೆ ಇರುವಂತೆ ಅಧಿಕಾರಿಗಳು ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು. ಬಹುತೇಕ ಸೇವೆಗಳು ಈಗ ಆನ್ಲೈನ್ ಮೂಲಕ ಲಭ್ಯವಿರುವುದರಿಂದ ಭ್ರಷ್ಟಾಚಾರಕ್ಕೆ ಅವಕಾಶ ಕಡಿಮೆ ಮಾಡಬಹುದು. ಭೌತಿಕವಾಗಿ ಕಚೇರಿಗೆ ಅಲೆಯುವುದನ್ನು ತಡೆಯಬಹುದಾಗಿದೆ. ಸಾರ್ವಜನಿಕರಿಂದ ಬರುವ ಅರ್ಜಿಗಳಿಗೆ ಕಡ್ಡಾಯವಾಗಿ ಪ್ರತಿಕ್ರಿಯೆ ನೀಡಬೇಕು. ಅವುಗಳಿಗೆ ಸ್ಪಂದಿಸುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ ಎಂದು ತಿಳಿಸಿದರು.
ಕಚೇರಿಗೆ ಬರುವ ಪ್ರತಿಯೊಬ್ಬ ನಾಗರಿಕನನ್ನೂ ಅವರ ಜಾತಿ, ಧರ್ಮ ಅಥವಾ ಹಿನ್ನೆಲೆಯನ್ನು ನೋಡದೆ, ಅವರಿಗೆ ಸಿಗಬೇಕಾದ ಸೇವೆಯ ಆಧಾರದ ಮೇಲೆ ಮಾತ್ರ ನೋಡಬೇಕು. ಸರ್ಕಾರಿ ಕಚೇರಿಗಳು ಸಾರ್ವಜನಿಕರ ಹಕ್ಕುಗಳನ್ನು ಮತ್ತು ಸೇವೆಗಳನ್ನು ಒದಗಿಸುವುದಕ್ಕಾಗಿ ಇವೆಯೇ ಹೊರತು ಯಾರಿಗೋ ಅನುಕೂಲ ಮಾಡಿಕೊಡಲು ಅಲ್ಲ. ಪ್ರತಿಯೊಬ್ಬರೂ ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸುವ ಮೂಲಕ ಉತ್ತಮ ಸಮಾಜವನ್ನು ನಿರ್ಮಿಸೋಣ ಎಂದು ಅವರು ಹೇಳಿದರು.
ಜಿಲ್ಲಾ ಪೊಲೀಸ್ ವಷ್ಟಾಧಿಕಾರಿ ಗುಂಜನ್ ಆರ್ಯ ಅವರು ಮಾತನಾಡಿ, ಪ್ರಾಮಾಣಿಕತೆ ಎಂಬುದು ಕೇವಲ ಒಂದು ಗುಣವಲ್ಲ, ಅದು ನಮ್ಮ ವ್ಯಕ್ತಿತ್ವದ ಅಡಿಪಾಯ ಮತ್ತು ನೈತಿಕ ಮೌಲ್ಯಗಳ ದಿಕ್ಸೂಚಿ. ಸಮಾಜದಲ್ಲಿ ಸರ್ಕಾರಿ ನೌಕರರು ದೊಡ್ಡ ಜವಾಬ್ದಾರಿಯನ್ನು ಹೊಂದಿದ್ದು, ಲಭ್ಯವಿರುವ ಸೀಮಿತ ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಸಿಕೊಂಡು ಜನಸಾಮಾನ್ಯರ ಕಲ್ಯಾಣಕ್ಕಾಗಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಬೇಕು ಎಂದು ಹೇಳಿದರು.
ಬ್ರಷ್ಟಾಚಾರ ಅಥವಾ ವಿಜಿಲೆನ್ಸ್ ಭಯದಿಂದ ಕೆಲಸ ಮಾಡದೆ, ಸ್ವಯಂಪ್ರೇರಿತರಾಗಿ ಜನಸಾಮಾನ್ಯರ ಅಭಿವೃದ್ಧಿಗಾಗಿ ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಬೇಕು. ನಾವು ಮಾಡುವ ಪ್ರಾಮಾಣಿಕ ಕೆಲಸದಿಂದ ಮುಂದಿನ ಹಲವಾರು ಪೀಳಿಗೆಗಳು ನಮ್ಮನ್ನು ಗೌರವದಿಂದ ಸ್ಮರಿಸುತ್ತವೆ ಎಂದು ತಿಳಿಸಿದರು.
ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧಿಕ್ಷಕರು ಎಸ್. ಟಿ. ಸಿದ್ದಲಿಂಗಪ್ಪ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರತಿಜ್ಞಾವಿಧಿ ಭೋದಿಸಿದರು.
ವೇದಿಕೆಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಸದಸ್ಯ ಕಾರ್ಯದರ್ಶಿ ಅಲ್ಲಪ್ಪ ಎಂ. ಬಡಿಗೇರ, ಎಸಿಪಿ ಪ್ರಶಾಂತ ಸಿದ್ದನಗೌಡರ, ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕ ಬಿ.ಎಸ್. ರಾಠೋಡ ಅವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಿಬ್ಬಂದಿಗಳು ಭಾಗವಹಿಸಿದ್ದರು.



