ರಾಮದುರ್ಗ ಲೋಕಾಪೂರ ಧಾರವಾಡ ರೈಲ್ವೆ ಮಾರ್ಗದ ಪೂರ್ವ ಸಮೀಕ್ಷೆಗೆ ಕೇಂದ್ರ ಒಪ್ಪಿಗೆ ಸೂಚಿಸಿದರೆ ಸಾಲದು. ರೈಲ್ವೆ ಟ್ರ್ಯಾಕ್ ಅಳವಡಿಕೆಗೆ ಅನುದಾನ ಬಿಡುಗಡೆಯಾಗುವ ತನಕ ಹೋರಾಟ ನಿರಂತರವಾಗಿ ನಡೆಯಬೇಕು ಎಂದು ರೈಲ್ವೆ ಹೋರಾಟ ಸಮಿತಿಯ ಗೈಬು ಜೈನೆಖಾನ ಮನವಿ ಮಾಡಿದರು.
ವೆಂಕಟೇಶ್ವರ ದೇವಸ್ಥಾನದಲ್ಲಿ ರೈಲ್ವೆ ಹೋರಾಟ ಸಮಿತಿಯು ಕರೆದ ಸಭೆಯಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಪೂರ್ವ ಸಮೀಕ್ಷೆಯಲ್ಲಿ ರಾಮದುರ್ಗ ತಾಲ್ಲೂಕಿನ ಗೊಡಚಿ ವೀರಭದ್ರೇಶ್ವರ ದೇವಸ್ಥಾನ, ರಾಮದುರ್ಗದ ಶಿವನಮೂರ್ತಿ, ಸುರೇಬಾನದ ಶಬರಿ ದೇವಸ್ಥಾನ, ಸವದತ್ತಿ ತಾಲ್ಲೂಕಿನ ಶಿರಸಂಗಿಯ ಕಾಳಿಕಾ ದೇವಸ್ಥಾನ, ಯಲ್ಲಮ್ಮನ ಗುಡ್ಡದ ಯಲ್ಲಮ್ಮ ದೇವಸ್ಥಾನಕ್ಕೆ ಭಕ್ತರು ಬರುವ ಸಮೀಕ್ಷೆ ನಡೆಯಲಿದೆ. ಇದಕ್ಕಾಗಿ ರೂ. 1.4 ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರದ ರೈಲ್ವೆ ಇಲಾಖೆಯು ಪೂರ್ವ ಸಮೀಕ್ಷೆ ನಡೆಸಿ ಕೇಂದ್ರದ ಬಜೆಟ್ ಮಂಡನೆಯಲ್ಲಿ ಅನುದಾನ ಕಾಯ್ದಿರಿಸುವುದನ್ನು ಕೈ ಬಿಡಬಹುದು. ಈ ಭಾಗದ ಸಂಸದರಾದ ಪಿ.ಸಿ. ಗೆದ್ದಿಗೌಡರ, ಜಗದೀಶ ಶೆಟ್ಟರ ಮತ್ತು ಪ್ರಲ್ಹಾದ ಜೋಶಿ ಅವರನ್ನು ಖುದ್ದು ಭೇಟಿ ಮಾಡಿ ಈ ಬಜೆಟ್‌ನಲ್ಲಿ ಟ್ರ್ಯಾಕ್ ಅಳವಡಿಕೆಗೆ ಅನುದಾನ ಕಾಯ್ದಿರಿಸುವಂತೆ ಒತ್ತಾಯಿಸಬೇಕಿದೆ. ನಿಯೋಗ ತೆಗೆದುಕೊಂಡು ಹೋಗಿ ಬರುವ ನಿರ್ಣಯ ಕೈಗೊಳ್ಳಲು ಅವರು ಹೇಳಿದರು.
ಮಹ್ಮದ್‌ಶೆಫಿ ಬೆಣ್ಣಿ ಮಾತನಾಡಿ, ಮೊದಲಿನ ಸಮೀಕ್ಷೆಯಲ್ಲಿ ಲೋಕಾಪೂರದಿಂದ ಧಾರವಾಡಕ್ಕೆ ಒಟ್ಟು 130 ಕಿ. ಮೀ. ಅಂತರದ ಸಮೀಕ್ಷೆಗೆ ಒಪ್ಪಿಗೆ ಸಿಕ್ಕಿತ್ತು. ಆದರೆ ಅಂತಿಮ ನಿರ್ಣಯದಲ್ಲಿ ಕೇವಲ 95 ಕಿ.ಮೀ. ಅಂತರದ ಸಮೀಕ್ಷೆಗೆ ಕೇಂದ್ರ ಒಪ್ಪಿಗೆ ನೀಡಿದೆ. ಲೋಕಾಪೂರ, ಬಟಕುರ್ಕಿ, ಮುದೇನೂರ, ಇಡಗಲ್, ಸುರೇಬಾನ, ಶಿರಸಂಗಿ, ಸವದತ್ತಿಯಿಂದ ಧಾರವಾಡ ಮಾರ್ಗದ ಸಮೀಕ್ಷೆ ನಡೆಯಲಿದೆ ಎಂದು ಹೇಳಿದರು.
ಸಮೀಕ್ಷೆ ಪೂರ್ವ ಮತ್ತೊಂದು ಸಭೆಯನ್ನು ಇದೇ ತಿಂಗಳ 17 ರಂದು ಸುರೇಬಾನ ಸಮೀಪದ ಶಬರಿ ಕೊಳ್ಳದ ಶಬರಿ ದೇವಸ್ಥಾನದಲ್ಲಿ ನಡೆಸಲು ಸಭೆ ನಿರ್ಧರಿಸಿದೆ.
ಇಲ್ಲಿ ರಾಮದುರ್ಗ, ಸುರೇಬಾನ, ಶಿರಸಂಗಿ ಮತ್ತು ಸವದತ್ತಿಯ ರೈಲ್ವೆ ಹೋರಾಟಗಾರರು ಮತ್ತು ಸಾರ್ವಜನಿಕರನ್ನು ಸೇರಿಸಲಾಗುವುದು. ಅಲ್ಲಿ ತೆಗೆದುಕೊಳ್ಳುವ ನಿರ್ಧಾರದಂತೆ ಹೋರಾಟದ ರೂಪರೇಷೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ರಾಜಶೇಖರ ಶಲವಡಿ, ಬಿ.ಎಸ್. ನಾಯಕ, ಬಸೀರಹ್ಮದ ಬೈರಕದಾರ, ಪ್ರೊ. ಎಸ್.ಎಂ. ಸಕ್ರಿ, ಬಾಬು ಹುದ್ದಾರ, ರಾಜು ಮಾನೆ, ಜಿ.ಬಿ. ರಂಗನಗೌಡ್ರ, ಈರಣ್ಣ ಕಾಮನ್ನವರ,ಎಂ ಕೆ ಯಾದವಾಡ,ರಾಜೇಶ ಹರ್ಲಾಪೂರ, ರೂಪಾ ಅರಮನಿ ಮತ್ತು ಗಾಯತ್ರಿ ದೇವಾಂಗಮಠ ಸೇರಿದಂತೆ ಅನೇಕರು ಇದ್ದರು.



