13 August 2026
Advertisement
ರಾಜ್ಯ

ಸಿಂಗಲ್ ಸೈಟ್ ಗಳಿಗೆ ಬಿಬಿಎಂಪಿ ಎ ಅಥವಾ ಬಿ ಖಾತೆ ಸ್ಥಗಿತ; ಬಿಡಿಎ ಒಪ್ಪಿಗೆ ಇದ್ರೆ ಮಾತ್ರ ಖಾತಾ!

WhatsApp Group Join Now

ಬೆಂಗಳೂರು: ಮಹತ್ವದ ಬೆಳವಣಿಗೆಯೊಂದರಲ್ಲಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (BDA) ವತಿಯಿಂದ ಅಂಗೀಕಸಲ್ಪಡದೆ ಇರುವ ಬಡಾವಣೆಗಳಲ್ಲಿನ ಸಿಂಗಲ್ ಸೈಟ್ ಗಳಿಗೆ ‘A’ ಅಥವಾ ‘B’ ಖಾತೆ (ಏಕ ನಿವೇಶನ ಸ್ವತ್ತು) ನೀಡುವ ಪದ್ಧತಿಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ನಿಲ್ಲಿಸಿರುವುದಾಗಿ ಪ್ರಕಟಿಸಿದೆ.

ಒಂದು ವೇಳೆ, ಕೃಷಿಯೇತರ ಚಟುವಟಿಕೆಗಳಿಗಾಗಿ ಭೂಪರಿವರ್ತನೆ ಮಾಡಲಾಗಿದ್ದರೂ ಆ ಭೂಮಿಯಲ್ಲಿರುವ ಯಾವುದೇ ಸಿಂಗಲ್ ಸೈಟ್ ಗೆ ಎ ಖಾತೆ ಅಥವಾ ಬಿ ಖಾತೆಯನ್ನು ನೀಡುವುದನ್ನು ನಿಲ್ಲಿಸಿರುವುದಾಗಿ ಬಿಬಿಎಂಪಿ ಸ್ಪಷ್ಟಪಡಿಸಿದೆ.

ಇತ್ತೀಚೆಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಬಿಬಿಎಂಪಿಗೆ ಪತ್ರವೊಂದನ್ನು ಬರೆದು ಅದರಲ್ಲಿ ತನ್ನಿಂದ ಅನುಮೋದನೆ ಪಡೆದ ಬಡಾವಣೆಗಳಿಗಷ್ಟೇ ಖಾತೆಗಳನ್ನು ನೀಡಬೇಕಾಗಿ ಸೂಚಿಸಿತ್ತು. ಅದರಂತೆ ಬಿಬಿಎಂಪಿ ಈ ಕ್ರಮ ಕೈಗೊಂಡಿದೆ.

ಬಿಡಿಎ ಬರೆದಿದ್ದ ಪತ್ರದಲ್ಲೇನಿದೆ?

ಇತ್ತೀಚೆಗೆ, ಬಿಡಿಎ, ಬಿಬಿಎಂಪಿಗೆ ಬರೆದ ಪತ್ರದಲ್ಲಿ 20 ಸಾವಿರ ಚದುರ ಮೀಟರ್ ವರೆಗಿನ ವಿಸ್ತೀರ್ಣದ ಯಾವುದೇ ಭೂಮಿಯು ಕೃಷಿಯೇತರ ಚಟುವಟಿಕೆಗಾಗಿ ಪರಿವರ್ತನೆಗೊಂಡರೆ ಅಲ್ಲಿ ಬಡಾವಣೆ ನಿರ್ಮಿಸುವ ಬಗ್ಗೆ ತನ್ನ (BDA) ಅನುಮತಿ ಪಡೆಯವುದು ಕಡ್ಡಾಯವಾಗಿರುತ್ತದೆ.

ಇದಲ್ಲದೆ, ತಾನೇ ಅಭಿವೃದ್ಧಿಪಡಿಸಿದ ಬಡಾವಣೆಗಳು, ತಮ್ಮಿಂದ ಅನುಮೋದನೆ ಪಡೆದು ಅಭಿವೃದ್ಧಿಯಾದ ಖಾಸಗಿ ಬಡಾವಣೆಗಳು ಅಥವಾ ಬಿಡಿಎ ವತಿಯಿಂದ ‘ಎ’ ಖಾತಾ ಎಂದು ವರ್ಗೀಕರಿಸಲಾಗಿರುವ ಭೂಮಿಯಲ್ಲಿ ಅಭಿವೃದ್ಧಿಪಡಿಸಲಾಗಿರುವ ಬಡಾವಣೆಗಳಲ್ಲಿನ ಸೈಟುಗಳಿಗೆ ಮಾತ್ರ ಆಯಾ ದಾಖಲೆಗಳಿಗೆ ಅನುಗುಣವಾಗಿ ಎ ಖಾತಾ ಅಥವಾ ಬಿ ಖಾತೆಗಳನ್ನು ನೀಡಬಹುದು. ಆದರೆ, ತನ್ನಿಂದ ಅನುಮೋದನೆ ಪಡೆಯದ ಯಾವುದೇ ಬಡಾವಣೆಗಳಲ್ಲಿನ ಸೈಟುಗಳಿಗೆ ಎ ಅಥವಾ ಬಿ ಖಾತೆಯನ್ನು ನೀಡಕೂಡದು ಎಂದು ಕಟ್ಟುನಿಟ್ಟಾಗಿ ಉಲ್ಲೇಖಿಸಲಾಗಿತ್ತು. ಆ ಹಿನ್ನೆಲೆಯಲ್ಲಿ, ಬಿಬಿಎಂಪಿಯು ಬಿಡಿಎ ಅನುಮೋದನೆ ಪಡೆಯದ ಬಡಾವಣೆಗಳ ಸಿಂಗಲ್ ಸೈಟ್ ಗಳಿಗೆ ಎ ಅಥವಾ ಬಿ ಖಾತೆಗಳನ್ನು ನೀಡುವ ಪದ್ಧತಿಯನ್ನು ನಿಲ್ಲಿಸಿದೆ.

ಬಿಡಿಎ ಅನುಮೋದನೆ ಪಡೆಯಲು ಏನು ಮಾಡಬೇಕು?

ಖಾಸಗಿ ಬಡಾವಣೆಗಳು ಸುತ್ತಮುತ್ತಲಿನ ಜನಜೀವನಕ್ಕೆ ಅನುಕೂಲವಾಗುವಂಥ ರೀತಿಯಲ್ಲಿ ಅಭಿವೃದ್ಧಿಯಾಗಿರಬೇಕು. ವಿಶಾಲವಾದ ರಸ್ತೆಗಳು, ಸಾರ್ವಜನಿಕರ ಉಪಯೋಗಕ್ಕಾಗಿ ವಿಶಾಲವಾದ ಜಾಗ, ಪಾರ್ಕ್ ಗಳು, ನಾಗರಿಕ ಸೌಲಭ್ಯಗಳನ್ನು ಹೊಂದಿರಬೇಕು. ಖಾಸಗಿ ಬಡಾವಣೆಗಳನ್ನು ನಿರ್ಮಿಸುವವರು ಕಡ್ಡಾಯವಾಗಿ ಈ ನಿಯಮಗಳನ್ನು ಮಾಡಿದರೆ ಮಾತ್ರ ಬಿಡಿಎ ಅನುಮೋದನೆ ಸಿಗುತ್ತದೆ.

ಪರಿಣಾಮವೇನು?

ಬಿಡಿಎ ಸೂಚನೆ ಮೇರೆಗೆ ಬಿಬಿಎಂಪಿ ಕೈಗೊಂಡಿರುವ ಈ ನಿರ್ಧಾರದಿಂದ ಬೆಂಗಳೂರಿನ ಹೊರವಲಯಗಳಲ್ಲಿ ನಿರ್ಮಾಣವಾಗುವ ಅನಧಿಕೃತ ಬಡಾವಣೆಗಳಿಗೆ ತಡೆಯಾಗಲಿದೆ. ಯಾವುದೋ ಜಮೀನು ಖರೀದಿಸಿ, ಕೃಷಿಯೇತರ ಭೂಮಿಯಾಗಿ ಪರಿವರ್ತಿಸಿ, ಬಿಬಿಎಂಪಿಯಿಂದ ಖಾತೆಗಳನ್ನು ಪಡೆದುಕೊಂಡು ಬೇಕಾಬಿಟ್ಟಿಯಾಗಿ ಸೈಟುಗಳನ್ನು ಮಾರಾಟ ಮಾಡುವುದಕ್ಕೆ ತಡೆ ಬೀಳಲಿದೆ. ಬಿಡಿಎಯಿಂದ ಲೇಔಟ್ ಪ್ಲ್ಯಾನ್ ಗೆ ಒಪ್ಪಿಗೆ ಸಿಕ್ಕರೆ ಮಾತ್ರ ಈ ಬಡಾವಣೆಗಳಲ್ಲಿನ ಸೈಟುಗಳಿಗೆ ಎ ಅಥವಾ ಬಿ ಖಾತೆ ದೊರೆಕಲಿದೆ. ಇಲ್ಲವಾದರೆ ಇಲ್ಲ!

About The Author