ಹುತಾತ್ಮ ವೃತ್ತದಲ್ಲಿ ದೇಶಪ್ರೇಮಿಗಳ ದಿನ ಆಚರಣೆ

WhatsApp Group Join Now

ರಾಮದುರ್ಗ ನಗರದ ಹುತಾತ್ಮ ವೃತ್ತದಲ್ಲಿ ಸತ್ಕಾರ್ಯ ಫೌಂಡೇಶನ್ ವತಿಯಿಂದ ದೇಶಭಕ್ತನ ಹೆಸರಿನಲ್ಲಿ ದೀಪೋತ್ಸವ ಎಂಬ ಶೀರ್ಷಿಕೆಯಡಿ ದೇಶಪ್ರೇಮಿಗಳ ದಿನ ಆಚರಣೆ ಮಾಡಲಾಯಿತು, 2019 ರ ಫೆಬ್ರವರಿ 14 ರಂದು ನಡೆದ ಆತ್ಮಾಹುತಿ ಬಾಂಬ್ ದಾಳಿಯ ಪರಿಣಾಮ ಹುತಾತ್ಮರಾದ CRPF ಸೈನಿಕರ ಆದಿಯಾಗಿ ದೇಶಕ್ಕಾಗಿ ದುಡಿದ, ಮಿಡಿದ ಹಾಗೂ ಮಡಿದ ಮಹಾನ್ ಚೇತನಗಳಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಹಿರಿಯರಾದ ಮಲ್ಲಿಕಾರ್ಜುನ ಭಾವಿಕಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸೈನ್ಯ ಹಾಗೂ ಹುತಾತ್ಮರ ಕುರಿತ ಹೆಮ್ಮೆಯ ಮಾತುಗಳನ್ನಾಡಿದರು. ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘಟನೆಯ ಅಧ್ಯಕ್ಷರಾದ ಶೇಷಪ್ಪ ಪೋತರಡ್ಡಿ ಮಾತನಾಡಿ ಸೈನಿಕ ಜೀವನದ ರೋಚಕ ಘಟನೆಗಳನ್ನು ತೆರೆದಿಟ್ಟು ತರುಣರು ಹೆಚ್ಚಿನ ಸಂಖ್ಯೆಯಲ್ಲಿ ಸೈನ್ಯ ಸೇರುವಂತೆ ಕರೆ ಕೊಟ್ಟರು. ಈ ಸಂದರ್ಭದಲ್ಲಿ ಮಾತನಾಡಿದ ಸತ್ಕಾರ್ಯ ಫೌಂಡೇಶನ್ ಅಧ್ಯಕ್ಷ ಸಂಗಮೇಶ ಉದಪುಡಿ ಫೆಬ್ರವರಿ ಬಂತೆಂದರೆ ಸಾಕು ಯಾವುದೋ ರೋಮ್ ದೇಶದ ಕ್ರಿಶ್ಚಿಯನ್ ಪಾದ್ರಿಯ ಹೆಸರಿನ ವ್ಯಾಲೆಂಟೈನ್ ಸರಣಿಯ ಅನೈತಿಕ ಆಚರಣೆಗಳತ್ತ ನಮ್ಮ ದೇಶದ ತಾರುಣ್ಯ ಮುಖ ಮಾಡಿರುವುದು ನಮ್ಮ ಸಂಸ್ಕೃತಿ ಹಾಗೂ ಸಂಸ್ಕಾರದ ಮೇಲೆ ಆಗುತ್ತಿರುವ ದಾಳಿ ಇದರಿಂದ ಹೊರಬರಬೇಕೆಂದು ಕರೆ ಕೊಟ್ಟರು. ನಗರದಾದ್ಯಂತ ಸ್ಥಾಪನೆ ಮಾಡಿರುವ ಸಾಕಷ್ಟು ಮಹಾಪುರುಷರ ಪುಥ್ಥಳಿಗಳನ್ನು ಗಮನಿಸಲು ಹತ್ತಾರು ಜಾತಿ ಜನಾಂಗದ ಸಮಿತಿಗಳಿವೆ ಆದರೆ ಜಾತಿಯೇ ಇಲ್ಲದ ಈ ಹುತಾತ್ಮ ವೃತ್ತವು ಕಡೆಗಣಿಸಲ್ಪಟ್ಟಿದ್ದು ಸರ್ಕಾರಿ ಇಲಾಖೆಗಳೇ ಇದರ ಸುತ್ತ ಸೂಚನಾ ಫಲಕಗಳು, ಕಂಬಗಳು, ಇತ್ಯಾದಿ ವ್ಯವಸ್ಥೆಗಳನ್ನು ಮಾಡಿಕೊಂಡಿರುವುದು ಹುತಾತ್ಮ ವೃತ್ತಕ್ಕೆ ಮಾಡಿದ ಅಗೌರವ ಎಂದು ಖಂಡಿಸಿದರು, ತಮ್ಮ ಬಲಿದಾನ ಮಾಡುವ ಮೂಲಕ ನಮಗೆ ಸ್ವತಂತ್ರ ಕೊಡಿಸಿದ ಮಹಾನ್ ಚೇತನಗಳ ಸ್ಮರಣೆಯಲ್ಲಿ ನಿರ್ಮಿಸಿದ ಹುತಾತ್ಮ ವೃತ್ತವು ಕೇವಲ ಕಲ್ಲು ಮಾತ್ರವಲ್ಲ ಬದಲಿಗೆ ಐತಿಹಾಸಿಕ ಸ್ಮಾರಕ ಎಂಬುದನ್ನು ಆಡಳಿತ ಮರೆತಂತಿದೆ ಎಂದು ಖಾರವಾಗಿ ನುಡಿದರು. ಸ್ವತಂತ್ರ ಹೋರಾಟಗಾರರ ಮನೆತನದ ಹಿನ್ನೆಲೆಯಿಂದ ಬಂದಿರುವ ಪ್ರಸ್ತುತ ಶಾಸಕರೂ ಹಾಗೂ ಕರ್ನಾಟಕ ಸರಕಾರದ ಮುಖ್ಯ ಸಚೇತಕರೂ ಆಗಿರುವ ಮಾನ್ಯ ಅಶೋಕ ಪಟ್ಟಣ ಅವರಿಗೆ ಸ್ಮಾರಕದ ಪುನರುಜ್ಜೀವನ ಮಾಡುವಂತೆ ಸಂಸ್ಥೆಯ ವತಿಯಿಂದ ನಿವೇದನಾ ಪತ್ರವನ್ನು ಸಲ್ಲಿಸಿದ್ದು ಅವರು ಧನಾತ್ಮಕವಾಗಿ ಸ್ಪಂದಿಸುವ ಆಶಾಭಾವನೆಯನ್ನು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸೈನ್ಯದಲ್ಲಿ ಚೀನೀಯರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ತನ್ನ ಗಂಡನನ್ನು ಕಳೆದುಕೊಂಡರೂ ತಾನು ಸಾಮಾಜಿಕ ಜೀವನದಲ್ಲಿ ಸ್ಥೈರ್ಯದಿಂದ ಬದುಕುತ್ತಿರುವ ಹೆಣ್ಣು ಮಗಳಾದ ಚಿಕ್ಕೇರಿ ಅವರನ್ನು ಸಂಸ್ಥೆಯ ವತಿಯಿಂದ ಸತ್ಕರಿಸಲಾಯಿತು. ಪತ್ರಕರ್ತರಾದ ಸೋಮಶೇಖರ ಸೊಗಲದ ಅವರು ವಂದನಾರ್ಪಣೆ ಸಲ್ಲಿಸಿದರು. ಈ ಸಂದರ್ಭದಲ್ಲಿ ನಗರದ ಪತಂಜಲಿ ಯೋಗ ಸಮಿತಿಯ ಅಧ್ಯಕ್ಷರಾದ ಬಾಪೂಗೌಡ ಸಂಕನಗೌಡರ ಯೋಗ ಶಿಕ್ಷಕರಾದ ರೇವಪ್ಪ ಕೋಟರ, ಸುರೇಶ ಕುಂಬಾರ, ಡಾ. ಬಸವರಾಜ ಮಾದನ್ನವರ, ವಿಶ್ವ ಹಿಂದೂ ಪರಿಷತ್ ತಾಲೂಕು ಅಧ್ಯಕ್ಷ ಪ್ರಕಾಶ ಸೂಳಿಬಾವಿ, ಬಸವರಾಜ ಆರಿಬೆಂಚಿ, ವರುಣ ರಜಪೂತ, ಈಶ್ವರ ನಡಮನಿ, ಸುನಿತಾ ತಿಮ್ಮನಗೌಡರ, ಅನಸೂಯಾ ಬಸನಗೌಡರ, ಶಾರದಾ ಕಾಳೆ ಮುಂತಾದವರು ಉಪಸ್ಥಿತರಿದ್ದರು ಸಾಮೂಹಿಕ ವಂದೇಮಾತರಂ ಹಾಡುವ ಮೂಲಕ ಕಾರ್ಯಕ್ರಮ ಸಂಪನ್ನವಾಯಿತು

About The Author