ಬಳ್ಳಾರಿ, ಜಿಲ್ಲೆಯಲ್ಲಿ ಗೃಹಬಳಕೆ ಎಲ್‌ಪಿಜಿ, ಆಟೋ ಗ್ಯಾಸ್ ಬೆಲೆ ಏರಿಕೆ, ಕೃತಕ ಅಭಾವ ಸೃಷ್ಟಿಸುವ ಮಾರಾಟಗಾರರು ಹಾಗೂ ಅಕ್ರಮ ದಾಸ್ತಾನುದಾರರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಗುರುವಾರ, ನಗರದ ನೂತನ ಜಿಲ್ಲಾಡಳಿತ ಭವನದ ಕೆಸ್ವಾನ್ ವಿಡಿಯೋ ವಿವಿಧ ಇಲಾಖೆಗಳ ಅಧಿಕಾರಿಗಳು, ತಾಲ್ಲೂಕು ತಹಶೀಲ್ದಾರರೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.
ಇತ್ತೀಚೆಗೆ ನಗರದ ಗ್ಯಾಸ್ ಸ್ಟೇಷನ್‌ವೊಂದರಲ್ಲಿ ಆಟೋ ಗ್ಯಾಸ್ ಬೆಲೆ ಏರಿಕೆ ಖಂಡಿಸಿ ಪ್ರತಿಭಟನಾ ದೂರಿನ ಹಿನ್ನೆಲೆಯಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು. ಗ್ಯಾಸ್ ಸ್ಟೇಷನ್‌ಗಳಲ್ಲಿ ದಾಸ್ತಾನು ಇದ್ದರೂ ‘ನೋ ಸ್ಟಾಕ್’ ಬೋರ್ಡ್ ಹಾಕಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವ ದೂರುಗಳು ಬರದಂತೆ ನೋಡಿಕೊಳ್ಳಬೇಕು. ಅಧಿಕಾರಿಗಳು ಅಂತಹ ಸ್ಥಳಗಳಿಗೆ ಭೇಟಿ ನೀಡಿ ದಾಸ್ತಾನು ಪರಿಶೀಲಿಸಬೇಕು ಎಂದು ನಿರ್ದೇಶನ ನೀಡಿದರು.
ಸಾರ್ವಜನಿಕರು ಅಕ್ರಮ ದಾಸ್ತಾನು ಅಥವಾ ಬೆಲೆ ಏರಿಕೆಯಂತಹ ಪ್ರಕರಣಗಳು ಕಂಡುಬAದಲ್ಲಿ ಕೂಡಲೇ ಉಚಿತ ಸಹಾಯವಾಣಿ ಸಂಖ್ಯೆ 1070 ಕರೆಮಾಡಿ ಮಾಹಿತಿ ನೀಡಬಹುದು. ಈ ಕುರಿತು ಅಧಿಕಾರಿಗಳು ನಿಗಾವಹಿಸಬೇಕು. ಕರೆಗಳಿಗೆ ತ್ವರಿತವಾಗಿ ಸ್ಪಂದಿಸಬೇಕು ಎಂದರು.
ಏ.3 ರಿಂದ ತುಂಗಭದ್ರಾ ಎಚ್‌ಎಲ್‌ಸಿ ಕಾಲುವೆಗೆ ಕುಡಿಯಲು ನೀರು ಬಿಡುಗಡೆ:
ಕುಡಿಯುವ ನೀರಿನ ಸಮಸ್ಯೆ ನೀಗಿಸುವ ನಿಟ್ಟಿನಲ್ಲಿ ನಾಳೆಯಿಂದ ತುಂಗಭದ್ರಾ ಎಚ್‌ಎಲ್‌ಸಿ ಕಾಲುವೆಗೆ ಕುಡಿಯಲು ನೀರು ಹರಿಸಲಾಗುತ್ತದೆ. ನೀರನ್ನು ಕೇವಲ ಕುಡಿಯುವ ಉದ್ದೇಶಕ್ಕಾಗಿ ಮಾತ್ರ ಬಳಕೆಯಾಗಬೇಕು. ಯಾವುದೇ ಕಾರಣಕ್ಕೂ ಅಕ್ರಮವಾಗಿ ನೀರು ವ್ಯರ್ಥವಾಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಕೃಷಿ, ಕೈಗಾರಿಕೆಗಳು ಅಥವಾ ವಾಣಿಜ್ಯ ಉದ್ದೇಶಗಳಿಗಾಗಿ ಕಾಲುವೆಯಿಂದ ಅಕ್ರಮವಾಗಿ ನೀರು ಎತ್ತುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಕಾಲುವೆ ಹಾದುಹೋಗುವ ಮಾರ್ಗದುದ್ದಕ್ಕೂ ಪೊಲೀಸ್, ನೀರಾವರಿ ಇಲಾಖೆಯ ಅಧಿಕಾರಿಗಳು ಸಿಬ್ಬಂದಿ ಮೂಲಕ ನಿರಂತರವಾಗಿ ಬೀಟ್ ವ್ಯವಸ್ಥೆ ಕೈಗೊಳ್ಳುವ ಮೂಲಕ ನಿಗಾವಹಿಸಬೇಕು ಎಂದು ತಿಳಿಸಿದರು.
ಕುಡಿಯುವ ನೀರಿನ ಸಮರ್ಪಕ ಪೂರೈಕೆಗಾಗಿ ಅಧಿಕಾರಿಗಳು ಪಂಪಿAಗ್ ಶೆಡ್ಯೂಲ್ ಸಿದ್ಧಪಡಿಸಿಕೊಳ್ಳಬೇಕು. ನೀರು ಬಂದ ನಂತರ ಕೆರೆ ತುಂಬಿಸಿಕೊಳ್ಳಲು ಮೋಟಾರ್ ಮತ್ತು ಪಂಪ್‌ಗಳನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಬೇಕು. ಮುಂಬರುವ ಬೇಸಿಗೆಯ ದಿನಗಳಲ್ಲಿ ನೀರಿಗೆ ತೊಂದರೆಯಾಗದಅಂತ ಕೆರೆಗಳಲ್ಲಿ ಸಂಗ್ರಹಣಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.
ಏ.4 ರಂದು ವಿಶೇಷ ‘ಸ್ವಯಂ-ಗಣತಿ’ ಅಭಿಯಾನ
ಭಾರತದ ಜನಗಣತಿ-2027ರ ಭಾಗವಾಗಿ, ಜಿಲ್ಲೆಯಾದ್ಯಂತ ಪ್ರಥಮ ಹಂತದ ‘ಮನೆಗಳ ಪಟ್ಟಿ ಮತ್ತು ಮನೆ ಗಣತಿ’ ಪ್ರಕ್ರಿಯೆಯನ್ನು ಚುರುಕುಗೊಳಿಸಲು ಏಪ್ರಿಲ್ 4ರಂದು (ಶನಿವಾರ) ವಿಶೇಷ ‘ಸ್ವಯಂ-ಗಣತಿ’ ಅಭಿಯಾನ ಹಮ್ಮಿಕೊಳ್ಳಲಾಗಿದೆ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ಹೇಳಿದರು.
ಜಿಲ್ಲೆಯ ಎಲ್ಲಾ ಸರ್ಕಾರಿ, ಅರೆ ಸರ್ಕಾರಿ, ಸ್ಥಳೀಯ ಸಂಸ್ಥೆಗಳು ಮತ್ತು ನಿಗಮ ಮಂಡಳಿಗಳ ಮುಖ್ಯಸ್ಥರು ತಮ್ಮ ಕಚೇರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಚೇರಿಯಲ್ಲಿಯೇ ಅಂದು ಬೆಳಿಗ್ಗೆ 08 ರಿಂದ ಮಧ್ಯಾಹ್ನ 01 ಗಂಟೆಯವರೆಗೆ ಆನ್ ಲೈನ್ ವೆಬ್ ಸೈಟ್ https://se.census.gov.in ಮೂಲಕ ತಮ್ಮ ಮಾಹಿತಿಯನ್ನು ಸ್ವತಃ ದಾಖಲಿಸಬಹುದು. ಈ ಸ್ವಯಂ-ಗಣತಿ ಪ್ರಕ್ರಿಯೆಯು ಏಪ್ರಿಲ್ 1 ರಿಂದ ಏಪ್ರಿಲ್ 15 ರವರೆಗೆ ಲಭ್ಯವಿರುತ್ತದೆ. ಅಲ್ಲದೆ, ಕಚೇರಿಗೆ ಭೇಟಿ ನೀಡುವ ಸಾರ್ವಜನಿಕರಿಗೂ ಈ ಬಗ್ಗೆ ಮಾಹಿತಿ ನೀಡಿ ಪ್ರಕ್ರಿಯೆಯಲ್ಲಿ ಭಾಗವಹಿಸಲು ತಿಳಿಸಬೇಕು. ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಕಚೇರಿ ಮುಖ್ಯಸ್ಥರು ಏಪ್ರಿಲ್ 4ರ ಸಂಜೆಯೊಳಗೆ ತಮ್ಮ ವ್ಯಾಪ್ತಿಯಲ್ಲಿ ನಡೆದ ಗಣತಿಯ ಕುರಿತು ದೃಢೀಕೃತ ವರದಿಯನ್ನು ಜಿಲ್ಲಾಧಿಕಾರಿಯವರ ಕಚೇರಿಗೆ ಸಲ್ಲಿಸಬೇಕು ಎಂದು ಸೂಚಿಸಿದರು.
ಗಣಿ ಬಾಧಿತ ಪ್ರದೇಶಗಳ ಅಭಿವೃದ್ಧಿ: ಹೊಸ ಕ್ರಿಯಾ ಯೋಜನೆಗೆ ಸಿದ್ಧತೆ
ಜಿಲ್ಲೆಯ ಗಣಿ ಬಾಧಿತ ಪ್ರದೇಶಗಳಲ್ಲಿ ಸಮಗ್ರ ಅಭಿವೃದ್ಧಿ ಕೈಗೊಳ್ಳುವ ನಿಟ್ಟಿನಲ್ಲಿ 2023-24ನೇ ಸಾಲಿನಿಂದ ಅನ್ವಯವಾಗುವಂತೆ ಹೊಸ ಕ್ರಿಯಾ ಯೋಜನೆ ರೂಪಿಸಬೇಕಾಗಿದೆ. ಕಳೆದ ಮೂರು ವರ್ಷಗಳಿಂದ ಯಾವುದೇ ಹೊಸ ಯೋಜನೆಗಳನ್ನು ರೂಪಿಸದ ಕಾರಣ, ಪ್ರಸ್ತುತ ಸುಮಾರು 950 ಕೋಟಿ ರೂ. ಕ್ರೋಢೀಕೃತ ಅನುದಾನ ಲಭ್ಯವಿದ್ದು, ಇದನ್ನು ವಿವಿಧ ಅಭಿವೃದ್ಧಿ ಕೆಲಸಗಳಿಗೆ ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಸಂಬAಧಪಟ್ಟ ಇಲಾಖೆಗಳ ಅಧಿಕಾರಿಗಳು ಪ್ರತಿಯೊಂದು ಪ್ರಸ್ತಾವನೆಯನ್ನು ಕೂಲಂಕುಷವಾಗಿ ಪರಿಶೀಲಿಸಬೇಕು. ನಿಯಮಾನುಸಾರ ಪ್ರಸ್ತಾವನೆಗಳನ್ನು ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ಸೂಚಿಸಿದರು.
ಜಿಲ್ಲಾ ಖನಿಜ ಪ್ರತಿಷ್ಠಾನದ ವಿಶೇಷ ಕರ್ತವ್ಯಾಧಿಕಾರಿ ಲೋಕೇಶ್ ಅವರು ಮಾತನಾಡಿ, ಕೇಂದ್ರ ಸರ್ಕಾರದ ಹೊಸ ಮಾರ್ಗಸೂಚಿಗಳ ಅನ್ವಯ, ಈ ಯೋಜನೆಯಲ್ಲಿ ಕುಡಿಯುವ ನೀರು, ಪರಿಸರ ಸಂರಕ್ಷಣೆ, ಆರೋಗ್ಯ ಸೇವೆ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಯೋವೃದ್ಧರು ಮತ್ತು ವಿಕಲಚೇತನರ ಕಲ್ಯಾಣ, ಕೌಶಲ್ಯಾಭಿವೃದ್ಧಿ, ಸ್ವಚ್ಛತೆ ಮತ್ತು ತ್ಯಾಜ್ಯ ನಿರ್ವಹಣೆ ಹಾಗೂ ಇತರ ಮೂಲಸೌಕರ್ಯ ಯೋಜನೆಗಳು ಒಳಗೊಂಡತೆ ಎಂಟು ಪ್ರಮುಖ ಆದ್ಯತಾ ಕ್ಷೇತ್ರಗಳ ಮೂಲಭೂತ ಸೌಕರ್ಯಗಳ ಅನುಷ್ಠಾನಕ್ಕೆ ಪ್ರಾಮುಖ್ಯತೆ ನೀಡಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ನವೀನ್ ಕುಮಾರ್, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕ ದೇವರಾಜ್ ಕೆ.ಆರ್., ಜಿಪಂ ಮುಖ್ಯ ಲೆಕ್ಕಾಧಿಕಾರಿ ವಿನೋದ್ ಕುಮಾರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ವರ್ಚುವಲ್ ಮೂಲಕ ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
ಗ್ಯಾಸ್ ಬೆಲೆ ಏರಿಕೆ, ಅಕ್ರಮ ದಾಸ್ತಾನು, ಕೃತಕ ಅಭಾವ ಸೃಷ್ಟಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಸೂಚನೆ

WhatsApp Group
Join Now


