ಶೋಷಿತ ತಾಯಂದಿರು, ಮಕ್ಕಳ ಬದುಕಿಗೆ ಪುರಸಭೆ ಆಸರೆಯಾಗಲಿ: ಮುಖ್ಯಾಧಿಕಾರಿ ರಮೇಶ್ ಹೊಸಮನಿಗೆ ಆಗ್ರಹ
ಗದಗ ಜಿಲ್ಲಾ ರೋಣ ಪುರಸಭೆ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಮಾಜಿ ದೇವದಾಸಿ ಮಹಿಳೆಯರಿಗೆ ಹಾಗೂ ಅವರ ಮಕ್ಕಳಿಗೆ ಪುರಸಭೆ ಇಲಾಖೆಯ ವತಿಯಿಂದ ಸಿಗುವ ವಿವಿಧ ಯೋಜನೆಗಳ ಸೌಲಭ್ಯಗಳನ್ನು ತಲುಪಿಸುವಂತೆ ಆಗ್ರಹಿಸಿ ವಿಮುಕ್ತ ದೇವದಾಸಿ ಮಹಿಳಾ ವೇದಿಕೆ – ಕರ್ನಾಟಕ ಸಂಘಟನೆಯ ವತಿಯಿಂದ ಪುರಸಭೆಯ ಮುಖ್ಯ ಅಧಿಕಾರಿಗಳಾದ ರಮೇಶ್ ಹೊಸಮನಿ ಅವರಿಗೆ ಇಂದು ಅಧಿಕೃತ ಹಕ್ಕೊತ್ತಾಯದ ಮನವಿ ಪತ್ರ ಸಲ್ಲಿಸಲಾಯಿತು.
ಪುರಸಭೆ ವ್ಯಾಪ್ತಿಯಲ್ಲಿರುವ ಮಾಜಿ ದೇವದಾಸಿ ಮಹಿಳೆಯರು ಮತ್ತು ಅವರ ಕುಟುಂಬದವರು ಅತ್ಯಂತ ಕಡುಬಡತನ ಹಾಗೂ ಸಾಮಾಜಿಕವಾಗಿ ಹಿಂದುಳಿದ ಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದಾರೆ. ಸರ್ಕಾರವು ಈ ಮಹಿಳೆಯರ ಹಾಗೂ ಅವರ ಮಕ್ಕಳ ಸಬಲೀಕರಣಕ್ಕಾಗಿ ಹಮ್ಮಿಕೊಂಡಿರುವ ಯೋಜನೆಗಳ ಸೂಕ್ತ ಮಾಹಿತಿ ಕೊರತೆ ಮತ್ತು ಆಡಳಿತಾತ್ಮಕ ಪ್ರಕ್ರಿಯೆಗಳ ಅರಿವಿಲ್ಲದೆ ಅನೇಕ ಅರ್ಹ ಫಲಾನುಭವಿಗಳು ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ.
ಸ್ವಂತ ಸೂರಿಲ್ಲದ ಮಾಜಿ ದೇವದಾಸಿ ಮಹಿಳೆಯರನ್ನು ತಕ್ಷಣ ಗುರುತಿಸಿ, ಆಶ್ರಯ ಯೋಜನೆ ಅಥವಾ ಪುರಸಭೆಯ ಶೇ. 24.10 (ಎಸ್.ಸಿ/ಎಸ್.ಟಿ) ಮತ್ತು ಶೇ. 7.25 ರ ವಿಶೇಷ ನಿಧಿಯ ವಸತಿ ಯೋಜನೆಗಳ ಅಡಿಯಲ್ಲಿ ಆದ್ಯತೆಯ ಮೇರೆಗೆ ಮನೆಗಳನ್ನು ಮಂಜೂರು ಮಾಡಬೇಕು. ಪುರಸಭೆಯ ಶೇ. 24.10 ಮತ್ತು ಶೇ. 7.25 ರ ಯೋಜನೆಯಡಿ ಮಾಜಿ ದೇವದಾಸಿ ಮಹಿಳೆಯರಿಗೆ ಹಾಗೂ ಅವರ ಮಕ್ಕಳಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಆರ್ಥಿಕ ಧನಸಹಾಯ ಮತ್ತು ಸಬ್ಸಿಡಿ ಸಾಲ ಸೌಲಭ್ಯಗಳನ್ನು ಒದಗಿಸಬೇಕು. ಪುರಸಭೆ ವ್ಯಾಪ್ತಿಯಲ್ಲಿ ಶಿಕ್ಷಣ ಪಡೆಯುತ್ತಿರುವ ಇವರ ಮಕ್ಕಳಿಗೆ ವಿದ್ಯಾಭ್ಯಾಸದ ಪ್ರೋತ್ಸಾಹಧನ, ಉಚಿತ ಪಠ್ಯಪುಸ್ತಕ/ಪರಿಕರಗಳು ಹಾಗೂ ಉನ್ನತ ಶಿಕ್ಷಣಕ್ಕೆ ಅಗತ್ಯವಿರುವ ಆರ್ಥಿಕ ನೆರವನ್ನು ಆದಷ್ಟು ಬೇಗ ಬಿಡುಗಡೆ ಮಾಡಬೇಕು. ಪುರಸಭೆ ವತಿಯಿಂದ ಸಿಗುವ ಸೌಲಭ್ಯಗಳ ಬಗ್ಗೆ ಈ ಮಹಿಳೆಯರಿಗೆ ಕಚೇರಿಯ ಮುಖಾಂತರ ಅಥವಾ ವಾರ್ಡ್ ಮಟ್ಟದಲ್ಲಿ ವಿಶೇಷ ಮಾಹಿತಿ ಕಾರ್ಯಾಗಾರ/ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕು.
ರೋಣ ತಾಲೂಕಿನಲ್ಲಿ ಈ ಶೋಷಿತ ಮಹಿಳೆಯರ ಮತ್ತು ಅವರ ಮಕ್ಕಳ ಬದುಕು ಪುರಸಭೆಯ ಪಾತ್ರ ಅತ್ಯಂತ ದೊಡ್ಡದಾಗಿದೆ.
ಆದ್ದರಿಂದ ಮುಖ್ಯಾಧಿಕಾರಿ ರಮೇಶ್ ಹೊಸಮನಿ ಅವರು ಈ ಮನವಿಯನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ, ಅರ್ಹ ಫಲಾನುಭವಿಗಳಿಗೆ ಆದಷ್ಟು ಬೇಗ ಯೋಜನೆಗಳ ಸೌಲಭ್ಯಗಳನ್ನು ತಲುಪಿಸಲು ಸೂಕ್ತ ಆಡಳಿತಾತ್ಮಕ ಕ್ರಮ ಕೈಗೊಳ್ಳಬೇಕಾಗಿ ಸಂಘಟನೆಯು ಕಟ್ಟುನಿಟ್ಟಾಗಿ ಆಗ್ರಹಿಸಿದೆ.
ಮನವಿ ಸ್ವೀಕರಿಸಿದ ಮುಖ್ಯಾಧಿಕಾರಿ ರಮೇಶ್ ಹೊಸಮನಿ ಅವರು, ಶೋಷಿತ ಮಹಿಳೆಯರ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿ, ನಿಯಮಾವಳಿಗಳ ಪ್ರಕಾರ ಸಿಗಬೇಕಾದ ಎಲ್ಲಾ ಸೌಲಭ್ಯಗಳನ್ನು ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ವಿಮುಕ್ತ ದೇವದಾಸಿ ಮಹಿಳಾ ವೇದಿಕೆ ಕರ್ನಾಟಕ ಸಂಘಟನೆಯ ರೋಣ ತಾಲೂಕು ಅಧ್ಯಕ್ಷರಾದ ಗೌರವ್ವ ಹಿರೇಮನಿ, ಹಾಗೂ ಪ್ರಮುಖರಾದ ಯಲ್ಲಮ್ಮ ಹಂಚಿನಹಳ, ಮುತ್ತವ್ವ ಹಿರೇಮನಿ, ಶಿದ್ದವ್ವ ಪೂಜಾರ, ದುರುಗವ್ವ ಮಾದರ, ಮಂಜುಳಾ ತೆಗ್ಗಿನಮನಿ ಇದ್ದರು.
ಅಂದು ಸಾಮಾಜಿಕ ಶೋಷಣೆ, ಇಂದು ಆಡಳಿತಾತ್ಮಕ ಉದಾಸೀನತೆ: ತಾಯಂದಿರ ನೋವು ಯಾರಿಗೆ ಗೊತ್ತು?
ನಮ್ಮ ಸಂಘಟನೆಯ ಈ ಮಾಜಿ ದೇವದಾಸಿ ತಾಯಂದಿರು ಮತ್ತು ಅವರ ಮಕ್ಕಳು ಅನುಭವಿಸಿರುವ ನರಕಯಾತನೆ ಸಾಮಾನ್ಯವಾದದ್ದಲ್ಲ. ಶತಮಾನಗಳಿಂದ ಸಾಮಾಜಿಕವಾಗಿ ಅತ್ಯಂತ ಕಡುಬಡತನ ಹಾಗೂ ಹಿಂದುಳಿದ ಸ್ಥಿತಿಯಲ್ಲಿ ಬದುಕುತ್ತಿರುವ ಇವರ ಬದುಕು ಹಸನಾಗಲು ಸರ್ಕಾರಗಳು ಯೋಜನೆಗಳನ್ನೇನೋ ರೂಪಿಸುತ್ತವೆ. ಆದರೆ, ಆಡಳಿತಾತ್ಮಕ ಪ್ರಕ್ರಿಯೆಗಳ ಅರಿವಿಲ್ಲದ ಕಾರಣ ಹಾಗೂ ಅಧಿಕಾರಿಗಳ ಸೂಕ್ತ ಮಾಹಿತಿಯ ಕೊರತೆಯಿಂದಾಗಿ ಇಂದಿಗೂ ಅರ್ಹ ಫಲಾನುಭವಿಗಳು ಪುರಸಭೆಯ ಸೌಲಭ್ಯಗಳಿಂದ ವಂಚಿತರಾಗುತ್ತಲೇ ಇದ್ದಾರೆ.ಸ್ವಂತಕ್ಕೊಂದು ಸೂರಿಲ್ಲದೆ, ಮಕ್ಕಳಿಗೆ ಸರಿಯಾದ ಶಿಕ್ಷಣ ಕೊಡಿಸಲಾಗದೆ ಕಣ್ಣೀರಿನಲ್ಲಿ ಕೈತೊಳೆಯುತ್ತಿರುವ ಈ ತಾಯಂದಿರಿಗೆ ಆಶ್ರಯ ಯೋಜನೆ, ಶೇ. 24.10 (ಎಸ್.ಸಿ/ಎಸ್.ಟಿ) ಮತ್ತು ಶೇ. 7.25 ರ ವಿಶೇಷ ನಿಧಿಯ ವಸತಿ ಹಾಗೂ ಸ್ವಯಂ ಉದ್ಯೋಗದ ಸೌಲಭ್ಯಗಳನ್ನು ತಕ್ಷಣವೇ ತಲುಪಿಸಬೇಕಿದೆ. ಈ ಶೋಷಿತ ಮಹಿಳೆಯರ ಮತ್ತು ಅವರ ಮಕ್ಕಳ ಬದುಕು ಹಸನಾಗಲು ಪುರಸಭೆಯ ಪಾತ್ರ ಅತ್ಯಂತ ದೊಡ್ಡದಾಗಿದೆ. ಅಧಿಕಾರಿಗಳು ಕೇವಲ ಕಡತಗಳನ್ನು ನೋಡದೆ, ವಾರ್ಡ್ ಮಟ್ಟದಲ್ಲಿ ವಿಶೇಷ ಜಾಗೃತಿ ಸಭೆಗಳನ್ನು ನಡೆಸಿ ಇವರ ಬದುಕಿಗೆ ಬೆಳಕಾಗಬೇಕು.
ಅಭಿಷೇಕ್ ಕೊಪ್ಪದ,
ಗದಗ್ ಜಿಲ್ಲಾಧ್ಯಕ್ಷರು, ವಿಮುಕ್ತ ದೇವದಾಸಿ ಮಹಿಳಾ ವೇದಿಕೆ ಕರ್ನಾಟಕ.



